ಕನ್ನಡ ಚಿತ್ರರಂಗದ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಈಗ ಕೇವಲ ನಟ, ನಿರ್ದೇಶಕರಾಗಿ ಮಾತ್ರವಲ್ಲದೆ, ನಿರ್ಮಾಣ ಕ್ಷೇತ್ರದಲ್ಲೂ ದೊಡ್ಡ ಮಟ್ಟದ ಹೆಜ್ಜೆ ಇಡುತ್ತಿದ್ದಾರೆ. ಹೌದು, ರಿಷಬ್ ಶೆಟ್ಟಿ ಫಿಲಂಸ್ ಈಗ ಖ್ಯಾತ ನಿರ್ಮಾಣ ಸಂಸ್ಥೆಯಾದ 'ಮೈತ್ರಿ ಮೂವಿ ಮೇಕರ್ಸ್' ಜೊತೆ ಕೈಜೋಡಿಸಿದೆ. ವಿಶೇಷ ಅಂದ್ರೆ, ಈ ಹೊಸ ಪಯಣದಲ್ಲಿ ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ನಿರ್ಮಾಪಕಿಯಾಗಿ ಪೂರ್ಣ ಪ್ರಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
'ಜೈ ಹನುಮಾನ್' ಸಿನಿಮಾಗೆ ಸಾಥ್
ಪ್ರಶಾಂತ್ ವರ್ಮ ನಿರ್ದೇಶನದ ಬಹುನಿರೀಕ್ಷಿತ 'ಜೈ ಹನುಮಾನ್' ಸಿನಿಮಾದ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ದಂಪತಿ ಭಾಗಿಯಾಗುತ್ತಿರುವುದು ಈಗ ಬಹುತೇಕ ಖಚಿತವಾಗಿದೆ. ತಮ್ಮ ಹೋಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಇದು ಮೊದಲ ದೊಡ್ಡ ಹೆಜ್ಜೆ ಎನ್ನಬಹುದು. ಈ ಬಗ್ಗೆ ಮಾತನಾಡಿದ ರಿಷಬ್, "ನನ್ನ ಇಡೀ ಸಿನಿಮಾ ಜರ್ನಿಯಲ್ಲಿ ಪ್ರಗತಿ ಪ್ರೊಡಕ್ಷನ್ ಕೆಲಸಗಳನ್ನು ಬಹಳ ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿದ್ದಾಳೆ. ಯಾವುದೇ ಜವಾಬ್ದಾರಿಯನ್ನು ಸುಲಭವಾಗಿ ನಿಭಾಯಿಸುವ ಛಾತಿ ಆಕೆಯಲ್ಲಿದೆ. ಇನ್ನುಮುಂದೆ ರಿಷಬ್ ಶೆಟ್ಟಿ ಫಿಲಂಸ್‌ನಲ್ಲಿ ಅವಳು ಹೆಚ್ಚಿನ ಜವಾಬ್ದಾರಿಯೊಂದಿಗೆ ಕೆಲಸ ಮಾಡಲಿದ್ದಾಳೆ," ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಚರ್ಚೆ!
ಇದೇ ಸಮಯದಲ್ಲಿ ರಿಷಬ್ ಶೆಟ್ಟಿ ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಕೂಡ ಸುದ್ದಿಯಲ್ಲಿದೆ. ರಿಷಬ್ ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಮತ್ತು ತಮ್ಮ ನಿರ್ಮಾಣ ಸಂಸ್ಥೆಯ ಪೇಜ್ ಬಿಟ್ಟು ಉಳಿದೆಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಈ ಹಿಂದೆ ಅವರು ಹೊಂಬಾಳೆ ಫಿಲಂಸ್ ಮತ್ತು ನಟಿ ರುಕ್ಮಿಣಿ ವಸಂತ್ ಅವರನ್ನೂ ಅನ್‌ಫಾಲೋ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದು ಅವರ ಹೊಸ ಬ್ಯಾನರ್‌ನ ಬ್ರ್ಯಾಂಡಿಂಗ್ ಕೆಲಸದ ಭಾಗವಾಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
ಅಮೆರಿಕದಲ್ಲಿ ರಿಷಬ್ ಶೆಟ್ಟಿ ಸಂಭ್ರಮ
ರಿಷಬ್ ಶೆಟ್ಟಿ ಅವರ ಖ್ಯಾತಿ ಕೇವಲ ಇಂಡಿಯಾಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕದಲ್ಲಿ ನಡೆಯಲಿರುವ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ-ಫಿಲಡೆಲ್ಫಿಯಾ 2026'ಕ್ಕೆ ರಿಷಬ್ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 4ರಿಂದ 6ರವರೆಗೆ ಈ ಅದ್ದೂರಿ ಸಮ್ಮೇಳನ ನಡೆಯಲಿದೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ರಿಷಬ್ ಅವರ ಅಪಾರ ಪ್ರೀತಿಯನ್ನು ಕಂಡು ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕ್ಕ ಸಂಸ್ಥೆ ತಿಳಿಸಿದೆ. ಇದು ಉತ್ತರ ಅಮೆರಿಕದ ಕನ್ನಡಿಗರಿಗೆ ಮಾತ್ರವಲ್ಲದೆ, ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯ.
ರಿಷಬ್ ಶೆಟ್ಟಿ ಅವರು ಒಂದೆಡೆ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದರೆ, ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ ಕನ್ನಡದ ಕೀರ್ತಿಯನ್ನು ಹರಡುತ್ತಿದ್ದಾರೆ. ಅವರಿಗೆ ಪತ್ನಿ ಪ್ರಗತಿ ಶೆಟ್ಟಿ ಅವರ ಬೆಂಬಲ ಬೆನ್ನಿಗಿರುವುದು ಅವರ ಯಶಸ್ಸಿನ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ.