"17 ವರ್ಷ ಮೂರ್ಖಳಂತೆ ಕಾಲ ಕಳೆದಿದ್ದೆ" - ಮೂರು ಮದುವೆಗಳ ವಿಫಲತೆಯ ಬಗ್ಗೆ ನಟಿ ಮೀರಾ ವಾಸುದೇವನ್ ಕಣ್ಣೀರು!!

ಸಿನಿಮಾ ರಂಗದಲ್ಲಿ ಮಿಂಚುವ ತಾರೆಯರ ಜೀವನ ಅಂದಮೇಲೆ ಅಲ್ಲಿ ಬಣ್ಣದ ಲೋಕದಷ್ಟೇ ಕರಾಳ ಪಾರ್ಶ್ವಗಳೂ ಇರುತ್ತವೆ. ಕೆಲವೊಮ್ಮೆ ತಪ್ಪು ನಿರ್ಧಾರಗಳು ಜೀವನವನ್ನೇ ಹೇಗೆ ಬದಲಿಸಿಬಿಡುತ್ತವೆ ಅನ್ನೋದಕ್ಕೆ ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಖ್ಯಾತ ನಟಿ ಮೀರಾ ವಾಸುದೇವನ್ ಅವರ ಜೀವನವೇ ಸಾಕ್ಷಿ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮೀರಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಡಿರುವ ಮಾತುಗಳು ಈಗ ಎಲ್ಲೆಡೆ ಚರ್ಚೆಯಾಗುತ್ತಿವೆ.

ಸಂಬಂಧಗಳಿಗಾಗಿ ಜೀವನವನ್ನೇ ಅರ್ಪಿಸಿದ ನಟಿ | Photo Credit: https://www.instagram.com/iamdhanyavarma/
ಸಂಬಂಧಗಳಿಗಾಗಿ ಜೀವನವನ್ನೇ ಅರ್ಪಿಸಿದ ನಟಿ | Photo Credit: https://www.instagram.com/iamdhanyavarma/

ಯಾರು ಈ ಮೀರಾ ವಾಸುದೇವನ್?

2003ರಲ್ಲಿ ಮಿಲಿಂದ್ ಸೋಮನ್ ಜೊತೆ 'ರೂಲ್ಸ್: ಪ್ಯಾರ್ ಕಾ ಸೂಪರ್‌ಹಿಟ್ ಫಾರ್ಮುಲಾ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಮೀರಾ, ನಂತರ ಮಲಯಾಳಂ ಚಿತ್ರರಂಗದತ್ತ ಮುಖ ಮಾಡಿದರು. 2005ರಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ನಟಿಸಿದ 'ತನ್ಮತ್ರ' ಸಿನಿಮಾ ಇವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು. ಆದರೆ, ವೃತ್ತಿಜೀವನದಲ್ಲಿ ಯಶಸ್ಸಿನ ಏಣಿ ಹತ್ತುತ್ತಿದ್ದ ಮೀರಾ ಅವರಿಗೆ ವೈಯಕ್ತಿಕ ಜೀವನ ಮಾತ್ರ ಅಷ್ಟೇನೂ ಸುಖಕರವಾಗಿರಲಿಲ್ಲ.

ಮೂರು ಮದುವೆ, 17 ವರ್ಷದ ವ್ಯರ್ಥ ಕಾಲ

ಸದ್ಯ 44 ವರ್ಷದ ಮೀರಾ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಧನ್ಯ ವರ್ಮಾ ಅವರ ಜೊತೆಗಿನ ಮಾತುಕತೆಯಲ್ಲಿ ಅವರು ತಮ್ಮ ಮೂರು ವಿಫಲ ವಿವಾಹಗಳ ಬಗ್ಗೆ ಮಾತನಾಡುತ್ತಾ, "ನಾನು ನನ್ನ ಜೀವನದ ಅಮೂಲ್ಯವಾದ 17 ವರ್ಷಗಳನ್ನು ಮೂರ್ಖತನದಿಂದ ವ್ಯರ್ಥ ಮಾಡಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೀರಾ ಹೇಳುವ ಪ್ರಕಾರ, "ನಾನು ನನ್ನ ಮಗನಿಗೂ ಇದನ್ನೇ ಹೇಳುತ್ತಿರುತ್ತೇನೆ. ಆ 17 ವರ್ಷಗಳನ್ನು ನಾನು ನನ್ನ ಫಿಟ್ನೆಸ್, ಸಿನಿಮಾ ಅಥವಾ ನನಗೆ ಇಷ್ಟವಾದ ಕೆಲಸಗಳ ಮೇಲೆ ಗಮನ ಕೊಟ್ಟಿದ್ದರೆ ಜೀವನದಲ್ಲಿ ಇವತ್ತು ದೊಡ್ಡ ಸಾಧನೆ ಮಾಡಬಹುದಿತ್ತು. ಆದರೆ ನಾನು ನನ್ನನ್ನು ಗೌರವಿಸದ ಅಥವಾ ಗಂಭೀರವಾಗಿ ಪರಿಗಣಿಸದ ವ್ಯಕ್ತಿಗಳಿಗಾಗಿ ನನ್ನ ಸಮಯ ಮತ್ತು ಜೀವನವನ್ನು ಮುಡಿಪಾಗಿಟ್ಟೆ" ಎಂದಿದ್ದಾರೆ.

ಕುಟುಂಬದ ಜೊತೆ ಇರಬೇಕಾದ ಸಮಯವದು!

ಬದುಕಿನ ಈ ಹಂತದಲ್ಲಿ ಮೀರಾಗೆ ಅನಿಸುತ್ತಿರುವುದು ಒಂದೇ - "ನಾನು ನನ್ನ ತಂದೆ, ತಾಯಿ ಮತ್ತು ಸಹೋದರಿಯ ಜೊತೆ ಕಳೆಯಬೇಕಿದ್ದ ಸಮಯವನ್ನ ಸಂಬಂಧಗಳಿಗಾಗಿ ವ್ಯರ್ಥ ಮಾಡಿದೆ." ತನ್ನನ್ನು ತಾನು ಕಳೆದುಕೊಂಡು ಬೇರೆಯವರಿಗಾಗಿ ಬದುಕಲು ಹೋದ ಮೀರಾ, ಇಂದು ಆ ದಿನಗಳನ್ನ ನೆನೆದು ಮರುಗುತ್ತಿದ್ದಾರೆ. ಜೀವನದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಅವಕಾಶಗಳಿದ್ದರೂ, ಈ ವಿವಾಹಗಳ ವೈಫಲ್ಯ ಅವರ ವೃತ್ತಿಜೀವನಕ್ಕೂ ತಡೆಯೊಡ್ಡಿತು ಎಂಬುದು ಕಟು ಸತ್ಯ.

ಮೀರಾ ಅವರ ಮದುವೆಯ ಜರ್ನಿ ಹೀಗಿತ್ತು

ಮೀರಾ ಅವರ ವೈಯಕ್ತಿಕ ಜೀವನದ ಹಾದಿ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು:

ಮೊದಲ ಮದುವೆ - 2005ರಲ್ಲಿ ಖ್ಯಾತ ಛಾಯಾಗ್ರಾಹಕ ಅಶೋಕ್ ಕುಮಾರ್ ಅವರ ಮಗ ವಿಶಾಲ್ ಅಗರ್ವಾಲ್ ಅವರನ್ನು ಮದುವೆಯಾದರು. ಆದರೆ 2010ರಲ್ಲಿ ಈ ದಂಪತಿ ಅಧಿಕೃತವಾಗಿ ಬೇರ್ಪಟ್ಟರು.

ಎರಡನೇ ಮದುವೆ - 2012ರಲ್ಲಿ ಮಲಯಾಳಂ ನಟ ಜಾನ್ ಕೊಕ್ಕೆನ್ ಅವರ ಜೊತೆ ಸಪ್ತಪದಿ ತುಳಿದರು. ಈ ಜೋಡಿಗೆ ಒಬ್ಬ ಗಂಡು ಮಗನಿದ್ದಾನೆ. ಆದರೆ ಈ ಸಂಬಂಧ ಕೂಡ ಹೆಚ್ಚು ಕಾಲ ಉಳಿಯಲಿಲ್ಲ, 2016ರಲ್ಲಿ ಇವರು ವಿಚ್ಛೇದನ ಪಡೆದರು.

ಮೂರನೇ ಮದುವೆ - ನಂತರ 2024ರ ಮೇ ತಿಂಗಳಲ್ಲಿ ಛಾಯಾಗ್ರಾಹಕ ವಿಪಿನ್ ಪುತಿಯಂಕಮ್ ಅವರನ್ನು ವರಿಸಿದರು. ಆದರೆ ವಿಧಿಯಾಟ ಬೇರೆಯೇ ಇತ್ತು, ಕೇವಲ ಒಂದು ವರ್ಷದ ಒಳಗೆ ಅಂದರೆ 2025ರ ಆಗಸ್ಟ್‌ನಲ್ಲಿ ಈ ಸಂಬಂಧಕ್ಕೂ ಅವರು ವಿದಾಯ ಹೇಳಿದರು.

ಈಗ ಹೇಗಿದ್ದಾರೆ ಮೀರಾ?

ಹಿಂದಿನ ಕಹಿ ನೆನಪುಗಳನ್ನ ಮೆಲುಕು ಹಾಕಿದರೂ, ಮೀರಾ ಈಗಿನ ಜೀವನದ ಬಗ್ಗೆ ತೃಪ್ತಿ ಹೊಂದಿದ್ದಾರೆ. "ನಾನು ತಪ್ಪುಗಳನ್ನು ಮಾಡಿದ್ದೇನೆ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಈಗ ಅದೆಲ್ಲವನ್ನೂ ಮರೆಮಾಚುವ ಅಗತ್ಯವಿಲ್ಲ. ನಾನು ಈಗ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ ಮತ್ತು ಜೀವನದ ಒಂದು ಸುಂದರ ಹಂತದಲ್ಲಿದ್ದೇನೆ" ಎಂದು ಅವರು ಸಮಾಧಾನದಿಂದ ಹೇಳುತ್ತಾರೆ.

'ಒರುವನ್', 'ಕುಟ್ಟಿಮಾಮ' ಅಂತಹ ಸಿನಿಮಾಗಳ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿರುವ ಮೀರಾ, ಕಳೆದುಹೋದ ಸಮಯದ ಬಗ್ಗೆ ಮರುಗುವುದಕ್ಕಿಂತಲೂ, ಮುಂದೆ ಸಿಗುವ ಅವಕಾಶಗಳನ್ನ ಬಳಸಿಕೊಂಡು ಬದುಕಬೇಕು ಎಂಬ ನಿರ್ಧಾರಕ್ಕೆ ಬಂದಂತಿದೆ.

ಬಣ್ಣದ ಲೋಕದ ಮಿಂಚಿನ ಹಿಂದೆ ಇಂತಹದ್ದೊಂದು ನೋವಿನ ಕಥೆ ಇರುತ್ತದೆ ಎಂದು ಯಾರೂ ಊಹಿಸಿರುವುದಿಲ್ಲ. ಮೀರಾ ಅವರ ಈ ಮಾತುಗಳು ಜೀವನದಲ್ಲಿ ನಿರ್ಧಾರಗಳನ್ನು ತಗಲುವಾಗ ಎಷ್ಟು ಎಚ್ಚರಿಕೆಯಿಂದ ಇರಬೇಕು ಅನ್ನೋದಕ್ಕೆ ಒಂದು ದೊಡ್ಡ ಪಾಠ.

Latest News