ನವರಸ ನಾಯಕ ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅವರು ಇಂದು ತಮ್ಮ 42ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 1984ರ ಮಾರ್ಚ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಮದುವೆ ಅಂದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ವಿಶೇಷ ದಿನದಂದು ಜಗ್ಗೇಶ್ ಅವರು ತಮ್ಮ ಪತ್ನಿಗೆ ಶುಭಾಶಯ ಕೋರುವುದರ ಜೊತೆಗೆ, ಇಂದಿನ ಯುವ ಪೀಳಿಗೆ ಮದುವೆಯ ವಿಚಾರದಲ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಈಗಿನ ಜನರೇಷನ್ ಅಲ್ಲಿ ಮದ್ವೆಗೆ ಯಾವುದೇ ವ್ಯಾಲ್ಯೂ ಇಲ್ಲದ್ದಂತಾಗಿದೆ. ಮದ್ವೆಯಾಗಿ ಒಂದು-ಎರಡು ವರ್ಷ ಜೊತೆಗಿದ್ರೆ ಅದೇ ದೊಡ್ಡ ಸಾಧನೆಯಂತಾಗಿದೆ. ಇದರ ಜೊತೆಗೆ ಹುಡ್ಗಿ - ಹುಡ್ಗ ಅವರ ಮನೆಯವರು ಒಂದಷ್ಟು ಕಂಡೀಷನ್ಸ್ ಹಾಕ್ತಾರೆ. ಒಟ್ಟಿನಲ್ಲಿ ಮದುವೆಯ ಮಾನದಂಡವೇ ಬದಲಾಗಿದೆ.
ಜಗ್ಗೇಶ್ ಅವರ ಪ್ರಕಾರ, ಕೇವಲ ಮದುವೆಯಾಗುವುದು ಜೀವನದ ಗುರಿಯಲ್ಲ, ಬದಲಾಗಿ ಇರುವ ಪರಿಸ್ಥಿತಿಯಲ್ಲೇ ಅನ್ಯೋನ್ಯವಾಗಿ ಸುಖವಾಗಿ ಬಾಳುವುದೇ ನಿಜವಾದ ಗೆಲುವು. ಇಂದು ಅನೇಕ ಮನೆಗಳಲ್ಲಿ ಮದುವೆಯ ವಯಸ್ಸು ಮೀರಿದ ಯುವಕರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣಗಳನ್ನು ಹುಡುಕಿದಾಗ ಸಿಗುವ ಉತ್ತರಗಳು ಆತಂಕಕಾರಿಯಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹೆಣ್ಣಿನ ಕಡೆಯವರು ಹುಡುಗನ ಮುಂದೆ ಇಡುತ್ತಿರುವ ಬೇಡಿಕೆಗಳು ಮದುವೆ ಎಂಬ ಪವಿತ್ರ ಬಂಧವನ್ನು ಕೇವಲ ಲೆಕ್ಕಾಚಾರದ ವ್ಯವಹಾರವನ್ನಾಗಿ ಮಾಡುತ್ತಿವೆ ಎಂಬುದು ಅವರ ಅಭಿಪ್ರಾಯ.
ಇಂದಿನ ಹೆಣ್ಣುಮಕ್ಕಳು ಮತ್ತು ಅವರ ಪೋಷಕರು ಹುಡುಗನಿಗೆ ವಿಧಿಸುತ್ತಿರುವ ಕೆಲವು ನಿಬಂಧನೆಗಳನ್ನು ಜಗ್ಗೇಶ್ ಪಟ್ಟಿ ಮಾಡಿದ್ದಾರೆ:
ಹುಡುಗ ಕಡ್ಡಾಯವಾಗಿ ನಗರ ಪ್ರದೇಶದಲ್ಲೇ ವಾಸವಿರಬೇಕು.
ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಅಥವಾ ಅನಾರೋಗ್ಯ ಪೀಡಿತರು ಇರಬಾರದು.
ಸರ್ಕಾರಿ ಕೆಲಸ ಅಥವಾ ತಿಂಗಳಿಗೆ ಲಕ್ಷಕ್ಕೂ ಅಧಿಕ ಆದಾಯ ಇರಬೇಕು.
ಹಳ್ಳಿಯಲ್ಲಿ ಎಷ್ಟೇ ಆಸ್ತಿ ಇದ್ದರೂ ಅಂತಹ ಹುಡುಗನಿಗೆ ಹೆಣ್ಣು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಮದುವೆಯಾದ ತಕ್ಷಣವೇ ಬೇರೆ ಮನೆ ಮಾಡಬೇಕು ಎಂಬ ಷರತ್ತುಗಳು ಸಾಮಾನ್ಯವಾಗುತ್ತಿವೆ.
ಇದರ ಪರಿಣಾಮವಾಗಿ, ಇಂದು ಹುಡುಗರಿಗೆ 36 ವರ್ಷ ಮತ್ತು ಹುಡುಗಿಯರಿಗೆ 30 ವರ್ಷ ದಾಟಿದರೂ ಮದುವೆಯಾಗುತ್ತಿಲ್ಲ. ಮನುಷ್ಯರ ಇಂತಹ ಬದಲಾದ ಚಿಂತನೆಗಳು ಸಮಾಜವನ್ನು ಎತ್ತ ಕೊಂಡೊಯ್ಯುತ್ತಿವೆ ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ ಜೀವನದ ಮಾದರಿ ಮತ್ತು ಕಿವಿಮಾತು
ಜಗ್ಗೇಶ್ ಅವರು ತಮ್ಮ ಯಶಸ್ವಿ ದಾಂಪತ್ಯದ ರಹಸ್ಯವನ್ನು ಹಂಚಿಕೊಳ್ಳುತ್ತಾ, ತಮ್ಮ ಪತ್ನಿ ಪರಿಮಳಾ ಅವರು ಶ್ರೀಮಂತ ಕುಟುಂಬದವರಾಗಿದ್ದರೂ, ಅಂದು ಒಬ್ಬ ಸಾಮಾನ್ಯ ಹುಡುಗನಾಗಿದ್ದ ತಮ್ಮನ್ನು ನಂಬಿ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ನಂಬಿಕೆಯನ್ನು ತಾವು ಇಂದಿಗೂ ಉಳಿಸಿಕೊಂಡು ಬಂದಿರುವುದೇ ತಮ್ಮ ಸುಖ ಸಂಸಾರಕ್ಕೆ ಕಾರಣ ಎಂದಿದ್ದಾರೆ. "ನಾನು 1984ರಲ್ಲಿ ಹುಡುಗನಾಗಿದ್ದೆ, ಇಂದು 2026ರಲ್ಲಿ ಮೊಮ್ಮಗನಿಗೆ ತಾತನಾಗಿದ್ದೇನೆ. ಜೀವನದ ಹರಿವನ್ನು ಅರ್ಥಮಾಡಿಕೊಂಡರೆ ಬದುಕು ಸುಂದರ" ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಮದುವೆಯನ್ನು ಕೇವಲ ಆಸ್ತಿ-ಅಂತಸ್ತುಗಳ ಲೆಕ್ಕಾಚಾರದಿಂದ ನೋಡುವವರು ಇಂದು ವಿಚ್ಛೇದನದ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಅದರ ಬದಲಾಗಿ ಮನಸ್ಸುಗಳು ಒಂದಾಗಿ, ಇದ್ದುದರಲ್ಲೇ ಸ್ವರ್ಗ ಕಾಣುವ ಪ್ರಯತ್ನ ಮಾಡಿದರೆ ಸಂಸಾರ ಸುಖಮಯವಾಗಿರುತ್ತದೆ ಎಂಬುದು ಅವರ ಸಂದೇಶ. ಕೊನೆಯಲ್ಲಿ, ಕರುನಾಡಿನ ಎಲ್ಲಾ ಯುವಕರಿಗೂ ಶೀಘ್ರವಾಗಿ ವಿವಾಹವಾಗಿ ಸುಂದರವಾದ ಸಂಸಾರ ಸಿಗಲಿ ಎಂದು ಅವರು ಗುರು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿದ್ದಾರೆ.