Mar 27, 2026 Languages : ಕನ್ನಡ | English

ದೊಡ್ಡ ಸ್ಟಾರ್‌ಗಳೇ ದಂಗಾದ್ರು - ಸದ್ದಿಲ್ಲದೆ ಬಂದು ಬಾಕ್ಸ್ ಆಫೀಸ್ ಲೂಟಿ ಮಾಡಿದ 'ಲವ್ ಮಾಕ್ಟೇಲ್ 3'!!

ಹೊಸ ವರ್ಷ ಅದ್ದೂರಿಯಾಗಿ ಶುರುವಾಯ್ತು ನಿಜ, ಆದರೆ ಕನ್ನಡ ಚಿತ್ರರಂಗದ ಪಾಲಿಗೆ ಈ 2026ರ ಮೊದಲ ತ್ರೈಮಾಸಿಕ (Quarter) ಮಾತ್ರ ಅಕ್ಷರಶಃ 'ಬಿಸಿ ತುಪ್ಪ'ವಾಗಿ ಪರಿಣಮಿಸಿದೆ. ಮೊದಲ ಮೂರು ತಿಂಗಳು ಕಳೆಯುತ್ತಾ ಬಂದಿದೆ, ಲೆಕ್ಕ ಹಾಕಿ ನೋಡಿದರೆ ಗಾಂಧಿನಗರದ ಹಣೆಬರಹ ಸ್ವಲ್ಪ ಆತಂಕ ಹುಟ್ಟಿಸುವಂತಿದೆ.

ಶೇ. 90ರಷ್ಟು ಸಿನಿಮಾಗಳು ಉಡೀಸ್
ಶೇ. 90ರಷ್ಟು ಸಿನಿಮಾಗಳು ಉಡೀಸ್

ಕಳೆದ ಮೂರೇ ತಿಂಗಳಲ್ಲಿ ಬರೋಬ್ಬರಿ 58 ಕನ್ನಡ ಸಿನಿಮಾಗಳು ಮತ್ತು 3 ತುಳು ಸಿನಿಮಾಗಳು ಸೇರಿ ಒಟ್ಟು 61 ಚಿತ್ರಗಳು ಚಿತ್ರಮಂದಿರದ ಬಾಗಿಲು ತಟ್ಟಿವೆ. ಅಂದರೆ ವಾರಕ್ಕೆ ಸರಾಸರಿ 4 ರಿಂದ 5 ಸಿನಿಮಾಗಳು ರಿಲೀಸ್ ಆಗಿವೆ! ಸಂಖ್ಯೆ ಕೇಳಲು ಖುಷಿ ಅನ್ನಿಸಿದರೂ, ಫಲಿತಾಂಶ ಮಾತ್ರ ಶೂನ್ಯಕ್ಕೆ ಹತ್ತಿರವಾಗಿದೆ. ಈ 61 ಸಿನಿಮಾಗಳಲ್ಲಿ ಎದೆಯುಬ್ಬಿಸಿ 'ಹಿಟ್' ಅಂತ ಕರೆಸಿಕೊಂಡಿದ್ದು ಮಾತ್ರ ಕೇವಲ ಒಂದೇ ಒಂದು ಸಿನಿಮಾ! ಅದು ಕೃಷ್ಣ ಅವರ 'ಲವ್ ಮಾಕ್ಟೇಲ್ 3'.

ಇಲ್ಲಿ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಬಂದವು, ಅಬ್ಬರದ ಪ್ರಚಾರವೂ ನಡೆಯಿತು. ಆದರೆ ಗೆದ್ದಿದ್ದು ಮಾತ್ರ ಸಿಂಪಲ್ ಆಗಿ ಬಂದ 'ಲವ್ ಮಾಕ್ಟೇಲ್ 3'. ಇದಕ್ಕೆ ಮುಖ್ಯ ಕಾರಣ ಬಜೆಟ್ ಮ್ಯಾನೇಜ್‌ಮೆಂಟ್. ಕಡಿಮೆ ಬಜೆಟ್‌ನಲ್ಲಿ ತಯಾರಾಗಿ, ಪ್ರೇಕ್ಷಕರಿಗೆ ಬೇಕಾದ ಹಿತವಾದ ಕಥೆ ನೀಡಿದ ಕಾರಣ ಈ ಸಿನಿಮಾ ಲಾಭ ತಂದುಕೊಟ್ಟಿದೆ. ಇದನ್ನು ಬಿಟ್ಟರೆ ಉಳಿದ ಸಿನಿಮಾಗಳ ಕಥೆ ಅಯೋಮಯ. ಇದರೊಂದಿಗೆ ನಮ್ಮ ಸ್ಯಾಂಡಲ್‌ವುಡ್‌ನ ಸಕ್ಸಸ್ ರೇಟ್ ಕೇವಲ 1.72% ಕ್ಕೆ ಬಂದು ನಿಂತಿದೆ. ಇದು ನಿಜಕ್ಕೂ ಚಿತ್ರರಂಗಕ್ಕೆ ಎಚ್ಚರಿಕೆಯ ಗಂಟೆ.

ಈ ಮೂರು ತಿಂಗಳಲ್ಲಿ ಚಿತ್ರರಂಗಕ್ಕೆ ಸುರಿದ ಹಣ ಸಣ್ಣದೇನಲ್ಲ. ಇವತ್ತಿನ ಕಾಲದಲ್ಲಿ 1 ಕೋಟಿ ರೂಪಾಯಿಗೆ ಸಿನಿಮಾ ಮಾಡುವುದು ಅಸಾಧ್ಯದ ಮಾತು. ಚಿಕ್ಕವೋ ದೊಡ್ಡವೋ, ಪ್ರತಿಯೊಂದು ಸಿನಿಮಾಗೂ ಸರಾಸರಿ 3 ರಿಂದ 15 ಕೋಟಿ ರೂಪಾಯಿ ಖರ್ಚಾಗಿದೆ. ಒಟ್ಟು ಲೆಕ್ಕ ಹಾಕಿದರೆ ಸುಮಾರು 250 ರಿಂದ 300 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದೆ. ಆದರೆ ವಾಪಸ್ ಬಂದಿದ್ದನ್ನು ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ. ಶೇ. 90ರಷ್ಟು ಸಿನಿಮಾಗಳು ಹಾಕಿದ ಬಂಡವಾಳದ ಕಾಲು ಭಾಗವನ್ನೂ ಗಳಿಸಿಲ್ಲ.

ಚಿತ್ರರಂಗವನ್ನು ಕಾಡುತ್ತಿರುವ ಶತ್ರುಗಳು ಯಾರು?

ನಿರ್ಮಾಪಕರು ಯಾಕೆ ಸೋಲುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿದೆ:

ಹಳೆಯ ತಂತ್ರಗಳು: ಇಂದಿನ ಪ್ರೇಕ್ಷಕರು ಅಪ್‌ಡೇಟ್ ಆಗಿದ್ದಾರೆ, ಆದರೆ ಮೇಕಿಂಗ್ ಶೈಲಿ ಇನ್ನೂ ಹಳೆಯ ಕಾಲದಲ್ಲೇ ಇದೆ.

ದುರ್ಬಲ ಕಥೆಗಳು: ಕತೆಯಿಲ್ಲದೆ ಕೇವಲ ಬಿಲ್ಡಪ್ ನಂಬಿ ಸಿನಿಮಾ ಮಾಡುವುದು ಅಪಾಯ ತಂದೊಡ್ಡುತ್ತಿದೆ.

ಅನಗತ್ಯ ಖರ್ಚು: ಮಿತಿಮೀರಿದ ಶೂಟಿಂಗ್ ದಿನಗಳು ಮತ್ತು ಅನಗತ್ಯ ಆಡಂಬರಗಳು ಬಜೆಟ್ ಏರುವಂತೆ ಮಾಡಿವೆ.

ಮಾರುಕಟ್ಟೆ ಕುಸಿತ: ಹಿಂದೆ ಇದ್ದ ಸ್ಯಾಟಲೈಟ್ ಮತ್ತು ಓಟಿಟಿ (OTT) ಮಾರುಕಟ್ಟೆ ಈಗ ಬಹುತೇಕ ಸ್ಥಗಿತಗೊಂಡಿದೆ. ಸಿನಿಮಾ ಥಿಯೇಟರ್‌ನಲ್ಲಿ ಗೆದ್ದರೆ ಮಾತ್ರವೇ ಉಳಿಗಾಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಸೋಲಿನ ನಡುವೆಯೂ ಕೆಲವು ಸಣ್ಣ ಸಿನಿಮಾಗಳು ತಮ್ಮ ಗಟ್ಟಿ ಕಥೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ದೊಡ್ಡ ಸ್ಟಾರ್‌ಗಳಿಲ್ಲದಿದ್ದರೂ ಕಂಟೆಂಟ್ ಚೆನ್ನಾಗಿದ್ದರೆ ಜನ ಇಷ್ಟಪಡುತ್ತಾರೆ ಎಂಬ ಭರವಸೆಯನ್ನು ಈ ಸಿನಿಮಾಗಳು ಮೂಡಿಸಿವೆ.

ಮುಂದಿನ ತಿಂಗಳುಗಳಲ್ಲಾದರೂ ಸ್ಟಾರ್ ಸಿನಿಮಾಗಳ ಜೊತೆಗೆ ಅರ್ಥಪೂರ್ಣ ಚಿತ್ರಗಳು ಬರಲಿ, ನಿರ್ಮಾಪಕರ ಜೇಬು ತುಂಬಲಿ ಅನ್ನೋದೇ ಸಿನಿರಸಿಕರ ಆಶಯ. ಈ ವ್ಯವಸ್ಥೆಯನ್ನು ಸರಿಪಡಿಸಲು ಚಿತ್ರರಂಗದ ಹಿರಿಯರು ಮತ್ತು ಸಂಘಟನೆಗಳು ಒಟ್ಟಾಗಿ ಕೂತು ಒಂದು ದಾರಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.