ವಯಸ್ಸಾದ ಕಾಲದಲ್ಲಿ ಕೈಯಲ್ಲೊಂದಿಷ್ಟು ಕಾಸಿದ್ದರೆ ಯಾರ ಮುಂದೆಯೂ ಕೈ ಚಾಚದೆ ನೆಮ್ಮದಿಯಾಗಿ ಇರಬಹುದು. ಇಂತಹ ನಿವೃತ್ತ ನೌಕರರ ವೃದ್ಧಾಪ್ಯದ ಜೀವನಕ್ಕೆ ಆಸರೆಯಾಗಿರುವುದು ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಪ್ರಮುಖ ಯೋಜನೆಯಾದ ನೌಕರರ ಪಿಂಚಣಿ ಯೋಜನೆ (EPS-95). ಆದರೆ, ಪ್ರತಿ ವರ್ಷ ಈ ಪಿಂಚಣಿ ಹಣ ಯಾವುದೇ ಅಡೆತಡೆ ಇಲ್ಲದೆ ಬ್ಯಾಂಕ್ ಖಾತೆಗೆ ಬರಬೇಕು ಎಂದರೆ ಪಿಂಚಣಿದಾರರು ಒಂದು ಮುಖ್ಯವಾದ ಕೆಲಸ ಮಾಡಬೇಕಾಗುತ್ತದೆ. ಅದೇ 'ಜೀವನ ಪ್ರಮಾಣಪತ್ರ' (Life Certificate) ಸಲ್ಲಿಕೆ.
ಈ ಪ್ರಮಾಣಪತ್ರವನ್ನು ಸಲ್ಲಿಸಲು ವಯಸ್ಸಾದವರು ಅಂಚೆ ಕಚೇರಿಗೋ ಅಥವಾ ಬ್ಯಾಂಕ್‌ಗೋ ಅಲೆಯಬೇಕಿತ್ತು. ಹಲವು ಕಾರಣಗಳಿಂದಾಗಿ ಕೆಲವರಿಗೆ ಅಲ್ಲಿಗೆ ಹೋಗಲು ಸಾಧ್ಯವಾಗದೆ ಪಿಂಚಣಿ ನಿಂತು ಹೋಗುವ ಆತಂಕ ಎದುರಾಗುತ್ತಿತ್ತು. ಆದರೆ, ಇನ್ಮುಂದೆ ಅಂತಹ ಯಾವುದೇ ಚಿಂತೆ ಬೇಡ! ಇಪಿಎಫ್‌ಒ ದೇಶಾದ್ಯಂತ ಇರುವ ಲಕ್ಷಾಂತರ ಪಿಂಚಣಿದಾರರಿಗೆ ಭಾರಿ ನಿರಾಳತೆ ನೀಡುವ ಅದ್ಭುತ ನಿರ್ಧಾರವೊಂದನ್ನು ಪ್ರಕಟಿಸಿದೆ.
ಕೇವಲ ಒಂದು ಕರೆ ಮಾಡಿ, ಅಂಚೆ ಸಿಬ್ಬಂದಿ ಮನೆಗೇ ಬರ್ತಾರೆ!
ಹೌದು, ವಯೋಸಹಜ ಕಾಯಿಲೆ ಅಥವಾ ಇನ್ಯಾವುದೇ ಕಾರಣದಿಂದಾಗಿ ಹೊರಗಡೆ ಹೋಗಿ ಜೀವಮಾನ ಪ್ರಮಾಣಪತ್ರವನ್ನು ಸಲ್ಲಿಸಲು ಸಾಧ್ಯವಾಗದವರಿಗಾಗಿ ಇಪಿಎಫ್‌ಒ ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿದೆ. ನಿಮ್ಮ ಮನೆ ಬಾಗಿಲಿನಲ್ಲೇ ಈ ಸೇವೆಯನ್ನು ಅತ್ಯಂತ ತ್ವರಿತವಾಗಿ ಒದಗಿಸಲು ಹೊಸ ವ್ಯವಸ್ಥೆ ಮಾಡಲಾಗಿದೆ.
- ನೀವೇನಾದರೂ ಕಚೇರಿಗಳಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ, ತಕ್ಷಣವೇ 033-22029000 ಸಂಖ್ಯೆಗೆ ಒಂದು ಕರೆ ಮಾಡಬೇಕು.
- ನೀವು ಕರೆ ಮಾಡಿದ ತಕ್ಷಣ, ನಿಮ್ಮ ಏರಿಯಾದ ಅಂಚೆ ಇಲಾಖೆಯ ಸಿಬ್ಬಂದಿ ನೇರವಾಗಿ ನಿಮ್ಮ ಮನೆಗೇ ಬರುತ್ತಾರೆ.
- ಅವರೇ ನಿಮ್ಮ ಮನೆಗೆ ಬಂದು ನಿಮ್ಮ ಜೀವನ ಪ್ರಮಾಣಪತ್ರವನ್ನು ಉಚಿತವಾಗಿ ಸಲ್ಲಿಸಲು ಸಂಪೂರ್ಣವಾಗಿ ಸಹಾಯ ಮಾಡುತ್ತಾರೆ.
ಅಂದಹಾಗೆ, ಈ ವಿಶೇಷ ಸೇವೆಗೆ ಪಿಂಚಣಿದಾರರಿಂದ ಯಾವುದೇ ಹಣವನ್ನು ವಸೂಲಿ ಮಾಡಲಾಗುವುದಿಲ್ಲ, ಇದು ಸಂಪೂರ್ಣವಾಗಿ ಉಚಿತ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಪಿಎಫ್‌ಒ, "ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವಲ್ಲಿ ನಿಮಗೆ ಯಾವುದೇ ತೊಂದರೆ ಎದುರಾದರೆ ತಕ್ಷಣ ನೀಡಿರುವ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಿರಿ" ಎಂದು ಪಿಂಚಣಿದಾರರಲ್ಲಿ ವಿನಂತಿಸಿದೆ.
ಏನಿದು ಇಪಿಎಸ್-95 ನಿಯಮ?
ಇಪಿಎಫ್‌ಒ ನಿಯಮಗಳ ಪ್ರಕಾರ, ನೌಕರರ ಪಿಂಚಣಿ ಯೋಜನೆ 1995 ರ ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬರೂ ತಾವು ಕೊನೆಯದಾಗಿ ಪ್ರಮಾಣಪತ್ರ ಸಲ್ಲಿಸಿದ ದಿನಾಂಕದಿಂದ ಒಂದು ವರ್ಷದ ಒಳಗಾಗಿ ಮತ್ತೊಮ್ಮೆ ತಮ್ಮ ಜೀವ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಇದನ್ನು ಸಲ್ಲಿಸದಿದ್ದರೆ, ಪಿಂಚಣಿದಾರರು ಬದುಕಿದ್ದಾರೆ ಎಂಬುದಕ್ಕೆ ದಾಖಲೆ ಇರುವುದಿಲ್ಲ. ಆಗ ಪಿಂಚಣಿ ಹಣ ಬರುವುದು ತಾನಾಗಿಯೇ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಪ್ರತಿ ವರ್ಷ ಇದನ್ನು ನವೀಕರಿಸುವುದು ಅತ್ಯಗತ್ಯ.
ಡಿಜಿಟಲ್ ರೂಪದಲ್ಲೂ ಸಲ್ಲಿಸಬಹುದು
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಿರುವುದರಿಂದ ಪಿಂಚಣಿದಾರರು ಡಿಜಿಟಲ್ ಜೀವ ಪ್ರಮಾಣಪತ್ರವನ್ನು (Digital Life Certificate) ಸಹ ಸಲ್ಲಿಸಬಹುದಾಗಿದೆ. ಇದು ಬಯೋಮೆಟ್ರಿಕ್ ಆಧಾರಿತ ಆಧಾರ್ ಕಾರ್ಡ್ ಲಿಂಕ್ ಆಗಿರುವ ವ್ಯವಸ್ಥೆಯಾಗಿದೆ.
ಇದಕ್ಕಾಗಿ ಪಿಂಚಣಿದಾರರು ತಮ್ಮ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳಿನ ಗುರುತು (Biometric) ಬಳಸಿ ಡಿಜಿಟಲ್ ಪ್ರಮಾಣಪತ್ರವನ್ನು ಸೃಷ್ಟಿಸಬೇಕಾಗುತ್ತದೆ. ನಂತರ ಒನ್ ಟೈಮ್ ಪಾಸ್‌ವರ್ಡ್ (OTP) ಬಳಸಿ ಲಾಗಿನ್ ಆಗಿ ತಮ್ಮ ಪ್ರಮಾಣಪತ್ರವನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಡಿಜಿಟಲ್ ಪ್ರಮಾಣಪತ್ರ ಸಲ್ಲಿಕೆಯಾದಾಗ ಮಾತ್ರ ಪಿಂಚಣಿದಾರರು ಜೀವಂತವಾಗಿದ್ದಾರೆ ಎಂದು ವ್ಯವಸ್ಥೆಯಲ್ಲಿ ದಾಖಲಾಗುತ್ತದೆ.
ಯಾರಿಗೆಲ್ಲ ಸಿಗುತ್ತೆ ಈ ಇಪಿಎಸ್ 95 ಪಿಂಚಣಿ?
ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೂಲ ವೇತನ (Basic Salary) ತಿಂಗಳಿಗೆ 15,000 ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಅವರು ಈ ಇಪಿಎಸ್ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಾರೆ. ನಿಯಮಗಳ ಪ್ರಕಾರ, 20 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಕಂಪನಿಗಳು ಇಪಿಎಫ್‌ಒ ಸಂಸ್ಥೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಪ್ರತಿ ತಿಂಗಳು ಉದ್ಯೋಗಿ ಕೆಲಸ ಮಾಡುವ ಕಂಪನಿಯು ನೀಡುವ ಒಟ್ಟು ಕೊಡುಗೆಯ ಪೈಕಿ ಶೇಕಡಾ 8.33 ರಷ್ಟು ಭಾಗವನ್ನು ಈ ಇಪಿಎಸ್ ಪಿಂಚಣಿ ಖಾತೆಗೆ ಜಮಾ ಮಾಡಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ, ಇಪಿಎಸ್ 95 ಯೋಜನೆಯ ಅಡಿಯಲ್ಲಿ ನಿವೃತ್ತ ನೌಕರರಿಗೆ ಪ್ರತಿ ತಿಂಗಳು ಕನಿಷ್ಠ 1,000 ರೂಪಾಯಿ ಪಿಂಚಣಿಯನ್ನು ನೀಡಲಾಗುತ್ತಿದೆ.
ಇಪಿಎಫ್‌ಒ ಮತ್ತು ಅಂಚೆ ಇಲಾಖೆ ತಂದಿರುವ ಈ ಹೊಸ ನಿಯಮದಿಂದಾಗಿ ಇನ್ಮುಂದೆ ವೃದ್ಧರು ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಕಷ್ಟ ತಪ್ಪಿದಂತಾಗಿದೆ. ಹಿರಿಯ ನಾಗರಿಕರಿಗೆ ಗೌರವಯುತವಾಗಿ ಮನೆ ಬಾಗಿಲಿಗೆ ಸೇವೆ ತಲುಪಿಸುತ್ತಿರುವ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.