Apr 28, 2026 Languages : ಕನ್ನಡ | English

ರಿಯಾಲಿಟಿ ಶೋ ಗೆಳೆತನ ಬದುಕಿಗೂ ಆಸರೆ!! ದಿವಂಗತ ರಾಕೇಶ್ ತಂಗಿಯ ಕನ್ಯಾದಾನ ಮಾಡಿದ ಕಾಮಿಡಿ ಕಿಲಾಡಿಗಳ ತಂಡ!!

"ರಕ್ತದ ಸಂಬಂಧಕ್ಕಿಂತಲೂ ಮಿಗಿಲಾದ ದೊಡ್ಡ ಸಂಬಂಧ ಅಂದ್ರೆ ಅದು ಸ್ನೇಹ ಅನ್ನೋದನ್ನ ಈಗ 'ಕಾಮಿಡಿ ಕಿಲಾಡಿಗಳು' ತಂಡ ಸಾಬೀತು ಮಾಡಿದೆ. ತನ್ನ ತಂಗಿಯ ಮದುವೆ ಮಾಡಬೇಕು ಅನ್ನೋದು ದಿವಂಗತ ರಾಕೇಶ್ ಪೂಜಾರಿ ಅವರ ದೊಡ್ಡ ಕನಸಾಗಿತ್ತು. ಇವತ್ತು ರಾಕೇಶ್ ಇಲ್ಲದಿದ್ರೂ, ಅವರ ಗೆಳೆಯರೆಲ್ಲಾ ಸೇರಿ ಅಣ್ಣನ ಸ್ಥಾನದಲ್ಲಿ ನಿಂತು ರಕ್ಷಿತಾ ಮದುವೆ ಮಾಡಿಸುವ ಮೂಲಕ ನಿಜವಾದ ಮನುಷ್ಯತ್ವ ತೋರಿಸಿದ್ದಾರೆ."

ಕೊಟ್ಟ ಮಾತಿನಂತೆ ತಂಗಿಯ ಮದುವೆ ಮಾಡಿಸಿದ ರಾಕೇಶ್ ಸ್ನೇಹಿತರು | Photo Credit: rakeshpoojary_comedy_kiladi | /praveenjain_official
ಕೊಟ್ಟ ಮಾತಿನಂತೆ ತಂಗಿಯ ಮದುವೆ ಮಾಡಿಸಿದ ರಾಕೇಶ್ ಸ್ನೇಹಿತರು | Photo Credit: rakeshpoojary_comedy_kiladi | /praveenjain_official

ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ವಿಜೇತರಾಗಿ ಮಿಂಚಿದ್ದ ರಾಕೇಶ್ ಪೂಜಾರಿ, ಕರಾವಳಿಯ ಪ್ರತಿಭಾನ್ವಿತ ಕಲಾವಿದ. ರಿಷಬ್ ಶೆಟ್ಟಿಯವರ ಕಾಂತಾರದಂತಹ ದೊಡ್ಡ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದ ರಾಕೇಶ್, ಬದುಕಿನ ದೊಡ್ಡ ರೇಸ್ ಗೆಲ್ಲುವ ಮೊದಲೇ ವಿಧಿಯ ಅಟ್ಟಹಾಸಕ್ಕೆ ಬಲಿಯಾದರು. ರಾಕೇಶ್ ಅಕಾಲಿಕ ನಿಧನದಿಂದ ಅವರ ಕುಟುಂಬದ ಆಧಾರಸ್ತಂಭವೇ ಕುಸಿದುಬಿದ್ದಂತಾಗಿತ್ತು.

ತಂಗಿಯ ಮದುವೆ - ಅಣ್ಣನ ಅತಿದೊಡ್ಡ ಕನಸು

ಮನೆಯಲ್ಲಿ ಅಣ್ಣ ಎಂದರೆ ತಂದೆಯ ಸಮಾನ. ತನ್ನ ತಂಗಿ ರಕ್ಷಿತಾ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು, ಆಕೆಯನ್ನು ಸುಖವಾಗಿ ನೆಲೆಸುವಂತೆ ನೋಡಿಕೊಳ್ಳಬೇಕು ಎಂಬುದು ರಾಕೇಶ್ ಅವರ ಜೀವನದ ಅತಿದೊಡ್ಡ ಆಸೆಯಾಗಿತ್ತು. ಅವರು ಅಕಾಲಿಕವಾಗಿ ಅಗಲಿದಾಗ, ಆ ಮದುವೆಯ ಕನಸು ಅರ್ಧಕ್ಕೆ ನಿಂತುಹೋಗುತ್ತದೆಯೇ ಎಂಬ ಆತಂಕ ಎಲ್ಲರನ್ನೂ ಕಾಡಿತ್ತು.

ಮಾತು ಕೊಟ್ಟಂತೆ ನಡೆಸಿಕೊಟ್ಟ 'ಸೋದರರು'

ಗೆಳೆಯ ರಾಕೇಶ್ ಇಲ್ಲದಿದ್ದರೇನಂತೆ, ನಾವು ಅವನ ಸ್ಥಾನದಲ್ಲಿ ನಿಲ್ಲುತ್ತೇವೆ ಎಂದು ನಿರ್ಧರಿಸಿದವರು 'ಕಾಮಿಡಿ ಕಿಲಾಡಿಗಳು' ತಂಡದ ಗೆಳೆಯರು. ಏಪ್ರಿಲ್ 26ರಂದು ನಡೆದ ರಕ್ಷಿತಾ ಮತ್ತು ಸುನಿಲ್ ಅವರ ವಿವಾಹ ಮಹೋತ್ಸವದಲ್ಲಿ ತಂಡದ ಕಲಾವಿದರು ಕೇವಲ ಅತಿಥಿಗಳಾಗಿ ಬರಲಿಲ್ಲ, ಬದಲಾಗಿ ಮನೆಯವರೇ ಆಗಿ ನಿಂತರು. ನಯನಾ, ಪ್ರವೀಣ್ ಜೈನ್, ಅನೀಶ್ ಪೂಜಾರಿ, ದಿವ್ಯಾ ಹಾಗೂ ತಂಡದ ಉಳಿದ ಕಲಾವಿದರು ಮದುವೆ ಮನೆಯ ಪ್ರತಿಯೊಂದು ಸಣ್ಣ ಕೆಲಸವನ್ನೂ ಜವಾಬ್ದಾರಿಯಿಂದ ಮಾಡಿದರು. ಅಣ್ಣನ ಸ್ಥಾನದಲ್ಲಿ ನಿಂತು ಕನ್ಯಾದಾನದ ಶಾಸ್ತ್ರಗಳಿಂದ ಹಿಡಿದು, ಆಶೀರ್ವದಿಸುವವರೆಗೂ ಎಲ್ಲವನ್ನೂ ಪ್ರೀತಿಯಿಂದ ಪೂರೈಸಿದರು.

ಬಾಂದವ್ಯಕ್ಕೆ ಹೊಸ ಭಾಷ್ಯ ಬರೆದ ಕಲಾವಿದರು

ರಿಯಾಲಿಟಿ ಶೋಗಳು ಮುಗಿದ ಮೇಲೆ ಎಲ್ಲರೂ ತಮ್ಮ ಕೆರಿಯರ್‌ನಲ್ಲಿ ಬ್ಯುಸಿಯಾಗುವುದು ಸಾಮಾನ್ಯ. ಆದರೆ ರಾಕೇಶ್ ಅವರ ಈ ಗೆಳೆಯರ ಬಳಗ ಮಾತ್ರ "ಬದುಕಿನಲ್ಲೂ ಜೊತೆಯಾಗಿ ನಿಲ್ಲುವುದೇ ನಿಜವಾದ ಸ್ನೇಹ" ಎಂದು ತೋರಿಸಿಕೊಟ್ಟಿದ್ದಾರೆ. ಈ ಮದುವೆಯ ಸುಂದರ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರು ಈ 'ಕಿಲಾಡಿ' ತಂಡದ ದೊಡ್ಡ ಗುಣಕ್ಕೆ ತಲೆಬಾಗಿದ್ದಾರೆ.

ಇಂದು ಆ ಮದುವೆ ಮಂಟಪದಲ್ಲಿ ರಾಕೇಶ್ ಪೂಜಾರಿ ದೈಹಿಕವಾಗಿ ಇಲ್ಲದಿರಬಹುದು, ಆದರೆ ಅವರ ಗೆಳೆಯರ ರೂಪದಲ್ಲಿ ಅವರು ಅಲ್ಲೇ ಇದ್ದು ತಂಗಿಯನ್ನು ಹರಸಿದ್ದಾರೆ ಎಂಬುದು ಎಲ್ಲರ ನಂಬಿಕೆ. ಅಣ್ಣನಿಲ್ಲದ ಕೊರತೆಯನ್ನು ಪ್ರೀತಿಯಿಂದ ತುಂಬಿದ ಈ ಗೆಳೆಯರ ಬಳಗಕ್ಕೆ ಹ್ಯಾಟ್ಸ್ ಆಫ್.

 

Latest News