ಬಾಲಿವುಡ್ ಅಂದ ಮೇಲೆ ಅಲ್ಲಿ ವಿವಾದಗಳಿಗೆ ಎಂದೂ ಬರಗಾಲವಿಲ್ಲ. ಅದರಲ್ಲೂ ಹಿರಿಯ ನಟ ಅನ್ನು ಕಪೂರ್ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಟಿ ತಮನ್ನಾ ಭಾಟಿಯಾ ಅವರ ಬಗ್ಗೆ ಅವರು ನೀಡಿದ ಒಂದು ಕಮೆಂಟ್ ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದೆ. ನೆಟ್ಟಿಗರು ಅನ್ನು ಕಪೂರ್ ಅವರನ್ನು "ಹಿರಿಯ ನಟನಿಗೆ ಇದು ಶೋಭೆಯಲ್ಲ" ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸಂಗತಿ ಇಷ್ಟೇ, 'ಸ್ತ್ರೀ-2' ಸಿನಿಮಾದಲ್ಲಿ ತಮನ್ನಾ ಭಾಟಿಯಾ ಅವರ 'ಆಜ್ ಕಿ ರಾತ್' ಎಂಬ ಐಟಂ ಹಾಡು ಸಖತ್ ವೈರಲ್ ಆಗಿತ್ತು. ಈ ಹಾಡಿನ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅನ್ನು ಕಪೂರ್, ತಮನ್ನಾ ಅವರ ದೇಹವನ್ನು ಬಣ್ಣಿಸುವಾಗ 'ದೂಧಿಯಾ ಬದನ್' (ಹಾಲಿನಂಥ ಮೈಮಾಟ) ಎಂಬ ಪದ ಬಳಸಿದ್ದರು. ಹಿಂದಿ ಭಾಷೆಯಲ್ಲಿ ಈ ಪದವು ತುಸು ಅಶ್ಲೀಲ ಅಥವಾ ಕಾಮ ಪ್ರಚೋದಕ ಅರ್ಥ ನೀಡುತ್ತದೆ ಎಂಬುದು ನೆಟ್ಟಿಗರ ವಾದ. ಅಲ್ಲಿಗೆ ಸುಮ್ಮನಾಗದ ಅವರು, "ತಮನ್ನಾ ಅವರ ಹಾಡು ಮತ್ತು ಮೈಮಾಟ ನೋಡಿದರೆ ಮಕ್ಕಳು ಚೆನ್ನಾಗಿ ನಿದ್ರಿಸುತ್ತಾರೆ" ಎಂದು ವ್ಯಂಗ್ಯವಾಗಿ ಹೇಳಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಅನ್ನು ಕಪೂರ್ ಅವರ 'ವಿಚಿತ್ರ' ಸಮರ್ಥನೆ!
ತಮ್ಮ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಅನ್ನು ಕಪೂರ್ ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರ ಸ್ಪಷ್ಟನೆ ಕೂಡ ಜನರಿಗೆ ಸಮಾಧಾನ ತಂದಿಲ್ಲ. "ಇಂಗ್ಲಿಷ್‌ನಲ್ಲಿ ಯಾರಾದರೂ 'ಮಿಲ್ಕಿ ಬಾಡಿ' ಎಂದರೆ ಯಾರಿಗೂ ಸಮಸ್ಯೆ ಇಲ್ಲ, ಆದರೆ ನಾನು ಹಿಂದಿಯಲ್ಲಿ ಹೇಳಿದ್ದಕ್ಕೆ ಜನರಿಗೆ ಯಾಕೆ ಇಷ್ಟು ತಲೆನೋವು?" ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, "ನಾನು ಅವರ ದೇಹವನ್ನು ಕೇವಲ ಶ್ಲಾಘಿಸಿದ್ದೇನೆ ಹೊರತು ಕಾಮದ ದೃಷ್ಟಿಯಿಂದ ನೋಡಿಲ್ಲ. 71 ವರ್ಷದ ನನಗೂ ಅವರ ವಯಸ್ಸಿನ ಮಕ್ಕಳಿದ್ದಾರೆ," ಎಂದು ತಮ್ಮ ವಯಸ್ಸನ್ನು ಮುಂದಿಟ್ಟು ಸಮರ್ಥಿಸಿಕೊಂಡಿದ್ದಾರೆ.
"ಕ್ಷಮೆ ಕೇಳಲು ಕಾಲು ಬೀಳಲು ಸಿದ್ಧ!"
ವಿವಾದ ಜೋರಾಗುತ್ತಿದ್ದಂತೆ ಅನ್ನು ಕಪೂರ್ ಒಂದು ಹೆಜ್ಜೆ ಮುಂದೆ ಹೋಗಿ "ನನ್ನಿಂದ ತಮನ್ನಾ ಅವರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳಲು ಸಿದ್ಧ. ಅವರು ಬಂದು ನನ್ನ ಬಳಿ ಕೇಳಿದರೆ ಅವರ ಪಾದ ಮುಟ್ಟಿ ಕ್ಷಮೆಯಾಚಿಸುತ್ತೇನೆ. ಅದರಲ್ಲಿ ನನಗೇನು ಮುಜುಗರ ಇಲ್ಲ" ಎಂದು ಹೇಳಿದ್ದಾರೆ. ಉದ್ದೇಶ ತಪ್ಪಾಗಿಲ್ಲದ ಮೇಲೆ ಕ್ಷಮೆ ಕೇಳಲು ಹಿಂಜರಿಕೆ ಇಲ್ಲ ಎನ್ನುವುದು ಅವರ ವಾದ.
ನೆಟ್ಟಿಗರ ಆಕ್ರೋಶಕ್ಕೆ ಕಾರಣ
ಜನರ ಸಿಟ್ಟಿಗೆ ಮುಖ್ಯ ಕಾರಣ ಒಬ್ಬ ಹಿರಿಯ ನಟನಾಗಿ ಮಹಿಳೆಯ ಬಗ್ಗೆ ಮಾತನಾಡುವಾಗ ಬಳಸುವ ಭಾಷೆ. "ಹೊಗಳೋಕೆ ಬೇರೆ ಪದಗಳೇ ಇರಲಿಲ್ಲವೇ?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಮಕ್ಕಳನ್ನು ಈ ವಿಚಾರಕ್ಕೆ ಎಳೆದು ತಂದಿದ್ದು ತುಂಬಾ ಅತಿ ಆಯ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ.