May 2, 2026 Languages : ಕನ್ನಡ | English

3 ಮದುವೆ, 3 ಡಿವೋರ್ಸ್ ಆದ್ರೂ ಕುಗ್ಗದ ಛಲಗಾರ್ತಿ - ಮಾಜಿ ಪತಿಗಳಿಂದ ಬಿಡಿಗಾಸು ಪಡೆಯದೆ 3 ಮಕ್ಕಳನ್ನು ಸಾಕುತ್ತಿರುವ ನಟಿ!!

ಪ್ರೀತಿ ಅನ್ನೋದು ಒಂದು ಸುಂದರ ಮಾಯಾಜಾಲ. ಆದರೆ, ಅದೇ ಪ್ರೀತಿ ಹಳಿ ತಪ್ಪಿದಾಗ ಸಂಬಂಧಗಳು ವ್ಯವಹಾರಿಕವಾಗಿ ಬದಲಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಆದ ತಕ್ಷಣ 'ಜೀವನಾಂಶ' (Alimony) ದೊಡ್ಡ ಮಟ್ಟದ ಚರ್ಚೆಯ ವಿಷಯವಾಗುತ್ತೆ. ಆದರೆ ತಮಿಳು ಚಿತ್ರರಂಗದ ಹಿರಿಯ ನಟ ವಿಜಯ್ ಕುಮಾರ್ ಅವರ ಮಗಳು, ನಟಿ ವನಿತಾ ವಿಜಯ್ ಕುಮಾರ್ ಮಾತ್ರ ತಮ್ಮ ಬದುಕಿನಲ್ಲಿ ಒಂದು ಕ್ರಾಂತಿಕಾರಿ ನಿರ್ಧಾರ ತಗೆದುಕೊಂಡು ಸುದ್ದಿಯಾಗಿದ್ದಾರೆ.

ಮೂರು ಮದುವೆ, ಮೂರು ವಿಚ್ಛೇದನ – ಸ್ವಂತ ಕಾಲ ಮೇಲೆ ನಿಂತ ವನಿತಾ; | Photo Credit: Vanitha Instagram
ಮೂರು ಮದುವೆ, ಮೂರು ವಿಚ್ಛೇದನ – ಸ್ವಂತ ಕಾಲ ಮೇಲೆ ನಿಂತ ವನಿತಾ; | Photo Credit: Vanitha Instagram

ವನಿತಾ ವಿಜಯ್ ಕುಮಾರ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ದಳಪತಿ ವಿಜಯ್ ನಾಯಕನಾಗಿದ್ದ 'ಚಂದ್ರಲೇಖಾ' ಚಿತ್ರದ ಮೂಲಕ. ಆನಂತರ ಬೆಳ್ಳಿ ತೆರೆಯಲ್ಲಿ ಹೆಚ್ಚು ಮಿಂಚದಿದ್ದರೂ, ಕಿರುತೆರೆಯಲ್ಲಿ ಮತ್ತು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿದ್ದವರು. ಆದರೆ, ಅವರ ವೈಯಕ್ತಿಕ ಜೀವನ ಮಾತ್ರ ಅಕ್ಷರಶಃ ಏಳುಬೀಳುಗಳ ಸರಣಿಯಂತಿದೆ.

ಮೂರು ಮದುವೆ ಮತ್ತು ವಿಚ್ಛೇದನದ ಕಥೆ

ವನಿತಾ ಅವರ ವೈಯಕ್ತಿಕ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ.

ಮೊದಲ ಮದುವೆ - 2000ನೇ ಇಸವಿಯಲ್ಲಿ ಕಿರುತೆರೆ ನಟ ಆಕಾಶ್ ಎಂಬುವವರ ಜೊತೆ ಇವರ ಮದುವೆಯಾಯಿತು. ಇವರಿಗೆ ವಿಜಯ್ ಶ್ರೀ ಹರಿ ಮತ್ತು ಜೋವಿಕಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಕೆಲವೇ ವರ್ಷಗಳಲ್ಲಿ ಈ ದಾಂಪತ್ಯ ಮುರಿದು ಬಿತ್ತು.

ಎರಡನೇ ಮದುವೆ - 2007ರಲ್ಲಿ ಉದ್ಯಮಿ ಆನಂದ್ ಜೇ ರಾಜನ್ ಅವರನ್ನು ವನಿತಾ ವಿವಾಹವಾದರು. ಇವರಿಗೆ ಜಯನಿತಾ ಎಂಬ ಪುತ್ರಿ ಜನಿಸಿದಳು. ಆದರೆ, 2012ರಲ್ಲಿ ಈ ಸಂಸಾರದಲ್ಲೂ ಬಿರುಗಾಳಿ ಎದ್ದು ವಿಚ್ಛೇದನವಾಯಿತು.

ಮೂರನೇ ಮದುವೆ - 2020ರ ಲಾಕ್‌ಡೌನ್ ಸಮಯದಲ್ಲಿ ಛಾಯಾಗ್ರಾಹಕ ಪೀಟರ್ ಪೌಲ್ ಎಂಬುವವರನ್ನು ವನಿತಾ ಮದುವೆಯಾದರು. ಆದರೆ, ಈ ಸಂಬಂಧ ಕೇವಲ 4 ತಿಂಗಳು ಮಾತ್ರ ಬಾಳಿಕೆ ಬಂತು. ದುರದೃಷ್ಟವಶಾತ್, ವನಿತಾ ಅವರಿಂದ ದೂರಾದ ಕೆಲವೇ ದಿನಗಳಲ್ಲಿ ಪೀಟರ್ ಪೌಲ್ ನಿಧನರಾದರು.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವನಿತಾ ತಮ್ಮ ಬದುಕಿನ ಕರಾಳ ಮತ್ತು ಕಠಿಣ ಸತ್ಯಗಳನ್ನು ಹಂಚಿಕೊಂಡಿದ್ದಾರೆ. "ನಾನು ಮೂರು ಬಾರಿ ಮದುವೆಯಾದೆ, ಮೂರು ಬಾರಿ ವಿಚ್ಛೇದನ ಕೂಡ ಆಯಿತು. ಆದರೆ, ನನ್ನ ಯಾವೊಬ್ಬ ಮಾಜಿ ಪತಿಯಿಂದಲೂ ನಾನು ನಯಾ ಪೈಸೆಯನ್ನೂ ಜೀವನಾಂಶವಾಗಿ ಪಡೆದಿಲ್ಲ" ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ವಿಚ್ಛೇದನದ ವೇಳೆ ಮಹಿಳೆಯರು ಆರ್ಥಿಕ ಭದ್ರತೆಗಾಗಿ ಹಣ ಅಥವಾ ಆಸ್ತಿ ಕೇಳುವುದು ಕಾನೂನುಬದ್ಧ ಹಕ್ಕು. ಆದರೆ ವನಿತಾ ಮಾತ್ರ, "ನಾನು ನನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂಬ ಪಾಠವನ್ನು 22ನೇ ವಯಸ್ಸಿನಲ್ಲೇ ಕಲಿತಿದ್ದೆ. ಅಂದಿನಿಂದ ಇಂದಿನವರೆಗೆ ನನ್ನ ಮಕ್ಕಳ ಲಾಲನೆ-ಪಾಲನೆ, ಮನೆಯ ಖರ್ಚು ಎಲ್ಲವನ್ನೂ ನನ್ನ ಸ್ವಂತ ದುಡಿಮೆಯಿಂದಲೇ ನಿಭಾಯಿಸುತ್ತಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸ್ವಂತ ಮನೆ ಕೂಡ ಇಲ್ಲ!

ವನಿತಾ ಅವರ ಈ ಹೇಳಿಕೆ ಹಲವರಿಗೆ ಅಚ್ಚರಿ ಮೂಡಿಸಿದೆ. "ನನ್ನ ಹೆಸರಿನಲ್ಲಿ ದೊಡ್ಡ ಆಸ್ತಿ-ಪಾಸ್ತಿ ಇಲ್ಲ. ಇರಲು ಸ್ವಂತ ಮನೆ ಕೂಡ ಇಲ್ಲ, ಆಭರಣ ಅಥವಾ ಸ್ಥಿರ ಠೇವಣಿಗಳಂತಹ ಯಾವುದೇ ಸ್ವತ್ತುಗಳನ್ನು ನಾನು ಮಾಡಿಕೊಂಡಿಲ್ಲ. ನನಗೆ ಯಾರೂ ಏನನ್ನೂ ಕೊಟ್ಟಿಲ್ಲ. ನಾನು ಇಂದು ಏನಾಗಿದ್ದೇನೋ ಅದು ನನ್ನ ಕಷ್ಟದ ದುಡಿಮೆಯಿಂದ ಮಾತ್ರ" ಎಂದು ಅವರು ಹೇಳಿದ್ದಾರೆ. ಪೋಷಕ ನಟಿಯಾಗಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾ ಅವರು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ಸಮಾಜಕ್ಕೆ ಒಂದು ಸಂದೇಶ

ವನಿತಾ ವಿಜಯ್ ಕುಮಾರ್ ಅವರ ಈ ನಿರ್ಧಾರ ಸ್ವಾಭಿಮಾನದ ಸಂಕೇತದಂತಿದೆ. "ಯಾರ ಮೇಲೆಯೂ ಅವಲಂಬಿತವಾಗಿರಬಾರದು ಎಂಬ ಹಠ ನನ್ನದು. ಎಷ್ಟೇ ಕಷ್ಟವಾದರೂ ಸ್ವಾವಲಂಬಿಯಾಗಿ ಬದುಕಬೇಕು" ಎನ್ನುವ ಅವರ ಮಾತುಗಳು ಕಷ್ಟದಲ್ಲಿರುವ ಎಷ್ಟೋ ಮಹಿಳೆಯರಿಗೆ ಸ್ಫೂರ್ತಿಯಾಗಿವೆ. ವೈಯಕ್ತಿಕ ಜೀವನದ ಬಗ್ಗೆ ಸಾವಿರಾರು ಟೀಕೆಗಳು ಕೇಳಿಬಂದರೂ, ಆರ್ಥಿಕ ವಿಷಯದಲ್ಲಿ ಅವರು ತೋರಿರುವ ಈ ಪಾರದರ್ಶಕತೆ ಮತ್ತು ಧೈರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವನಿತಾ ವಿಜಯ್ ಕುಮಾರ್ ಅವರ ಬದುಕು ನಮಗೆ ಕಲಿಸುವ ಪಾಠವೊಂದೇ - ಜೀವನದಲ್ಲಿ ಸೋಲುಗಳು ಎದುರಾದಾಗ ಕುಸಿದು ಬೀಳದೆ, ಯಾರ ಮುಂದೆಯೂ ಕೈ ಚಾಚದೆ ತಲೆ ಎತ್ತಿ ಬದುಕುವುದು ನಿಜವಾದ ಸಾಧನೆ. ಈ 'ಲಿಟಲ್ ಸೂಪರ್ ಸ್ಟಾರ್' ಮಗಳ ಸ್ವಾಭಿಮಾನಕ್ಕೆ ನಮ್ಮದೊಂದು ಸಲಾಂ! 

Latest News