ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಪ್ರೇಮಕಥೆಗಳು ಸಿನಿ ಪ್ರೇಮದಷ್ಟೇ ಸಿಹಿಯಾಗಿವೆ. ತೆರೆಯ ಮೇಲೆ ಪ್ರೇಮದ ಪಾತ್ರಗಳಲ್ಲಿ ನಟಿಸುತ್ತಾ, ನಿಜ ಜೀವನದಲ್ಲೂ ಪ್ರೀತಿಗೆ ಬಿದ್ದ ಅನೇಕ ಜೋಡಿಗಳು ಇಂದು ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಸೆಟ್‌ನಲ್ಲಿ ಶುರುವಾದ ಸ್ನೇಹ, ನಂತರ ಪ್ರೀತಿ ಮತ್ತು ಮದುವೆಯವರೆಗೆ ತಲುಪಿದ ಈ ಕಥೆಗಳು ಅಭಿಮಾನಿಗಳಿಗೆ ಯಾವಾಗಲೂ ವಿಶೇಷವಾಗಿವೆ.
ಸ್ಯಾಂಡಲ್‌ವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಪ್ರಮುಖರು. ಇಬ್ಬರೂ ಮೊದಲು ‘ನಂದಗೋಕುಲ’ ಧಾರಾವಾಹಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಬಳಿಕ ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದರು. ಚಿತ್ರರಂಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ವೇಳೆ ಇವರ ಮಧ್ಯೆ ಪ್ರೀತಿ ಬೆಳೆಯಿತು. ಆದರೆ ತಮ್ಮ ಸಂಬಂಧವನ್ನು ಬಹಳ ದಿನಗಳವರೆಗೆ ಖಾಸಗಿಯಾಗಿಯೇ ಇಟ್ಟುಕೊಂಡಿದ್ದರು. ನಂತರ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದು, ಇಂದು ಇವರ ಜೋಡಿ ಅಭಿಮಾನಿಗಳ ಫೇವರಿಟ್ ಆಗಿದೆ.
ದಿಗಂತ್ ಮತ್ತು ಐಂದ್ರಿತಾ ರೇ ಅವರ ಪ್ರೇಮಕಥೆಯೂ ಬಹಳ ಕ್ಯೂಟ್. ಐಂದ್ರಿತಾ ಅವರ ಸಂದರ್ಶನ ನೋಡಿದ ದಿಗಂತ್, “ಈ ಹುಡುಗಿ ತುಂಬಾ ಕ್ಯೂಟ್” ಎಂದು ಅಂದಿದ್ದರಂತೆ. ಬಳಿಕ ‘ಮನಸಾರೆ’ ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ಅವಕಾಶ ಸಿಕ್ಕಿತು. ಶೂಟಿಂಗ್ ವೇಳೆ ದಿಗಂತ್ ಅನಾರೋಗ್ಯಕ್ಕೆ ಒಳಗಾದಾಗ ಐಂದ್ರಿತಾ ಅವರನ್ನು ನೋಡಿಕೊಂಡರು. ಈ ಕಾಳಜಿಯೇ ಸ್ನೇಹವನ್ನು ಪ್ರೀತಿಯಾಗಿ ಬದಲಿಸಿತು. ನಂತರ ಇಬ್ಬರೂ ಮದುವೆಯಾಗಿ ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ.
90ರ ದಶಕದ ಪ್ರಸಿದ್ಧ ಜೋಡಿ ಅಂಬರೀಶ್ ಮತ್ತು ಸುಮಲತಾ. 1984ರಲ್ಲಿ ಒಂದು ಕಾರ್ಯಕ್ರಮದಲ್ಲಿ ಸುಮಲತಾ ಮೊದಲ ಬಾರಿಗೆ ಅಂಬರೀಶ್ ಅವರನ್ನು ನೋಡಿದರು. ಬಳಿಕ ‘ಆಹುತಿ’ ಸಿನಿಮಾದ ಸೆಟ್‌ನಲ್ಲಿ ಇಬ್ಬರೂ ಭೇಟಿಯಾದರು. ಸ್ನೇಹವಾಗಿ ಆರಂಭವಾದ ಸಂಬಂಧ ನಂತರ ಪ್ರೀತಿಗೆ ತಿರುಗಿ, ಮದುವೆಯಾಯಿತು. ಇವರ ಜೋಡಿ ಅಂದಿನ ಕಾಲದಲ್ಲಿ ಟಾಪ್ ಜೋಡಿಯಾಗಿ ಹೆಸರು ಮಾಡಿತ್ತು.
ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಅವರ ಪ್ರೇಮಕಥೆ ಬಾಲ್ಯದಲ್ಲೇ ಆರಂಭವಾಯಿತು. ರಾಗಿಣಿಯನ್ನು ಪ್ರಜ್ವಲ್ ಮೊದಲಿಗೆ 9ನೇ ತರಗತಿಯಲ್ಲಿ ನೋಡಿದ್ದರು. ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲು ಆರಂಭಿಸಿದರು. ಕುಟುಂಬದ ಒಪ್ಪಿಗೆಯೊಂದಿಗೆ ಇವರ ಪ್ರೇಮ ವಿವಾಹ ನೆರವೇರಿತು.
‘ಚಾರ್ಲಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಡುವೆ ಪ್ರೀತಿ ಮೊಳೆಯಿತು. ಒಂದು ದಿನ ಲಾಂಗ್ ಡ್ರೈವ್‌ಗೆ ಕರೆದುಕೊಂಡು ಹೋಗಿ ಕೃಷ್ಣ ನೇರವಾಗಿ ಮದುವೆಗೆ ಪ್ರಪೋಸ್ ಮಾಡಿದರು. ಇಂದು ‘ಲವ್ ಮಾಕ್‌ಟೇಲ್’ ಯಶಸ್ಸಿನ ಜೊತೆಗೆ ಇವರ ಜೋಡಿ ಕೂಡ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.
‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಭೇಟಿ ಆದರು. ನಂತರ ಮೆಸೇಜ್ ಮೂಲಕ ಆರಂಭವಾದ ಮಾತುಕತೆ ಪ್ರೀತಿಗೆ ತಿರುಗಿತು. ಇವರ ಪ್ರೇಮಕಥೆ ಸ್ಯಾಂಡಲ್‌ವುಡ್‌ನಲ್ಲಿ ಸದಾ ನೆನಪಾಗುವಂತದ್ದು.
ಸ್ಯಾಂಡಲ್‌ವುಡ್‌ನ ಈ ಕ್ಯೂಟ್ ಲವ್ ಸ್ಟೋರಿಗಳು ಅಭಿಮಾನಿಗಳಿಗೆ ಸದಾ ಸ್ಪೂರ್ತಿ ನೀಡುತ್ತವೆ. ತೆರೆಯ ಮೇಲಿನ ಪ್ರೇಮ ನಿಜ ಜೀವನದ ಸಂತೋಷದ ದಾಂಪತ್ಯವಾಗಿ ಮಾರ್ಪಟ್ಟ ಉದಾಹರಣೆಗಳಿವು.