Apr 29, 2026 Languages : ಕನ್ನಡ | English

ಸಾಕು ಅಪ್ಪಾಜಿ ಹೆಸರಿನಲ್ಲಿ ರಾಜಕೀಯ - ಅಭಿಮಾನ್ ಸ್ಟುಡಿಯೋ ವಿವಾದಕ್ಕೆ ಅನಿರುದ್ಧ್ ಇಟ್ಟರೆ ದೊಡ್ಡ ಫುಲ್ ಸ್ಟಾಪ್!!

ಕನ್ನಡ ಚಿತ್ರರಂಗದ ಯಜಮಾನ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರ ಕಳೆದ 15 ವರ್ಷಗಳಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಅವರ ತಾತ್ಕಾಲಿಕ ಸ್ಮಾರಕವನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ವಿಷ್ಣುದಾದಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದರೆ, ಅತ್ತ ಅಳಿಯ ಅನಿರುದ್ಧ್ ಜತ್ಕರ್ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಾಕಿ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ.

ವಿಷ್ಣು ಅಭಿಮಾನಿಗಳಿಗೆ ಅನಿರುದ್ಧ್ ನೇರ ಸವಾಲ್ | Photo Credit: aniruddhajatkar
ವಿಷ್ಣು ಅಭಿಮಾನಿಗಳಿಗೆ ಅನಿರುದ್ಧ್ ನೇರ ಸವಾಲ್ | Photo Credit: aniruddhajatkar

ಸರ್ಕಾರಕ್ಕೆ ಕೇಳಿ ಸಾಕಾಗಿದೆ - ಅನಿರುದ್ಧ್ ಬೇಸರ

ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕು ಎಂದು ಅಭಿಮಾನಿಗಳು ಈಗಲೂ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿರುದ್ಧ್, "ನಾವು ಮಂತ್ರಿಗಳನ್ನು ಕೇಳಿದ್ದೇವೆ, ಅಧಿಕಾರಿಗಳನ್ನು ಕೇಳಿದ್ದೇವೆ. ಆದರೆ ಆ ಜಾಗ ಈಗ ಅರಣ್ಯ ಇಲಾಖೆಗೆ ಸೇರಿದೆ ಎಂದು ಅವರು ಹೇಳುತ್ತಿದ್ದಾರೆ. ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಕಾನೂನು ತೊಡಕುಗಳಿವೆ. ಈಗಾಗಲೇ ಮೈಸೂರಿನಲ್ಲಿ ಭವ್ಯವಾದ ಸ್ಮಾರಕ ನಿರ್ಮಾಣವಾಗಿದೆ. ಹೀಗಿರುವಾಗ ಕುಟುಂಬದವರಾದ ನಾವು ಮತ್ತೆ ಮತ್ತೆ ಸರ್ಕಾರದ ಮುಂದೆ ಹೋಗಿ ಕೇಳುವುದು ಸರಿಯಲ್ಲ" ಎಂದು ನೇರವಾಗಿ ಹೇಳಿದ್ದಾರೆ.

View this post on Instagram

A post shared by Aniruddha Jatkar (@aniruddhajatkar)

"ಜವಾಬ್ದಾರಿ ಈಗ ನಿಮ್ಮದು" - ಅಭಿಮಾನಿಗಳಿಗೆ ಸವಾಲ್

ಅಭಿಮಾನ್ ಸ್ಟುಡಿಯೋದಲ್ಲಿದ್ದ ಮಂಟಪವನ್ನು ಭಾರತಿ ವಿಷ್ಣುವರ್ಧನ್ ಅವರು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದರು. ಅದನ್ನು ತೆರವುಗೊಳಿಸಿದ್ದು ಖಂಡನೀಯ ಎಂದಿರುವ ಅನಿರುದ್ಧ್, ಅಭಿಮಾನಿಗಳಿಗೆ ಒಂದು ಮಾತು ಹೇಳಿದ್ದಾರೆ.

ಅನಿರುದ್ಧ್ ಮಾತು: "ಅಪ್ಪಾಜಿ ಪುಣ್ಯಭೂಮಿಯ ಜವಾಬ್ದಾರಿ ಈಗ ನಿಮ್ಮದು. ನೀವೆಲ್ಲರೂ ಒಟ್ಟಾಗಿ ಪ್ರಯತ್ನ ಮಾಡಿ ಅಲ್ಲಿ ಸ್ಮಾರಕ ನಿರ್ಮಿಸಿದರೆ ನಮಗೂ ಸಂತೋಷವೇ. ಆ ಹೆಗ್ಗಳಿಕೆ ನಿಮಗೇ ಸಲ್ಲಲಿ. ನಾವು ಮೈಸೂರಿನ ಸ್ಮಾರಕಕ್ಕಾಗಿ ಹಠ ಹಿಡಿದಿದ್ದಕ್ಕೆ ಇಂದು ಅಪ್ಪಾಜಿಗೆ ಒಂದು ಗೌರವಯುತವಾದ ಜಾಗ ಸಿಕ್ಕಿದೆ. ಇಲ್ಲದಿದ್ದರೆ ಇವತ್ತಿಗೂ ಸ್ಮಾರಕ ನಿರ್ಮಾಣವೇ ಆಗುತ್ತಿರಲಿಲ್ಲ."

ಸ್ವಾರ್ಥಿಗಳ ಬಗ್ಗೆ ಎಚ್ಚರಿಕೆ ಇರಲಿ

ಕೆಲವರು ಅಭಿಮಾನಿಗಳ ವೇಷ ತೊಟ್ಟು ಕುಟುಂಬ ಮತ್ತು ಅಭಿಮಾನಿಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅನಿರುದ್ಧ್ ಎಚ್ಚರಿಸಿದ್ದಾರೆ. "ನಮ್ಮ ಪ್ರಾಮಾಣಿಕತೆಯ ಬಗ್ಗೆ ಗೊತ್ತಿಲ್ಲದವರು ಮಾಡುವ ಆರೋಪಗಳು ನಮಗೆ ಬೇಸರ ತಂದಿದೆ. ಕೇವಲ ಚಪ್ಪಾಳೆಗಾಗಿ ಹೇಳಿಕೆ ಕೊಡುವವರನ್ನು ನಂಬಬೇಡಿ" ಎಂದು ಅವರು ವಿನಂತಿಸಿದ್ದಾರೆ.

"ಪ್ರೀತಿ ಸಾಬೀತುಪಡಿಸುವ ಅವಶ್ಯಕತೆ ನಮಗಿಲ್ಲ"

ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಕೊನೆಯುಸಿರೆಳೆದರು, ಅಲ್ಲೇ ಅವರ ಅಸ್ತಿ ಇರಿಸಲಾಗಿದೆ. ಅವರ ಆಸೆಯೂ ಅದೇ ಆಗಿತ್ತು ಎಂದು ಅನಿರುದ್ಧ್ ತಿಳಿಸಿದ್ದಾರೆ. "ಅಪ್ಪಾಜಿ ಮೇಲೆ ನಮಗಿರುವ ಪ್ರೀತಿಯನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯ ನಮಗಿಲ್ಲ. ಇನ್ನು ಮುಂದೆ ಪುಣ್ಯಭೂಮಿಯ ವಿಚಾರದಲ್ಲಿ ನಮ್ಮ ಕುಟುಂಬದಿಂದ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ" ಎಂದು ಹೇಳುವ ಮೂಲಕ ಈ ವಿವಾದಕ್ಕೆ ದೊಡ್ಡ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ವಿಚಾರದಲ್ಲಿ ವಿಷ್ಣು ಕುಟುಂಬ ಈಗ ದೂರ ಸರಿದಿದೆ. ಮೈಸೂರಿನ ಸ್ಮಾರಕವೇ ಅಂತಿಮ ಎಂಬ ನಿರ್ಧಾರಕ್ಕೆ ಬಂದಿದೆ. ಇನ್ನು ಮುಂದೆ ಈ ಹೋರಾಟ ಏನಿದ್ದರೂ ಅಭಿಮಾನಿಗಳ ಹೆಗಲ ಮೇಲೆ ಬಿದ್ದಿದೆ.

Latest News