ಫ್ರಾನ್ಸ್‌ನಲ್ಲಿ ಕನ್ನಡದ ಬಾವುಟ: ಕಾನ್ ಚಿತ್ರೋತ್ಸವದಲ್ಲಿ ‘ಸೆಪ್ಟೆಂಬರ್ 21’ ಕಮಾಲ್, ಪ್ರಿಯಾಂಕಾ ಉಪೇಂದ್ರ-ಕ್ಷಿತಿ ಸುವರ್ಣ ಹೊಸ ಇತಿಹಾಸ!

ವಿಶ್ವ ಸಿನಿಮಾ ರಂಗದ ಅತ್ಯುನ್ನತ ಮತ್ತು ಪ್ರತಿಷ್ಠಿತ ವೇದಿಕೆಯಾದ ‘ಕಾನ್ ಚಲನಚಿತ್ರೋತ್ಸವ’ದಲ್ಲಿ (Cannes Film Festival) ಈ ಬಾರಿ ಕನ್ನಡದ ಸದ್ದು ಜೋರಾಗಿ ಕೇಳಿಬರುತ್ತಿದೆ. ಹೌದು, ಸ್ಯಾಂಡಲ್‌ವುಡ್‌ನ ಹೆಮ್ಮೆಯ ಚಿತ್ರ ‘ಸೆಪ್ಟೆಂಬರ್ 21’ ವಿಶ್ವದ ದಿಗ್ಗಜ ಸಿನಿಮಾಗಳ ನಡುವೆ ಪ್ರದರ್ಶನಗೊಂಡು ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದೆ!

ಕಾನ್ ಹಬ್ಬದಲ್ಲಿ ಮೊದಲ ಕನ್ನಡ ಮಹಿಳಾ ನಿರ್ದೇಶಕಿ ದಾಖಲೆ! | Photo Credit: https://www.instagram.com/priyanka_upendra/?hl=en
ಕಾನ್ ಹಬ್ಬದಲ್ಲಿ ಮೊದಲ ಕನ್ನಡ ಮಹಿಳಾ ನಿರ್ದೇಶಕಿ ದಾಖಲೆ! | Photo Credit: https://www.instagram.com/priyanka_upendra/?hl=en

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪ್ರಿಯಾಂಕಾ ಉಪೇಂದ್ರ ಹಾಗೂ ಕೇವಲ 22 ವರ್ಷದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಫ್ರಾನ್ಸ್‌ನ ರೆಡ್ ಕಾರ್ಪೆಟ್ ಮೇಲೆ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುವ ಮೂಲಕ ಕನ್ನಡ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ್ದಾರೆ

ಸ್ಯಾಂಡಲ್‌ವುಡ್ ಪಾಲಿಗೆ ಇದು ಕೇವಲ ಸಿನಿಮಾದ ಪ್ರದರ್ಶನವಲ್ಲ, ಇದೊಂದು ಐತಿಹಾಸಿಕ ಮತ್ತು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಕ್ಷಣವಾಗಿದೆ!

ಏನಿದು ‘ಸೆಪ್ಟೆಂಬರ್ 21’ ಸಿನಿಮಾ? ಕಾನ್ ವೇದಿಕೆಯಲ್ಲಿ ಯಾಕಿಷ್ಟು ಹವಾ?

79ನೇ ಕಾನ್ ಚಲನಚಿತ್ರೋತ್ಸವದ ಅತ್ಯಂತ ಪ್ರಮುಖ ಹಾಗೂ ಬಿಸಿನೆಸ್ ವಿಭಾಗ ಎಂದೇ ಕರೆಯಲಾಗುವ ‘ಮಾರ್ಶೆ ಡು ಫಿಲ್ಮ್’ (Marché du Film) ರೌಂಡ್‌ಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿತ್ತು. ಮನುಷ್ಯನ ನೆನಪುಗಳನ್ನು ಮರೆಸಿ ನರಕಯಾತನೆ ನೀಡುವ ಭೀಕರ ‘ಆಲ್ಝೈಮರ್’ (Alzheimer's) ಕಾಯಿಲೆಯಿಂದ ಬಳಲುವವರ ಜೀವನದ ಸುತ್ತ ಈ ಸಿನಿಮಾದ ಕಥಾಹಂದರ ಸಾಗುತ್ತದೆ. ಜಾಗತಿಕ ಸಿನಿಮಾ ತಜ್ಞರು ಕಣ್ಣಿಟ್ಟಿದ್ದ ಈ ಚಿತ್ರದ ‘ವರ್ಲ್ಡ್ ಪ್ರೀಮಿಯರ್’ (ವಿಶ್ವದ ಮೊದಲ ಪ್ರದರ್ಶನ) ಇಂದು (ಮೇ 16) ಕಾನ್ ಚಿತ್ರೋತ್ಸವದಲ್ಲಿ ಭರ್ಜರಿಯಾಗಿ ನೆರವೇರಿದೆ. ಈ ಮೂಲಕ ಕನ್ನಡದ ವಿಭಿನ್ನ ಕಂಟೆಂಟ್ ಜಾಗತಿಕ ಪ್ರೇಕ್ಷಕರ ಮನ ಗೆದ್ದಿದೆ.

'ಕರ್ನಾಟಕವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಷಯ' - ನಟಿ ಪ್ರಿಯಾಂಕಾ ಭಾವುಕ

ತಮ್ಮ ಸಿನಿಮಾ ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ತೆರೆಕಾಣುತ್ತಿದ್ದಂತೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ಫ್ರಾನ್ಸ್‌ನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡು ಸಂತಸ ಹಂಚಿಕೊಂಡಿದ್ದಾರೆ.

"ವಿಶ್ವದ ಅತಿ ದೊಡ್ಡ ಚಿತ್ರೋತ್ಸವದಲ್ಲಿ ನಮ್ಮ ‘ಸೆಪ್ಟೆಂಬರ್ 21’ ಸಿನಿಮಾದ ವರ್ಲ್ಡ್ ಪ್ರೀಮಿಯರ್ ಆಗಿರುವುದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ. ಇಷ್ಟು ಚಿಕ್ಕ ವಯಸ್ಸಿನ ಅದ್ಭುತ ಪ್ರತಿಭೆ, ನಮ್ಮ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಜೊತೆಗೂಡಿ ಭಾರತ ಹಾಗೂ ನಮ್ಮ ಹೆಮ್ಮೆಯ ಕರ್ನಾಟಕವನ್ನು ಈ ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸುತ್ತಿರುವುದು ನನಗೊಂದು ವಿಶೇಷ ಅನುಭವ ನೀಡಿದೆ. ನಮ್ಮನ್ನು ಸದಾ ಪ್ರೋತ್ಸಾಹಿಸುವ ಕನ್ನಡಿಗರಿಗೆ ನನ್ನ ಕೋಟಿ ಧನ್ಯವಾದಗಳು," ಎಂದು ಪ್ರಿಯಾಂಕಾ ಉಪೇಂದ್ರ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡದ ಮೊದಲ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರಾವಳಿ ಹುಡುಗಿ!

ಈ ಬಾರಿಯ ಕಾನ್ ಹಬ್ಬದಲ್ಲಿ ಸ್ಯಾಂಡಲ್‌ವುಡ್ ಇತಿಹಾಸ ಪುಟ ಸೇರಲು ಮುಖ್ಯ ಕಾರಣ ಮಂಗಳೂರು ಮೂಲದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ. ಕೇವಲ 22ನೇ ವಯಸ್ಸಿಗೆ ಇಂತಹ ಗಂಭೀರ ವಿಷಯದ ಮೇಲೆ ಸಿನಿಮಾ ಮಾಡಿರುವ ಕ್ಷಿತಿ, ಕಾನ್ ಚಿತ್ರೋತ್ಸವದ ಅಧಿಕೃತ ವೇದಿಕೆಯಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿದ ‘ಮೊದಲ ಮಹಿಳಾ ನಿರ್ದೇಶಕಿ’ ಎಂಬ ಅನನ್ಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಚಿತ್ರೋತ್ಸವದ ಭಾಗವಾಗಿ ನಡೆದ ಜಾಗತಿಕ ಮಹಿಳಾ ಲೀಡರ್‌ಗಳ ಸಮಾವೇಶ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ (World Woman Cannes Agenda 2026) ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, ವಿಶ್ವದಾದ್ಯಂತ ಬಂದಿದ್ದ ಸಿನಿಮಾ ಮೇಕರ್‌ಗಳ ಮುಂದೆ ಭಾರತೀಯ ಸಿನಿಮಾ ಮತ್ತು ಮಹಿಳಾ ಪ್ರಾತಿನಿಧ್ಯದ ಬಗ್ಗೆ ಅದ್ಭುತವಾಗಿ ಮಾತನಾಡಿ ಸೈ ಎನಿಸಿಕೊಂಡಿದ್ದಾರೆ.

ಬಾಲಿವುಡ್ ಕಾರುಬಾರಿಗೆ ಬ್ರೇಕ್ ಹಾಕಿದ ಸ್ಯಾಂಡಲ್‌ವುಡ್

ಸಾಮಾನ್ಯವಾಗಿ ಕಾನ್ ಚಿತ್ರೋತ್ಸವ ಎಂದರೆ ಅಲ್ಲಿ ಬಾಲಿವುಡ್‌ನ ಸ್ಟಾರ್ ನಟ-ನಟಿಯರ ಫ್ಯಾಷನ್ ಮತ್ತು ರೇಪ್ ವಾಕ್ ಮಾತ್ರ ಹೈಲೈಟ್ ಆಗುತ್ತಿತ್ತು. ಆದರೆ ಈ ಬಾರಿ ಗ್ಲಾಮರ್ ಜೊತೆಗೆ ಅತ್ಯುತ್ತಮ ಕಂಟೆಂಟ್ ಹೊಂದಿರುವ ಸಿನಿಮಾವನ್ನು ತೆಗೆದುಕೊಂಡು ಹೋಗಿ ಪ್ರದರ್ಶಿಸುವ ಮೂಲಕ ಕನ್ನಡ ಚಿತ್ರರಂಗ ತನ್ನ ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಕರಾವಳಿ ಹುಡುಗಿ ಕ್ಷಿತಿ ಸುವರ್ಣ ಅವರ ಈ ಸಾಧನೆ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಅವರ ಗ್ಲಾಮರಸ್ ಲುಕ್‌ನ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದ್ದು, ಇಡೀ ಕರ್ನಾಟಕವೇ ಈ ಇಬ್ಬರು ಸಾಧಕಿಯರಿಗೆ ಸಲ್ಯೂಟ್ ಹೊಡೆಯುತ್ತಿದೆ.  

Latest News