ಟಾಕ್ಸಿಕ್ ಚಿತ್ರತಂಡಕ್ಕೆ ಬಾರಿ ಸಂಕಷ್ಟ - ಈಗಲೇ ಟೀಸರ್ ತೆರವುಗೊಳಿಸಿ ಎಂದು ದೂರು!!

ಬೆಂಗಳೂರು: ಅಶ್ಲೀಲ ಮತ್ತು ವಯಸ್ಕರ ವಿಷಯವನ್ನು ಒಳಗೊಂಡಿರುವ ಚಲನಚಿತ್ರ ಟೀಸರ್‌ಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದೆಂದು ಕಾಳಜಿ ವ್ಯಕ್ತಪಡಿಸಿ, ಟೀಸರ್‌ಗಳಿಗೂ ಸೆನ್ಸಾರ್ ಪ್ರಮಾಣೀಕರಣ ಕಡ್ಡಾಯ ಮಾಡಬೇಕೆಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ದೂರು ಸಲ್ಲಿಸಲಾಗಿದೆ.

ಟಾಕ್ಸಿಕ್ ಚಿತ್ರದ ಟೀಸರ್‌ನಲ್ಲಿ ವಯಸ್ಕ ದೃಶ್ಯಗಳ ಆರೋಪ!!
ಟಾಕ್ಸಿಕ್ ಚಿತ್ರದ ಟೀಸರ್‌ನಲ್ಲಿ ವಯಸ್ಕ ದೃಶ್ಯಗಳ ಆರೋಪ!!

ವಕೀಲ ಲೋಹಿತ್ ಹನುಮಪುರ ಅವರು ಸಲ್ಲಿಸಿದ ದೂರಿನಲ್ಲಿ, "ಟಾಕ್ಸಿಕ್" ಚಿತ್ರದ ಟೀಸರ್‌ನಲ್ಲಿ ತೀವ್ರ ವಯಸ್ಕ ದೃಶ್ಯಗಳಿವೆ ಎಂದು ಆರೋಪಿಸಲಾಗಿದೆ. ಟೀಸರ್‌ಗಳನ್ನು ಸೂಕ್ತ ಸೆನ್ಸಾರ್ ಪ್ರಮಾಣೀಕರಣವಿಲ್ಲದೆ ಬಿಡುಗಡೆ ಮಾಡುವುದರಿಂದ, ಅಪ್ರಾಪ್ತ ವಯಸ್ಕರು ಹಾಗೂ ಸಾರ್ವಜನಿಕ ನೈತಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಸೂಚಿಸಲಾಗಿದೆ.

"ಯಾವುದೇ ವಯೋಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ, ಇಂತಹ ಟೀಸರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮುಕ್ತವಾಗಿ ಲಭ್ಯವಿದೆ. ಇದು ಪೋಷಕರ ಅನುಮತಿ ಇಲ್ಲದೆ ಮಕ್ಕಳಿಗೆ ತಲುಪುವುದು ಅಸಮಂಜಸ," ಎಂದು ದೂರು ದಾಖಲಿಸಿದ ವಕೀಲರು ತಿಳಿಸಿದ್ದಾರೆ. ಅವರ ಮುಖ್ಯ ಡಿಮಾಂಡ್ ಎಂದರೆ, ಪೂರ್ಣ ಚಲನಚಿತ್ರಗಳಂತೆ ಟೀಸರ್‌ಗಳು ಮತ್ತು ಪ್ರಚಾರ ವೀಡಿಯೊಗಳಿಗೂ ಸಹ ಸೆನ್ಸಾರ್ ಪ್ರಮಾಣೀಕರಣ ಕಡ್ಡಾಯವಾಗಬೇಕು.

ಈ ದೂರಿನಲ್ಲಿ, ವಯಸ್ಕ ಅಥವಾ ಸ್ಪಷ್ಟ ವಿಷಯವಿರುವ ಟೀಸರ್‌ಗಳಿಗೆ 'A' ಪ್ರಮಾಣಪತ್ರ ಅಥವಾ ಸ್ಪಷ್ಟ ವಯೋಮಿತಿ ಎಚ್ಚರಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಕೋರಲಾಗಿದೆ. "ಟಾಕ್ಸಿಕ್ ಚಿತ್ರದ ನಿರ್ಮಾಪಕರಿಗೆ ತಕ್ಷಣ ನಿರ್ದೇಶನ ನೀಡಿ, ವಯಸ್ಕ ವಿಷಯವಿರುವ ಟೀಸರ್ ಅನ್ನು ತೆಗೆದುಹಾಕಲು ಅಥವಾ ಸೂಕ್ತ ತಿದ್ದುಪಡಿ ಮಾಡಲು ಆದೇಶಿಸಬೇಕು," ಎಂದು ದೂರಿನಲ್ಲಿ ಕೋರಲಾಗಿದೆ.

ಸೆನ್ಸಾರ್ ಮಂಡಳಿಯು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಭಾರೀ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ ಎಂದೂ ಈ ದೂರು ಎಚ್ಚರಿಕೆ ನೀಡಿದೆ. ಚಿತ್ರರಂಗದ ಪ್ರಚಾರ ಸಾಮಗ್ರಿಗಳು ಸಮಾಜದ ಮೇಲೆ, ವಿಶೇಷವಾಗಿ ಯುವಜನತೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅವುಗಳ ನಿಯಂತ್ರಣದ ಅಗತ್ಯವನ್ನು ಈ ಸಂದರ್ಭ ಮತ್ತೊಮ್ಮೆ ಎತ್ತಿತೋರಿಸಿದೆ.

Latest News