ಚಿತ್ರರಂಗದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಬಹುಭಾಷಾ ಹಿರಿಯ ನಿರ್ದೇಶಕ ಮತ್ತು ಅದ್ಭುತ ನಟ ಭಾರತಿರಾಜ (86) ಇವತ್ತು (ಜೂನ್ 10) ಮುಂಜಾನೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಇಡೀ ದಕ್ಷಿಣ ಭಾರತ ಚಿತ್ರರಂಗ ಕಣ್ಣೀರಲ್ಲಿ ಮುಳುಗಿದ್ದು, ಗಣ್ಯರು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.
ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ್ದ ಭಾರತಿರಾಜ
ಕನ್ನಡ ಚಿತ್ರರಂಗದ ದಂತಕಥೆ, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೂ ಭಾರತಿರಾಜ ಅವರಿಗೂ ಒಂದು ವಿಶೇಷವಾದ ನಂಟಿತ್ತು. ಭಾರತಿರಾಜ ಅವರು ಸಿನಿಮಾ ರಂಗಕ್ಕೆ ಬಂದು ದೊಡ್ಡ ಹೆಸರು ಮಾಡುವ ಮುನ್ನ, ನಮ್ಮ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಪುಟ್ಟಣ್ಣ ಅವರ ಗರಡಿಯಲ್ಲೇ ಭಾರತಿರಾಜ ಅವರು ಸಿನಿಮಾ ನಿರ್ದೇಶನದ ಸೂಕ್ಷ್ಮಗಳನ್ನು, ಕಥೆ ಹೇಳುವ ಶೈಲಿಯನ್ನು ಕಲಿತುಕೊಂಡಿದ್ದರು. ಆದರೆ, ಒಂದು ಬೇಸರದ ಸಂಗತಿಯೆಂದರೆ, ಕನ್ನಡದ ಗುರುವಿನ ಬಳಿ ಕೆಲಸ ಕಲಿತರೂ ಭಾರತಿರಾಜ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕನ್ನಡದಲ್ಲಿ ಒಂದೂ ಸಿನಿಮಾ ನಿರ್ದೇಶನ ಮಾಡಲಿಲ್ಲ.
ತಮಿಳು ಮತ್ತು ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳ ಸರದಾರ
1977ರಲ್ಲಿ ತೆರೆಕಂಡ '16 ವಯತಿನಿಲೆ' (16 Vayathinile) ಅನ್ನೋ ಸೂಪರ್ ಹಿಟ್ ತಮಿಳು ಚಿತ್ರದ ಮೂಲಕ ಭಾರತಿರಾಜ ಅವರು ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಲಗ್ಗೆ ಇಟ್ಟರು. ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಕಂಡ ಅವರು, ಆಮೇಲೆ ಕಮರ್ಷಿಯಲ್ ಮತ್ತು ಕಲಾತ್ಮಕ ಸಿನಿಮಾಗಳ ಮೂಲಕ ಹೊಸ ಅಲೆ ಸೃಷ್ಟಿಸಿದರು.
ತಮಿಳಿನಲ್ಲಿ ಅವರು ನೀಡಿದ ಕೆಲವು ಪ್ರಮುಖ ಹಿಟ್ ಸಿನಿಮಾಗಳು ಇಲ್ಲಿವೆ:
- ಕಿಲಕ್ಕೆ ಪೋಗಮ್ ರೈಲ್
- ಸಿಗಪ್ಪು ರೋಜಕ್ಕಲ್
- ಅಲೈಗಲ್ ಒಯಿವತಿಲ್ಲೈ
- ಕಾದಲ್ ಓವಿಯಂ
- ಮುದಲ್ ಮರಿಯಥೈ
ಕೇವಲ ತಮಿಳು ಮಾತ್ರವಲ್ಲದೆ, ತೆಲುಗು ಚಿತ್ರರಂಗದಲ್ಲೂ ಭಾರತಿರಾಜ ಅವರು ತಮ್ಮದೇ ಆದ ಮುದ್ರೆ ಒತ್ತಿದ್ದಾರೆ. ತೆಲುಗು ಪ್ರೇಕ್ಷಕರಿಗೆ ಹಲವು ಕ್ಲಾಸಿಕ್ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆ ಇವರದ್ದು. 'ಸೀತಕೋಕ ಚಿಲುಕ', 'ಆರಾಧನಾ', 'ಜಮದಗ್ನಿ', 'ಈತರಂ ಇಲ್ಲು', 'ಎರ್ರಾ ಗುಲಾಬಿಲು', 'ಟಿಕ್ ಟಿಕ್ ಟಿಕ್', 'ಕೊತ್ತ ಜೀವನಲು' ಮತ್ತು 'ಯುವತರಂ ಪಿರಿದಿಂಡಿ' ನಂತಹ ಅದ್ಭುತ ಚಿತ್ರಗಳನ್ನು ಅವರು ತೆಲುಗಿನಲ್ಲಿ ನಿರ್ದೇಶಿಸಿದ್ದರು.
ನಟನಾಗಿಯೂ ಸೈ ಎನಿಸಿಕೊಂಡಿದ್ದ ದಂತಕಥೆ
ಭಾರತಿರಾಜ ಅವರು ಕೇವಲ ಕ್ಯಾಮೆರಾ ಹಿಂದೆ ನಿಂತು ಆಕ್ಷನ್ ಕಟ್ ಹೇಳ ಅಷ್ಟೇ ಸೀಮಿತವಾಗಿರಲಿಲ್ಲ. ಅವರು ಕ್ಯಾಮೆರಾ ಮುಂದೆ ಬಂದು ನಟನಾಗಿಯೂ ತಮ್ಮ ನಟನಾ ಚಾತುರ್ಯ ಪ್ರದರ್ಶಿಸಿದ್ದರು. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 2020 ರಲ್ಲಿ ಬಿಡುಗಡೆಯಾದ 'ಮೀಂದುಮ್ ಒರು ಮರಿಯಾದೈ' ಭಾರತಿರಾಜ ಅವರು ನಿರ್ದೇಶಿಸಿದ ಕೊನೆಯ ಚಿತ್ರ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಪ್ರದರ್ಶನ ಕಂಡಿತ್ತು. ಇದರ ನಂತರ ಅವರು ಯಾವುದೇ ಹೊಸ ಸಿನಿಮಾ ನಿರ್ದೇಶನದ ಸಾಹಸಕ್ಕೆ ಕೈ ಹಾಕಲಿಲ್ಲ.
ಕೊನೆಗಾಲದಲ್ಲಿ ಕಾಡಿದ ಮಗನ ಅಗಲಿಕೆಯ ದುಃಖ
ಭಾರತಿರಾಜ ಅವರ ವೈಯಕ್ತಿಕ ಜೀವನದ ಕೊನೆಯ ದಿನಗಳು ಅಷ್ಟೇನು ಸುಖಕರವಾಗಿರಲಿಲ್ಲ. ಕಳೆದ ವರ್ಷವಷ್ಟೇ ಅವರ ಏಕೈಕ ಪುತ್ರ, ನಟ ಮತ್ತು ನಿರ್ದೇಶಕ ಮನೋಜ್ ಭಾರತಿರಾಜ ಹಠಾತ್ತನೆ ನಿಧನರಾಗಿದ್ದರು. ಬೆಳಯುತ್ತಿದ್ದ ಮಗನ ಈ ಅಕಾಲಿಕ ಸಾವು ಹಿರಿಯ ಜೀವ ಭಾರತಿರಾಜ ಅವರಿಗೆ ತಡೆಯಲಾಗದಷ್ಟು ಆಘಾತ ನೀಡಿತ್ತು. ಮಗನನ್ನು ಕಳೆದುಕೊಂಡ ದುಃಖದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಬೇಕಾಯಿತು. ಈ ತೀವ್ರ ಬೇಸರ ಮತ್ತು ದುಃಖವನ್ನು ಮರೆಯಲು ಅವರು ತಮ್ಮ ಕುಟುಂಬದವರ ಜೊತೆ ವಿದೇಶಕ್ಕೆ ತೆರಳಿ ಕೆಲವು ದಿನಗಳನ್ನು ಕಳೆದಿದ್ದರು. ಇತ್ತೀಚೆಗಷ್ಟೇ ವಿದೇಶದಿಂದ ಚೆನ್ನೈಗೆ ಮರಳಿದ್ದ ಅವರು, ಕೊನೆಗೂ ವಯೋಸಹಜ ಕಾಯಿಲೆಗಳಿಗೆ ಶರಣಾಗಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗ ಇವತ್ತು ಒಬ್ಬ ಶ್ರೇಷ್ಠ ಮಾರ್ಗದರ್ಶಕ, ನಟ ಮತ್ತು ತಾಂತ್ರಿಕ ನೈಪುಣ್ಯತೆ ಹೊಂದಿದ್ದ ಹಿರಿಯ ಚೇತನವನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ.