ನಟಿ ರಿಷಾ ಗೌಡ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿ ತಮಗಾದ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಇದು ಕೇವಲ ಒಬ್ಬ ನಟಿಯ ಕಥೆಯಲ್ಲ, ಪ್ರತಿದಿನ ಬಸ್, ರೈಲುಗಳಲ್ಲಿ ಓಡಾಡುವ ಸಾವಿರಾರು ಹೆಣ್ಣುಮಕ್ಕಳ ನೋವಿನ ದನಿಯಾಗಿದೆ.
ರಿಷಾ ಅವರು ಬೆಂಗಳೂರಿನ ಏರ್‌ಪೋರ್ಟ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಜೀನ್ಸ್ ಮತ್ತು ಟಾಪ್ ಧರಿಸಿದ್ದರು. ಅವರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಪದೇ ಪದೇ ರಿಷಾ ಅವರಿಗೆ ಅಸಭ್ಯವಾಗಿ ಮುಟ್ಟಲು ಪ್ರಯತ್ನಿಸುತ್ತಿದ್ದ. ಮೊದಮೊದಲು ಆಕಸ್ಮಿಕ ಇರಬಹುದು ಎಂದು ಸುಮ್ಮನಾದ ನಟಿಗೆ, ಆತ ಬೇಕಂತಲೇ ನಿಧಾನವಾಗಿ ಕೈ ಹಾಕುತ್ತಿರುವುದು ಅರಿವಾಯಿತು.
ಒಂದು ಹಂತದಲ್ಲಿ ಆತನ ವಿಕೃತಿ ಮಿತಿ ಮೀರಿದಾಗ, ರಿಷಾ ಸುಮ್ಮನೆ ಕೂರಲಿಲ್ಲ. ತಕ್ಷಣ ಎದ್ದು ನಿಂತು ಆ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದಾರೆ! ಬಸ್ಸಿನಲ್ಲಿದ್ದ ಜನರೆಲ್ಲಾ ಇದನ್ನು ನೋಡುತ್ತಿದ್ದರೂ ಯಾರೂ ಇವರ ಬೆಂಬಲಕ್ಕೆ ಬರಲಿಲ್ಲವಂತೆ. ಕೇವಲ ಬಸ್ ಕಂಡಕ್ಟರ್ ಮಾತ್ರ ರಿಷಾ ಅವರ ನೆರವಿಗೆ ಬಂದಿದ್ದಾಗಿ ಅವರು ನೆನೆದಿದ್ದಾರೆ.
"ಬಟ್ಟೆಗೂ ಕಿರುಕುಳಕ್ಕೂ ಸಂಬಂಧವಿಲ್ಲ"
ಈ ಘಟನೆಯ ಬಗ್ಗೆ ಮಾತನಾಡುತ್ತಾ ರಿಷಾ ಸಮಾಜಕ್ಕೆ ಒಂದು ಕಟು ಸತ್ಯವನ್ನು ನೆನಪಿಸಿದ್ದಾರೆ. "ಹೆಣ್ಣುಮಕ್ಕಳು ಜೀನ್ಸ್ ಹಾಕಿದ್ರೆ ಹೀಗೆ ಆಗುತ್ತೆ ಅಂತ ಕೆಲವರು ಹೇಳ್ತಾರೆ. ಆದ್ರೆ ಅದು ಸುಳ್ಳು. ಇಂತಹ ವಿಕೃತ ಮನಸ್ಥಿತಿಯವರು ಸೀರೆ ಉಟ್ಟ ಹೆಣ್ಣುಮಕ್ಕಳನ್ನೂ ಬಿಡುವುದಿಲ್ಲ. ಕಿರುಕುಳ ನೀಡುವವನಿಗೆ ನಾವು ಹಾಕುವ ಉಡುಗೆ ನೆಪ ಅಷ್ಟೇ" ಎಂದು ಆಕ್ರೋಶ ಹೊರಹಾಕಿದ್ದಾರೆ.
ದುಬೈ ವರ್ಸಸ್ ನಮ್ಮ ದೇಶ
ವಿದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಹೇಗಿದೆ ಮತ್ತು ನಮ್ಮಲ್ಲಿ ಹೇಗಿದೆ ಎಂಬ ಬಗ್ಗೆಯೂ ರಿಷಾ ಬೇಸರ ವ್ಯಕ್ತಪಡಿಸಿದ್ದಾರೆ.
ವಿದೇಶದ ಸುರಕ್ಷತೆ: ದುಬೈನಂತಹ ದೇಶಗಳಲ್ಲಿ ಹೆಣ್ಣುಮಕ್ಕಳು ಮಧ್ಯರಾತ್ರಿಯಾದರೂ ಒಂಟಿಯಾಗಿ ಧೈರ್ಯವಾಗಿ ಓಡಾಡುತ್ತಾರೆ. ಅಲ್ಲಿನ ಕಾನೂನು ಮತ್ತು ಜನರ ಮನಸ್ಥಿತಿ ಹಾಗಿದೆ.
ಆದರೆ ನಮ್ಮ ದೇಶದಲ್ಲಿ ರಾತ್ರಿ 9 ಗಂಟೆಯ ನಂತರ ಹೊರಗೆ ಹೋಗುವುದು ಅಂದ್ರೆನೇ ಹೆದರುವಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲೇ ರಕ್ಷಣೆ ಇಲ್ಲದ ಮೇಲೆ ಹೆಣ್ಣುಮಕ್ಕಳು ನೆಮ್ಮದಿಯಿಂದ ಇರೋದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇಂತಹ ಘಟನೆಗಳು ನಡೆದಾಗ ಸುತ್ತಮುತ್ತಲಿರುವ ಪುರುಷರು ಮತ್ತು ಸಹಪ್ರಯಾಣಿಕರು ಕೇವಲ ಮೂಕಪ್ರೇಕ್ಷಕರಾಗಿ ಇರಬಾರದು. ಹೆಣ್ಣುಮಕ್ಕಳು ಕಿರುಕುಳದ ವಿರುದ್ಧ ಧ್ವನಿ ಎತ್ತಿದಾಗ ಅವರಿಗೆ ಸಾಥ್ ನೀಡಬೇಕು ಎಂದು ರಿಷಾ ಮನವಿ ಮಾಡಿದ್ದಾರೆ. ಸಮಾಜದ ದೃಷ್ಟಿಕೋನ ಬದಲಾದಾಗ ಮಾತ್ರ ಮಹಿಳೆಯರು ಸುರಕ್ಷಿತವಾಗಿರಲು ಸಾಧ್ಯ ಎಂಬುದು ಅವರ ಖಡಕ್ ಮಾತು.