ನೀವೇನಾದರೂ ಸಣ್ಣ ಪುಟ್ಟ ಬಿಸಿನೆಸ್ ಮಾಡಿಕೊಂಡಿದ್ದು, ಪ್ರತಿ ವರ್ಷ 'ಸೆಕ್ಷನ್ 44AD' ಅಡಿಯಲ್ಲಿ ಅಂದ್ರೆ ಊಹಾತ್ಮಕ ತೆರಿಗೆ (Presumptive Taxation) ಯೋಜನೆಯಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ, ನಿಮಗೊಂದು ಮುಖ್ಯವಾದ ಸುದ್ದಿಯಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ, ಇನ್ಮುಂದೆ ನೀವು ನಿಮ್ಮ ಇನ್ಕಮ್ ಟ್ಯಾಕ್ಸ್ ಫಾರ್ಮ್‌ನಲ್ಲಿ (ITR-4) ಹೆಚ್ಚಿನ ಹಣಕಾಸಿನ ಮಾಹಿತಿ ನೀಡಬೇಕಾಗುತ್ತದೆ.
ಇದುವರೆಗೆ "ಇಷ್ಟು ಬಿಸಿನೆಸ್ ಆಗಿದೆ, ಇಷ್ಟು ಲಾಭ ಬಂದಿದೆ" ಅಂತ ಹೇಳಿ ಸುಮ್ಮನಾಗಬಹುದಿತ್ತು. ಆದರೆ ಇನ್ಮುಂದೆ ಹಾಗಲ್ಲ, ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ಹೊಸ ನಿಯಮ ತಂದಿದೆ.
ಏನಿದು ಹೊಸ ಬದಲಾವಣೆ?
ನೀವು 2026-27ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಸುವಾಗ (ಅಂದರೆ ಮಾರ್ಚ್ 31, 2026ಕ್ಕೆ ಕೊನೆಯಾಗುವ ವರ್ಷಕ್ಕೆ), ಈ ಕೆಳಗಿನ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು:
ಬ್ಯಾಂಕ್ ಬ್ಯಾಲೆನ್ಸ್: ನಿಮ್ಮ ಹೆಸರಲ್ಲಿರುವ ಎಲ್ಲಾ ಉಳಿತಾಯ ಖಾತೆ (Savings) ಮತ್ತು ಚಾಲ್ತಿ ಖಾತೆಗಳ (Current Accounts) ಒಟ್ಟು ಬ್ಯಾಲೆನ್ಸ್ ಎಷ್ಟಿದೆ ಅಂತ ತೋರಿಸಬೇಕು.
ನಗದು (Cash in hand): ಮಾರ್ಚ್ 31ರಂದು ನಿಮ್ಮ ಕೈಯಲ್ಲಿ ಅಥವಾ ಕಲ್ಲಾದಲ್ಲಿ ಎಷ್ಟು ನಗದು ಹಣ ಇತ್ತು ಅನ್ನೋದನ್ನ ತಿಳಿಸಬೇಕು.
ಸ್ಟಾಕ್ ವಿವರ: ನಿಮ್ಮ ಅಂಗಡಿ ಅಥವಾ ಗೋಡೌನ್‌ನಲ್ಲಿ ಎಷ್ಟೂ ರೂಪಾಯಿಯ ಮಾಲು (Stock) ಬಾಕಿ ಉಳಿದಿದೆ ಎಂಬ ಮಾಹಿತಿ ನೀಡಬೇಕು.
ಯಾರಿಗೆಲ್ಲಾ ಇದು ಅನ್ವಯಿಸುತ್ತೆ?
ವಾರ್ಷಿಕ ₹2 ಕೋಟಿ ವರೆಗೆ ವ್ಯವಹಾರ ನಡೆಸುವ ಸಣ್ಣ ವ್ಯಾಪಾರಿಗಳಿಗೆ.
ಒಂದು ವೇಳೆ ನಿಮ್ಮ 95% ವ್ಯವಹಾರ ಡಿಜಿಟಲ್ (ಆನ್‌ಲೈನ್) ಮೂಲಕ ನಡೆದಿದ್ದರೆ, ₹3 ಕೋಟಿ ವರೆಗಿನ ವ್ಯವಹಾರ ಮಾಡುವವರಿಗೂ ಇದು ಅನ್ವಯ.
ನಿವಾಸಿ ವ್ಯಕ್ತಿಗಳು, ಹಿಂದೂ ಅವಿಭಾಜಿತ ಕುಟುಂಬಗಳು (HUF) ಮತ್ತು ಸಹಭಾಗಿತ್ವದ ಸಂಸ್ಥೆಗಳು (Partnership Firms) ಈ ಯೋಜನೆಗೆ ಅರ್ಹರು.
ಗಮನಿಸಿ: ಕಮಿಷನ್ ಏಜೆಂಟ್‌ಗಳು ಅಥವಾ ಬ್ರೋಕರೇಜ್ ವ್ಯವಹಾರ ಮಾಡುವವರಿಗೆ ಈ ಸೆಕ್ಷನ್ ಅನ್ವಯಿಸುವುದಿಲ್ಲ.
ಮಾಹಿತಿ ನೀಡದಿದ್ದರೆ ಏನಾಗುತ್ತೆ?
ಸರ್ಕಾರ ಕೇಳಿರೋ ಈ ಸ್ಟಾಕ್ ಅಥವಾ ನಗದು ವಿವರಗಳನ್ನು ನೀಡದೆ ಹೋದರೆ ಅಥವಾ ತಪ್ಪು ಮಾಹಿತಿ ನೀಡಿದರೆ:
ಇನ್ಕಮ್ ಟ್ಯಾಕ್ಸ್ ಇಲಾಖೆಯಿಂದ ನಿಮಗೆ ಆಟೋಮ್ಯಾಟಿಕ್ ಆಗಿ ನೋಟಿಸ್ ಬರಬಹುದು.
ನಿಮ್ಮ ಫೈಲ್ ಅನ್ನು ಅಧಿಕಾರಿಗಳು ಹೆಚ್ಚಿನ ಪರಿಶೀಲನೆಗೆ (Scrutiny) ತೆಗೆದುಕೊಳ್ಳಬಹುದು.
ಇಲ್ಲದಿದ್ದರೆ ನಿಮ್ಮ ಅಕೌಂಟ್‌ಗಳನ್ನು ಆಡಿಟ್ ಮಾಡಿಸಬೇಕಾದ ಅನಿವಾರ್ಯತೆ ಬರಬಹುದು.
ಐಟಿ ಫಾರ್ಮ್‌ನಲ್ಲಿ (ITR-4) ಇರೋ ಪ್ರಮುಖ ವಿಭಾಗಗಳು:
ನೀವು ಫಾರ್ಮ್ ತುಂಬುವಾಗ ಈ ಕೆಳಗಿನ ಕಾಲಂಗಳನ್ನು ಗಮನಿಸಿ:
E21: ಬ್ಯಾಂಕ್ ಬ್ಯಾಲೆನ್ಸ್ ವಿವರ.
E22: ಕೈಯಲ್ಲಿರೋ ನಗದು ವಿವರ.
E19: ಸ್ಟಾಕ್ ಅಥವಾ ಇನ್ವೆಂಟರಿ ವಿವರ.
E15 & E20: ನೀವು ಕೊಡಬೇಕಾದ ಮತ್ತು ಬರಬೇಕಾದ ಸಾಲದ (Debtors & Creditors) ವಿವರ.
ಯಾಕಂದ್ರೆ ನಿಮ್ಮ ಪ್ರತಿಯೊಂದು ದೊಡ್ಡ ವ್ಯವಹಾರವೂ ಈಗ AIS (Annual Information Statement) ನಲ್ಲಿ ದಾಖಲಾಗುತ್ತಿರುತ್ತೆ. ನೀವು ಐಟಿ ಫಾರ್ಮ್‌ನಲ್ಲಿ ಕೊಡೋ ಮಾಹಿತಿ ಮತ್ತು ಸರ್ಕಾರದ ಹತ್ತಿರ ಇರೋ ಡೇಟಾ ಒಂದಕ್ಕೊಂದು ಮ್ಯಾಚ್ ಆಗಬೇಕು ಅನ್ನೋದೇ ಈ ಹೊಸ ರೂಲ್ಸ್‌ನ ಉದ್ದೇಶ.
ನೆನಪಿಡಬೇಕಾದ ದಿನಾಂಕಗಳು:
ಜುಲೈ 31, 2026: ಸಂಬಳ ಪಡೆಯುವವರಿಗೆ ಕೊನೆಯ ದಿನಾಂಕ.
ಆಗಸ್ಟ್ 31, 2026: 44AD ಅಡಿಯಲ್ಲಿ ಬರುವ ವ್ಯಾಪಾರಿಗಳಿಗೆ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ.
ಇನ್ಮುಂದೆ ಬಿಸಿನೆಸ್ ಅಂದ್ರೆ ಬರಿ ಲಾಭ-ನಷ್ಟದ ಲೆಕ್ಕವಷ್ಟೇ ಅಲ್ಲ, ಬ್ಯಾಂಕ್ ಮತ್ತು ಕೈಯಲ್ಲಿರೋ ದುಡ್ಡಿನ ಲೆಕ್ಕವನ್ನೂ ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತೆ. ಹಾಗಾಗಿ ಇಂದಿನಿಂದಲೇ ನಿಮ್ಮ ಪ್ರತಿ ವ್ಯವಹಾರವನ್ನೂ ನೀಟಾಗಿ ಬರೆದಿಟ್ಟುಕೊಳ್ಳಿ.