Apr 9, 2026 Languages : ಕನ್ನಡ | English

10 ನಿಮಿಷ, 160 ಬಾಂಬ್‌ಗಳು, 250 ಅಂತ್ಯ - ಇಸ್ರೇಲ್ ಕೃತ್ಯಕ್ಕೆ ಮಿಯಾ ಖಲೀಫಾ ಆಕ್ರೋಶದ ವಿಡಿಯೋ ವೈರಲ್!!

ಜಗತ್ತಿನಾದ್ಯಂತ ಸದಾ ಸುದ್ದಿಯಲ್ಲಿರುವ ಮಿಯಾ ಖಲೀಫಾ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಆದರೆ, ಈ ಬಾರಿ ಅದು ಯಾವುದೇ ಸಿನಿಮಾ ಅಥವಾ ಫೋಟೋಶೂಟ್ ಬಗ್ಗೆಯಲ್ಲ, ಬದಲಾಗಿ ತಮ್ಮ ತಾಯ್ನಾಡು ಲೆಬನಾನ್ ಮೇಲೆ ನಡೆಯುತ್ತಿರುವ ಭೀಕರ ದಾಳಿಯ ಬಗ್ಗೆ ಅವರು ಆಕ್ರೋಶ ಹೊರಹಾಕಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಮಿಯಾ, ಲೆಬನಾನ್ ಸ್ಥಿತಿ ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಮೆರಿಕ ಸರ್ಕಾರದ ವಿರುದ್ಧ ಕೆಂಡಾಮಂಡಲವಾದ ಮಿಯಾ ಖಲೀಫಾ
ಅಮೆರಿಕ ಸರ್ಕಾರದ ವಿರುದ್ಧ ಕೆಂಡಾಮಂಡಲವಾದ ಮಿಯಾ ಖಲೀಫಾ

ಇಸ್ರೇಲ್ ಮತ್ತು ಲೆಬನಾನ್ ನಡುವೆ ಯುದ್ಧ ನಿಲ್ಲಲಿದೆ ಎಂದು ಇಡೀ ಜಗತ್ತು ಭಾವಿಸಿತ್ತು. ಆದರೆ, ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಭೀಕರವಾಗಿತ್ತು. ಕೇವಲ 10 ನಿಮಿಷಗಳಲ್ಲಿ 160ಕ್ಕೂ ಹೆಚ್ಚು ಬಾಂಬ್‌ಗಳನ್ನು ಲೆಬನಾನ್ ಮೇಲೆ ಸುರಿಸಲಾಗಿದೆ. ಈ ದಾಳಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ಕೇಳಿ ಮಿಯಾ ಖಲೀಫಾ ಆಘಾತಕ್ಕೊಳಗಾಗಿದ್ದಾರೆ.

"ಇದು ಅತ್ಯಂತ ನೋವಿನ ದಿನ"

ಮೂಲತಃ ಲೆಬನಾನ್ ದೇಶದವರಾದ ಮಿಯಾ ಖಲೀಫಾ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ವಿಡಿಯೋದಲ್ಲಿ ಮಾತನಾಡುತ್ತಾ, "ಇದು ನನ್ನ ಬದುಕಿನ ಅತ್ಯಂತ ಕಪ್ಪು ದಿನ. ಇಷ್ಟು ವರ್ಷಗಳಲ್ಲಿ ನಾವು ಇಂತಹ ದೃಶ್ಯಗಳನ್ನು ಎಂದೂ ನೋಡಿಲ್ಲ. ಇದು ಕೇವಲ ದಾಳಿಯಲ್ಲ, ಇದೊಂದು ನರಮೇಧ. ಶಾಲೆಗಳು, ಆಸ್ಪತ್ರೆಗಳು, ಮತ್ತು ಸ್ಮಶಾನಗಳನ್ನೂ ಬಿಡದೆ ಗುರಿ ಮಾಡಲಾಗುತ್ತಿದೆ. ಸಾರ್ವಜನಿಕರು ವಾಸಿಸುವ ಜಾಗಗಳ ಮೇಲೆ ಬಾಂಬ್ ಹಾಕುತ್ತಿರುವುದು ಎಂತಹ ಕ್ರೌರ್ಯ?" ಎಂದು ಪ್ರಶ್ನಿಸಿದ್ದಾರೆ.

ಅಮೆರಿಕ ಸರ್ಕಾರದ ವಿರುದ್ಧ ಆಕ್ರೋಶ

ಮಿಯಾ ಅವರು ಕೇವಲ ದಾಳಿಯನ್ನು ಮಾತ್ರ ಖಂಡಿಸಿಲ್ಲ, ಬದಲಾಗಿ ತಾವು ನೆಲೆಸಿರುವ ಅಮೆರಿಕ ದೇಶದ ನೀತಿಯ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ಅಮೆರಿಕದಲ್ಲಿ ಕಷ್ಟಪಟ್ಟು ದುಡಿದು ತೆರಿಗೆ (Tax) ಪಾವತಿಸುತ್ತಿದ್ದೇನೆ. ಆದರೆ ಆ ಹಣವನ್ನು ಅಮೆರಿಕ ಸರ್ಕಾರ ನನ್ನದೇ ತಾಯ್ನಾಡನ್ನು ಧ್ವಂಸ ಮಾಡಲು ಬಳಸುತ್ತಿದೆ. ನನ್ನ ದೇಶದ ಜನರನ್ನು ಕಲ್ಲೆತ್ತಲು ನನ್ನ ತೆರಿಗೆ ಹಣವೇ ಬಳಕೆಯಾಗುತ್ತಿರುವುದು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಭಾವುಕರಾಗಿ ನುಡಿದಿದ್ದಾರೆ.

ಸಾಮಾನ್ಯವಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮಿಯಾ ಖಲೀಫಾ, ಈ ಬಾರಿ ತಮಗೆ ಪದಗಳೇ ಸಿಗುತ್ತಿಲ್ಲ ಎಂದಿದ್ದಾರೆ. "ಇಷ್ಟು ದಿನ ನಾನು ಬೇರೆಯವರ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದೆ. ಆದರೆ ನನ್ನ ದೇಶದ ಸ್ಥಿತಿ ಇಂದು ಅಧೋಗತಿಗೆ ಹೋಗಿರುವುದನ್ನು ನೋಡಿ ನಾನೇ ನೇರವಾಗಿ ಮಾತನಾಡುತ್ತಿದ್ದೇನೆ. ಇದು ಪ್ರತಿಯೊಬ್ಬ ಲೆಬನಾನ್ ಪ್ರಜೆಯ ನೋವು," ಎಂದಿದ್ದಾರೆ.

ಯುದ್ಧ ಎಂಬುದು ಯಾವತ್ತೂ ಸಾವು-ನೋವುಗಳನ್ನೇ ತರುತ್ತದೆ. ಮಿಯಾ ಖಲೀಫಾ ಅವರ ಈ ವಿಡಿಯೋ ಯುದ್ಧದ ಭೀಕರತೆಯನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಿದೆ. ಸೆಲೆಬ್ರಿಟಿಗಳು ತಮ್ಮ ಮೂಲವನ್ನು ಮರೆಯದೆ ದೇಶಕ್ಕಾಗಿ ಧ್ವನಿ ಎತ್ತುತ್ತಿರುವುದು ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಲೆಬನಾನ್‌ನಲ್ಲಿ ಶಾಂತಿ ಮರಳಲಿ ಎಂಬುದು ಎಲ್ಲರ ಆಶಯ.

Latest News