ಚಿತ್ರರಂಗದಲ್ಲಿ ಒಂದು ಸಿನಿಮಾ ಗೆಲ್ಲೋದು, ಸೋಲೋದು ತೀರಾ ಕಾಮನ್. ಆದ್ರೆ, ಸಿನಿಮಾ ಫ್ಲಾಪ್ ಆದಾಗ ಅದಕ್ಕೆ ಪ್ರೇಕ್ಷಕರು ಅಥವಾ ರಿವ್ಯೂ ಬರೆಯೋವರೇ ಕಾರಣ ಅಂತ ಡೈರೆಕ್ಟರ್‌ಗಳೇ ಬ್ಲೇಮ್ ಮಾಡೋಕೆ ನಿಂತರೆ ಫ್ಯಾನ್ಸ್ ಸುಮ್ಮನೆ ಇರ್ತಾರಾ? ಖಂಡಿತ ಇಲ್ಲ. ಈಗ ಸ್ಯಾಂಡಲ್‌ವುಡ್‌ನಿಂದ ಹಿಡಿದು ಕಾಲಿವುಡ್‌ವರೆಗೆ ಇದೇ ವಿಚಾರ ಸಖತ್ ಸೌಂಡ್ ಮಾಡ್ತಿದೆ.
ಲೇಡಿ ಸೂಪರ್ ಸ್ಟಾರ್ ನಯನತಾರಾ ಪತಿ, ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಸದ್ಯ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ಡೈರೆಕ್ಟ್ ಮಾಡಿದ್ದ ಹೊಸ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದಕ್ಕೆ, ಅವರು ಸೋಲಿನ ಗೂಬೆಯನ್ನು ಪ್ರೇಕ್ಷಕರು ಮತ್ತು ನೆಗೆಟಿವ್ ರಿವ್ಯೂಗಳ ಮೇಲೆ ಕೂರಿಸಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನ ಫುಲ್ ಗರಂ ಆಗಿದ್ದಾರೆ.
ಏನಿದು 'LIK' ಸಿನಿಮಾ ಕಥೆ?
ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಸಿನಿಮಾ ‘ಲವ್ ಇನ್ಶೂರೆನ್ಸ್ ಕಂಪನಿ’ (LIK). ಈ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ ಮತ್ತು ಎಸ್‌ಜೆ ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಪ್ರದೀಪ್ ರಂಗನಾಥನ್ ಅವರ ಹಿಂದಿನ ಸಿನಿಮಾಗಳು ಸೂಪರ್ ಹಿಟ್ ಆಗಿದ್ದರಿಂದ, ಈ ಸಿನಿಮಾ ಮೇಲೆಯೂ ಭಾರಿ ನಿರೀಕ್ಷೆ ಇತ್ತು. ಇದೇ ಕಾರಣಕ್ಕೆ ಬರೋಬ್ಬರಿ 190 ಕೋಟಿ ರೂಪಾಯಿ ದೊಡ್ಡ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು.
ಆದ್ರೆ, ಥಿಯೇಟರ್‌ಗೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್ ಫ್ಲಾಪ್ ಆಯ್ತು. 190 ಕೋಟಿ ಬಜೆಟ್‌ನ ಈ ಸಿನಿಮಾ ಗಳಿಸಿದ್ದು ಕೇವಲ 66 ಕೋಟಿ ರೂಪಾಯಿ ಮಾತ್ರ! ಇದರಿಂದ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗಿದೆ.
ಒಟಿಟಿಯಲ್ಲಿ ಹಿಟ್, ಥಿಯೇಟರ್‌ನಲ್ಲಿ ಮಿಸ್: ವಿಘ್ನೇಶ್ ಬೇಸರ
ಥಿಯೇಟರ್‌ನಲ್ಲಿ ಸೋತ ಈ ಸಿನಿಮಾ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ರಿಲೀಸ್ ಆಗಿದೆ. ವಿಶೇಷ ಅಂದ್ರೆ, ಒಟಿಟಿಯಲ್ಲಿ ಸಿನಿಮಾ ನೋಡಿದ ಜನ "ಸಿನಿಮಾ ಚೆನ್ನಾಗಿದೆ" ಅಂತ ಕಮೆಂಟ್ ಮಾಡ್ತಿದ್ದಾರಂತೆ. ಇದನ್ನು ನೋಡಿ ಡೈರೆಕ್ಟರ್ ವಿಘ್ನೇಶ್ ಶಿವನ್ ಅವರಿಗೆ ತಡೆಯೋಕೆ ಆಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಉದ್ದದ ಪೋಸ್ಟ್ ಹಾಕಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
"ಸಿನಿಮಾ ಒಟಿಟಿಗೆ ಬಂದ ಮೇಲೆ ನನಗೆ ನೂರಾರು ಮೆಸೇಜ್‌ಗಳು ಬರ್ತಿವೆ. ಆನ್‌ಲೈನ್‌ನಲ್ಲಿ ಹರಡಿದ್ದ ವಿಪರೀತ ನೆಗೆಟಿವ್ ರಿವ್ಯೂಗಳನ್ನು ನೋಡಿ ನಾವು ಥಿಯೇಟರ್‌ನಲ್ಲಿ ಸಿನಿಮಾ ನೋಡೋದು ಮಿಸ್ ಮಾಡ್ಕೊಂಡ್ವಿ ಅಂತ ಜನ ಹೇಳ್ತಿದ್ದಾರೆ. ಕೆಲವು ಸಿನಿಮಾಗಳು ನೆಗೆಟಿವ್ ರಿವ್ಯೂ ಇದ್ದರೂ ಗೆಲ್ಲುತ್ತವೆ, ಆದ್ರೆ ಈ ಸಿನಿಮಾಗೆ ಅದು ಸಾಧ್ಯವಾಗಲಿಲ್ಲ" ಅಂತ ಬೇಸರ ಮಾಡಿಕೊಂಡಿದ್ದಾರೆ.
ವಿಮರ್ಶಕರ ವಿರುದ್ಧ ವಿಘ್ನೇಶ್ ಕಿಡಿ
ಅಷ್ಟಕ್ಕೇ ನಿಲ್ಲಿಸದ ವಿಘ್ನೇಶ್, ಸಿನಿಮಾ ರಿವ್ಯೂ ಬರೆಯೋವರ ವಿರುದ್ಧ ಸಖತ್ ಆಕ್ರೋಶ ಹೊರಹಾಕಿದ್ದಾರೆ. "ಕೆಲವರು ಕೇವಲ ತಮ್ಮ ಬುದ್ಧಿವಂತಿಕೆ ಮತ್ತು ಅಹಂ ಪ್ರದರ್ಶನ ಮಾಡೋಕೆ ನೆಗೆಟಿವ್ ವಿಮರ್ಶೆಗಳನ್ನು ಬರೀತಾರೆ. ಇಂಥ ರಿವ್ಯೂಗಳು ಒಂದು ಒಳ್ಳೆಯ ಸಿನಿಮಾವನ್ನು ತುಳಿದು ಹಾಕ್ತವೆ. ಅಷ್ಟೇ ಅಲ್ಲ, ಹೊಸತು ಮಾಡಬೇಕು ಅಂದುಕೊಳ್ಳುವ ನಿರ್ದೇಶಕರ ಕನಸುಗಳನ್ನು ಹೊಸಕಿ ಹಾಕ್ತವೆ" ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ರಿಲೀಸ್ ಆದ ಮೊದಲ ವಾರಾಂತ್ಯದಲ್ಲಿ ಕಲೆಕ್ಷನ್ ಚೆನ್ನಾಗಿತ್ತು, ಆದ್ರೆ ಆಮೇಲೆ ಬೇಕಂತಲೇ ನೆಗೆಟಿವ್ ಟ್ರೆಂಡ್ ಕ್ರಿಯೇಟ್ ಮಾಡಲಾಯ್ತು ಅಂತ ವಿಘ್ನೇಶ್ ಪರೋಕ್ಷವಾಗಿ ಆರೋಪಿಸಿದ್ದಾರೆ. "ನಾವು ಪಟ್ಟ ಕಷ್ಟಕ್ಕೆ ಇಂಥ ರಿಸಲ್ಟ್ ಬಂದಿರೋದು ನೋವು ತಂದಿದೆ. ಕಷ್ಟಪಟ್ಟು ಸಿನಿಮಾ ಮಾಡೋ ತಮಿಳು ಚಿತ್ರಗಳಿಗೆ ಪ್ರೇಕ್ಷಕರು ಸ್ವಲ್ಪ ಉದಾರತೆ ತೋರಿಸಬೇಕು" ಅಂತ ವಿನಂತಿ ಮಾಡಿದ್ದಾರೆ.
#LIK - #VigneshShivan pens down a note stating that many people may have missed his film due to the overwhelming negative reviews, which could have discouraged audiences from giving it a chance in theatres. Initially he had mentioned he is not satisfied with the box office… pic.twitter.com/DxPUBb04ll
— Movies Singapore (@MoviesSingapore) May 31, 2026
'ಹಣ ಕೊಟ್ಟು ನೋಡಿದ ಮೇಲೆ ರೈಟ್ಸ್ ಇರುತ್ತೆ' - ಕ್ಲಾಸ್ ತಗೊಂಡ ಫ್ಯಾನ್ಸ್!
ವಿಘ್ನೇಶ್ ಶಿವನ್ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ಮತ್ತು ಸಿನಿಮಾ ಪ್ರೇಕ್ಷಕರು ಡೈರೆಕ್ಟರ್‌ಗೆ ಸರಿಯಾಗಿಯೇ ಕ್ಲಾಸ್ ತಗೋತಿದ್ದಾರೆ.
"ನಾವು ಕಷ್ಟಪಟ್ಟು ದುಡಿದ ಹಣ ಕೊಟ್ಟು ಟಿಕೆಟ್ ತಗೊಳ್ತೀವಿ. ಸಿನಿಮಾ ಚೆನ್ನಾಗಿದ್ರೆ ಚೆನ್ನಾಗಿದೆ ಅಂತೀವಿ, ಚೆನ್ನಾಗಿಲ್ಲದಿದ್ರೆ ಕಳಪೆ ಅಂತೀವಿ. ಅದನ್ನು ಕೇಳೋ ಹಕ್ಕು ನಮಗಿದೆ" ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು, "ಸಿನಿಮಾ ಸೋತಾಗ ಕಥೆ ಸರಿ ಇಲ್ಲ ಅಂತ ಒಪ್ಪಿಕೊಳ್ಳಬೇಕೇ ಹೊರತು, ಪ್ರೇಕ್ಷಕರನ್ನು ಅಥವಾ ರಿವ್ಯೂಗಳನ್ನು ಬ್ಲೇಮ್ ಮಾಡೋದು ಸರಿಯಲ್ಲ" ಅಂತ ಬುದ್ಧಿ ಹೇಳಿದ್ದಾರೆ.
ಒಟ್ಟಿನಲ್ಲಿ, ಥಿಯೇಟರ್‌ನಲ್ಲಿ ಜನ ಸಿನಿಮಾ ನೋಡದೇ ಇರೋದಕ್ಕೆ ನೆಗೆಟಿವ್ ರಿವ್ಯೂಗಳೇ ಕಾರಣ ಅನ್ನೋ ವಿಘ್ನೇಶ್ ಶಿವನ್ ಅವರ ವಾದಕ್ಕೆ ಸದ್ಯಕ್ಕೆ ಪ್ರೇಕ್ಷಕರಿಂದ ಭಾರಿ ವಿರೋಧ ವ್ಯಕ್ತವಾಗ್ತಿದೆ. ಸಿನಿಮಾ ಚೆನ್ನಾಗಿದ್ದರೆ ಜನ ಖಂಡಿತ ಥಿಯೇಟರ್‌ಗೆ ಬರ್ತಾರೆ, ಸೋತಾಗ ಪ್ರೇಕ್ಷಕರನ್ನು ದೂಷಿಸುವುದು ತಪ್ಪು ಅನ್ನೋದು ಸದ್ಯ ಸಿನಿಪ್ರೇಕ್ಷಕರ ಅಸಲಿ ಅಭಿಪ್ರಾಯ.