Mar 5, 2026 Languages : ಕನ್ನಡ | English

'ಕರ್ಣ' ಸೀರಿಯಲ್‌ನಲ್ಲಿ ಶುರುವಾಯ್ತು ಹೊಸ ಲವ್ ಸ್ಟೋರಿ?

ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ 'ಕರ್ಣ' ಈಗ ಹೊಸ ತಿರುವು ಪಡೆದುಕೊಂಡಿದೆ. ಇಷ್ಟು ದಿನ ತಂದೆಯನ್ನೇ ದೈವವೆಂದು ನಂಬಿದ್ದ ಕರ್ಣ, ಈಗ ಅದೇ ತಂದೆ ಮಾಡಿದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾನೆ. ಕಥೆಯಲ್ಲಿ ಇಂತಹ ಗಂಭೀರ ಸನ್ನಿವೇಶಗಳು ನಡೆಯುತ್ತಿರುವಾಗಲೇ, ಧಾರವಾಹಿಗೆ ಹೊಸ ಪಾತ್ರವೊಂದು ಎಂಟ್ರಿ ಕೊಟ್ಟು ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ.

'ಕರ್ಣ' ಧಾರವಾಹಿಯಲ್ಲಿ ಸಂಜಯ್‌ಗೆ 'ಚಿಲ್ಲರೆ ಡಾಕ್ಟರ್' ಪಟ್ಟ
'ಕರ್ಣ' ಧಾರವಾಹಿಯಲ್ಲಿ ಸಂಜಯ್‌ಗೆ 'ಚಿಲ್ಲರೆ ಡಾಕ್ಟರ್' ಪಟ್ಟ

ಕಥೆಯಲ್ಲಿ ಈಗ ಹೊಸದಾಗಿ ರಿಯಾ ಎಂಬ ಪಾತ್ರದ ಪರಿಚಯವಾಗಿದೆ. ಈ ಪಾತ್ರದಲ್ಲಿ ನಟಿ ಅಂಕಿತಾ ಜಯರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂಕಿತಾ ಅವರು ಚಿರಪರಿಚಿತ ಮುಖ. ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದ ಇವರು, ಈ ಹಿಂದೆ 'ಭೂಮಿಗೆ ಬಂದ ಭಗವಂತ' ಧಾರವಾಹಿಯಲ್ಲಿ ನವೀನ್ ಕೃಷ್ಣ ಅವರ ಮಗಳಾಗಿ ನಟಿಸಿ ಮನೆಮಾತಾಗಿದ್ದರು. ಈಗ 'ಕರ್ಣ' ಧಾರವಾಹಿಯಲ್ಲಿ ಚೂಟಿ ಹುಡುಗಿ ರಿಯಾ ಆಗಿ ಎಂಟ್ರಿ ಕೊಟ್ಟಿದ್ದಾರೆ. 

ಧಾರವಾಹಿಯ ವಿಲನ್ ರಮೇಶ್ ಮಗ ಸಂಜಯ್, ತಂದೆಯಂತೆಯೇ ಅಹಂಕಾರಿ ಮತ್ತು ಕೆಟ್ಟವನು. ದ್ವೇಷವನ್ನೇ ತುಂಬಿಕೊಂಡಿರುವ ಸಂಜಯ್ ಜೀವನಕ್ಕೆ ಈಗ ರಿಯಾ ಎಂಟ್ರಿ ಕೊಟ್ಟಿದ್ದಾಳೆ. ಇವರಿಬ್ಬರ ಮೊದಲ ಭೇಟಿಯೇ ಬಹಳ ವಿಚಿತ್ರವಾಗಿ ನಡೆದಿದೆ. ಸಂಜಯ್ ಬೈಕ್ ಕೆಟ್ಟು ನಿಂತಾಗ ಆಟೋ ಹತ್ತಲು ಹೋದಾಗ ರಿಯಾ ಎದುರಾಗುತ್ತಾಳೆ. ಇಬ್ಬರೂ ಒಂದೇ ಆಟೋದಲ್ಲಿ ಕಾಲೇಜಿಗೆ ಬರುವಂತಾಗುತ್ತದೆ. ಅಲ್ಲಿಂದ ಶುರುವಾಗಿದ್ದೇ ಅಸಲಿ ಮಜಾ, ಆಟೋ ಇಳಿದ ಮೇಲೆ ಸಂಜಯ್, ರಿಯಾ ಬಳಿ ಕೇವಲ 7 ರೂಪಾಯಿ ಸಾಲ ಮಾಡ್ತಾನೆ. ಈ ಏಳು ರೂಪಾಯಿಗೂ ಲೆಕ್ಕ ಹಾಕುವ ರಿಯಾ, ಸಂಜಯ್‌ಗೆ 'ಚಿಲ್ಲರೆ ಡಾಕ್ಟರ್' ಎಂಬ ಪಟ್ಟ ಕಟ್ಟಿ ಕಾಲೆಳೆಯುತ್ತಿದ್ದಾಳೆ. ಅಹಂಕಾರದಿಂದ ಮೆರೆಯುತ್ತಿದ್ದ ಸಂಜಯ್, ಈ ಹುಡುಗಿಯ ಮುಂದೆ ಅಸಹಾಯಕನಾಗಿ ನಿಲ್ಲುವುದು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ.

ಮುಂದಿನ ಕಥೆ ಏನು? ಲವ್ವೋ ಅಥವಾ ಪಾಠವೋ?
ಇಷ್ಟು ದಿನ ಬರೀ ಕ್ರೌರ್ಯ, ದ್ವೇಷ ಮೆರೆಯುತ್ತಿದ್ದ ಸಂಜಯ್ ಈಗ ರಿಯಾ ಜೊತೆ ಸಣ್ಣ ಪುಟ್ಟ ಜಗಳಗಳಲ್ಲಿ ಭಾಗಿಯಾಗುತ್ತಿರುವುದು ನೋಡಿ ಅಭಿಮಾನಿಗಳು "ಸಂಜಯ್ ಲವರ್ ಬಾಯ್ ಆಗ್ತಾನಾ?" ಎಂದು ಚರ್ಚಿಸುತ್ತಿದ್ದಾರೆ. ಸಂಜಯ್ ಮನಸ್ಸಿನಲ್ಲಿ ರಿಯಾ ಪ್ರೀತಿ ಹುಟ್ಟಿಸುತ್ತಾಳಾ? ಅಥವಾ ಸಂಜಯ್ ನಡೆಸುತ್ತಿರುವ ಕೆಟ್ಟ ಕೆಲಸಗಳಿಗೆ ರಿಯಾ ಬ್ರೇಕ್ ಹಾಕಿ ಸರಿಯಾದ ಪಾಠ ಕಲಿಸುತ್ತಾಳಾ? ಎಂಬುದು ಈಗಿನ ದೊಡ್ಡ ಕುತೂಹಲವಾಗಿದೆ. ಅಂಕಿತಾ ಜಯರಾಮ್ ಅವರ ಎಂಟ್ರಿಯಿಂದ 'ಕರ್ಣ' ಧಾರವಾಹಿಯ ಟಿಆರ್‌ಪಿ ಕೂಡ ಏರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ರಿಯಾ ಪಾತ್ರ ಕಥೆಗೆ ಯಾವ ರೀತಿಯ ಟ್ವಿಸ್ಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Latest News