ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳೇ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯೋ ಮ್ಯಾಚ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮೈದಾನದಲ್ಲಿ ಕುಳಿತು ಕಿರುಚುತ್ತಾ ನೆಚ್ಚಿನ ಆಟಗಾರರನ್ನು ನೋಡಬೇಕು ಅನ್ನೋದು ಪ್ರತಿಯೊಬ್ಬ ಅಭಿಮಾನಿಯ ಆಸೆ. ಆದರೆ ಈ ಆಸೆಯೇ ಈಗ ಮೋಸಗಾರರಿಗೆ ಬಂಡವಾಳವಾಗಿದೆ! ಪಂದ್ಯದ ಕ್ರೇಜ್ ಬಳಸಿಕೊಂಡು ಜನರನ್ನು ಲೂಟಿ ಮಾಡುವ ದೊಡ್ಡ ಜಾಲವೇ ಆಕ್ಟಿವ್ ಆಗಿದೆ. ಸುಮ್ಮನೆ ಯಾವುದೋ ಲಿಂಕ್ ಕ್ಲಿಕ್ ಮಾಡಿ ಅಥವಾ ಅಪರಿಚಿತರ ಮಾತನ್ನು ನಂಬಿ ಟಿಕೆಟ್ ಬುಕ್ ಮಾಡಿದರೆ, ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗೋದು ಗ್ಯಾರಂಟಿ.
ಟೆಕ್ಕಿಗೆ ಬಿದ್ದ ಬರೋಬ್ಬರಿ 1.46 ಲಕ್ಷ ರೂ. ಪಂಗನಾಮ
ಬೆಂಗಳೂರಿನ ಬಿ.ನಾರಾಯಣಪುರದ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಐಪಿಎಲ್ ಟಿಕೆಟ್ ಆಸೆಗೆ ಬಿದ್ದು ಬರೋಬ್ಬರಿ 1.46 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕೇವಲ ಎರಡು ಟಿಕೆಟ್ ಬೇಕು ಎಂದು ಹೊರಟ ಇವರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಕಥೆ ಕೇಳಿದರೆ ನೀವು ಶಾಕ್ ಆಗ್ತೀರಾ.
ಇನ್ಸ್ಟಾಗ್ರಾಮ್ನಲ್ಲಿ ಈ ಟೆಕ್ಕಿಗೆ ಒಬ್ಬ ವ್ಯಕ್ತಿ ಪರಿಚಯವಾಗಿದ್ದ. ಆತ ತನ್ನನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್‌ನ ಹಿರಿಯ ಮೇಲ್ವಿಚಾರಕ "ಸುಮಿತ್ ಬಿಸ್ವಾಲ್" ಎಂದು ಸುಳ್ಳು ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. "ನನ್ನ ಬಳಿ ಟಿಕೆಟ್ ಇದೆ, ಜೊತೆಗೆ ಸ್ಪೆಷಲ್ ಫುಡ್ ಕೂಪನ್ ಮತ್ತು ವಿಐಪಿ ಸೌಲಭ್ಯ ಕೂಡ ಕೊಡಿಸ್ತೀನಿ" ಎಂದು ನಂಬಿಸಿದ್ದ.
ಮೋಸ ನಡೆದಿದ್ದು ಹೇಗೆ?
- ಆರಂಭದಲ್ಲಿ ಎರಡು ಟಿಕೆಟ್‌ಗಳಿಗೆ ಆತ ಕೇಳಿದ್ದು ಕೇವಲ 3,700 ರೂಪಾಯಿ. ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ.
- ಮೊದಲು ಟಿಕೆಟ್ ದುಡ್ಡು ಅಂದ.
- ಆಮೇಲೆ "ಸೆಕ್ಯೂರಿಟಿ ಡಿಪಾಸಿಟ್" ಬೇಕು ಅಂದ.
- ನಂತರ ಎಕ್ಸ್ಟ್ರಾ ಐಡಿ ಕಾರ್ಡ್ ಫೀಸ್, ಫುಡ್ ಕೂಪನ್ ಚಾರ್ಜ್ ಅಂತ ಹಂತ ಹಂತವಾಗಿ ಹಣ ಪೀಕುತ್ತಲೇ ಹೋದ.
ಪಂದ್ಯದ ದಿನ ಗೇಟ್ ನಂಬರ್ 10 ಹತ್ತಿರ ಬನ್ನಿ ಅಂತ ಹೇಳಿ, ನಂಬಿಕೆ ಬರಲಿ ಅಂತ ಒಂದು ನಕಲಿ ಇಮೇಲ್ ಕೂಡ ಕಳಿಸಿದ್ದ. ಈ ಟೆಕ್ಕಿ ಎಷ್ಟು ನಂಬಿದ್ದನೆಂದರೆ, ತನ್ನ ಅಕೌಂಟ್ ಮಾತ್ರವಲ್ಲದೆ ತಾಯಿಯ ಅಕೌಂಟ್‌ನಿಂದಲೂ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಒಟ್ಟು 1.46 ಲಕ್ಷ ರೂಪಾಯಿ ಕೈಬಿಟ್ಟ ಮೇಲೆ, ಆ ಮೋಸಗಾರ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಈಗ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಧಿಕೃತ ಆಪ್ ಮಾತ್ರ ಬಳಸಿ: ಐಪಿಎಲ್ ಟಿಕೆಟ್‌ಗಳನ್ನು ಯಾವಾಗಲೂ ಅಧಿಕೃತ ವೆಬ್‌ಸೈಟ್ ಅಥವಾ ಬುಕ್‌ಮೈಶೋ (BookMyShow) ನಂತಹ ನಂಬಿಕಸ್ಥ ಆಪ್‌ಗಳಲ್ಲೇ ಖರೀದಿಸಿ.
ಸೋಷಿಯಲ್ ಮೀಡಿಯಾ ನಂಬಬೇಡಿ: ಇನ್ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ವಾಟ್ಸಾಪ್ ಗ್ರೂಪ್‌ಗಳಲ್ಲಿ ಯಾರಾದರೂ "ನನ್ನ ಹತ್ತಿರ ಎಕ್ಸ್ಟ್ರಾ ಟಿಕೆಟ್ ಇದೆ, ದುಡ್ಡು ಹಾಕಿ" ಅಂದ್ರೆ ಅಪ್ಪಿತಪ್ಪಿಯೂ ನಂಬಬೇಡಿ.
ಮುಂಗಡ ಹಣ ನೀಡಬೇಡಿ: ಅಪರಿಚಿತ ವ್ಯಕ್ತಿಗೆ ಸೆಕ್ಯೂರಿಟಿ ಡಿಪಾಸಿಟ್ ಅಥವಾ ಫುಡ್ ಕೂಪನ್ ಹೆಸರಲ್ಲಿ ಮೊದಲೇ ಯುಪಿಐ ಪೇಮೆಂಟ್ ಮಾಡಲೇಬೇಡಿ.
ಬ್ಲ್ಯಾಕ್ ಟಿಕೆಟ್ ಸಹ ಡೇಂಜರ್: ಸ್ಟೇಡಿಯಂ ಹತ್ತಿರ ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರುವವರಿಂದ ಟಿಕೆಟ್ ತಗೊಂಡ್ರೆ, ಅದು ಒರಿಜಿನಲ್ ಆಗಿರುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಸ್ಕ್ಯಾನ್ ಮಾಡುವಾಗ ಅದು ಫೇಕ್ ಅಂತ ಗೊತ್ತಾದ್ರೆ ದುಡ್ಡು ವೇಸ್ಟ್, ಮ್ಯಾಚ್ ನೋಡೋ ಆಸೆಯೂ ಮಣ್ಣು.
ಕ್ರಿಕೆಟ್ ಮೇಲಿರೋ ನಿಮ್ಮ ಪ್ರೀತಿ ಮೋಸಗಾರರ ಪಾಲಾಗದಿರಲಿ. ಟಿಕೆಟ್ ಸಿಕ್ಕರೆ ಮಾತ್ರ ಸ್ಟೇಡಿಯಂಗೆ ಹೋಗಿ, ಸಿಗದಿದ್ದರೆ ಮನೆಯಲ್ಲೇ ಕೂತು ಆರಾಮಾಗಿ ಮ್ಯಾಚ್ ಎಂಜಾಯ್ ಮಾಡಿ. ಸುಮ್ಮನೆ ಆತುರಪಟ್ಟು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಿಲಾಡಿಗಳ ಕೈಗಿಡಬೇಡಿ.