ಬೆಂಗಳೂರು: ನೀವು ಉದ್ಯೋಗಿಯಾಗಿದ್ದು, ನಿಮ್ಮ ಸಂಬಳದಲ್ಲಿ ಪಿಎಫ್ (PF) ಕಡಿತವಾಗುತ್ತಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಈಗ ಡಿಜಿಟಲ್ ಯುಗಕ್ಕೆ ತಕ್ಕಂತೆ ಭಾರಿ ಬದಲಾವಣೆಗೆ ಮುಂದಾಗಿದೆ. ಶೀಘ್ರದಲ್ಲೇ ಇಪಿಎಫ್‌ಒ 3.0 (EPFO 3.0) ಎಂಬ ಹೈಟೆಕ್ ವ್ಯವಸ್ಥೆಯನ್ನು ಜಾರಿಗೆ ತರಲು ಇಲಾಖೆ ಸಜ್ಜಾಗಿದ್ದು, ಇದು ಲಕ್ಷಾಂತರ ಚಂದಾದಾರರ ಪಾಲಿಗೆ ಗೇಮ್ ಚೇಂಜರ್ ಆಗಲಿದೆ.
ಈ ಹೊಸ ವ್ಯವಸ್ಥೆಯು ಕೇವಲ ತಾಂತ್ರಿಕ ಬದಲಾವಣೆಯಲ್ಲ, ಬದಲಾಗಿ ಸಾಮಾನ್ಯ ಉದ್ಯೋಗಿಗಳು ತಮ್ಮ ಪಿಎಫ್ ಹಣವನ್ನು ನಿರ್ವಹಿಸುವ ವಿಧಾನವನ್ನೇ ಸಂಪೂರ್ಣವಾಗಿ ಬದಲಿಸಲಿದೆ.
ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್ ಹಣ ವಿತ್‌ಡ್ರಾ!
ಇಪಿಎಫ್‌ಒ 3.0 ತರುತ್ತಿರುವ ಅತಿ ದೊಡ್ಡ ಮತ್ತು ಕ್ರಾಂತಿಕಾರಿ ಬದಲಾವಣೆ ಎಂದರೆ ಅದು ಹಣ ಹಿಂಪಡೆಯುವ ವಿಧಾನ.
ವಿತ್‌ಡ್ರಾವಲ್ ಕಾರ್ಡ್ - ಭವಿಷ್ಯ ನಿಧಿ ಸಂಸ್ಥೆಯು ತನ್ನ ಗ್ರಾಹಕರಿಗೆ ವಿಶೇಷ 'ವಿತ್‌ಡ್ರಾವಲ್ ಕಾರ್ಡ್' ನೀಡಲು ಉದ್ದೇಶಿಸಿದೆ. ಇದರ ಸಹಾಯದಿಂದ ನೀವು ಬ್ಯಾಂಕ್ ಎಟಿಎಂಗಳಿಗೆ ಹೋಗಿ ಸುಲಭವಾಗಿ ಪಿಎಫ್ ಹಣವನ್ನು ಡ್ರಾ ಮಾಡಬಹುದು.
ಯುಪಿಐ ಕ್ರಾಂತಿ - ಇನ್ನು ಮುಂದೆ ನಿಮ್ಮ ಪಿಎಫ್ ಖಾತೆಯನ್ನು Google Pay, PhonePe ನಂತಹ ಯುಪಿಐ ಪ್ಲಾಟ್‌ಫಾರ್ಮ್‌ಗಳಿಗೆ ಕನೆಕ್ಟ್ ಮಾಡಬಹುದು. ಇದರ ಮೂಲಕ ಮೊಬೈಲ್‌ನಿಂದಲೇ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವ ಸೌಲಭ್ಯ ದೊರೆಯಲಿದೆ.
ಇಪಿಎಫ್‌ಒ 3.0 ನಲ್ಲಿರುವ ಪ್ರಮುಖ ಸೌಲಭ್ಯಗಳು
ಸುಮಾರು 7.8 ಕೋಟಿ ಸದಸ್ಯರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ಈ ಹೊಸ ವ್ಯವಸ್ಥೆಯಲ್ಲಿ ಹಲವು ವಿಶೇಷತೆಗಳಿವೆ;
ಕಂಪನಿಯ ಕಾಟ ಇರುವುದಿಲ್ಲ - ಈಗಿನ ವ್ಯವಸ್ಥೆಯಲ್ಲಿ ಕೆವೈಸಿ (KYC) ನವೀಕರಣ ಅಥವಾ ಪಿಎಫ್ ಕ್ಲೈಮ್ ಮಾಡಲು ಕಂಪನಿಯ ಅಥವಾ ಉದ್ಯೋಗದಾತರ ಅನುಮೋದನೆ ಬೇಕು. ಆದರೆ ಇಪಿಎಫ್‌ಒ 3.0 ಸಂಪೂರ್ಣ ಕಾಗದರಹಿತ (Paperless) ಪ್ರಕ್ರಿಯೆಯಾಗಿದ್ದು, ಇನ್ನು ಮುಂದೆ ಮಾಲೀಕರ ಅನುಮೋದನೆಗಾಗಿ ಕಾಯುವ ಅಗತ್ಯವಿರುವುದಿಲ್ಲ.
ಆಟೋ ಸೆಟಲ್ಮೆಂಟ್ ಮಿತಿ ಹೆಚ್ಚಳ - ಸದ್ಯ ಆಟೋ ಇತ್ಯರ್ಥದ ಮಿತಿ 1 ಲಕ್ಷ ರೂಪಾಯಿಗಳಷ್ಟಿದೆ. ಹೊಸ ವ್ಯವಸ್ಥೆಯಲ್ಲಿ ಇದನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಲಾಗುತ್ತಿದೆ.
ತ್ವರಿತ ಪಾವತಿ - ಹಿಂದೆ ಪಿಎಫ್ ಹಣ ಖಾತೆಗೆ ಬರಲು ವಾರಗಟ್ಟಲೆ ಕಾಯಬೇಕಿತ್ತು. ಇನ್ನು ಮುಂದೆ ಕ್ಲೈಮ್ ಮಾಡಿದ ಕೇವಲ 2 ರಿಂದ 5 ದಿನಗಳಲ್ಲಿ ಹಣ ನಿಮ್ಮ ಬ್ಯಾಂಕ್ ಖಾತೆ ಸೇರುತ್ತದೆ.
ಬೆರಳ ತುದಿಯಲ್ಲೇ ಸೇವೆ
ಹಳೆಯ ವ್ಯವಸ್ಥೆಗಿಂತ ಇಪಿಎಫ್‌ಒ 3.0 ಅತ್ಯಾಧುನಿಕವಾಗಿದ್ದು, ಹೈಟೆಕ್ ತಂತ್ರಜ್ಞಾನವನ್ನು ಒಳಗೊಂಡಿದೆ. ಪಿಎಫ್‌ಗೆ ಸಂಬಂಧಿಸಿದ ಪ್ರತಿಯೊಂದು ಕೆಲಸವನ್ನು ಚಂದಾದಾರರು ಮನೆಯಲ್ಲೇ ಕುಳಿತು ತಮ್ಮ ಬೆರಳ ತುದಿಯಲ್ಲಿ ಮಾಡಿಕೊಳ್ಳಬಹುದು. ಈ ಬದಲಾವಣೆಯು ಪಿಎಫ್ ಪ್ರಕ್ರಿಯೆಯನ್ನು ಅತ್ಯಂತ ಸರಳ ಮತ್ತು ಪಾರದರ್ಶಕಗೊಳಿಸಲಿದೆ.
ಕೆಲಸ ಬಿಟ್ಟಾಗ ಅಥವಾ ಹಣದ ತುರ್ತು ಅವಶ್ಯಕತೆ ಇದ್ದಾಗ ಪಿಎಫ್ ಹಣಕ್ಕಾಗಿ ಅಲೆದಾಡುತ್ತಿದ್ದ ದಿನಗಳಿಗೆ ಇನ್ನು ತೆರೆ ಬೀಳಲಿದೆ. ಹೈಟೆಕ್ ರೂಪ ಪಡೆದುಕೊಳ್ಳುತ್ತಿರುವ ಇಪಿಎಫ್‌ಒ ಚಂದಾದಾರರ ಪಾಲಿಗೆ ನಿಜಕ್ಕೂ ವರದಾನವಾಗಲಿದೆ.