ತಂದೆಯ ನಿರ್ಧಾರ ಬದಲಾಗಲ್ಲ ಎಂದ ಯತೀಂದ್ರ - ಈ ವಾರದಲ್ಲೇ ಸಚಿವ ಸಂಪುಟ ವಿಸ್ತರಣೆ ಸುಳಿವು!!

ರಾಜ್ಯ ರಾಜಕೀಯದಲ್ಲಿ ಸದಾ ಚರ್ಚೆಯಲ್ಲಿರುವ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾವಣಾ ರಾಜಕೀಯ ನಿವೃತ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಹಾಗೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ, ದಸರಾ ಮಹೋತ್ಸವದ ಸಿದ್ಧತೆಗಳು, ರೈತರ ಸಮಸ್ಯೆಗಳು, ನಗರದ ಫುಟ್‌ಪಾತ್ ಆಕ್ರಮಣ ತೆರವು ಹಾಗೂ ಡ್ರಗ್ಸ್ ತಡೆ ಕುರಿತು ಹಲವು ಮುಖ್ಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮೈಸೂರಿಗೆ ಸಿಗಲಿದೆಯೇ ಮತ್ತೊಂದು ಸಚಿವ ಸ್ಥಾನ | Photo Credit: https://www.facebook.com/DrYathindraSiddaramaiahOfficial?__tn__=-UC*F
ಮೈಸೂರಿಗೆ ಸಿಗಲಿದೆಯೇ ಮತ್ತೊಂದು ಸಚಿವ ಸ್ಥಾನ | Photo Credit: https://www.facebook.com/DrYathindraSiddaramaiahOfficial?__tn__=-UC*F

ತಂದೆಯ ನಿರ್ಧಾರ ಎಂದಿಗೂ ಬದಲಾಗಲ್ಲ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಭಾನುವಾರ ಪ್ರಕಟಿಸಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ, ತಮ್ಮ ತಂದೆಯವರ ನಿರ್ಧಾರ ಅಂತಿಮವಾದುದು ಎಂದು ಸ್ಪಷ್ಟಪಡಿಸಿದರು.

"ನನ್ನ ತಂದೆ ಒಂದು ಬಾರಿ ಹೇಳಿದರೆ ಮುಗಿದು ಹೋಯ್ತು. ಅವರು ಮತ್ತೆ ಆ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಎಂದಿಗೂ ಬದಲಾಯಿಸುವುದಿಲ್ಲ. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಮೊದಲೇ ಸ್ಪಷ್ಟಪಡಿಸಿದ್ದರು. ಈಗ ಅದನ್ನೇ ಮತ್ತೊಮ್ಮೆ ನೆನಪಿಸಿದ್ದಾರೆ," ಎಂದು ತಿಳಿಸಿದರು.

ಈ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿ ಕುರಿತಾಗಿ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಈ ವಾರದಲ್ಲೇ ಸಚಿವ ಸಂಪುಟ ವಿಸ್ತರಣೆ?

ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಬಿರುಸಾಗಿದ್ದು, ಹೈಕಮಾಂಡ್ ಭೇಟಿಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ದೆಹಲಿಗೆ ತೆರಳಿದ್ದಾರೆ.

ಸಂಪುಟ ವಿಸ್ತರಣೆಯ ಕುರಿತು ಮಾತನಾಡಿದ ಯತೀಂದ್ರ:

ಇಂದು ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಮುಖ ಚರ್ಚೆಗಳು ನಡೆಯಲಿವೆ.

ಈ ವಾರದಲ್ಲೇ ಸಂಪುಟ ವಿಸ್ತರಣೆ ಆಗುವ ಎಲ್ಲಾ ಸಾಧ್ಯತೆಗಳಿವೆ.

ಮೈಸೂರು ಜಿಲ್ಲೆಯಲ್ಲೂ ಹಲವು ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಈ ಬಾರಿ ಮೈಸೂರಿಗೆ ಮತ್ತೊಂದು ಸಚಿವ ಸ್ಥಾನ ಸಿಗುವ ನೀರಿಕ್ಷೆಯಿದೆ.

ಶಾಸಕ ತನ್ವೀರ್ ಸೇಠ್ ವಿಶ್ವಾಸ

ಇದೇ ವಿಷಯವಾಗಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಪಕ್ಷ ನಿಷ್ಠೆಯೇ ನನ್ನನ್ನು ಕಾಪಾಡುತ್ತದೆ. ಕಳೆದ ಬಾರಿ ಸಿಎಂ ಮೈಸೂರಿನವರೇ ಆಗಿದ್ದರಿಂದ ನನಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ. ನನ್ನ ಕಾರ್ಯವೈಖರಿ ಹೈಕಮಾಂಡ್‌ಗೆ ತಿಳಿದಿರುವುದರಿಂದ ದೆಹಲಿಗೆ ಹೋಗಿ ಲಾಬಿ ಮಾಡುವ ಅಗತ್ಯ ನನಗಿಲ್ಲ," ಎಂದು ಹೇಳಿದರು. ಬುಧವಾರ ಅಥವಾ ಗುರುವಾರ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದು ಅವರು ಸುಳಿವು ನೀಡಿದರು.

ಮೈಸೂರು ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಸಭೆ

ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕಾರ್ಯಕಾರಿ ಸಮಿತಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಕೆ. ಹರೀಶ್ ಗೌಡ, ಜಿ.ಡಿ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ರಮೇಶ್ ಬಂಡೀಸಿದ್ದೇಗೌಡ, ಎಂಎಲ್‌ಸಿಗಳಾದ ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ವಿವೇಕಾನಂದ, ರಘು ಕೌಟಿಲ್ಯ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸೇರಿದಂತೆ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕಂಬಳ ಕ್ರೀಡೆ ಹಾಗೂ ದಸರಾ ಸಿದ್ಧತೆ

ಈ ಬಾರಿಯ ದಸರಾ ಮಹೋತ್ಸವದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ 'ಕಂಬಳ'ವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. "ಕಂಬಳ ನಡೆಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸದ್ಯಕ್ಕೆ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ," ಎಂದು ಸಚಿವರು ತಿಳಿಸಿದರು.

ರೈತರ ರಕ್ಷಣೆ ಮತ್ತು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕನ್ನಿಂಗ್

ರಾಜ್ಯದಲ್ಲಿ ಮಳೆಯಭಾವದಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಬಾರದು ಎಂದು ಸಚಿವರು ಎಚ್ಚರಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಕ್ರಮ ಹಾಗೂ ಕಿರುಕುಳ ತಡೆಯಲು ಈಗಾಗಲೇ ಕಠಿಣ ಕಾನೂನು ತರಲಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್‌ಗಳು ತಲುಪುತ್ತಿರುವ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು.

ಸರ್ಕಾರ ಯಾವಾಗಲೂ ರೈತರ ಪರವಾಗಿ ನಿಲ್ಲಲಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು.

ಡ್ರ*ಗ್ಸ್ ತಡೆ ಹಾಗೂ ಫುಟ್‌ಪಾತ್ ಒತ್ತುವರಿ ತೆರವು

ಸಾರ್ವಜನಿಕ ಹಿತದೃಷ್ಟಿಯಿಂದ ನಗರದಲ್ಲಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳ ಬಗ್ಗೆ ಸಚಿವರು ಗಮನ ಸೆಳೆದರು:

ಡ್ರ*ಗ್ಸ್ ವಿರುದ್ಧ ಜಾಗೃತಿ: ಮೈಸೂರಿನಲ್ಲೂ ಕೆಲವು ಭಾಗಗಳಲ್ಲಿ ಡ್ರ*ಗ್ಸ್ ವ್ಯಸನಿಗಳು ಇರುವುದು ಸತ್ಯ. ಇದನ್ನು ಸಂಪೂರ್ಣವಾಗಿ ಹೂತುಹಾಕಲು ಮತ್ತು ಯುವಜನತೆಯಲ್ಲಿ ಜಾಗೃತಿ ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಫುಟ್‌ಪಾತ್ ತೆರವು: ನ್ಯಾಯಾಲಯದ ಆದೇಶದಂತೆ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಮೈಸೂರಿನಲ್ಲೂ ಇದನ್ನು ಜಾರಿಗೆ ತರಲಾಗುವುದು. ಆದರೆ, ಈ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನವೀಯತೆಯಿಂದ ನಡೆದುಕೊಳ್ಳಬೇಕು ಹಾಗೂ ಸಣ್ಣ ವ್ಯಾಪಾರಿಗಳಿಗೆ ಅಥವಾ ಸಾರ್ವಜನಿಕರಿಗೆ ಅನಗತ್ಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

Latest News