ನಟ ಕಿಚ್ಚ ಸುದೀಪ್ ಅವರ ವಿರುದ್ಧ ಬಿಗ್ ಬಾಸ್‌ನ ಮಾಜಿ ಸ್ಪರ್ಧಿ ಸತೀಶ್ ಸತತವಾಗಿ ಟೀಕೆಗಳನ್ನು ಮಾಡುತ್ತಿರುವುದು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಈ ವಿಷಯದಲ್ಲಿ ಸುದೀಪ್ ಅವರ ಅಭಿಮಾನಿಗಳಾದ ರಜತ್ ಮತ್ತು ವಿನಯ್ ಅವರು ನಟನ ಪರವಾಗಿ ನಿಂತಿದ್ದು, ಸತೀಶ್‌ಗೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ. ಸತೀಶ್ ಈ ಬಗ್ಗೆ ರಜತ್ ಮತ್ತು ವಿನಯ್ ಅವರ ಮೇಲೆ ಪೊಲೀಸ್ ದೂರು ದಾಖಲಿಸಿದ್ದರೂ, ಇವರು ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ.
ಸತೀಶ್ ಅವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಅಲ್ಲದೆ, ಅವಹೇಳನಕಾರಿ ಹಾಡೊಂದನ್ನು ಪೋಸ್ಟ್ ಮಾಡಿ ಸುದೀಪ್ ಅವರನ್ನು ಟೀಕಿಸಿದ್ದರು. ಈ ರೀತಿಯ ನಡೆಗಳನ್ನು ರಜತ್ ಮತ್ತು ವಿನಯ್ ತೀವ್ರವಾಗಿ ಖಂಡಿಸಿದ್ದರು. ಸತೀಶ್ ಅವರ ಈ ವರ್ತನೆಯನ್ನು ಪ್ರಶ್ನಿಸಿದ ರಜತ್ ಮತ್ತು ವಿನಯ್, ಸುದೀಪ್ ಅವರ ಘನತೆಗೆ ಕುಂದು ತರುವ ಯಾವುದೇ ಕೆಲಸವನ್ನು ಸಹಿಸುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ನೀಡಿದ್ದರು.
‘ಯಮ ಕಿಂಕರರ ದಾಟಬೇಕು’: ರಜತ್ ಮತ್ತು ವಿನಯ್ ಎಚ್ಚರಿಕೆ
ಸತೀಶ್ ನೀಡಿದ ದೂರಿನ ನಂತರವೂ ರಜತ್ ಮತ್ತು ವಿನಯ್ ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ರಜತ್ ಅವರು ಸುದೀಪ್ ಅವರೊಂದಿಗಿನ ಸುಂದರ ಫೋಟೋವನ್ನು ಶೇರ್ ಮಾಡಿದ್ದು, ಅದರಲ್ಲಿ ಅತ್ಯಂತ ಆಕ್ರೋಶದ ದಾಟಿಯಲ್ಲಿ ಬರೆದುಕೊಂಡಿದ್ದಾರೆ.
"ನಮ್ಮ ಬಾದ್ಶಾ ಕಿಚ್ಚ ಸರ್ ಬಗ್ಗೆ ಮಾತನಾಡುವುದಿರಲಿ, ಅವರ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡಬೇಕು ಅಂದರೂ ಸಹ ಮೊದಲು ಈ ಯಮ ಕಿಂಕರರಾದ ನಮ್ಮನ್ನು ದಾಟಿ ಬರಬೇಕು," ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಪೋಸ್ಟ್ ಮೂಲಕ ನಾವು ಸದಾ ಕಿಚ್ಚ ಸುದೀಪ್ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ರಜತ್ ಅವರು ಮೊದಲಿನಿಂದಲೂ ಸುದೀಪ್ ಅವರ ದೊಡ್ಡ ಅಭಿಮಾನಿ. ಬಿಗ್ ಬಾಸ್ ಕಾರ್ಯಕ್ರಮದ ನಂತರ ಸುದೀಪ್ ಮತ್ತು ರಜತ್ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ಹಿಂದೆ ಒಂದು ಪ್ರಕರಣದಲ್ಲಿ ರಜತ್ ಮತ್ತು ವಿನಯ್ ಸಂಕಷ್ಟಕ್ಕೆ ಸಿಲುಕಿದಾಗ, ಸುದೀಪ್ ಅವರು ಸಹಾಯಹಸ್ತ ಚಾಚಿ ಅವರನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತದೆ.
ಈ ಉಪಕಾರವನ್ನು ರಜತ್ ಹಲವು ಬಾರಿ ಸಾರ್ವಜನಿಕವಾಗಿ ಸ್ಮರಿಸಿದ್ದಾರೆ. ತಮಗೆ ಆಪತ್ತಿನ ಕಾಲದಲ್ಲಿ ಸಹಾಯ ಮಾಡಿದ ನಟನ ಮೇಲೆ ಯಾರಾದರೂ ಹಗುರವಾಗಿ ಮಾತನಾಡಿದರೆ, ಅದನ್ನು ವಿರೋಧಿಸುವುದು ತಮ್ಮ ಕರ್ತವ್ಯ ಎಂದು ಅವರು ಭಾವಿಸಿದ್ದಾರೆ.
ಈಗ ವಿಷಯವು ಕಾನೂನು ಹೋರಾಟದ ಹಂತಕ್ಕೆ ತಲುಪಿದೆ. ಸತೀಶ್ ಅವರು ರಜತ್ ಮತ್ತು ವಿನಯ್ ಮೇಲೆ ಕೇಸ್ ಹಾಕಿದ್ದಾರೆ, ಆದರೆ ಇವರು ಮಾತ್ರ ಸುದೀಪ್ ಅವರ ಮೇಲಿನ ಗೌರವದಿಂದ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಅವರ ಅಭಿಮಾನಿಗಳು ಇವರಿಗೆ ಬೆಂಬಲ ಸೂಚಿಸುತ್ತಿದ್ದು, ಈ ವಿವಾದವು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲ. ಸುದೀಪ್ ಅವರು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಅಭಿಮಾನಿಗಳ ನಡುವಿನ ಈ ಕಿತ್ತಾಟವು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.