Mar 1, 2026 Languages : ಕನ್ನಡ | English

ದಳಪತಿ ವಿಜಯ್ ಸಂಸಾರದಲ್ಲಿ ಬಿರುಗಾಳಿ - ಪತ್ನಿ ಸಂಗೀತಾ ಮಾಡಿದ ಆರೋಪಗಳೇನು!!

ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ತರಲು ಹೊರಟಿರುವ ನಟ ವಿಜಯ್‌ಗೆ ಈಗ ಮನೆಯಿಂದಲೇ ಅನಿರೀಕ್ಷಿತ ಸಂಕಷ್ಟ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಗಾಸಿಪ್‌ಗಳಿಗೆ ಪುಷ್ಠಿ ನೀಡುವಂತೆ, ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕ ಜೀವನದಲ್ಲಿ ಆದರ್ಶ ದಂಪತಿಗಳಂತೆ ಕಾಣುತ್ತಿದ್ದ ಈ ಜೋಡಿಯ ನಡುವೆ ಬಿರುಕು ಮೂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ವಿಜಯ್ ಕುಟುಂಬದಲ್ಲಿ ಬಿರುಕು – ಅಭಿಮಾನಿಗಳಲ್ಲಿ ಆಘಾತ
ವಿಜಯ್ ಕುಟುಂಬದಲ್ಲಿ ಬಿರುಕು – ಅಭಿಮಾನಿಗಳಲ್ಲಿ ಆಘಾತ

ಪತ್ನಿ ಸಂಗೀತಾ ಮಾಡಿದ ಆರೋಪಗಳೇನು?

ಸಂಗೀತಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿಜಯ್ ಅವರ ನಡವಳಿಕೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಿಜಯ್ ಅವರು ಖ್ಯಾತ ನಟಿಯೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂಬ ಗುಮಾನಿ ಈ ಮೊದಲಿನಿಂದಲೂ ಇತ್ತು. ಇತ್ತೀಚೆಗೆ ಬಿಜೆಪಿ ಮುಖಂಡರೊಬ್ಬರು ನಟಿ ತ್ರಿಶಾ ಅವರ ಹೆಸರನ್ನು ಪ್ರಸ್ತಾಪಿಸಿ ಮಾಡಿದ್ದ ಕಮೆಂಟ್ ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಇದೀಗ ಪತ್ನಿ ಸಂಗೀತಾ ಅವರೇ ಈ ಕುರಿತು ನ್ಯಾಯಾಲಯದ ಮೊರೆ ಹೋಗಿರುವುದು ಪ್ರಕರಣಕ್ಕೆ ಅಧಿಕೃತ ಸ್ವರೂಪ ನೀಡಿದೆ.

ಅಭಿಮಾನಿಯಾಗಿದ್ದ ಸಂಗೀತಾ ಪತ್ನಿಯಾದ ಕಥೆ

ವಿಜಯ್ ಮತ್ತು ಸಂಗೀತಾ ಅವರ ವಿವಾಹ 1999ರ ಆಗಸ್ಟ್‌ನಲ್ಲಿ ನಡೆದಿತ್ತು. ಲಂಡನ್‌ನಲ್ಲಿ ನೆಲೆಸಿದ್ದ ಸಂಗೀತಾ ಅವರು ವಿಜಯ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಕೇವಲ ವಿಜಯ್ ಅವರನ್ನು ಭೇಟಿಯಾಗಲೆಂದೇ ಅವರು ಲಂಡನ್‌ನಿಂದ ಚೆನ್ನೈಗೆ ಬಂದಿದ್ದರು. ಸ್ನೇಹದಿಂದ ಶುರುವಾದ ಇವರ ಸಂಬಂಧ ನಂತರ ಪ್ರೀತಿಯಾಗಿ ಮದುವೆಯಲ್ಲಿ ಅಂತ್ಯಗೊಂಡಿತ್ತು. ವಿಜಯ್ ಕ್ರಿಶ್ಚಿಯನ್ ಧರ್ಮದವರಾಗಿದ್ದರೂ, ಪತ್ನಿಯ ಇಚ್ಛೆಯಂತೆ ಮೊದಲು ಹಿಂದೂ ಧರ್ಮದ ಸಂಪ್ರದಾಯದಂತೆ ವಿವಾಹವಾಗಿ, ನಂತರ ಕ್ರಿಶ್ಚಿಯನ್ ಪದ್ಧತಿಯಂತೆ ಮದುವೆಯಾಗಿದ್ದರು.

ಈ ದಂಪತಿಗೆ ಜಾಸೋನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗ ಜಾಸೋನ್ ಸಂಜಯ್ ಸಿನಿಮಾ ನಿರ್ದೇಶನದ ಕಡೆಗೆ ಆಸಕ್ತಿ ಹೊಂದಿದ್ದು, ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಸಂಗೀತಾ ಅವರು ಸದಾ ಸಿನಿಮಾ ಲೈಮ್‌ಲೈಟ್‌ನಿಂದ ದೂರ ಉಳಿಯಲು ಬಯಸುತ್ತಿದ್ದರು ಮತ್ತು ಮಗಳ ಮುಖವನ್ನು ಕೂಡ ಎಲ್ಲೂ ಬಹಿರಂಗಪಡಿಸಿರಲಿಲ್ಲ. ಇಂತಹ ಸುಂದರ ಸಂಸಾರದಲ್ಲಿ ಈಗ ಬಿರುಕು ಮೂಡಿರುವುದು ದುರದೃಷ್ಟಕರ.

ಮುಂದಿನ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು 'ಟಿವಿಕೆ' ಪಕ್ಷವನ್ನು ಕಟ್ಟಿರುವ ವಿಜಯ್‌ಗೆ ಈ ವೈಯಕ್ತಿಕ ಸಮಸ್ಯೆಗಳು ಹಿನ್ನಡೆಯಾಗಿ ಪರಿಣಮಿಸಬಹುದು. ವಿರೋಧ ಪಕ್ಷಗಳು ಈ ವಿಷಯವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ ಇದೆ. ನಾಡಿನ ಕಷ್ಟ ಪರಿಹರಿಸಲು ಹೊರಟಿರುವ ನಾಯಕ ತನ್ನ ಮನೆಯ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.