Apr 8, 2026 Languages : ಕನ್ನಡ | English

ಅಮಿರ್ ಖಾನ್ ಸೋದರಳಿಯನ ಜೊತೆ ಲಿವ್‌-ಇನ್ ಸಂಬಂಧ ಹೊಂದಿದ ನಟಿ - ಲವ್ ಜಿಹಾದ್ ಮಾತಿಗೆ ಹೇಳಿದ್ದೇನು ಕೇಳಿ!!

ಪ್ರೀತಿ ಎನ್ನುವುದು ಹೃದಯಗಳ ಭಾಷೆ, ಅದಕ್ಕೆ ಯಾವುದೇ ಗಡಿಗಳಿಲ್ಲ ಎನ್ನುವುದು ಹಳೆಯ ಮಾತು. ಆದರೆ ಇಂದಿನ ಸಮಾಜದಲ್ಲಿ ಪ್ರೀತಿ ಎನ್ನುವುದು ಕೇವಲ ಎರಡು ಮನಸ್ಸುಗಳ ಮಿಲನವಾಗಿ ಉಳಿದಿಲ್ಲ. ಅದರ ಸುತ್ತ ಧರ್ಮ, ಜಾತಿ ಮತ್ತು ರಾಜಕೀಯದ ಬೇಲಿಗಳು ಎದ್ದು ನಿಂತಿವೆ. ವಿಶೇಷವಾಗಿ ಭಾರತದಂತಹ ದೇಶದಲ್ಲಿ ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಧರ್ಮವೇ ಎಲ್ಲವನ್ನೂ ನಿರ್ಧರಿಸುವಂತಾಗಿದೆ. ಇಂತಹ ಸಂಕುಚಿತ ಮನೋಭಾವದ ನಡುವೆ ಸಿಲುಕಿರುವುದು ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತು ನಟಿ ಲೇಖಾ ವಾಷಿಂಗ್ಟನ್ ಅವರ ಪ್ರೇಮ ಕಥೆ.

‘ಲವ್ ಜಿಹಾದ್’ ಟ್ಯಾಗ್ ವಿರುದ್ಧ ಲೇಖಾ ವಾಷಿಂಗ್ಟನ್ ಪ್ರತಿಕ್ರಿಯೆ | Photo Credit: Imran Khan instagram
‘ಲವ್ ಜಿಹಾದ್’ ಟ್ಯಾಗ್ ವಿರುದ್ಧ ಲೇಖಾ ವಾಷಿಂಗ್ಟನ್ ಪ್ರತಿಕ್ರಿಯೆ | Photo Credit: Imran Khan instagram

ಕನ್ನಡದ ಪ್ರೇಕ್ಷಕರಿಗೆ ಲೇಖಾ ವಾಷಿಂಗ್ಟನ್ ಪರಿಚಿತ ಹೆಸರು. ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಹುಡುಗ-ಹುಡುಗಿ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಲೇಖಾ, ಬಹುಮುಖ ಪ್ರತಿಭೆ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಅವರು ಒಬ್ಬ ಉತ್ತಮ ನಿರೂಪಕಿ ಕೂಡ ಹೌದು. ಕಳೆದ ಕೆಲವು ವರ್ಷಗಳಿಂದ ಲೇಖಾ ಅವರು ನಟ ಇಮ್ರಾನ್ ಖಾನ್ (ಆಮಿರ್ ಖಾನ್ ಸೋದರಳಿಯ) ಅವರೊಂದಿಗೆ ಗಾಢವಾದ ಪ್ರೀತಿಯಲ್ಲಿದ್ದಾರೆ. ಇವರಿಬ್ಬರು ಸುಮಾರು 7 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದಾರೆ.

ಇಬ್ಬರು ಪ್ರಬುದ್ಧ ವ್ಯಕ್ತಿಗಳು ಪರಸ್ಪರ ಒಪ್ಪಿ ಜೊತೆಯಾಗಿ ಬಾಳುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರ ಸಂಬಂಧಕ್ಕೆ 'ಲವ್ ಜಿಹಾದ್' ಎಂಬ ಹಣೆಪಟ್ಟಿ ಹಚ್ಚಿ ಟ್ರೋಲ್ ಮಾಡಲಾಗುತ್ತಿದೆ. ಧರ್ಮದ ಕನ್ನಡಕದ ಮೂಲಕ ಪ್ರೀತಿಯನ್ನು ಅಳೆಯುತ್ತಿರುವ ಒಂದು ವರ್ಗ, ಇವರ ವೈಯಕ್ತಿಕ ಆಯ್ಕೆಯನ್ನು ದೊಡ್ಡ ಸಂಚು ಎಂಬಂತೆ ಬಿಂಬಿಸುತ್ತಿದೆ. ಈ ದ್ವೇಷದ ವಾತಾವರಣದ ವಿರುದ್ಧ ಲೇಖಾ ವಾಷಿಂಗ್ಟನ್ ಇತ್ತೀಚೆಗೆ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಲೇಖಾ, "ಸಮಾಜದಲ್ಲಿ ಮಹಿಳೆ ಎಷ್ಟೇ ದೊಡ್ಡ ಸಾಧನೆ ಮಾಡಿದರೂ, ಆಕೆಯನ್ನು ಒಬ್ಬ ಪುರುಷನ ಜೊತೆ ಸೇರಿಸಿಯೇ ಗುರುತಿಸುವುದು ನಮ್ಮ ಜನರ ಸಂಕುಚಿತ ಬುದ್ಧಿ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರು ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ತಾವೇ ತೋರಿಸಿಕೊಳ್ಳುತ್ತಿದ್ದಾರೆ. "ನನ್ನ ಸುತ್ತ ಮುತ್ತ ಅದ್ಭುತ ವ್ಯಕ್ತಿಗಳಿದ್ದಾರೆ, ನಮ್ಮ ಇಬ್ಬರ ಕುಟುಂಬದವರು ನಮ್ಮನ್ನು ಒಪ್ಪಿಕೊಂಡಿದ್ದಾರೆ. ನಮಗೆ ಪರಸ್ಪರ ಗೌರವ ಮತ್ತು ಪ್ರೀತಿ ಇದೆ. ಹೀಗಿರುವಾಗ ಹೊರಗಿನ ದ್ವೇಷದ ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಇಮ್ರಾನ್ ಖಾನ್ ಮತ್ತು ಲೇಖಾ ಇಬ್ಬರಿಗೂ ಇದು ಮೊದಲ ಪ್ರೇಮವಲ್ಲ. ಇಮ್ರಾನ್ ಖಾನ್ ತಮ್ಮ ಬಾಲ್ಯದ ಗೆಳತಿ ಅವಂತಿಕಾ ಮಲಿಕ್ ಅವರನ್ನು ಮದುವೆಯಾಗಿ 2019ರಲ್ಲಿ ವಿಚ್ಛೇದನ ಪಡೆದಿದ್ದರು. ಇಮ್ರಾನ್ ಅವರಿಗೆ ಒಬ್ಬ ಮಗಳಿದ್ದಾಳೆ. ಅತ್ತ ಲೇಖಾ ವಾಷಿಂಗ್ಟನ್ ಕೂಡ ಪತ್ರಕರ್ತ ಪಾಬ್ಲೋ ಚಟರ್ಜಿ ಅವರ ಜೊತೆ ಮದುವೆಯಾಗಿ ನಂತರ ದೂರವಾಗಿದ್ದರು. ಕೊರೊನಾ ಕಾಲದ ಏಕಾಂತದಲ್ಲಿ ಹತ್ತಿರವಾದ ಈ ಜೋಡಿ, ಆಮಿರ್ ಖಾನ್ ಮಗಳು ಇರಾ ಖಾನ್ ಮದುವೆಯಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.

ಪ್ರೀತಿ ಎನ್ನುವುದು ದ್ವೇಷವನ್ನು ಹರಡುವ ಅಸ್ತ್ರವಾಗಬಾರದು. ಲೇಖಾ ಹೇಳುವಂತೆ, ದ್ವೇಷಿಸುವವರು ದ್ವೇಷ ಮಾಡುತ್ತಿರಲಿ, ಪ್ರೀತಿಸುವವರು ಪ್ರೀತಿಸುತ್ತಲೇ ಇರಲಿ. ಧರ್ಮದ ಹೆಸರಿನಲ್ಲಿ ವೈಯಕ್ತಿಕ ಬದುಕಿನ ಮೇಲೆ ದಾಳಿ ಮಾಡುವ ಸಂಸ್ಕೃತಿ ನಿಲ್ಲಬೇಕಿದೆ. ಕೊನೆಯಲ್ಲಿ ಮುಖ್ಯವಾಗುವುದು ಇಬ್ಬರು ವ್ಯಕ್ತಿಗಳ ನಡುವಿನ ಸೌಹಾರ್ದತೆ ಮತ್ತು ಸಂತೋಷವೇ ಹೊರತು ಸಮಾಜ ನೀಡುವ ಹಣೆಪಟ್ಟಿಗಳಲ್ಲ. 

Latest News