ಬೇಸಿಗೆ ಬಿಸಿಲು ಹೆಚ್ಚಾದಂತೆ ಮನೆಯಲ್ಲಿ ಫ್ಯಾನ್, ಎಸಿ ಅಥವಾ ಏರ್ ಕೂಲರ್‌ಗಳ ಬಳಕೆ ಹೆಚ್ಚಾಗುತ್ತದೆ. ಇದರ ಬೆನ್ನಲ್ಲೇ ಬರುವ ವಿದ್ಯುತ್ ಬಿಲ್ ಕೂಡ ಅಷ್ಟೇ ಬಿಸಿಯಾಗಿರುತ್ತದೆ. ಆದರೆ, ಅನೇಕ ಬಾರಿ ನಾವು ಕಡಿಮೆ ವಿದ್ಯುತ್ ಬಳಸಿದರೂ ಬಿಲ್ ಮಾತ್ರ ಹೆಚ್ಚಾಗಿಯೇ ಬರುತ್ತದೆ. ಹೆಚ್ಚಿನ ವಿದ್ಯುತ್ ಬಿಲ್ ಬಂದಾಗ ಇಲಾಖೆಯನ್ನು ದೂರುವ ಬದಲು, ನಮ್ಮ ಮನೆಯ ವಿದ್ಯುತ್ ವ್ಯವಸ್ಥೆಯಲ್ಲಿ ಅಥವಾ ಮೀಟರ್‌ನಲ್ಲಿ ದೋಷವಿದೆಯೇ ಎಂದು ಪತ್ತೆ ಹಚ್ಚುವುದು ಜಾಣತನ. ಯಾವುದೇ ವೃತ್ತಿಪರ ಎಲೆಕ್ಟ್ರಿಷಿಯನ್ ಕರೆಸುವ ಅಗತ್ಯವಿಲ್ಲದೆ, ನೀವೇ ಸ್ವತಃ ಸರಳ ಹಂತಗಳ ಮೂಲಕ ನಿಮ್ಮ ಮೀಟರ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಿಕೊಳ್ಳಬಹುದು.
ನಿಮ್ಮ ಮೀಟರ್ ವೇಗವಾಗಿ ಓಡುತ್ತಿದೆಯೇ? ಹೀಗೆ ಪರೀಕ್ಷಿಸಿ
ವಿದ್ಯುತ್ ಮೀಟರ್‌ನ ನಿಖರತೆಯನ್ನು ಅಳೆಯಲು ಇದು ಅತ್ಯಂತ ಸರಳ ಮಾರ್ಗವಾಗಿದೆ. ಮೊದಲು ಮನೆಯ ಪ್ರತಿಯೊಂದು ಪ್ಲಗ್ ಮತ್ತು ಸ್ವಿಚ್‌ಗಳನ್ನ ಆಫ್ ಮಾಡುವ ಮೂಲಕ ಲೋಡ್ ಅನ್ನು ಶೂನ್ಯಗೊಳಿಸಿ. ಮೀಟರ್‌ನಲ್ಲಿ ದಾಖಲಾಗಿರುವ ಪ್ರಸ್ತುತ ಅಂಕಿಗಳನ್ನು ಬರೆದಿಟ್ಟುಕೊಳ್ಳಿ. ಬಳಿಕ, ಕೇವಲ ಒಂದು ಗಂಟೆಯ ಅವಧಿಗೆ ವಾಟರ್ ಹೀಟರ್ ಅಥವಾ ಐರನ್ ಬಾಕ್ಸ್ ಅನ್ನು ಮಾತ್ರ ಬಳಸಿ. ಸಮಯ ಮುಗಿದ ನಂತರ ಉಪಕರಣವನ್ನು ಸ್ಥಗಿತಗೊಳಿಸಿ, ರೀಡಿಂಗ್‌ನಲ್ಲಿ ಉಂಟಾಗಿರುವ ಬದಲಾವಣೆಯನ್ನು ಲೆಕ್ಕಾಚಾರ ಮಾಡಿ.
ಒಂದು ವೇಳೆ ರೀಡಿಂಗ್ ಸರಿಯಾಗಿ 1 ಯೂನಿಟ್ ಮಾತ್ರ ಹೆಚ್ಚಾಗಿದ್ದರೆ ನಿಮ್ಮ ಮೀಟರ್ ಸುಸ್ಥಿತಿಯಲ್ಲಿದೆ ಎಂದರ್ಥ. ಒಂದು ವೇಳೆ 1 ಯೂನಿಟ್‌ಗಿಂತ ಗಣನೀಯವಾಗಿ ಜಾಸ್ತಿ ತೋರಿಸುತ್ತಿದ್ದರೆ, ನಿಮ್ಮ ಮೀಟರ್ ವೇಗವಾಗಿ ಓಡುತ್ತಿದೆ ಎಂದು ಖಚಿತಪಡಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ತಕ್ಷಣವೇ ಬೆಸ್ಕಾಂ ಅಥವಾ ನಿಮ್ಮ ಭಾಗದ ವಿದ್ಯುತ್ ಕಚೇರಿಗೆ ಲಿಖಿತ ದೂರು ನೀಡಿ ಮೀಟರ್ ಬದಲಾಯಿಸಿಕೊಳ್ಳಿ.
ವಿದ್ಯುತ್ ಬಿಲ್ ಕಡಿಮೆ ಮಾಡಲು 3 ಸ್ಮಾರ್ಟ್ ಐಡಿಯಾಗಳು
ವಿದ್ಯುತ್ ಉಳಿತಾಯ ಮಾಡುವುದು ಎಂದರೆ ಸೌಲಭ್ಯಗಳನ್ನು ತ್ಯಾಗ ಮಾಡುವುದಲ್ಲ, ಬದಲಾಗಿ ಸರಿಯಾದ ತಂತ್ರಜ್ಞಾನ ಬಳಸುವುದು.
LED ಕ್ರಾಂತಿ - ನಿಮ್ಮ ಮನೆಯಲ್ಲಿ ಹಳೆಯ ಮಾದರಿಯ ಫಿಲಮೆಂಟ್ ಬಲ್ಬ್‌ಗಳಿದ್ದರೆ ಇಂದೇ ಅವುಗಳನ್ನು ತೆಗೆದು ಹಾಕಿ LED ಬಲ್ಬ್‌ಗಳನ್ನು ಅಳವಡಿಸಿ. ಇವು ಸಾಮಾನ್ಯ ಬಲ್ಬ್‌ಗಳಿಗಿಂತ ಶೇಕಡಾ 80 ರಷ್ಟು ಕಡಿಮೆ ವಿದ್ಯುತ್ ಬಳಸುತ್ತವೆ ಮತ್ತು ದೀರ್ಘಕಾಲ ಬಾಳಿಕೆ ಬರುತ್ತವೆ.
5-ಸ್ಟಾರ್ ರೇಟಿಂಗ್‌ಗೆ ಆದ್ಯತೆ - ಫ್ರಿಜ್ ಅಥವಾ ಎಸಿ ಖರೀದಿಸುವಾಗ ಅದರ ಮೇಲಿರುವ 'ಸ್ಟಾರ್' ಗುರುತನ್ನು ಗಮನಿಸಿ. 5-ಸ್ಟಾರ್ ಇರುವ ಉಪಕರಣಗಳು ತುಂಬಾ ಕಡಿಮೆ ವಿದ್ಯುತ್ ಬಳಸುತ್ತವೆ. ಆರಂಭದಲ್ಲಿ ಇವುಗಳ ಬೆಲೆ ಸ್ವಲ್ಪ ಹೆಚ್ಚಿದ್ದರೂ, ಮಾಸಿಕ ಬಿಲ್‌ನಲ್ಲಿ ಇವು ನಿಮಗೆ ಭಾರಿ ಹಣ ಉಳಿಸಿಕೊಡುತ್ತವೆ.
ನೈಸರ್ಗಿಕ ಬೆಳಕಿನ ಬಳಕೆ - ಹಗಲಿನಲ್ಲಿ ಮನೆಯ ಕಿಟಕಿಗಳನ್ನು ತೆರೆದಿಡಿ. ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಮನೆಗೆ ಬರುತ್ತದೆ. ಪರಿಣಾಮವಾಗಿ ಲೈಟ್ ಮತ್ತು ಫ್ಯಾನ್ ಅವಶ್ಯಕತೆ ಕಡಿಮೆಯಾಗುತ್ತದೆ. ಮನೆ ಬಿಟ್ಟು ಹೊರಬರುವಾಗ ಅನಗತ್ಯವಾಗಿ ಉರಿಯುತ್ತಿರುವ ಲೈಟ್ ಆಫ್ ಮಾಡುವುದನ್ನು ಮರೆಯಬೇಡಿ.
ಅನೇಕರು ಮಾಡುವ ಒಂದು ದೊಡ್ಡ ತಪ್ಪು ಎಂದರೆ ಟಿವಿಯನ್ನು ಕೇವಲ ರಿಮೋಟ್‌ನಲ್ಲಿ ಆಫ್ ಮಾಡುವುದು. ಆದರೆ ಪ್ಲಗ್ ಪಾಯಿಂಟ್‌ನಲ್ಲಿ ಸ್ವಿಚ್ ಆನ್ ಇದ್ದಾಗ ಸ್ವಲ್ಪ ಪ್ರಮಾಣದ ವಿದ್ಯುತ್ ವ್ಯಯವಾಗುತ್ತಲೇ ಇರುತ್ತದೆ. ಇದನ್ನು 'ಸ್ಟ್ಯಾಂಡ್‌ಬೈ ಪವರ್' ಎಂದು ಕರೆಯಲಾಗುತ್ತದೆ. ಆದ್ದರಿಂದ ಕೆಲಸ ಮುಗಿದ ತಕ್ಷಣ ಸ್ವಿಚ್ ಆಫ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಹಾಗೆ ಫ್ರಿಜ್ ಅನ್ನ ಪದೇ ಪದೇ ಆನ್ ಆಫ್ ಮಾಡಬೇಡಿ. ಇದು ಬಿಲ್ ಹೆಚ್ಚಾಗಲು ಕಾರಣವಾಗಬಹುದು. ಮೀಟರ್‌ನಲ್ಲಿ ದೋಷ ಕಂಡುಬಂದಲ್ಲಿ ವಿಳಂಬ ಮಾಡದೆ ನಿಮ್ಮ ಇತ್ತೀಚಿನ ಬಿಲ್‌ನೊಂದಿಗೆ ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿ.