Apr 3, 2026 Languages : ಕನ್ನಡ | English

ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಗ್ಲಾಮರ್ ಕ್ವೀನ್ ತಮನ್ನಾ - ಇಮೇಜ್ ಬದಲಿಸಿಕೊಳ್ಳಲು ಹೊರಟ ಐಟಂ ಕ್ವೀನ್!!

ಸಾಮಾನ್ಯವಾಗಿ ನಟಿ ತಮನ್ನಾ ಭಾಟಿಯಾ ಅವರ ಐಟಂ ಹಾಡುಗಳೆಂದರೆ ನಿರ್ಮಾಪಕರು ಮತ್ತು ನಿರ್ದೇಶಕರು ಕಣ್ಣುಮುಚ್ಚಿ ನಂಬುತ್ತಾರೆ. ಅವರ ಹಾಡುಗಳೆಂದರೆ ಸಿನಿಮಾ ಹಿಟ್ ಎಂಬುದು ಚಿತ್ರರಂಗದಲ್ಲಿ ಒಂದು ನಂಬಿಕೆ. ಈ ಕಾರಣದಿಂದಲೇ ಅವರಿಗೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿಶೇಷ ಹಾಡುಗಳ ಅವಕಾಶಗಳು ಅರಸಿ ಬರುತ್ತಿವೆ. ಐಟಂ ಹಾಡುಗಳಿಗೆ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ತಮನ್ನಾ ಮೊದಲ ಸಾಲಿನಲ್ಲಿದ್ದಾರೆ. ಆದರೆ, ಇದೀಗ ಅವರಿಗೊಂದು ಅಚ್ಚರಿಯ ಬದಲಾವಣೆ ಎದುರಾಗಿದೆ.

11 ವರ್ಷಗಳ ಬಳಿಕ ಮತ್ತೆ ಒಂದಾದ ರವಿತೇಜ-ತಮನ್ನಾ ಜೋಡಿ
11 ವರ್ಷಗಳ ಬಳಿಕ ಮತ್ತೆ ಒಂದಾದ ರವಿತೇಜ-ತಮನ್ನಾ ಜೋಡಿ

ಐಟಂ ಗರ್ಲ್ ಇಮೇಜ್‌ನಿಂದ ಹೊರಬಂದ ತಮನ್ನಾ

ಗ್ಲಾಮರ್ ಕ್ವೀನ್ ಎಂದೇ ಖ್ಯಾತಿಯಾಗಿರುವ ತಮನ್ನಾ, ಸದ್ಯ ತಮ್ಮ ಹಿಂದಿನ ಟ್ರೆಂಡ್‌ಗೆ ವಿರುದ್ಧವಾದ ಪಾತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಇವರು ಇದೀಗ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ಅಪ್ಪಟ ಗೃಹಿಣಿಯ ಪಾತ್ರದಲ್ಲಿ ನಟಿಸಲಿದ್ದಾರೆ. ನಿಜ ಜೀವನದಲ್ಲಿಯೂ ತಮನ್ನಾ ದೇವರ ಮೇಲೆ ಅಪಾರ ಭಕ್ತಿ ಹೊಂದಿರುವವರು, ಆಗಾಗ ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಅವರಿಗೆ ದೈವಿಕ ಶಕ್ತಿಯ ಕಥೆಯುಳ್ಳ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿದೆ.

11 ವರ್ಷಗಳ ನಂತರ ರವಿತೇಜ ಜೊತೆ ಮರುಜೋಡಿ

ರವಿತೇಜ ನಟಿಸುತ್ತಿರುವ 'ಇರುಮುಡಿ' ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದ ಹೆಸರೇ ಸೂಚಿಸುವಂತೆ, ಇದು ಅಯ್ಯಪ್ಪ ಸ್ವಾಮಿಯ ಮಹಿಮೆಯನ್ನು ಸಾರುವ ಕಥೆಯಾಗಿದೆ. ಇದರಲ್ಲಿ ರವಿತೇಜ ನಾಯಕನಾಗಿ ನಟಿಸುತ್ತಿದ್ದರೆ, ತಮನ್ನಾ ಅವರದು ಗ್ಲಾಮರ್‌ಗೆ ಅತೀ ಕಡಿಮೆ ಅವಕಾಶವಿರುವ, ಸವಾಲಿನ ಅಪ್ಪಟ ಗೃಹಿಣಿಯ ಪಾತ್ರವಾಗಿದೆ.

ತಮನ್ನಾ ಮತ್ತು ರವಿತೇಜ ಈ ಹಿಂದೆ 2015ರಲ್ಲಿ ಬಿಡುಗಡೆಯಾದ 'ಬೆಂಗಾಲ್ ಟೈಗರ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ನಂತರ ಸುಮಾರು 11 ವರ್ಷಗಳ ಸುದೀರ್ಘ ಅಂತರದ ಬಳಿಕ ಈ ಜೋಡಿ ಈಗ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದೆ.

ಶಿವ ನಿರ್ವಾನ ನಿರ್ದೇಶನ ಮಾಡುತ್ತಿರುವ ಈ 'ಇರುಮುಡಿ' ಸಿನಿಮಾವು ರವಿತೇಜ ಅವರ ವೃತ್ತಿಜೀವನದಲ್ಲಿಯೂ ಒಂದು ವಿಭಿನ್ನ ಪ್ರಯೋಗವಾಗಿದೆ. ಮಾಸ್ ಮಸಾಲಾ, ಆಕ್ಷನ್ ಮತ್ತು ಕಾಮಿಡಿ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ರವಿತೇಜ ಅವರಿಗೂ ಇದು ಹೊಸ ಅನುಭವವನ್ನು ನೀಡಲಿದೆ. ತಮನ್ನಾ ಕೂಡಾ ಐಟಂ ಹಾಡುಗಳ ಚೌಕಟ್ಟಿನಿಂದ ಹೊರಬಂದು, ಒಬ್ಬ ಗಂಭೀರ ನಟಿಯಾಗಿ ಇಂತಹ ಪಾತ್ರವನ್ನು ಒಪ್ಪಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮತ್ತು ಕುತೂಹಲವನ್ನು ಮೂಡಿಸಿದೆ. ಈ ಸಿನಿಮಾ ತೆರೆಗೆ ಬರಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Latest News