Thursday, Nov 5, 2026
|

ಜಪಾನ್‌ನಲ್ಲೂ ಮೊಳಗಿದ ಕನ್ನಡದ ಕಹಳೆ! 13 ಸಾಧಕರಿಗೆ 'ವರ್ಷದ ಕನ್ನಡಿಗ 2026' ಪ್ರಶಸ್ತಿ !!

ಜಪಾನ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ - ಕನ್ನಡಿಗರ ಒಗ್ಗಟ್ಟು, ಸಂಸ್ಕೃತಿಯ ಅನಾವರಣ
ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಜಪಾನ್ ದೇಶದಲ್ಲೂ ಕನ್ನಡದ ಕಂಪು ಹರಡಿದೆ. ವಿದೇಶದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ನಾಡು, ನುಡಿ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮರೆಯದ ಕನ್ನಡಿಗರು ಜಪಾನ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಜಪಾನ್ ಕನ್ನಡ ಸಂಘದ ವತಿಯಿಂದ ನವೆಂಬರ್ 1 ರಂದು ಟೋಕಿಯೋದ ಎಡೊಗಾವಾ ಪ್ರದೇಶದ ಶೇಶಿಂಚೋ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು.

ಜಪಾನ್‌ಕನ್ನಡಸಂಘ  .ವರ್ಷದಕನ್ನಡಿಗ. | Photo Credit: https://scontent.fblr2-3.fna.fbcdn.net/
ಜಪಾನ್‌ಕನ್ನಡಸಂಘ .ವರ್ಷದಕನ್ನಡಿಗ. | Photo Credit: https://scontent.fblr2-3.fna.fbcdn.net/

ಕಾರ್ಯಕ್ರಮವು ಧ್ವಜಾರೋಹಣ ಮತ್ತು ನಾಡಗೀತೆಯ ಗಾಯನದೊಂದಿಗೆ ಪ್ರಾರಂಭವಾಯಿತು. ಜಪಾನ್‌ನ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಒಂದೇ ವೇದಿಕೆಯಲ್ಲಿ ಕನ್ನಡದ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ 'ವರ್ಷದ ಕನ್ನಡಿಗ' ಪ್ರಶಸ್ತಿ ನೀಡಿ ಗೌರವಿಸಲಾಯಿತು. 


ಕನ್ನಡ ರಾಜ್ಯೋತ್ಸವದಲ್ಲಿ ವಿಶೇಷ ಆಕರ್ಷಣೆ: 'JKS ವರ್ಷದ ಕನ್ನಡಿಗ 2026' ಪ್ರಶಸ್ತಿ
ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆ 'JKS ವರ್ಷದ ಕನ್ನಡಿಗ 2026' ಪ್ರಶಸ್ತಿ ಪ್ರದಾನ ಸಮಾರಂಭ. ಜಪಾನ್ನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಬೆಳವಣಿಗೆಗಾಗಿ ತಮ್ಮ ಸಮಯ,

ಪ್ರತಿಭೆ ಹಾಗೂ ಸ್ವಯಂಸೇವಾ ಸೇವೆಯನ್ನು ನೀಡಿದ 13 ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ:

  1. ಪಲ್ಲವಿ ವೇಣುಗೋಪಾಲ
    2. ಪ್ರವೀಣ್ ಜಿ.ಎಸ್.
    3. ಹೇಮಂತ್ ಕುಮಾರ್ ಜಿ.
    4. ಚೇತನ್ ಕುಮಾರ್ ಆರ್.
    5. ಸಫಲಾ ಕುಲಕರ್ಣಿ
    6. ಮಹಾದೇವ್ ಮೇತ್ರೆ
    7. ಡಾ. ಅನುರಾಧಾ ರಾವ್
    8. ಚೇತನ್ ಮಾದಪುರ
    9. ತುಳಸಿರಾಮ್ ಶೆಟ್ಟಿ
    10. ಮಂಜುನಾಥ್ ಇ.ಎಂ.
    11. ಪ್ರಸಾದ್ ನಾಯಿಕ
    12. ಸಿನಾನ್ ಇಂದಬೆಟ್ಟು
    13. ಕಮಲಾ ಲತಾ ತಮ್ಮಿಶೆಟ್ಟಿ

ಪುರಸ್ಕೃತರಲ್ಲಿ ಹೇಮಂತ್ ಕುಮಾರ್ ಅವರು ಒಸಾಕಾದಿಂದ ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತುಳಸಿರಾಮ್ ಶೆಟ್ಟಿ ಅವರು ಕರ್ನಾಟಕದ ರಾಮನಗರದಿಂದ ಮಾತನಾಡಿ, ಅದನ್ನು ಗುರುತಿಸಿ ಗೌರವಿಸಿದ ಜಪಾನ್ ಕನ್ನಡ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಶಾಂಘೈ ಕನ್ನಡಿಗರ ಪರವಾಗಿ ಕಮಲಾ ಲತಾ ತಮ್ಮಿಶೆಟ್ಟಿ ಅವರು ಧ್ವನಿ ಸಂದೇಶದ ಮೂಲಕ ಪುರಸ್ಕೃತರಿಗೆ ಶುಭಾಶಯ ಪ್ರಕಟಣೆ ಪ್ರಶಸ್ತಿ. 

ಜಪಾನ್‌ನಲ್ಲೂ ಕನ್ನಡದ ಸಾಂಸ್ಕೃತಿಕ ವೈಭವ

ರಾಜ್ಯೋತ್ಸವದ ಅಂಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಪುಟಾಣಿ ಪಂಟರ್ಸ್ ತಂಡದ ಕನ್ನಡ ನೃತ್ಯ, ಹಿತಾ ವೇಣುಗೋಪಾಲ್ ಅವರ 'ಗುರುವಿನ ಗುಲಾಮನಾಗುವ ತನಕ' ಗಾಯನ, ದರ್ಶನ್ ಮತ್ತು ತಂಡದ ಜಾನಪದ ಗೀತೆ ಹಾಗೂ ಸಫಲಾ ಕುಲಕರ್ಣಿ ಅವರ ಸೆಮಿ-ಕ್ಲಾಸಿಕಲ್ ನೃತ್ಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.

ಇದರ ಜೊತೆಗೆ ದಿನೇಶ್ ವುಧಾತು ಅವರು 'ಇದೇ ನಾಡು, ಇದೇ ಭಾಷೆ' ಎಂಬ ಕನ್ನಡ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು. ಶಿವಕುಮಾರ್ ರೆಡ್ಡಿ ಅವರ ಕನ್ನಡ ಭಾವಗೀತೆ ಮತ್ತು ಪ್ರಕಾಶ್ ಅವರ ಗಾಯನ ಸಂಗೀತದ ಸಂಭ್ರಮವನ್ನು ಹೆಚ್ಚಿಸಿತು. ಕಿರಣ್, ಜಯಂತ್, ದರ್ಶನ್ ಮತ್ತು ಅರುಣ್ ಅವರ ಕಂಸಾಳೆ ನೃತ್ಯವು ಕರ್ನಾಟಕದ ಜಾನಪದ ಕಲೆಯನ್ನು ಜಪಾನ್‌ನ ಕನ್ನಡಿಗರಿಗೆ ಪರಿಚಯಿಸಿತು.

ಜಪಾನ್ ಕನ್ನಡ ಸಂಘದ ವೆಬ್ ಸೈಟ್ ಬಿಡುಗಡೆ

ಈ ಕಾರ್ಯಕ್ರಮದ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಜಪಾನ್ ಕನ್ನಡ ಸಂಘದ ಅಧಿಕೃತ ವೆಬ್ ಸೈಟ್ ಬಿಡುಗಡೆ. ಜಪಾನ್‌ನ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಉದ್ದೇಶದಿಂದ ಈ ವೆಬ್‌ಸೈಟ್ ರೂಪಿಸಲಾಗಿದೆ.

ಯನೈ ಸಾನ್ ಅವರು ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದರು. ವೆಬ್ ಸೈಟ್ ನಿರ್ಮಾಣದಲ್ಲಿ ಸಂಘದ ಕಾರ್ಯಕಾರಿ ಸದಸ್ಯ ಚೇತನ್ ಕುಮಾರ್ ಆರ್. ಪ್ರಮುಖ ಪಾತ್ರ ವಹಿಸಿದ್ದರು. ಸಂಘದ ಮುಂದಿನ ಕಾರ್ಯಕ್ರಮಗಳು, ಚಟುವಟಿಕೆಗಳು ಮತ್ತು ಸಮುದಾಯದ ಮಾಹಿತಿಯನ್ನು ಸುಲಭವಾಗಿ ಹಂಚಿಕೊಳ್ಳಲು ಈ ಡಿಜಿಟಲ್ ವೇದಿಕೆ ಸಹಕಾರಿಯಾಗಲಿದೆ.

ಜಪಾನ್ ಕನ್ನಡ ಸಂಘವು ಕೇವಲ ರಾಜ್ಯೋತ್ಸವ ಆಚರಣೆಗೆ ಸೀಮಿತವಾಗಿಲ್ಲ. ಕನ್ನಡ ಉಳಿಸಿ ಬೆಳೆಸುವುದು, ಮಕ್ಕಳಲ್ಲಿ ಶಿಕ್ಷಣ ಕನ್ನಡದಲ್ಲಿ ಆಸಕ್ತಿ ಮೂಡಿಸುವುದು, ಆರೋಗ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ವಿದೇಶದಲ್ಲೂ ಕನ್ನಡದ ಅಸ್ಮಿತೆ ಉಳಿಸುವ ಪ್ರಯತ್ನ

ಇಂದಿನ ಜಾಗತೀಕರಣದ ಯುಗದಲ್ಲಿ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರದ ಕಾರಣದಿಂದ ಅನೇಕ ಕನ್ನಡಿಗರು ವಿದೇಶಗಳಲ್ಲಿ ನೆಲೆಸಿದ್ದಾರೆ. ಆದರೆ ತಾವು ಎಲ್ಲಿಯೇ ಇದ್ದರೂ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯದೆ ಮುಂದಿನ ಪೀಳಿಗೆಗೆ ಪರಿಚಯಿಸುವುದು ಮಹತ್ವದ ಕಾರ್ಯವಾಗಿದೆ.

ಜಪಾನ್‌ನಲ್ಲಿ ನಡೆದ ಈ ಕನ್ನಡ ರಾಜ್ಯೋತ್ಸವವು ಉತ್ತಮ ಉದಾಹರಣೆಯಾಗಿದೆ. ವಿಶೇಷವಾಗಿ ಜಪಾನ್‌ನ ವಿವಿಧ ಪ್ರದೇಶಗಳ ಕನ್ನಡಿಗರು ಆನ್‌ಲೈನ್ ಮೂಲಕ ಒಂದಾಗಿ ನಾಡಗೀತೆ ಹಾಡಿದ್ದು, ಕನ್ನಡ ಭಾಷೆಯ ಮೇಲಿನ ಅಭಿಮಾನಕ್ಕೆ ಗಡಿಗಳಿಲ್ಲ ತೋರಿಸಿಕೊಟ್ಟಿದೆ.

' ಒಂದೇ ಹೃದಯ, ಒಂದೇ ಕನ್ನಡ, ಒಂದೇ ಕುಟುಂಬ' ಎಂಬ ಆಶಯದೊಂದಿಗೆ ಜಪಾನ್ ಕನ್ನಡ ಸಂಘವು ಕನ್ನಡಿಗರ ಏಕತೆ ಮತ್ತು ಕನ್ನಡ ಸಂಸ್ಕೃತಿ ಉಳಿವಿಗಾಗಿ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸುತ್ತಿದೆ. ವಿದೇಶದಲ್ಲಿ ಕನ್ನಡದ ಕಂಪು ಪಸರಿಸುವ ಇಂತಹ ಪ್ರಯತ್ನಗಳು ಕನ್ನಡ ಭಾಷೆಯ ಜಾಗತಿಕ ಗುರುತನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ.

Comments