ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮಾ ಗೌಡ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿದ್ದ ದೊಡ್ಡ ವದಂತಿಯೊಂದಕ್ಕೆ ತೆರೆ ಎಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅನುಪಮಾ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಈ ಸುಳ್ಳು ಸುದ್ದಿಯ ಬಗ್ಗೆ ಈಗ ಅನುಪಮಾ ಅವರು ಅತ್ಯಂತ ವ್ಯಂಗ್ಯವಾಗಿ ಮತ್ತು ಸ್ಪಷ್ಟವಾಗಿ ಉತ್ತರ ನೀಡುವ ಮೂಲಕ ಅಭಿಮಾನಿಗಳ ಗೊಂದಲವನ್ನು ಪರಿಹರಿಸಿದ್ದಾರೆ.
ಅನುಪಮಾ ಗೌಡ ಅವರು ಮೂಲತಃ ಒಬ್ಬ ಪ್ರತಿಭಾವಂತ ನಟಿ ಮತ್ತು ನಿರೂಪಕಿ. ಕಲರ್ಸ್ ಕನ್ನಡ ವಾಹಿನಿಯ ಹಲವು ಸೂಪರ್ ಹಿಟ್ ಶೋಗಳನ್ನು ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಮೂಲಕ ಅವರು ಮನೆಮಾತಾಗಿದ್ದರು. ಸದ್ಯ ಅವರು ನಿರೂಪಣಾ ಕ್ಷೇತ್ರದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲಾ ಕೆಲಸದ ನಡುವೆ, ಅವರ ಗೆಳೆಯ ರಾಘವ್ ಅವರೊಂದಿಗೆ ಇರುವ ಒಂದು ಫೋಟೋವನ್ನು ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಕೂಡಲೇ ನೆಟ್ಟಿಗರು ಮತ್ತು ಕೆಲವು ಸೋಶಿಯಲ್ ಮೀಡಿಯಾ ಪೇಜ್‌ಗಳು, "ಅನುಪಮಾ ಗೌಡ ಅವರಿಗೆ ಸದ್ದಿಲ್ಲದೆ ನಿಶ್ಚಿತಾರ್ಥವಾಗಿದೆ" ಎಂದು ಪ್ರಚಾರ ಮಾಡಲು ಶುರು ಮಾಡಿದ್ದರು.
ಈ ವದಂತಿಗಳ ಬಗ್ಗೆ ಮಾತನಾಡಿದ ಅನುಪಮಾ, "ನನಗೆ ಸಾಮಾನ್ಯವಾಗಿ ಯಾವುದೇ ಗಾಸಿಪ್‌ಗಳಿಗೆ ಪ್ರತಿಕ್ರಿಯೆ ನೀಡುವುದು ಇಷ್ಟವಿಲ್ಲ. ಆದರೆ ನಾನು ಶೂಟಿಂಗ್‌ಗೆ ಹೋದಾಗ ಅಲ್ಲಿರುವ ಎಲ್ಲರೂ ನನಗೆ ವಿಶ್ ಮಾಡಲು ಶುರು ಮಾಡಿದ್ದಾರೆ. ಫೋನ್‌ನಲ್ಲಿ ಮೆಸೇಜ್‌ಗಳು ಬರುತ್ತಿವೆ. ಆಗಲೇ ನನಗೆ ಈ ವಿಷಯ ತಿಳಿದಿದ್ದು," ಎಂದು ಹೇಳಿದ್ದಾರೆ. ತಮ್ಮ ಬೆಸ್ಟ್ ಫ್ರೆಂಡ್ ರಾಘವ್ ಜೊತೆ ತಮ್ಮ ನಿಶ್ಚಿತಾರ್ಥ ನಡೆದಿದೆ ಎಂದು ಸುದ್ದಿ ಹಬ್ಬಿಸಿದವರ ಬಗ್ಗೆ ಅವರು ತಮಾಷೆಯಾಗಿ ಮಾತನಾಡಿದ್ದಾರೆ. "ನನ್ನ ನಿಶ್ಚಿತಾರ್ಥದ ಕಾರ್ಯಕ್ರಮಕ್ಕೆ ಹೋಗಲು ನನಗೇ ಸಾಧ್ಯವಾಗಲಿಲ್ಲ, ಈ ಬಗ್ಗೆ ಯಾರೂ ನಮಗೆ ಮಾಹಿತಿಯೇ ನೀಡಿರಲಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಅನುಪಮಾ ಅವರು ಸುಳ್ಳು ಸುದ್ದಿ ಹಬ್ಬಿಸುವವರಿಗೆ ಒಂದು ವಿಭಿನ್ನವಾದ ಸಲಹೆಯನ್ನು ನೀಡಿದ್ದಾರೆ. "ನನ್ನ ನಿಶ್ಚಿತಾರ್ಥದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರು ಕನಿಷ್ಠ ಪಕ್ಷ ನಿಜ ಅನ್ನೋ ಹಾಗೆ ಕಾಣುವ ಫೋಟೋಗಳನ್ನಾದರೂ ಬಳಸಬೇಕಿತ್ತು. ಈಗ ಹೇಗಿದ್ದರೂ ಎಐ ತಂತ್ರಜ್ಞಾನ ಬಂದಿದೆ. ಎಐ ಬಳಸಿ ನಾನು ರಾಘವ್‌ಗೆ ಉಂಗುರ ತೊಡಿಸುತ್ತಿರುವಂತಹ ಅಥವಾ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋಗಳನ್ನು ಸೃಷ್ಟಿ ಮಾಡಿ. ಆಗ ಜನರಿಗೆ ನೋಡಲು ಇನ್ನೂ ಖುಷಿಯಾಗುತ್ತದೆ," ಎಂದು ಅವರು ಕಾಲೆಳೆದಿದ್ದಾರೆ.
ಅಲ್ಲದೆ, "ಈಗಲೇ ನನಗೆ ಮದುವೆ ಮಾಡಿಸಲು ಅವಸರ ಮಾಡಬೇಡಿ. ಇನ್ನೂ ಸಮಯವಿದೆ. ಇನ್ನೊಂದು ಎರಡು ತಿಂಗಳು ಬಿಟ್ಟು ನನ್ನ ಮದುವೆಯ ಫೋಟೋಗಳನ್ನು ಎಡಿಟ್ ಮಾಡಿ ಹಾಕಿ. ಆಗ ಜನರು ಜಾಸ್ತಿ ನೋಡುತ್ತಾರೆ. ಕನಿಷ್ಠ ಪಕ್ಷ ನನ್ನ ಮದುವೆಗಾದರೂ ನನ್ನನ್ನು ಮತ್ತು ರಾಘವ್‌ನನ್ನು ಆಹ್ವಾನಿಸಿ," ಎಂದು ನಗುತ್ತಲೇ ಹೇಳುವ ಮೂಲಕ ಎಲ್ಲಾ ವದಂತಿಗಳು ಕೇವಲ ಕಟ್ಟುಕಥೆ ಎಂದು ಸಾಬೀತುಪಡಿಸಿದ್ದಾರೆ. ಈ ಮೂಲಕ ಅನುಪಮಾ ಅವರು ತಮಗೆ ಯಾವುದೇ ನಿಶ್ಚಿತಾರ್ಥ ಆಗಿಲ್ಲ ಮತ್ತು ರಾಘವ್ ಕೇವಲ ಆಪ್ತ ಸ್ನೇಹಿತ ಮಾತ್ರ ಎಂಬುದನ್ನು ಖಚಿತಪಡಿಸಿದ್ದಾರೆ.