Mar 1, 2026 Languages : ಕನ್ನಡ | English

51ನೇ ವಿವಾಹ ವಾರ್ಷಿಕೋತ್ಸವ - ಭಾರತಿ ಅವರಿಗೆ ವಿಷ್ಣುದಾದಾ ಪ್ರಪೋಸ್ ಮಾಡಿದ್ದು ಹೇಗೆ ಗೋತ್ತಾ???

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಸುಂದರ ಜೋಡಿ ಎಂದರೆ ಅದು ಡಾ. ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್. ಫೆಬ್ರವರಿ 27ರಂದು ಈ ಅಪರೂಪದ ಜೋಡಿಯ 51ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಅವರ ಮದುವೆಯ ಅಪರೂಪದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯ ಪ್ರೇಮಕಥೆಯನ್ನು ಮೆಲುಕು ಹಾಕುತ್ತಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ಚಿಗುರಿದ ಆ ಅಪರೂಪದ ಪ್ರೇಮಕಥೆ
ಶೂಟಿಂಗ್ ಸೆಟ್‌ನಲ್ಲಿ ಚಿಗುರಿದ ಆ ಅಪರೂಪದ ಪ್ರೇಮಕಥೆ

ವಿಷ್ಣುವರ್ಧನ್ ಮತ್ತು ಭಾರತಿ ಅವರ ಪ್ರೇಮಕಥೆ ಬಹಳ ಕುತೂಹಲಕಾರಿಯಾಗಿದೆ. ಭಾರತಿ ಅವರು ವಿಷ್ಣುವರ್ಧನ್ ಅವರಿಗಿಂತ ಮೊದಲೇ ಚಿತ್ರರಂಗಕ್ಕೆ ಬಂದು ಸ್ಟಾರ್ ನಟಿಯಾಗಿ ಗುರುತಿಸಿಕೊಂಡು. ಡಾ. ರಾಜ್‌ಕುಮಾರ್ ಅವರಂತಹ ದಿಗ್ಗಜರ ಜೊತೆ ನಟಿಸಿ ಜನಪ್ರಿಯತೆಯ ಶಿಖರದಲ್ಲಿದ್ದರು. ಇತ್ತ ವಿಷ್ಣುವರ್ಧನ್ ಅವರು 'ನಾಗರಹಾವು' ಚಿತ್ರದ ಮೂಲಕ ಆಗಷ್ಟೇ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಇವರಿಬ್ಬರ ಮೊದಲ ಭೇಟಿ ನಡೆದದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ. ಆಗ ಭಾರತಿ ಅವರು ರಾಜ್‌ಕುಮಾರ್ ಅವರ 'ದೂರದ ಬೆಟ್ಟ' ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ತಮ್ಮ ಚೊಚ್ಚಲ ಸಿನಿಮಾ 'ನಾಗರಹಾವು' ನೂರನೇ ದಿನ ಪೂರೈಸಿದ ಸಂಭ್ರಮದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ವಿಷ್ಣುವರ್ಧನ್ ಅಲ್ಲಿಗೆ ಬಂದಿದ್ದರು. ಅಂದು ಶುರುವಾದ ಪರಿಚಯ ಮುಂದೆ ಸ್ನೇಹಕ್ಕೆ ನಾಂದಿ ಹಾಡಿತು.

ಸ್ನೇಹ ಪ್ರೀತಿಯಾಗಿ ಬದಲಾದ ಕ್ಷಣ
ಬಳಿಕ ಇವರಿಬ್ಬರು 'ಮನೆ ಬೆಳಗಿದ ಸೊಸೆ' ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದರು. ಶೂಟಿಂಗ್ ಸೆಟ್‌ನಲ್ಲಿ ಇಬ್ಬರ ನಡುವೆ ಸ್ನೇಹ ಗಾಢವಾಯಿತು. ವಿಶೇಷವೆಂದರೆ, ಇಬ್ಬರಿಗೂ ಸಂಗೀತದ ಮೇಲೆ ಅಪಾರ ಆಸಕ್ತಿ ಇತ್ತು. ಭಾರತಿ ಅವರು ಸಂಗೀತ ಕಲಿಯುತ್ತಿದ್ದರು, ವಿಷ್ಣು ಅವರು ಹಾಡುವುದರಲ್ಲಿ ನಿಸ್ಸೀಮರಾಗಿದ್ದರು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಇಬ್ಬರೂ ಜೊತೆಯಾಗಿ ಹಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಸಂಗೀತ ಪ್ರೇಮವೇ ಇವರಿಬ್ಬರನ್ನು ಮನಸ್ಸಿನಿಂದ ಹತ್ತಿರ ತಂದಿತು.

ಬಳಿಕ 'ದೇವರ ಗುಡಿ', 'ನಾಗರಹೊಳೆ', 'ಬಂಗಾರದ ಜಿಂಕೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಈ ಜೋಡಿ ತೆರೆ ಹಂಚಿಕೊಂಡಿತು. ಭಾರತಿ ಅವರು ವಿಷ್ಣುವರ್ಧನ್ ಅವರಿಗಿಂತ ಕೇವಲ ಒಂದು ತಿಂಗಳು ದೊಡ್ಡವರಾಗಿದ್ದರೂ, ವೃತ್ತಿಜೀವನದಲ್ಲಿ ಸೀನಿಯರ್ ಆಗಿದ್ದರು. ಆದರೆ ಮನಸ್ಸುಗಳು ಒಂದಾದ ಮೇಲೆ ವಯಸ್ಸು ಅಥವಾ ಹಿರಿತನ ಅಡ್ಡಿಯಾಗಲಿಲ್ಲ. ಒಂದು ದಿನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿಷ್ಣುವರ್ಧನ್ ಅವರು ಭಾರತಿ ಅವರಿಗೆ ಪ್ರಪೋಸ್ ಮಾಡಿದರು. ಇಬ್ಬರ ಇಷ್ಟ-ಕಷ್ಟಗಳು ಒಂದೇ ಆಗಿದ್ದರಿಂದ ಭಾರತಿ ಕೂಡ ತಕ್ಷಣವೇ ಒಪ್ಪಿಗೆ ನೀಡಿದರು.

ಮಾದರಿ ದಾಂಪತ್ಯ ಜೀವನ
27 ಫೆಬ್ರವರಿ 1975ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. ಮದುವೆಯ ನಂತರ ಭಾರತಿ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ, ಪತಿಯ ವೃತ್ತಿಜೀವನಕ್ಕೆ ದೊಡ್ಡ ಬೆಂಬಲವಾಗಿ ನಿಂತರು. ವಿಷ್ಣುವರ್ಧನ್ ಅವರು ಸಾಹಸ ಸಿಂಹನಾಗಿ ಬೆಳೆಯುವಲ್ಲಿ ಭಾರತಿ ಅವರ ಪಾತ್ರ ಹಿರಿದು. ದಾಂಪತ್ಯ ಜೀವನ ಇಂದಿನ ಯುವ ಜೋಡಿಗಳಿಗೆ ಒಂದು ದೊಡ್ಡ ಪಾಠದಂತಿದೆ.

 ಈ 51ನೇ ವಿವಾಹ ವಾರ್ಷಿಕೋತ್ಸವದಂದು ಹಳೆಯ ಮದುವೆ ಫೋಟೋಗಳನ್ನು ನೋಡುತ್ತಾ ಕನ್ನಡಿಗರು ಈ 'ದೈವಿಕ ಜೋಡಿ'ಗೆ ಶುಭ ಹಾರೈಸುತ್ತಿದ್ದಾರೆ.