ಥಿಯೇಟರ್‌ನಲ್ಲಿ ಶಿವಣ್ಣನ ಎಂಟ್ರಿಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್ - ಫಸ್ಟ್ ಹಾಫ್ ಹೈಲೈಟ್ಸ್ ಇಲ್ಲಿದೆ ನೋಡಿ!!

ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಜಾನ್ಹವಿ ಕಪೂರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ‘ಆರ್‌ಆರ್‌ಆರ್’ ಸಿನಿಮಾದ ಗ್ಲೋಬಲ್ ಸಕ್ಸಸ್ ನಂತರ ರಾಮ್ ಚರಣ್ ನಟನೆಯ ಮುಂದಿನ ಸಿನಿಮಾಗಳು ಅಷ್ಟಾಗಿ ಸದ್ದು ಮಾಡದ ಕಾರಣ, ಚರಣ್ ಕೆರಿಯರ್‌ಗೆ ಈ ಸಿನಿಮಾ ಬಲು ಮುಖ್ಯವಾಗಿದೆ. ‘ಉಪ್ಪೇನಾ’ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶನದ ಈ ಗ್ರಾಮೀಣ ಕ್ರೀಡಾ ಆಧಾರಿತ ಸಿನಿಮಾದ ಮೊದಲಾರ್ಧ (First Half) ಹೇಗಿದೆ? ಇಂಟರ್ವೆಲ್ ಟ್ವಿಸ್ಟ್ ಏನು? ಕಂಪ್ಲೀಟ್ ಮಾಹಿತಿ ಇಲ್ಲಿದೆ.

'ಪೆದ್ದಿ' ಫಸ್ಟ್ ಹಾಫ್ ರಿವ್ಯೂ
'ಪೆದ್ದಿ' ಫಸ್ಟ್ ಹಾಫ್ ರಿವ್ಯೂ

ಕತೆ ಎಲ್ಲೂ ಶುರುವಾಗುತ್ತೆ? ಏನಿದೆ ಮೊದಲಾರ್ಧದಲ್ಲಿ?

‘ಪೆದ್ದಿ’ ಸಿನಿಮಾ ಕೇವಲ ಒಂದು ಕ್ರೀಡೆಯ ಕತೆಯಲ್ಲ, ಇದು ಹಳ್ಳಿಯ ಯುವಕನೊಬ್ಬ ತನ್ನ ಅಸ್ತಿತ್ವ ಮತ್ತು ಐಡೆಂಟಿಟಿಗಾಗಿ ನಡೆಸುವ ಹೋರಾಟದ ಕತೆ. ಸರಿಯಾದ ರಸ್ತೆಯೂ ಇಲ್ಲದ, ನಕ್ಷೆಯಲ್ಲೂ ಗುರುತಿಸಲಾಗದ ಬೆಟ್ಟದ ಬುಡದ ಒಂದು ಪುಟ್ಟ ಊರಿನಿಂದ ಕತೆ ಆರಂಭವಾಗುತ್ತದೆ. ಸಿನಿಮಾದ ಮೊದಲಾರ್ಧವನ್ನು ನಿರ್ದೇಶಕರು ನಾಯಕನ ಮಾಸ್ ಎಂಟ್ರಿ, ಹಳ್ಳಿಯ ವಾತಾವರಣ, ನಾಯಕಿಯ ಗ್ಲಾಮರ್ ಮತ್ತು ಪ್ರಮುಖ ಪಾತ್ರಗಳ ಪರಿಚಯಕ್ಕೆ ಹೆಚ್ಚಾಗಿ ಬಳಸಿಕೊಂಡಿದ್ದಾರೆ.

ನಾಯಕ ಪೆದ್ದಿ (ರಾಮ್ ಚರಣ್) ಆರಂಭದಲ್ಲಿ ಹೊಟ್ಟೆಪಾಡಿಗಾಗಿ, ಅಂದರೆ ಕೂಲಿಗಾಗಿ ಕ್ರಿಕೆಟ್ ಆಡುವ ಯುವಕನಾಗಿ ಕಾಣಿಸಿಕೊಳ್ಳುತ್ತಾನೆ. ರಾಮ್ ಚರಣ್ ತಮ್ಮ ಆಕ್ಷನ್, ಮ್ಯಾಜಿಕಲ್ ಡ್ಯಾನ್ಸ್ ಮತ್ತು ಎಮೋಷನಲ್ ದೃಶ್ಯಗಳ ಮೂಲಕ ಫಸ್ಟ್ ಹಾಫ್‌ನಲ್ಲಿ ಒನ್ ಮ್ಯಾನ್ ಶೋ ನಡೆಸಿದ್ದಾರೆ. ಇನ್ನು ಬಾಲಿವುಡ್ ಬ್ಯೂಟಿ ಜಾನ್ಹವಿ ಕಪೂರ್ ಎಂಟ್ರಿ ಸಖತ್ ಕ್ಯೂಟ್ ಆಗಿ ಮೂಡಿಬಂದಿದೆ. ಆದರೆ, ಮೊದಲಾರ್ಧದಲ್ಲಿ ನಾಯಕಿಗೆ ಕೇವಲ ಗ್ಲಾಮರ್ ಗೊಂಬೆಯಾಗಿ ಇರಲಷ್ಟೇ ಸ್ಕೋಪ್ ಸಿಕ್ಕಿದೆ. ಟ್ವಿಸ್ಟ್ ಏನೆಂದರೆ, ಇಡೀ ಫಸ್ಟ್ ಹಾಫ್ ಮುಗಿಯುವವರೆಗೂ ನಾಯಕ ಮತ್ತು ನಾಯಕಿ ಇಬ್ಬರೂ ಮುಖಾಮುಖಿ ಭೇಟಿಯಾಗುವುದೇ ಇಲ್ಲ! ಪೆದ್ದಿ ಎಂಬ ವ್ಯಕ್ತಿ ಇದ್ದಾನೆ ಅನ್ನೋದು ಕೂಡ ಇಂಟರ್ವೆಲ್ ಬರುವವರೆಗೂ ನಾಯಕಿಗೆ ಗೊತ್ತಿರುವುದಿಲ್ಲ.

ಶಿವಣ್ಣನ ಎಂಟ್ರಿ ಮತ್ತು ಇಂಟರ್ವೆಲ್ ಟ್ವಿಸ್ಟ್!

ನಮ್ಮ ಹೆಮ್ಮೆಯ ಶಿವಣ್ಣನ ಪಾತ್ರ ಈ ಸಿನಿಮಾದ ದೊಡ್ಡ ಹೈಲೈಟ್. ಮೊದಲಾರ್ಧದಲ್ಲಿ ಶಿವಣ್ಣನಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಅಥವಾ ದೃಶ್ಯಗಳು ಇಲ್ಲದಿದ್ದರೂ, ಬಂದ ಕೆಲವೇ ನಿಮಿಷಗಳಲ್ಲಿ ಥಿಯೇಟರ್‌ನಲ್ಲಿ ಹಬ್ಬ ಸೃಷ್ಟಿಸುತ್ತಾರೆ. ಇಡೀ ಸಿನಿಮಾದ ಕತೆಗೆ ಮತ್ತು ನಾಯಕನ ಜೀವನಕ್ಕೆ ದೊಡ್ಡ ತಿರುವು ಕೊಡುವುದೇ ಶಿವಣ್ಣನ ಕ್ಯಾರೆಕ್ಟರ್.

ಅಲ್ಲಿಯವರೆಗೆ ಕೇವಲ ಗಲ್ಲಿ ಕ್ರಿಕೆಟ್ ಆಡಿಕೊಂಡಿದ್ದ ನಾಯಕ, ಇಂಟರ್ವೆಲ್ ಬರುವ ಹೊತ್ತಿಗೆ ಶಿವಣ್ಣನ ಪಾತ್ರದ ಎಂಟ್ರಿಯಿಂದಾಗಿ ತನ್ನ ಅಸಲಿ ಗುರಿ ಏನೆಂಬುದನ್ನು ಅರಿತುಕೊಳ್ಳುತ್ತಾನೆ. ಇಂಟರ್ವೆಲ್ ಬ್ಲಾಕ್‌ನಲ್ಲಿ ಪೆದ್ದಿ ಬ್ಯಾಟ್ ಬಿಟ್ಟು ನೇರವಾಗಿ ಧೂಳೆಬ್ಬಿಸುವ 'ಕುಸ್ತಿ ಅಖಾಡ'ಕ್ಕೆ ಎಂಟ್ರಿ ಕೊಡುವ ಸೀನ್ ಸಖತ್ ರೋಮಾಂಚನಕಾರಿಯಾಗಿದೆ. ಈ ಮಾಸ್ ಟ್ವಿಸ್ಟ್ ದ್ವಿತೀಯಾರ್ಧದ (Second Half) ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡುತ್ತದೆ.

ಪೋಷಕ ನಟರ ಆಕ್ಟಿಂಗ್ ಮತ್ತು ಮ್ಯೂಸಿಕ್ ಮ್ಯಾಜಿಕ್

ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ ದಿವ್ಯೇಂದು ತಮ್ಮ ಕ್ರೂರ ನಟನೆಯಿಂದ ಗಮನ ಸೆಳೆದರೆ, ತೆಲುಗಿನ ಖ್ಯಾತ ನಟ ಜಗಪತಿ ಬಾಬು ಅವರ ಪೋಷಕ ಪಾತ್ರ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ. ಆದರೆ, ಹಿರಿಯ ನಟ ಬೊಮನ್ ಇರಾನಿ ಅವರಿಗೆ ಮೊದಲಾರ್ಧದಲ್ಲಿ ಅಷ್ಟಾಗಿ ಕೆಲಸವಿಲ್ಲ.

ಇನ್ನು ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಅದು ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಮ್ಯೂಸಿಕ್. ಫಸ್ಟ್ ಹಾಫ್‌ನಲ್ಲಿ ಬರುವ ಎರಡು ಹಾಡುಗಳು ಕೇಳಲು ಮತ್ತು ನೋಡಲು ಸಖತ್ ಆಗಿವೆ. ಅದರಲ್ಲೂ ರೆಹಮಾನ್ ನೀಡಿರುವ ಮಾಸ್ ಹಿನ್ನೆಲೆ ಸಂಗೀತ (BGM) ಥಿಯೇಟರ್‌ನಲ್ಲಿ ಸೀಟಿನ ತುದಿಗೆ ಬಂದು ಕೂರುವಂತೆ ಮಾಡುತ್ತದೆ. ಮೈತ್ರಿ ಮೂವಿ ಮೇಕರ್ಸ್ ಭಾರಿ ಬಜೆಟ್‌ನಲ್ಲಿ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಿಸಿದೆ. ಒಟ್ಟಾರೆಯಾಗಿ ‘ಪೆದ್ದಿ’ ಮೊದಲಾರ್ಧ ಕಮರ್ಷಿಯಲ್ ಎಲಿಮೆಂಟ್‌ಗಳಿಂದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದು, ಅಸಲಿ ಆಟ ಸೆಕೆಂಡ್ ಹಾಫ್‌ನಲ್ಲಿ ಶುರುವಾಗಲಿದೆ ಎಂಬ ಭರವಸೆ ನೀಡುತ್ತದೆ.

Latest News