ತಮಿಳು ನಟ ಆರ್ಯ ಕನ್ನಡಿಗರಿಗೂ ಚಿರಪರಿಚಿತ. ವಿಭಿನ್ನ ಪಾತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಇವರು, ತಮ್ಮ ಸಿನಿ ಜರ್ನಿಯಲ್ಲಿ ಎದುರಿಸಿದ ಅತ್ಯಂತ ರೋಚಕ ಮತ್ತು ಭಯಾನಕ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಬಾಲಾ ನಿರ್ದೇಶನದ 'ನಾನ್ ಕಡವುಳ್' ಚಿತ್ರದಲ್ಲಿ ಅಗೋರಿ ಪಾತ್ರ ಮಾಡಿದ್ದ ಆರ್ಯ, ಆ ಶೂಟಿಂಗ್ ವೇಳೆ ವಾರಣಾಸಿಯಲ್ಲಿ ಕಂಡ ಕಹಿ ಸತ್ಯಗಳ ಬಗ್ಗೆ ಮಾತನಾಡಿದ್ದಾರೆ.
ತಮಿಳು ಯೂಟ್ಯೂಬ್ ಚಾನೆಲ್ 'ಸಿನಿ ಉಳಗಂ'ಗೆ ನೀಡಿದ ಸಂದರ್ಶನದಲ್ಲಿ ಆರ್ಯ ಅವರು ವಾರಣಾಸಿಯ ಸಾಧುಗಳ ಬಗ್ಗೆ ನೀಡಿರುವ ಹೇಳಿಕೆ ಈಗ ಎಲ್ಲೆಡೆ ಭಾರಿ ಚರ್ಚೆ ಹುಟ್ಟುಹಾಕಿದೆ.
ಆರ್ಯ ಅವರ ಪ್ರಕಾರ, ವಾರಣಾಸಿಯಲ್ಲಿ ನಾವು ಕಾಣುವ ಸಾಧುಗಳಲ್ಲಿ ಎಲ್ಲರೂ ಆಧ್ಯಾತ್ಮಿಕ ಹಾದಿಯಲ್ಲಿ ಇರುವವರಲ್ಲ. "ನಾನು 'ನಾನ್ ಕಡವುಳ್' ಸಿನಿಮಾ ಮಾಡುವಾಗ ವಾರಣಾಸಿಯಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಅಲ್ಲಿರುವ ಸಾಧುಗಳಲ್ಲಿ ಶೇ. 60ರಷ್ಟು ಮಂದಿ ನಿಜವಾದ ಸಾಧುಗಳಿರಬಹುದು. ಆದರೆ ಉಳಿದ ಶೇ. 40ರಷ್ಟು ಮಂದಿ ನಕಲಿಗಳು. ಅವರು ಕೊಲೆ ಸೇರಿದಂತೆ ದೊಡ್ಡ ದೊಡ್ಡ ಕ್ರಿಮಿನಲ್ ಕೃತ್ಯಗಳನ್ನು ಎಸಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಲ್ಲಿ ಬಂದು ಅಡಗಿಕೊಂಡಿದ್ದಾರೆ" ಎಂದು ಬಾಂಬ್ ಸಿಡಿಸಿದ್ದಾರೆ.
ಹೆಸರು, ಐಡಿ ಕಾರ್ಡ್ ಏನೂ ಇಲ್ಲ!
ಅಲ್ಲಿನ ನಕಲಿ ಸಾಧುಗಳ ಸ್ಥಿತಿ ಹೇಗಿದೆ ಎಂದರೆ, ಅವರಿಗೆ ಸರಿಯಾದ ಹೆಸರೇ ಇರುವುದಿಲ್ಲವಂತೆ. "ಅವರ ಬಳಿ ಹೋಗಿ ಹೆಸರೇನು ಎಂದು ಕೇಳಿದರೆ ಬರೀ 'ಸ್ವಾಮಿ' ಅಂತ ಹೇಳ್ತಾರೆ. ಅವರ ಹತ್ತಿರ ಯಾವುದೇ ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಐಡಿ ಕಾರ್ಡ್ ಇರುವುದಿಲ್ಲ. ಸಮಾಜದಲ್ಲಿ ದೊಡ್ಡ ಅಪರಾಧ ಎಸಗಿ, ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇಲ್ಲಿ ಬಂದು ಸಾಧುಗಳ ವೇಷ ಹಾಕುತ್ತಾರೆ. ಮೂರ್ನಾಲ್ಕು ವರ್ಷ ಇಲ್ಲಿ 'ರೆಸ್ಟ್' ಮಾಡಿ, ಕೇಸ್ ಸ್ವಲ್ಪ ತಣ್ಣಗಾದ ಮೇಲೆ ಮತ್ತೆ ಅಲ್ಲಿಂದ ಮಾಯವಾಗುತ್ತಾರೆ" ಎಂದು ಆರ್ಯ ವಿವರಿಸಿದ್ದಾರೆ.
ಪೊಲೀಸರ ಎಚ್ಚರಿಕೆ ಮತ್ತು ಎಕೆ-47 ಭೀತಿ!
ಶೂಟಿಂಗ್ ಸಂದರ್ಭದಲ್ಲಿ ಎದುರಾದ ಮತ್ತೊಂದು ಭಯಾನಕ ಸಂಗತಿಯನ್ನು ಆರ್ಯ ನೆನಪಿಸಿಕೊಂಡಿದ್ದಾರೆ. "ನಾವು ಕುಂಭಮೇಳದ ಸಮಯದಲ್ಲಿ ಅಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಆಗ ಅಲ್ಲಿನ ಪೊಲೀಸರೇ ನಮಗೆ ಎಚ್ಚರಿಕೆ ನೀಡಿದ್ದರು. 'ನಾವಿಲ್ಲಿ ಕೇವಲ 50,000 ಪೊಲೀಸರಿದ್ದೇವೆ, ನಮ್ಮ ಹತ್ತಿರ ಇರೋದು ಹಳೆಯ ಮಾಡೆಲ್ ಗನ್‌ಗಳು. ಆದರೆ ಒಳಗೆ ಸಾಧುಗಳ ವೇಷದಲ್ಲಿ ಇರೋರ ಕೈಯಲ್ಲಿ ಎಕೆ-47 ಇದೆ! ಹಾಗಾಗಿ ತುಂಬಾ ಹುಷಾರಾಗಿರಿ' ಎಂದು ಪೊಲೀಸರೇ ನಮಗೆ ಹೇಳಿದ್ದರು" ಎಂದು ಆರ್ಯ ಆ ದಿನಗಳ ಭೀಕರತೆಯನ್ನು ನೆನಪಿಸಿಕೊಂಡಿದ್ದಾರೆ.
ಎಲ್ಲ ಕಡೆಯೂ ಇಂತಹ ಜನ ಇರುತ್ತಾರೆ
ವಾರಣಾಸಿಯಂತಹ ಪವಿತ್ರ ಕ್ಷೇತ್ರದಲ್ಲಿ ಇಂತಹ ಕರಾಳ ಮುಖವೂ ಇದೆ ಎಂಬುದು ಆರ್ಯ ಅವರ ಮಾತಿನ ತಾತ್ಪರ್ಯ. ಪ್ರತಿಯೊಂದು ಜಾಗದಲ್ಲೂ ಒಳ್ಳೆಯವರು ಮತ್ತು ಕೆಟ್ಟವರು ಇದ್ದೇ ಇರುತ್ತಾರೆ ಎಂಬ ಮಾತನ್ನು ಅವರು ಈ ಮೂಲಕ ಸಮರ್ಥಿಸಿಕೊಂಡಿದ್ದಾರೆ.
ಸದ್ಯ ಆರ್ಯ ಅವರು ಮಂಜು ವಾರಿಯರ್ ಜೊತೆ 'ಮಿಸ್ಟರ್. ಎಕ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ 'ನಾನ್ ಕಡವುಳ್' ಸಿನಿಮಾದ ಅಗೋರಿ ಪಾತ್ರದ ಶೂಟಿಂಗ್ ವೇಳೆ ಅವರು ಕಂಡ ಈ 'ಕ್ರಿಮಿನಲ್ ಲೋಕ'ದ ಕಥೆ ಮಾತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.