ಬ್ಯಾಂಕಾಕ್‌ನಲ್ಲಿ ರಜಾ ದಿನಗಳ ಮಜಾದಲ್ಲಿದ್ದ ನಟಿ ಸುಜಾತಾಗೆ ಶಾಕ್ - ‘ಭಾರ್ಗವಿ LLB’ ಸೀರಿಯಲ್‌ನಿಂದ ದಿಢೀರ್ ಔಟ್!!

ಕಿರುತೆರೆಯಲ್ಲಿ ಯಾವುದೇ ಧಾರಾವಾಹಿ ಇರಲಿ, ಅದರಲ್ಲಿ ಬರುವ ಪಾತ್ರಗಳ ಜೊತೆ ಪ್ರೇಕ್ಷಕರು ಒಮ್ಮೆ ಕನೆಕ್ಟ್ ಆಗಿಬಿಟ್ಟರೆ ಮುಗಿಯಿತು. ಆ ಪಾತ್ರಧಾರಿಗಳನ್ನು ತಮ್ಮ ಮನೆಯವರದ್ದೇ ಒಂದು ಸದಸ್ಯರಂತೆ ಪ್ರೀತಿ ಮಾಡುತ್ತಾರೆ. ಆದರೆ, ಹೀಗೆ ಬೆಸೆದ ಸಂಬಂಧಗಳು ಕೆಲವು ಬಾರಿ ಅರ್ಧಕ್ಕೇ ಕಳಚಿ ಬೀಳುತ್ತವೆ. ನಟ-ನಟಿಯರು ತಮ್ಮ ವೈಯಕ್ತಿಕ ಕಾರಣಗಳಿಂದಲೋ ಅಥವಾ ಹೆಲ್ತ್ ಪ್ರಾಬ್ಲಮ್‌ನಿಂದಲೋ ಸೀರಿಯಲ್ ಬಿಡುವುದು ಕಾಮನ್. ಆದರೆ, ಇತ್ತೀಚಿನ ದಿನಗಳಲ್ಲಿ ಕಲಾವಿದರಿಗೆ ಹೇಳದೇ ಕೇಳದೇ, ಅವರ ಜಾಗಕ್ಕೆ ಬೇರೆಯವರನ್ನು ರೀಪ್ಲೇಸ್ ಮಾಡುವ ಹೊಸ ಟ್ರೆಂಡ್ ಒಂದು ಶುರುವಾಗಿದೆ. ತಾವಾಡುತ್ತಿದ್ದ ಪಾತ್ರ ಬೇರೆಯವರ ಪಾಲಾಗಿದೆ ಎನ್ನುವ ಕನಿಷ್ಠ ಮಾಹಿತಿಯೂ ಆ ನಟಿಗೆ ಇರುವುದಿಲ್ಲ! ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಕಿರುತೆರೆಯ ಜನಪ್ರಿಯ ನಟಿ ಸುಜಾತಾ ಅಕ್ಷಯ.

ಕಲಾವಿದರಿಗೆ ಹೇಳದೇ ಕೇಳದೇ ರೀಪ್ಲೇಸ್ ಮಾಡೋ ಹೊಸ ಟ್ರೆಂಡ್ | Photo Credit: https://www.instagram.com/sujathakshaya/#
ಕಲಾವಿದರಿಗೆ ಹೇಳದೇ ಕೇಳದೇ ರೀಪ್ಲೇಸ್ ಮಾಡೋ ಹೊಸ ಟ್ರೆಂಡ್ | Photo Credit: https://www.instagram.com/sujathakshaya/#

ಹಲವಾರು ವರ್ಷಗಳಿಂದ ಸೀರಿಯಲ್ ಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸುಜಾತಾ, ಒಂದು ಸಣ್ಣ ಗ್ಯಾಪ್ ಬಳಿಕ ‘ಕಲರ್ಸ್ ಕನ್ನಡ’ ವಾಹಿನಿಯ ಸೂಪರ್ ಹಿಟ್ ಸೀರಿಯಲ್ ‘ಭಾರ್ಗವಿ ಎಲ್.ಎಲ್.ಬಿ’ ಮೂಲಕ ಕಂಬ್ಯಾಕ್ ಮಾಡಿದ್ದರು. ಅದರಲ್ಲಿ ಅವರು ಮಾಡುತ್ತಿದ್ದ ‘ನಿರ್ಮಲಾ ಪಾಟೀಲ್’ ಎಂಬ ಕ್ಯಾರೆಕ್ಟರ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಈಗ ಸದ್ದಿಲ್ಲದೆ ಸುಜಾತಾ ಅವರ ಸ್ಥಾನಕ್ಕೆ ಬೇರೆ ನಟಿಯನ್ನು ತರಲಾಗಿದೆ. ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದರೆ, ತಮ್ಮನ್ನು ಸೀರಿಯಲ್‌ನಿಂದ ತೆಗೆದುಹಾಕಿರುವ ವಿಷಯ ಖುದ್ದು ಸುಜಾತಾ ಅವರಿಗೇ ಗೊತ್ತಿರಲಿಲ್ಲ! ತಮ್ಮ ಪಾಡಿಗೆ ತಾವು ಫ್ರೆಂಡ್ಸ್ ಜೊತೆ ಬ್ಯಾಂಕಾಕ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದ ಸುಜಾತಾಗೆ, ಸೋಶಿಯಲ್ ಮೀಡಿಯಾ ಮತ್ತು ಟ್ರೋಲ್ ಪೇಜ್‌ಗಳ ಮೂಲಕ ಈ ಶಾಕಿಂಗ್ ನ್ಯೂಸ್ ತಲುಪಿದೆ.

ವಿವಾದ ಮಾಡದೆ ಪ್ರಬುದ್ಧತೆ ಮೆರೆದ ಸುಜಾತಾ

ತಮ್ಮ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದರು, ಪ್ರೊಡಕ್ಷನ್ ಹೌಸ್ ವಿರುದ್ಧ ತಿರುಗಿಬಿದ್ದು ವಿವಾದ ಸೃಷ್ಟಿಸುತ್ತಿದ್ದರು. ಆದರೆ ಸುಜಾತಾ ಅವರ ನಡೆ ಇದಕ್ಕೆ ತದ್ವಿರುದ್ಧವಾದದ್ದು ಮತ್ತು ಎಲ್ಲರೂ ಪ್ರಶಂಸಿಸುವಂತದ್ದು. ತಮ್ಮನ್ನು ಧಾರಾವಾಹಿಯಿಂದ ತೆಗೆದಿದ್ದಾರೆ ಎಂದು ಗೊತ್ತಾದ ಮೇಲೂ ಅವರು ಯಾರ ಮೇಲೂ ಅಪಸ್ವರ ಎತ್ತಿಲ್ಲ, ಯಾವುದೇ ಆರೋಪ ಮಾಡಿಲ್ಲ. ಬದಲಿಗೆ ಇಡೀ ಟೀಮ್‌ಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

  • ಬ್ಯಾಂಕಾಕ್‌ನ ಏರ್‌ಪೋರ್ಟ್‌ನಿಂದಲೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುಜಾತಾ, ಇಡೀ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ನನಗೆ ಡೇಟ್ಸ್ ಕೇಳಲೇ ಇಲ್ಲ’ - ವಿಡಿಯೋದಲ್ಲಿ ಸುಜಾತಾ ಹೇಳಿದ್ದೇನು?

"ನಾನು ಈಗ ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿದ್ದೀನಿ, ಬೆಂಗಳೂರಿಗೆ ವಾಪಸ್ ಬರ್ತಿದ್ದೀನಿ. ಈ ವಿಡಿಯೋ ಯಾಕೆ ಮಾಡ್ತಿದ್ದೀನಿ ಅಂದ್ರೆ, ಸಡನ್ ಆಗಿ ನನಗೆ ‘ಭಾರ್ಗವಿ ಎಲ್‌ಎಲ್‌ಬಿ’ ಸೀರಿಯಲ್‌ನಲ್ಲಿ ನಿಮ್ಮ ಪಾತ್ರವನ್ನು ರೀಪ್ಲೇಸ್ ಮಾಡ್ತಿದ್ದಾರೆ ಅನ್ನೋ ಮೆಸೇಜ್ ಬಂತು. ಕೆಲವು ಟ್ರೋಲ್ ಪೇಜ್‌ಗಳಲ್ಲಿ ವೈಯಕ್ತಿಕ ಕಾರಣದಿಂದ ಸುಜಾತಾ ಅವರೇ ಸೀರಿಯಲ್ ಬಿಟ್ಟಿದ್ದಾರೆ ಅಂತ ಹಾಕ್ತಿದ್ದಾರೆ. ಇದನ್ನು ನೋಡಿ ಎಷ್ಟೋ ಜನ ನನಗೆ ಮೆಸೇಜ್ ಮಾಡಿ ಹೆಲ್ತ್ ಅಪ್‌ಡೇಟ್ ಕೇಳ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು, ನಾನು ಸೂಪರ್ ಆಗಿದ್ದೀನಿ. ಇದು ಮೊದಲೇ ಪ್ಲಾನ್ ಮಾಡಿದ್ದ ವೆಕೇಶನ್ ಆಗಿದ್ದರಿಂದ ನನ್ನ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡ್ತಿದ್ದೀನಿ" ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಯಾರೂ ಇಲ್ಲದ ಕಲ್ಪನೆಗಳನ್ನು ಮಾಡಿಕೊಳ್ಳುವುದು ಬೇಡ ಅಂತ ಈ ವಿಡಿಯೋ ಮಾಡ್ತಿದ್ದೀನಿ. ವಾಹಿನಿಯು ನನ್ನನ್ನು ಯಾವಾಗಲೂ ಗೌರವಿಸಿದೆ. ಆದರೆ ಪ್ರೊಡಕ್ಷನ್ ಹೌಸ್‌ನವರು ಯಾಕೆ ಈ ನಿರ್ಧಾರ ತಗೊಂಡ್ರು ಅಂತ ನನಗೆ ಗೊತ್ತಿಲ್ಲ. ಅವರು ನನ್ನ ಹತ್ತಿರ ಡೇಟ್ಸ್ ಕೇಳಲಿಲ್ಲ, ಶೂಟಿಂಗ್‌ಗೆ ಬಾ ಅಂತಾನೂ ಹೇಳಲಿಲ್ಲ. ಇದರ ಹಿಂದಿನ ಉದ್ದೇಶ ಏನೆಂದು ನನಗೆ ಗೊತ್ತಿಲ್ಲ. ನಾನಂತೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಖಂಡಿತಾ ಶೀಘ್ರದಲ್ಲೇ ಮತ್ತೊಂದು ಪ್ರಾಜೆಕ್ಟ್ ಮೂಲಕ ನಿಮ್ಮ ಮುಂದೆ ಬರ್ತೀನಿ" ಎಂದು ಭರವಸೆ ನೀಡಿದ್ದಾರೆ.

ಹೊಸ ನಟಿಗೆ ಆಲ್ ದಿ ಬೆಸ್ಟ್ ಹೇಳಿದ ದೊಡ್ಡ ಗುಣ

‘ಭಾರ್ಗವಿ ಎಲ್‌ಎಲ್‌ಬಿ’ ಸೀರಿಯಲ್ ಶುರುವಾಗಿ ಸುಮಾರು 1 ವರ್ಷ 8 ತಿಂಗಳು ಕಳೆದಿದೆ. ಅಲ್ಲಿಂದ ಇವತ್ತಿನವರೆಗೂ ಪ್ರತಿದಿನ ನಾನು ‘ನಿರ್ಮಲಾ’ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂದಿರುವ ಸುಜಾತಾ, "ಇಲ್ಲಿಯವರೆಗೆ ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದಗಳು. ಈಗ ನನ್ನ ಪಾತ್ರಕ್ಕೆ ಹೊಸದಾಗಿ ಯಾರು ಬಂದಿದ್ದಾರೋ ಅವರಿಗೆ ಆಲ್ ದಿ ಬೆಸ್ಟ್, ಅವರೂ ಚೆನ್ನಾಗಿ ಮಿಂಚಲಿ. ಹಾಗೆಯೇ ನನಗೆ ಈ ಬ್ಯೂಟಿಫುಲ್ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೂ ಥ್ಯಾಂಕ್ಸ್" ಎಂದು ಹೇಳುವ ಮೂಲಕ ತಮ್ಮ ದೊಡ್ಡ ಗುಣವನ್ನು ಮೆರೆದಿದ್ದಾರೆ.

Latest News