"ದಿ ಕೇರಳ ಸ್ಟೋರಿ 2 ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ವಿವಾದ ಆರಂಭವಾಗಿದೆ. ಈ ಸಿನಿಮಾ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ ಕೋಮು ಸೌಹಾರ್ದತೆ ಕೆಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ."
ಮತ್ತೆ ಶುರುವಾದ ಸಿನೆಮಾ ಸಮರ: ಕೇರಳ ಸಿಎಂ ಆಕ್ರೋಶಕ್ಕೆ ಕಾರಣವೇನು?
2023ರಲ್ಲಿ ತೆರೆಕಂಡು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಮತ್ತು ವಿವಾದ ಸೃಷ್ಟಿಸಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಈಗ ಸಿದ್ಧವಾಗಿದೆ. ಫೆಬ್ರವರಿ 27ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಹೊರಬಂದಿರುವ ಟ್ರೇಲರ್ ಮತ್ತೊಮ್ಮೆ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಈ ಬೆಳವಣಿಗೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.
The reports regarding the release of a sequel to the hate-mongering film 'The Kerala Story' should be seen with utmost gravity. Having already seen through the communal agenda and blatant lies of the first part, Kerala will once again reject this attempt to demonise our secular…
— Pinarayi Vijayan (@pinarayivijayan) February 19, 2026
ಟ್ವಿಟರ್ (X) ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, "ಈ ಸಿನಿಮಾವನ್ನು ದ್ವೇಷ ಹುಟ್ಟಿಸುವ ಉದ್ದೇಶದಿಂದ ಮಾಡಲಾಗಿದೆ. ಮೊದಲ ಭಾಗದಲ್ಲಿ ಕೋಮುವಾದಿ ಅಜೆಂಡಾ ಮತ್ತು ಸುಳ್ಳುಗಳನ್ನು ಪ್ರದರ್ಶಿಸಿದ್ದನ್ನು ಜನ ನೋಡಿದ್ದಾರೆ. ಕೇರಳದ ಜಾತ್ಯತೀತ ರಚನೆಯನ್ನು ಕೆಟ್ಟದಾಗಿ ಬಿಂಬಿಸುವ ಇಂತಹ ಪ್ರಯತ್ನಗಳನ್ನು ಜನರು ಮತ್ತೊಮ್ಮೆ ತಿರಸ್ಕರಿಸುತ್ತಾರೆ," ಎಂದು ಹೇಳಿದ್ದಾರೆ. ಕೇರಳದಂತಹ ಸಾಮರಸ್ಯದ ಭೂಮಿಯನ್ನು ಭಯೋತ್ಪಾದನೆಯ ಕೇಂದ್ರದಂತೆ ಚಿತ್ರಿಸುವ ಇಂತಹ ಪ್ರಯತ್ನಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಟ್ರೇಲರ್‌ನಲ್ಲಿ ತೋರಿಸಿರುವಂತೆ, ಹಿಂದೂ ಹುಡುಗಿಯರನ್ನು ಮತಾಂತರಗೊಳಿಸಿ ಹಿಂಸೆ ನೀಡುವ ಕಥೆಯನ್ನು ಈ ಬಾರಿಯೂ ಮುಂದುವರಿಸಲಾಗಿದೆ. ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ವಿಪುಲ್ ಅಮೃತ್‌ಲಾಲ್ ಶಾ ಬಂಡವಾಳ ಹೂಡಿದ್ದಾರೆ. ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಊಜಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಲೆಯ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸುವ ಇಂತಹ 'ಕಾಲ್ಪನಿಕ ನಿರೂಪಣೆಗಳು' ಹೇಗೆ ಮುಕ್ತವಾಗಿ ಒಪ್ಪಿಕೊಳ್ಳಲ್ಪಡುತ್ತವೆ ಎಂಬುದು ಆಘಾತಕಾರಿ ಎಂದು ಪಿಣರಾಯಿ ವಿಜಯನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಸಿನಿಮಾ ಬಿಡುಗಡೆಗೆ ಮುನ್ನವೇ ರಾಜಕೀಯ ವಲಯದಲ್ಲಿ ಕಿಡಿ ಹತ್ತಿಕೊಂಡಿದೆ. ಒಂದು ಕಡೆ ಸಿನೆಮಾ ತಂಡವು ಇದು ನೈಜ ಘಟನೆಗಳ ಆಧಾರಿತ ಎನ್ನುತ್ತಿದ್ದರೆ, ಇನ್ನೊಂದೆಡೆ ಕೇರಳ ಸರ್ಕಾರವು ಇದನ್ನು ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ಎಂದು ಕರೆಯುತ್ತಿದೆ. ಫೆಬ್ರವರಿ 27ರಂದು ಸಿನಿಮಾ ತೆರೆಕಂಡ ನಂತರ ಈ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.