‘ಬೇರೆ ದಾರಿಯೇ ಇರಲಿಲ್ಲ, ಮೀಟೂ ಆರೋಪ ಸುಳ್ಳು’ - ವರ್ಷಗಳ ಬಳಿಕ ನಟಿ ಶಿಲ್ಪಾ ಶಿಂಡೆ ಸ್ಫೋಟಕ ಹೇಳಿಕೆ!!

ಸುಮಾರು 6-7 ವರ್ಷಗಳ ಹಿಂದೆ ಕಿರುತೆರೆ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ನಟಿ ಶಿಲ್ಪಾ ಶಿಂಡೆ ಅವರ ಲೈಂಗಿಕ ಕಿರುಕುಳದ ಆರೋಪ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ಮೇಲಿನ ಬ್ಯಾನ್‌ನಿಂದ ಪಾರಾಗಲು ನಿರ್ಮಾಪಕರ ವಿರುದ್ಧ ತಾವು ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಕಂಪ್ಲೀಟ್ ಸುಳ್ಳಾಗಿತ್ತು ಎಂದು ಸ್ವತಃ ಶಿಲ್ಪಾ ಶಿಂಡೆ ಈಗ ಸತ್ಯ ಒಪ್ಪಿಕೊಂಡಿದ್ದಾರೆ. ಖ್ಯಾತ ಕಮಿಡಿಯನ್ ಭಾರ್ತಿ ಸಿಂಗ್ ಅವರ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, "ಅಂದು ನನ್ನ ಬಳಿ ಬೇರೆ ಯಾವುದೇ ದಾರಿಯೇ ಇರಲಿಲ್ಲ, ಪರಿಸ್ಥಿತಿಯ ಒತ್ತಡದಿಂದ ಹಾಗೆ ಮಾಡಬೇಕಾಯಿತು" ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಈ ತಪ್ಪೊಪ್ಪಿಗೆ ಹೇಳಿಕೆ ಈಗ ಇಡೀ ಗ್ಲಾಮರ್ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಭಾರ್ತಿ ಸಿಂಗ್ ಪಾಡ್‌ಕಾಸ್ಟ್‌ನಲ್ಲಿ 'ಅಂಗೂರಿ ಭಾಭಿ' ಸ್ಫೋಟಕ ಹೇಳಿಕೆ | Photo Credit: https://x.com/deepdownanlyz
ಭಾರ್ತಿ ಸಿಂಗ್ ಪಾಡ್‌ಕಾಸ್ಟ್‌ನಲ್ಲಿ 'ಅಂಗೂರಿ ಭಾಭಿ' ಸ್ಫೋಟಕ ಹೇಳಿಕೆ | Photo Credit: https://x.com/deepdownanlyz

ಕಿರುತೆರೆ ಇತಿಹಾಸದಲ್ಲೇ ಸೂಪರ್ ಹಿಟ್ ಆಗಿದ್ದ 'ಭಾಭೀಜಿ ಘರ್ ಪರ್ ಹೈ' ಧಾರಾವಾಹಿಯಲ್ಲಿ 'ಅಂಗೂರಿ ಭಾಭಿ' ಪಾತ್ರದ ಮೂಲಕ ಶಿಲ್ಪಾ ಶಿಂಡೆ ದೇಶಾದ್ಯಂತ ಮನೆಮಾತಾಗಿದ್ದರು. ಅವರ ವಿಶಿಷ್ಟ ಮ್ಯಾನರಿಸಂ ಮತ್ತು ಆಕ್ಟಿಂಗ್‌ಗೆ ಜನ ಫಿದಾ ಆಗಿದ್ದರು. ಆದರೆ, ಸೀರಿಯಲ್ ಫುಲ್ ಸಕ್ಸಸ್‌ನಲ್ಲಿ ಇರುವಾಗಲೇ ಸಂಭಾವನೆ ಹಾಗೂ ಒಪ್ಪಂದದ ವಿಚಾರವಾಗಿ ನಿರ್ಮಾಪಕರ ಜೊತೆ ಶಿಲ್ಪಾಗೆ ಭಿನ್ನಾಭಿಪ್ರಾಯ ಶುರುವಾಗಿ, ಅವರು ದಿಢೀರ್ ಎಂದು ಶೋನಿಂದ ಹೊರನಡೆದರು.

ಮುಖ್ಯ ನಟಿಯೇ ಶೋ ಬಿಟ್ಟಿದ್ದರಿಂದ ಸೀರಿಯಲ್ ಟಿಆರ್‌ಪಿ (TRP) ಧರಾಶಾಹಿಯಾಯಿತು ಮತ್ತು ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಯಿತು. ಇದರಿಂದ ಸಿಟ್ಟಿಗೆದ್ದ ಪ್ರೊಡ್ಯೂಸರ್ಸ್ ಅಸೋಸಿಯೇಷನ್, ಶಿಲ್ಪಾ ಶಿಂಡೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರು ಬೇರೆಲ್ಲೂ ನಟಿಸದಂತೆ ಇಂಡಸ್ಟ್ರಿಯಲ್ಲಿ ಬ್ಯಾನ್ ಮಾಡಲು ಮುಂದಾಯಿತು.

ಬ್ಯಾನ್‌ನಿಂದ ತಪ್ಪಿಸಿಕೊಳ್ಳಲು ಲೈಂಗಿಕ ಕಿರುಕುಳದ ಅಸ್ತ್ರ

ಇಂಡಸ್ಟ್ರಿಯಲ್ಲಿ ತಮಗೆ ಕೆಲಸ ಸಿಗದಂತೆ ಮಾಡಲು ನಿರ್ಮಾಪಕರು ಸ್ಕೆಚ್ ಹಾಕಿದಾಗ, ಶಿಲ್ಪಾ ಶಿಂಡೆ ಸಿಡಿದೆದ್ದರು. 2016-17ರ ಅವಧಿಯಲ್ಲಿ ಅವರು ಧಾರಾವಾಹಿಯ ಪ್ರಮುಖ ನಿರ್ಮಾಪಕ ಸಂಜಯ್ ಕೊಹ್ಲಿ (Sanjay Kohli) ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಗಂಭೀರ ದೂರು ದಾಖಲಿಸಿದರು. ನಿರ್ಮಾಣ ತಂಡ ತಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದೆ ಎಂದು ಕಣ್ಣೀರು ಹಾಕಿದ್ದರು. ಇದು ಅಂದು ಇಡೀ ಮೀಡಿಯಾಗಳಲ್ಲಿ ಹೆಡ್‌ಲೈನ್ ಆಗಿತ್ತು.

ಆದರೆ ಈಗ ವರ್ಷಗಳ ಬಳಿಕ ಆ ಪ್ರಕರಣದ ಅಸಲಿ ಸತ್ಯವನ್ನು ಬಿಚ್ಚಿಟ್ಟಿರುವ ಶಿಲ್ಪಾ, ಆ ಸಮಯದಲ್ಲಿ ನನ್ನನ್ನು ಚಿತ್ರರಂಗದಿಂದಲೇ ಸಂಪೂರ್ಣವಾಗಿ ದೂರ ಇಡಲು ಪ್ಲಾನ್ ಮಾಡಿದ್ದರು. ನನಗೆ ಎಲ್ಲೂ ಕೆಲಸ ಸಿಗದಂತೆ ಬೆದರಿಕೆ ಹಾಕುತ್ತಿದ್ದರು. ಆ ದಿನಗಳಲ್ಲಿ ನಾನು ಕಂಪ್ಲೀಟ್ ಒಂಟಿಯಾಗಿದ್ದೆ ಮತ್ತು ತೀವ್ರ ಡಿಪ್ರೆಷನ್‌ನಲ್ಲಿದ್ದೆ. ಆ ಬ್ಯಾನ್‌ನಿಂದ ಹೇಗಾದರೂ ಮಾಡಿ ಹೊರಬರಲು ನನ್ನ ಬಳಿ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ ಕಾನೂನಿನ ಬೆಂಬಲ ಪಡೆಯಲು ಆ ರೀತಿಯ ದೂರು ನೀಡಬೇಕಾಯಿತು. ಅದು ನಿಜವಾಗಿ ನಡೆದ ಲೈಂಗಿಕ ಕಿರುಕುಳದ ಘಟನೆಯಲ್ಲ, ಕೇವಲ ಪರಿಸ್ಥಿತಿಯ ಒತ್ತಡದಿಂದ ನಾನು ತಗೊಂಡ ನಿರ್ಧಾರ" ಎಂದು ಓಪನ್ ಆಗಿ ಹೇಳಿದ್ದಾರೆ.

ಪೂಜಾ ಬೇಡಿ, ಹಿನಾ ಖಾನ್ ಭಾರಿ ಆಕ್ರೋಶ

ಶಿಲ್ಪಾ ಶಿಂಡೆ ಅವರ ಈ ಯು-ಟರ್ನ್ ಹೇಳಿಕೆಗೆ ಕಿರುತೆರೆ ಹಾಗೂ ಬಾಲಿವುಡ್ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನಟಿ ಪೂಜಾ ಬೇಡಿ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ಮಹಿಳೆಯರ ರಕ್ಷಣೆಗಾಗಿ ಇರುವ ಕಠಿಣ ಕಾನೂನುಗಳನ್ನು ಸ್ವಾರ್ಥಕ್ಕಾಗಿ ಈ ರೀತಿ ದುರುಪಯೋಗಪಡಿಸಿಕೊಂಡರೆ, ನಿಜವಾಗಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ನ್ಯಾಯಕ್ಕಾಗಿ ಹೋರಾಡುವ ಅಸಲಿ ಸಂತ್ರಸ್ತೆಯರಿಗೆ ಭಾರಿ ಅನ್ಯಾಯವಾಗುತ್ತದೆ. ಇಂತಹ ನಡವಳಿಕೆಯಿಂದ ಕಾನೂನಿನ ಮೇಲಿನ ನಂಬಿಕೆಯೇ ಹೊರಟುಹೋಗುತ್ತದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ನಟಿ ಹಿನಾ ಖಾನ್ ಕೂಡ ಶಿಲ್ಪಾ ವಿರುದ್ಧ ಕಿಡಿಕಾರಿದ್ದು, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕೇವಲ ವೈಯಕ್ತಿಕ ಸೇಡಿನ ಕಾರಣಕ್ಕಾಗಿ ಒಬ್ಬ ವ್ಯಕ್ತಿಯ ಚಾರಿತ್ರ್ಯ ವಧೆ ಮಾಡುವುದು ತಪ್ಪು. ಈ ಇಡೀ ಪ್ರಕರಣದಲ್ಲಿ ಸುಳ್ಳು ಆರೋಪ ಹೊತ್ತು ಸಮಾಜದಲ್ಲಿ ತಲೆ ತಗ್ಗಿಸುವಂತಾದ ಆ ನಿರ್ಮಾಪಕನೇ ನಿಜವಾದ ಸಂತ್ರಸ್ತ ಎಂದು ಹೇಳಿದ್ದಾರೆ.

ಟೀಕೆಗಳಿಗೆ ಕೇರ್ ಮಾಡದ 'ಅಂಗೂರಿ ಭಾಭಿ'

ತಮ್ಮ ಹೇಳಿಕೆಯಿಂದ ಇಷ್ಟೆಲ್ಲಾ ರಾದ್ಧಾಂತವಾಗುತ್ತಿದ್ದರೂ, ನಟಿ ಶಿಲ್ಪಾ ಶಿಂಡೆ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತಮ್ಮ ವಿರುದ್ಧ ನೆಟ್ಟಿಗರು ಮಾಡುತ್ತಿರುವ ಟ್ರೋಲ್‌ಗಳು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುತ್ತಿರುವ ನಟಿಯರ ಆಗ್ರಹಗಳಿಗೆ ಅವರು ಡೋಂಟ್ ಕೇರ್ ಎಂದಿದ್ದಾರೆ. ಯಾರು ಏನು ಬೇಕಾದರೂ ಅಂದುಕೊಳ್ಳಲಿ, ಸೋಷಿಯಲ್ ಮೀಡಿಯಾದಲ್ಲಿ ಬರುವ ನೆಗೆಟಿವ್ ಕಮೆಂಟ್‌ಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಕೂಲ್ ಆಗಿ ಉತ್ತರಿಸಿದ್ದಾರೆ.

ಕೆಲಸದ ಜಾಗದಲ್ಲಿ ಮಹಿಳೆಯರ ಸುರಕ್ಷತೆಗೆ ಇರುವ ಲೈಂಗಿಕ ಕಿರುಕುಳ ವಿರೋಧಿ ಕಾನೂನುಗಳು ಹೇಗೆ ವೈಯಕ್ತಿಕ ಹಿತಾಸಕ್ತಿಗೆ ಬಳಕೆಯಾಗುತ್ತಿವೆ ಮತ್ತು ಇಂತಹ ಸೂಕ್ಷ್ಮ ಪ್ರಕರಣಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಎಷ್ಟು ಮುಖ್ಯ ಎಂಬುದರ ಕುರಿತು ಈ ಘಟನೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

Latest News