ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳ ಮೂಲಕವೇ ಮನೆಮಾತಾಗಿರುವ, ದಶಕಗಳ ಅನುಭವ ಹೊಂದಿರುವ ಹಿರಿಯ ನಟ ರವಿ ಚೇತನ್ ಸದ್ಯ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಿರುವುದು ಯಾವುದೇ ಸಿನಿಮಾದ ಖಳನಾಯಕನ ಪಾತ್ರಕ್ಕಲ್ಲ, ಬದಲಾಗಿ ಕಿರುತೆರೆಯ ಅತ್ಯಂತ ಜನಪ್ರಿಯ ವಾಹಿನಿ ‘ಕಲರ್ಸ್ ಕನ್ನಡ’ದಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋ ಮೂಲಕ. ತೆರೆಮೇಲೆ ಕ್ರೂರ ವಿಲನ್ ಆಗಿ ಅಬ್ಬರಿಸುವ ರವಿ ಚೇತನ್, ರಿಯಲ್ ಲೈಫ್‌ನಲ್ಲಿ ಅದ್ಭುತವಾಗಿ ಅಡುಗೆ ಮಾಡುತ್ತಾರೆ ಎಂಬ ಸತ್ಯ ಇಡೀ ಕರ್ನಾಟಕಕ್ಕೆ ಗೊತ್ತಾಗಿದ್ದು ಇದೇ ಶೋ ಮೂಲಕ. ಆದರೆ, ದುರದೃಷ್ಟವಶಾತ್ ಕಾರ್ಯಕ್ರಮದ ಮೊದಲ ವಾರದ ಎಲಿಮಿನೇಷನ್‌ನಲ್ಲಿಯೇ ರವಿ ಚೇತನ್ ಔಟ್ ಆಗುವ ಮೂಲಕ ವೀಕ್ಷಕರಿಗೆ ಭಾರಿ ಆಘಾತ ನೀಡಿದ್ದಾರೆ.
300ಕ್ಕೂ ಅಧಿಕ ಸಿನಿಮಾಗಳ ಸರದಾರ ಈಗ ‘ಕ್ವಾಟ್ಲೆ ಕಿಚನ್’ ಸ್ಪರ್ಧಿ
ನೀವು ನಂಬಲೇಬೇಕು, ರವಿ ಚೇತನ್ ಇದುವರೆಗೆ ಸ್ಯಾಂಡಲ್‌ವುಡ್‌ನಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸ್ಫುರದ್ರೂಪಿ ನಟನಾಗಿದ್ದರೂ ಇವರು ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದು ಮತ್ತು ಜನಪ್ರಿಯತೆ ಗಳಿಸಿದ್ದು ನೆಗೆಟಿವ್ ಪಾತ್ರಗಳಲ್ಲೇ. ನಟ ದರ್ಶನ್ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ಇವರು, ಸದ್ಯ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ ‘ನಂದಗೋಕುಲ’ದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ ಸಿನಿಮಾ, ಸೀರಿಯಲ್ ಅಂತ ಬ್ಯುಸಿಯಾಗಿದ್ದ ರವಿ ಚೇತನ್ ಸಡನ್ ಆಗಿ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋಗೆ ಕುಕ್ ಆಗಿ ಎಂಟ್ರಿ ಕೊಟ್ಟಾಗ ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ಇಷ್ಟು ವರ್ಷಗಳ ಕಾಲ ಇವರ ವಿಲನ್ ರೂಪ ನೋಡಿದ್ದ ಜನರಿಗೆ, ಇವರ ಕೈರುಚಿ ಮತ್ತು ಸೌಮ್ಯ ಸ್ವಭಾವದ ಪರಿಚಯ ಈ ವೇದಿಕೆಯ ಮೂಲಕ ಆಯಿತು.
ಶನಿವಾರ ಮತ್ತು ಭಾನುವಾರದ ‘ಡೇಂಜರ್ ಝೋನ್’ ಹೈಡ್ರಾಮಾ
‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮದ ಆರಂಭದ ವಾರವೇ ಅತ್ಯಂತ ರೋಚಕವಾಗಿತ್ತು. ಶನಿವಾರದ ಸಂಚಿಕೆಯಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ನಟ ತಾಂಡವ್ ಮೊದಲ ಬಾರಿಗೆ ‘ಡೇಂಜರ್ ಝೋನ್’ ತಲುಪಿದ್ದರು. ಇನ್ನು ಭಾನುವಾರದ ಸಂಚಿಕೆಯಲ್ಲಿ ನಡೆದ ಮತ್ತೊಂದು ಸುತ್ತಿನಲ್ಲಿ ರವಿ ಚೇತನ್ ಅವರು ಮಾಡಿದ ‘ಪಾವ್ ಬಾಜಿ’ ಖಾದ್ಯವನ್ನು ತೀರ್ಪುಗಾರ್ತಿ, ನಟಿ ಮೇಘನಾ ರಾಜ್ ಅವರು ಸಖತ್ ಆಗಿ ಮೆಚ್ಚಿಕೊಂಡಿದ್ದರು. "ಪಾವ್ ಬಾಜಿ ಟೇಸ್ಟ್ ತುಂಬಾ ಚೆನ್ನಾಗಿದೆ" ಎಂದು ಮೇಘನಾ ರಾಜ್ ಪ್ರಶಂಸೆ ವ್ಯಕ್ತಪಡಿಸಿದ್ದರೂ ಸಹ, ಅಂಕಗಳ ಲೆಕ್ಕಾಚಾರದಲ್ಲಿ ರವಿ ಚೇತನ್ ಕೊನೆಯ ಸ್ಥಾನ ಪಡೆದು ಭಾನುವಾರ ನೇರವಾಗಿ ಡೇಂಜರ್ ಝೋನ್‌ಗೆ ಬಂದು ನಿಂತರು.
ಇದರಿಂದಾಗಿ ಮೊದಲ ವಾರದ ಎಲಿಮಿನೇಷನ್ ಗಂಡಾಂತರದಿಂದ ಪಾರಾಗಲು ತಾಂಡವ್ ಮತ್ತು ರವಿ ಚೇತನ್ ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿತು.
ಕೇವಲ 20 ನಿಮಿಷಗಳ ‘ಮಶ್ರೂಮ್ ಕುಕ್ ಆಫ್’ ಚಾಲೆಂಜ್
ಇಬ್ಬರು ನಟರು ಡೇಂಜರ್ ಝೋನ್‌ನಲ್ಲಿದ್ದ ಕಾರಣ, ಜಡ್ಜ್‌ಗಳು ಅವರಿಗೆ ‘ಕುಕ್ ಆಫ್ ಚಾಲೆಂಜ್’ ನೀಡಿದರು. ನಿಯಮದ ಪ್ರಕಾರ, ಇಬ್ಬರಿಗೂ ಕೇವಲ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಆ ಅಲ್ಪ ಅವಧಿಯಲ್ಲಿ ‘ಮಶ್ರೂಮ್’ (ಅಣಬೆ) ಬಳಸಿ ಒಂದು ಅದ್ಭುತವಾದ ಸ್ಟಾರ್ಟರ್, ಮೇನ್ ಕೋರ್ಸ್ ಅಥವಾ ಸೂಪ್ ತಯಾರಿಸಬೇಕಾಗಿತ್ತು. ಸಮಯದ ಅಭಾವವಿದ್ದರೂ ಇಬ್ಬರೂ ನಟರು ಸವಾಲನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದರು.
"ಕೇವಲ ಟೇಸ್ಟ್ ಒಂದನ್ನೇ ಮಾನದಂಡವಾಗಿ ಪರಿಗಣಿಸಿ ನಾವು ಅಂತಿಮ ನಿರ್ಧಾರ ಪ್ರಕಟಿಸಲು ಸಾಧ್ಯವಿಲ್ಲ. ಅಡುಗೆಯ ಅಪಿಯರೆನ್ಸ್ (ನೋಡಲು ಹೇಗಿದೆ) ಮತ್ತು ಕಾಂಪ್ಲೆಕ್ಸಿಸಿಟಿ (ತಯಾರಿಕೆಯ ಕಷ್ಟದ ಮಟ್ಟ) ಆಧಾರದ ಮೇಲೆ ನೋಡುವುದಾದರೆ, ಈ ಕುಕ್ ಆಫ್ ವಿನ್ನರ್ - ತಾಂಡವ್."
ಈ ನಿರ್ಧಾರದ ಮೂಲಕ ತಾಂಡವ್ ಸೇಫ್ ಆದರು ಮತ್ತು ರವಿ ಚೇತನ್ ಎಲಿಮಿನೇಟ್ ಆದರು. ಆದರೆ ರವಿ ಚೇತನ್ ಅವರ ಕೈರುಚಿಗೆ ಫಿದಾ ಆಗಿದ್ದ ಶೆಫ್ ಕೌಶಿಕ್, "ಮುಂದೆ ಚಾನ್ಸ್ ಸಿಕ್ಕರೆ ನಿಮ್ಮನ್ನು ಖಂಡಿತ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಶೋಗೆ ವಾಪಸ್ ಕರೆದುಕೊಂಡು ಬರುತ್ತೇವೆ" ಎಂದು ಭರವಸೆ ನೀಡಿದರು.
ಸೋತರೂ ದೊಡ್ಡಗುಣ ಪ್ರದರ್ಶಿಸಿದ ರವಿ ಚೇತನ್
ಸಾಮಾನ್ಯವಾಗಿ ರಿಯಾಲಿಟಿ ಶೋಗಳಿಂದ ಮೊದಲ ವಾರವೇ ಎಲಿಮಿನೇಟ್ ಆದಾಗ ಯಾರಿಗಾದರೂ ಬೇಜಾರಾಗುವುದು ಸಹಜ. ಆದರೆ ರವಿ ಚೇತನ್ ಮಾತ್ರ ತಮ್ಮ ದೊಡ್ಡಗುಣ ಮತ್ತು ಕ್ರೀಡಾ ಮನೋಭಾವದಿಂದ ಎಲ್ಲರ ಹೃದಯ ಗೆದ್ದರು.
ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಾ ಮಾತನಾಡಿದ ಅವರು, "ನಾನು ಮಾಡಿದ ರೆಸಿಪಿ ತುಂಬಾ ಸಿಂಪಲ್ ಆಗಿತ್ತು. ಆದರೆ ಕೇವಲ 20 ನಿಮಿಷಗಳಲ್ಲಿ ತಾಂಡವ್ ಮಾಡಿದ್ದು ಕಷ್ಟದ ರೆಸಿಪಿ. ಆ ಚಿಲ್ಲಿ ಮಶ್ರೂಮ್ ರೆಸಿಪಿ ನನಗೂ ಗೊತ್ತಿತ್ತು, ನಾನೂ ಮನೆಯಲ್ಲಿ ಅದನ್ನು ಮಾಡುತ್ತೇನೆ. 20 ನಿಮಿಷದ ಟೈಮ್ ಇರೋದರಿಂದ ಈಸಿಯಾಗಿ ಇರೋದನ್ನು ಮಾಡಬಹುದಿತ್ತಲ್ವಾ ಅಂತ ನಾನು ತಾಂಡವ್ ಹತ್ತಿರ ಕೇಳಿದ್ದೆ. ಆದರೆ, ಆತ ರಿಸ್ಕ್ ತಗೊಂಡು ಇಷ್ಟು ಕಡಿಮೆ ಸಮಯದಲ್ಲಿ ಆ ಡಿಶ್ ಮಾಡಿರೋದು ನಿಜಕ್ಕೂ ಗ್ರೇಟ್" ಎಂದು ಪ್ರತಿಸ್ಪರ್ಧಿಯ ಬೆನ್ನು ತಟ್ಟಿದರು.
"ನನ್ನ ಲೈಫ್‌ನಲ್ಲೇ ಇದು ಫಸ್ಟ್ ಟೈಮ್" ಭಾವುಕರಾದ ನಟ
ವೇದಿಕೆಯಿಂದ ನಿರ್ಗಮಿಸುವ ಮುನ್ನ ರವಿ ಚೇತನ್ ತಮ್ಮ ಸಿನಿಮಾ ಜರ್ನಿ ಮತ್ತು ವಾಹಿನಿಗೆ ಧನ್ಯವಾದ ಅರ್ಪಿಸಿದರು. "ನನ್ನ ಇಡೀ ಲೈಫ್‌ನಲ್ಲೇ ನಾನು ಭಾಗವಹಿಸುತ್ತಿರುವ ಮೊದಲ ರಿಯಾಲಿಟಿ ಶೋ ಇದು. ನನಗೆ ಈ ಅದ್ಭುತ ಅವಕಾಶ ಕೊಟ್ಟಿದ್ದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಾನು ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಬಹುತೇಕ ಸಿನಿಮಾಗಳನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಜೊತೆಯೇ ಮಾಡಿದ್ದೇನೆ. ಉಸ್ತಾದ್ ಸಾರ್ ನೀವು. ಇಂತಹ ವೇದಿಕೆಗೆ ಬಂದು ಇಷ್ಟು ಜನರ ಪ್ರೀತಿ ಗಳಿಸಿ ಎಲಿಮಿನೇಟ್ ಆಗುತ್ತಿರುವುದಕ್ಕೆ ನನಗೆ ಯಾವುದೇ ಬೇಜಾರಿಲ್ಲ" ಎಂದು ಹೆಮ್ಮೆಯಿಂದ ನುಡಿದರು.
ತೆರೆಮೇಲೆ ಖಳನಾಯಕನಾಗಿ ಅಬ್ಬರಿಸುವ ನಟನ ಹಿಂದೆ ಇಷ್ಟೊಂದು ಮೃದುಸ್ವಭಾವದ, ಸಹೃದಯಿ ವ್ಯಕ್ತಿತ್ವ ಇತ್ತಾ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ರವಿ ಚೇತನ್ ಶೋನಿಂದ ಹೊರಬಿದ್ದಿದ್ದರೂ, ಅವರ ಅಭಿಮಾನಿಗಳು ಮಾತ್ರ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ‘ಕ್ವಾಟ್ಲೆ ಕಿಚನ್’ ಮನೆಗೆ ಬರಲಿ ಎಂದು ಆಶಿಸುತ್ತಿದ್ದಾರೆ.