"ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26 ರಂದು ಜೈಪುರದ ಅರಮನೆಯಲ್ಲಿ ನಡೆಯಲಿದೆ. ಮದುವೆಯ ಆಮಂತ್ರಣ ಪತ್ರಿಕೆ ಮತ್ತು ಅತಿಥಿಗಳಿಗೆ ವಿಧಿಸಲಾದ ಕಟ್ಟುನಿಟ್ಟಿನ ನಿಯಮಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ."
ಜೈಪುರದ ಅರಮನೆಯಲ್ಲಿ ಹಸೆಮಣೆ!
ಸಿನಿಮಾ ರಂಗದಲ್ಲಿ ಮಿಂಚುತ್ತಿರುವಾಗಲೇ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅತಿ ಹೆಚ್ಚು ಗೌಪ್ಯತೆ ಕಾಪಾಡಿಕೊಂಡಿರುವ ಜೋಡಿ ಎಂದರೆ ಅದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಅಕ್ಟೋಬರ್ 3 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಈಗ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜೈಪುರದ ಸುಂದರ ಅರಮನೆಯಲ್ಲಿ ನಡೆಯಲಿರುವ ಈ ಮದುವೆಯಲ್ಲಿ ಎರಡೂ ಕುಟುಂಬದ ಸಂಪ್ರದಾಯಗಳ ಸಮ್ಮಿಲನವಿರಲಿದೆ.
ಈ ಮದುವೆಯಲ್ಲಿ ಅತ್ಯಂತ ಗಮನ ಸೆಳೆದಿರುವ ಅಂಶವೆಂದರೆ 'ನೋ ಫೋನ್ ಪಾಲಿಸಿ'. ಮದುವೆಗೆ ಬರುವ ಅತಿಥಿಗಳು ಫೋನ್ ತರುವಂತಿಲ್ಲ ಮತ್ತು ಯಾವುದೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನು ವಿಧಿಸಲಾಗಿದೆ. ಬಹುಶಃ ಈ ಮದುವೆಯ ವಿಡಿಯೋ ಹಕ್ಕುಗಳನ್ನು ದೊಡ್ಡ ಓಟಿಟಿ (OTT) ಸಂಸ್ಥೆಯೊಂದಕ್ಕೆ ಮಾರಾಟ ಮಾಡಿರಬಹುದು ಎಂಬ ಗುಮಾನಿ ಹಬ್ಬಿದೆ. ಆದರೂ, ಆಮಂತ್ರಣ ಪತ್ರಿಕೆ ಲೀಕ್ ಆಗಿದ್ದಕ್ಕೆ ರಶ್ಮಿಕಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ನೀಡಲಾದ ಗಿಫ್ಟ್ ಬಾಕ್ಸ್ ಕೂಡ ವಿಶೇಷವಾಗಿದೆ. ಅದರಲ್ಲಿ ವಿವಿಧ ಬಗೆಯ ಡ್ರೈ ಫ್ರೂಟ್ಸ್‌ಗಳ ಜೊತೆಗೆ ರಶ್ಮಿಕಾ ಅವರ ಸ್ವಂತ ಬ್ರ್ಯಾಂಡ್‌ನ 'ನ್ಯಾಷನಲ್ ಕ್ರಶ್' ಸೆಂಟ್ ಸ್ಯಾಂಪಲ್ ಅನ್ನು ಇಡಲಾಗಿದೆ. ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಈಗಾಗಲೇ ಲೈಟಿಂಗ್ಸ್ ಹಾಕಲಾಗಿದ್ದು, ಮದುವೆಯ ಸಂಭ್ರಮ ಕಳೆಗಟ್ಟಿದೆ. ಭದ್ರತಾ ದೃಷ್ಟಿಯಿಂದ ಮತ್ತು ಖಾಸಗಿತನಕ್ಕೆ ಭಂಗ ಬಾರದಿರಲಿ ಎಂದು ಈ ಜೋಡಿ ಮದುವೆಯ ಸ್ಥಳವನ್ನು ಕೂಡ ಯಾರಿಗೂ ತಿಳಿಯದಂತೆ ಗುಟ್ಟಾಗಿಟ್ಟಿದ್ದರು.
ರಶ್ಮಿಕಾ ಮತ್ತು ವಿಜಯ್ ಪ್ರಸ್ತುತ ತಮ್ಮ ಮದುವೆಯ ಉಡುಪುಗಳ ವಿನ್ಯಾಸದಲ್ಲಿ ಬ್ಯುಸಿಯಾಗಿದ್ದಾರೆ. ಕೊಡಗಿನ ಕುವರಿ ಈಗ ತೆಲುಗು ಮನೆತನದ ಸೊಸೆಯಾಗಿ ಹೋಗುತ್ತಿರುವುದು ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಕೇವಲ ಆಯ್ದ ಫ್ಯಾನ್ ಇಂಡಿಯಾ ಸೆಲೆಬ್ರಿಟಿಗಳು ಮಾತ್ರ ಈ ಅದ್ಧೂರಿ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಇವರಿಬ್ಬರ ಸಿನಿಮಾದ ಹಾದಿಯಂತೆ ಸಂಸಾರ ನೌಕೆಯೂ ಸುಖವಾಗಿ ಸಾಗಲಿ ಎಂಬುದೇ ಪ್ರತಿಯೊಬ್ಬರ ಹಾರೈಕೆ.