ಕನ್ನಡದ ಮೂಲದ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ತಮ್ಮ ಪ್ರೀತಿಯ ವಿಚಾರವನ್ನು ಗೌಪ್ಯವಾಗಿಟ್ಟಿದ್ದ ಈ ಜೋಡಿ, ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ವಿವಾಹವಾಗಿದ್ದಾರೆ. ಮದುವೆಯ ನಂತರ ಮೊದಲ ಬಾರಿಗೆ ಈ ನವದಂಪತಿ ವಿಮಾನ ನಿಲ್ದಾಣದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ವಿಜಯ್ ದೇವರಕೊಂಡ ರಾಜಕುಮಾರನಂತೆ ಕಂಗೊಳಿಸುತ್ತಿದ್ದರೆ, ರಶ್ಮಿಕಾ ಅವರು ಮದುವೆಯ ಕಳೆಯೊಂದಿಗೆ ನಗುನಗುತಲೇ ಕ್ಯಾಮೆರಾ ಕಣ್ಣುಗಳಿಗೆ ಪೋಸ್ ನೀಡಿದ್ದಾರೆ.
ಮದುವೆಯ ವಿಧಿವಿಧಾನಗಳ ನಂತರ ಹೈದರಾಬಾದ್‌ಗೆ ಮರಳಿದ ರಶ್ಮಿಕಾ ಮಂದಣ್ಣ ಅವರು, ಹೈದರಾಬಾದ್‌ನ ಪ್ರತಿಷ್ಠಿತ ಜುಬ್ಲಿ ಹಿಲ್ಸ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ನಿವಾಸಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ಈ ಹಿಂದೆ ಅನೇಕ ಬಾರಿ ಅವರು ಈ ಮನೆಗೆ ಭೇಟಿ ನೀಡಿದ್ದರಾದರೂ, ಈಗ ಮದುವೆಯಾಗಿ ಗೃಹಿಣಿಯಾಗಿ ಹೆಜ್ಜೆ ಇಡುತ್ತಿರುವುದು ಅವರಿಗೆ ವಿಶೇಷ ಅನುಭವವಾಗಿದೆ. ಕೆಲವು ವರದಿಗಳ ಪ್ರಕಾರ, ಅವರು ಮದುವೆಗಿಂತ ಮೊದಲೇ ಅಲ್ಲಿ ವಾಸವಿದ್ದರು ಎಂಬ ಮಾತುಗಳಿದ್ದವು. ಆದರೆ ಈಗ ಕಾನೂನುಬದ್ಧವಾಗಿ ಮತ್ತು ಸಾಂಪ್ರದಾಯಿಕವಾಗಿ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರ ಮುಖದಲ್ಲಿ ಹೊಸ ಬದುಕಿನ ಹರ್ಷ ಎದ್ದು ಕಾಣುತ್ತಿತ್ತು. ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, "ಗಂಡನ ಮನೆಗೆ ಮಹಾಲಕ್ಷ್ಮಿಯ ಆಗಮನ" ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಸದ್ಯ ಚಿತ್ರರಂಗದ ಉತ್ತುಂಗದಲ್ಲಿದ್ದಾರೆ. ಗೀತ ಗೋವಿಂದಂ ಸಿನಿಮಾದಿಂದ ಆರಂಭವಾದ ಇವರ ಗೆಳೆತನ ಈಗ ಜೀವನಪರ್ಯಂತದ ಸಂಬಂಧವಾಗಿ ಬದಲಾಗಿದೆ. ವೃತ್ತಿಜೀವನದ ವಿಚಾರಕ್ಕೆ ಬಂದರೆ, ಮದುವೆಯ ನಂತರ ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂದಿನ ಸಿನಿಮಾ ಕೆಲಸಗಳನ್ನು ಆರಂಭಿಸುವ ಮೊದಲು ಸಣ್ಣ ಬಿಡುವು (Break) ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಿಡುವಿನ ಸಮಯದಲ್ಲಿ ಅವರು ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ವಿಶೇಷವೆಂದರೆ, ವಿವಾಹದ ನಂತರವೂ ಇವರಿಬ್ಬರು ತೆರೆಯ ಮೇಲೆ ಒಟ್ಟಾಗಿ ನಟಿಸುತ್ತಿರುವ 'ರಣಬಲಿ' ಚಿತ್ರದ ಮೇಲೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.
ರಶ್ಮಿಕಾ ಮಂದಣ್ಣ ಅವರಿಗೆ ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ, ಅವರನ್ನು 'ನ್ಯಾಷನಲ್ ಕ್ರಶ್' ಎಂದೇ ಕರೆಯಲಾಗುತ್ತದೆ. ಅತ್ತ ವಿಜಯ್ ದೇವರಕೊಂಡ ಕೂಡ ಅಪಾರ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಇಬ್ಬರೂ ತಾರೆಯರು ತಮ್ಮ ವೃತ್ತಿಜೀವನದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪ್ರೀತಿಗೆ ಬೆಲೆ ನೀಡಿ, ದಾಂಪತ್ಯಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ಮಾದರಿಯಾಗಿದೆ.