ಸಿನಿಮಾ ಆಸೆ ತೋರಿಸಿ ರೆಸಾರ್ಟ್‌ಗೆ ಕರೆದ ಕಿರಾತಕ - ಟಾಲಿವುಡ್ 'ಕಮಿಟ್‌ಮೆಂಟ್' ಜಾಲ ಬಿಚ್ಚಿಟ್ಟ ಯುವತಿ!!

ಚಿತ್ರರಂಗದಲ್ಲಿ ನಟಿಯಾಗಬೇಕು, ದೊಡ್ಡ ಪರದೆಯ ಮೇಲೆ ಮಿಂಚಬೇಕು ಅನ್ನೋದು ಸಾವಿರಾರು ಹುಡುಗಿಯರ ಕನಸು. ಆದರೆ, ಆ ಕನಸು ನನಸಾಗುವ ಹಾದಿಯಲ್ಲಿ ಎದುರಾಗುವ ಕಲ್ಲು-ಮುಳ್ಳುಗಳು ಅಷ್ಟಿಷ್ಟಲ್ಲ. ಅದರಲ್ಲೂ ಈ 'ಕಾಸ್ಟಿಂಗ್ ಕೌಚ್' (Casting Couch) ಅನ್ನೋ ಪೆಡಂಭೂತ ಇವತ್ತಿಗೂ ಪ್ರತಿಭಾವಂತ ಯುವತಿಯರನ್ನು ಹೈರಾಣಾಗಿಸುತ್ತಿದೆ. ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವತಿಯೊಬ್ಬಳು ಟಾಲಿವುಡ್‌ನಲ್ಲಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಟಾಲಿವುಡ್ ಅಸಿಸ್ಟೆಂಟ್ ಡೈರೆಕ್ಟರ್ ಅಸಲಿ ಬಣ್ಣ ಬಯಲು
ಟಾಲಿವುಡ್ ಅಸಿಸ್ಟೆಂಟ್ ಡೈರೆಕ್ಟರ್ ಅಸಲಿ ಬಣ್ಣ ಬಯಲು

'ಕಮಿಟ್‌ಮೆಂಟ್' ಹೆಸರಲ್ಲಿ ನಡೆಯೋ ಕೆಟ್ಟ ಆಟ!

ಇನ್‌ಸ್ಟಾಗ್ರಾಂನಲ್ಲಿ ‘ಪೀಕು ನೆಮಿಲಿ’ ಹೆಸರಿನಲ್ಲಿ ವಿಡಿಯೋಗಳನ್ನು ಮಾಡುವ ಈ ಯುವತಿ, ನಟಿಯಾಗುವ ಆಸೆಯಿಂದ ಹೈದರಾಬಾದ್‌ನ ಕೆಲವು ಅಸಿಸ್ಟೆಂಟ್ ಡೈರೆಕ್ಟರ್‌ಗಳ ನಂಬರ್ ಸಂಪಾದಿಸಿದ್ದಳಂತೆ. ಆ ಪೈಕಿ ಒಬ್ಬನಿಗೆ ಫೋನ್ ಮಾಡಿ ಮಾತನಾಡಿದಾಗ, "ನಿಮ್ಮ ಪೋರ್ಟ್‌ಫೋಲಿಯೋ (ಫೋಟೋಗಳು) ಕಳುಹಿಸಿ" ಅಂದಿದ್ದಾನೆ. ಫೋಟೋಗಳನ್ನು ನೋಡಿದ ಮೇಲೆ ಆತ ಆಕೆಗೆ ಕಾಲ್ ಮಾಡಿ "ನೀವು ಕಮಿಟ್‌ಮೆಂಟ್ ಕೊಡುತ್ತೀರಾ?" ಎಂದು ಕೇಳಿದ್ದಾನೆ.

ಪಾಪ, ಆ ಹುಡುಗಿಗೆ ಈ 'ಕಮಿಟ್‌ಮೆಂಟ್' ಅನ್ನೋ ಪದದ ಹಿಂದೆ ಇರೋ ಅಸಲಿ ಅರ್ಥ ಗೊತ್ತಿರಲಿಲ್ಲ. ಆಕೆ, "ಹೌದು ಸರ್, ನಾನು ಕೆಲಸದ ವಿಷಯದಲ್ಲಿ ತುಂಬಾ ಸೀರಿಯಸ್ ಆಗಿ ಇರ್ತೀನಿ, ಪಾತ್ರಕ್ಕಾಗಿ ನೂರು ಪರ್ಸೆಂಟ್ ಎಫರ್ಟ್ ಹಾಕ್ತೀನಿ" ಎಂದು ಮುಗ್ಧವಾಗಿ ಉತ್ತರಿಸಿದ್ದಾಳೆ.

ರೆಸಾರ್ಟ್‌ಗೆ ಬನ್ನಿ ಅಂದಿದ್ದ ಕಿರಾತಕ!

ಯುವತಿ ಒಪ್ಪಿಕೊಂಡಿದ್ದಾಳೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಆ ವ್ಯಕ್ತಿ, ತನ್ನ ಅಸಲಿ ಬಣ್ಣ ಬಯಲು ಮಾಡಿದ್ದಾನೆ. "ಒಬ್ಬ ಫೇಮಸ್ ಪ್ರೊಡ್ಯೂಸರ್ ನಿಮ್ಮನ್ನು ಭೇಟಿ ಮಾಡೋಕೆ ರೆಡಿಯಾಗಿದ್ದಾರೆ. ಅವರಿಗಾಗಿ ಒಂದು ರೆಸಾರ್ಟ್‌ನಲ್ಲಿ ರೂಮ್ ಬುಕ್ ಮಾಡಿದ್ದೇನೆ, ನೀವು ಈಗಲೇ ಫ್ಲೈಟ್ ಹತ್ತಿ ಬಂದುಬಿಡಿ" ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ, ಆ ನಿರ್ಮಾಪಕನ ಜೊತೆ 'ಸಮಯ ಕಳೆಯಬೇಕು' ಎಂದು ಅಸಭ್ಯವಾಗಿ ಮಾತನಾಡಿದ್ದಾನೆ.

ಆಗಲೇ ಆ ಯುವತಿಗೆ ಆತನ ಉದ್ದೇಶ ಅರ್ಥವಾಗಿದ್ದು! ತಕ್ಷಣ ಆತನ ಕಾಲ್ ಕಟ್ ಮಾಡಿ ನಂಬರ್ ಬ್ಲಾಕ್ ಮಾಡಿದ್ದಾಳೆ. ಆದರೂ ಆತ ಬಿಡದೆ ಬೇರೆ ಬೇರೆ ನಂಬರ್‌ಗಳಿಂದ ಕಾಲ್ ಮಾಡಿ ಕಾಟ ಕೊಟ್ಟಿದ್ದಾನೆ.

ದೂರು ನೀಡಲು ಹಿರಿಯ ನಟಿಯರ ಸಾಥ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಲುಗು ಚಿತ್ರರಂಗದ ಹಿರಿಯ ನಟಿ ಜಾನ್ಸಿ ಅವರು ಯುವತಿಯ ಬೆಂಬಲಕ್ಕೆ ನಿಂತಿದ್ದಾರೆ. ತೆಲುಗು ಚಿತ್ರರಂಗದಲ್ಲಿರುವ 'ಲೈಂಗಿಕ ದೌರ್ಜನ್ಯ ತಡೆ ಸಮಿತಿ'ಗೆ (POSH) ದೂರು ನೀಡುವಂತೆ ಸಲಹೆ ನೀಡಿದ್ದಾರೆ. "ನೀವು ಧೈರ್ಯವಾಗಿ ಮುಂದೆ ಬನ್ನಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೋಣ" ಎಂದು ಭರವಸೆ ನೀಡಿದ್ದಾರೆ. ಆದರೆ, ಆ ಯುವತಿ ಸದ್ಯಕ್ಕೆ ಯಾವುದೇ ಅಧಿಕೃತ ದೂರು ನೀಡಿದ ಬಗ್ಗೆ ಮಾಹಿತಿ ಇಲ್ಲ.

ಯುವತಿಯರ ಆತಂಕವೇನು?

ಇಂಥ ಘಟನೆಗಳಿಂದಾಗಿಯೇ ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ಚಿತ್ರರಂಗಕ್ಕೆ ಬರಲು ಭಯಪಡುತ್ತಾರೆ. ಟಾಲಿವುಡ್ ಮಾತ್ರವಲ್ಲ, ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಇಂಥಹ ಕೆಟ್ಟ ಹುಳುಗಳು ಇವೆ. ಪ್ರತಿಭೆಗೆ ಬೆಲೆ ಕೊಡುವ ಬದಲು ಈ ರೀತಿ ಅಡ್ಡಹಾದಿಯಲ್ಲಿ ಆಸೆ ತೋರಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕಿದೆ ಅನ್ನೋದೇ ನೆಟ್ಟಿಗರ ಆಗ್ರಹ.

Latest News

Related News