ಕೇವಲ 35ನೇ ವಯಸ್ಸಿಗೆ ನಿಗೂಢವಾಗಿ ಕಣ್ಣು ಮುಚ್ಚಿದ ಹಾಲಿವುಡ್ ತಾರೆ - ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಯಲಾಯ್ತು ಆಘಾತಕಾರಿ ಸತ್ಯ!!

ಹಾರರ್ ಚಲನಚಿತ್ರ 'ದಿ ರಿಂಗ್' (The Ring) ನಲ್ಲಿ ಟಿವಿಯಿಂದ ಹೊರಬರುವ ಪ್ರೇತಾತ್ಮದ ಪಾತ್ರದ ಮೂಲಕ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಮತ್ತು ಡಿಸ್ನಿಯ ಪ್ರಸಿದ್ಧ ಅನಿಮೇಟೆಡ್ ಸಿನಿಮಾ 'ಲಿಲೋ ಅಂಡ್ ಸ್ಟಿಚ್' (Lilo & Stitch) ನಲ್ಲಿ 'ಲಿಲೋ' ಪಾತ್ರಕ್ಕೆ ಧ್ವನಿ ನೀಡಿದ್ದ ಖ್ಯಾತ ಹಾಲಿವುಡ್ ಮಾಜಿ ಬಾಲನಟಿ ಡೇವೀಗ್ ಚೇಸ್ (Daveigh Chase) ಅವರ ಸಾವಿನ ಅಧಿಕೃತ ಕಾರಣ ಕೊನೆಗೂ ಬಹಿರಂಗಗೊಂಡಿದೆ.

ಹಾಲಿವುಡ್ ನಟಿ ಡೇವೀಗ್ ಚೇಸ್ ಸಾ*ವು | Photo Credit: https://www.instagram.com/gamerantofficial/
ಹಾಲಿವುಡ್ ನಟಿ ಡೇವೀಗ್ ಚೇಸ್ ಸಾ*ವು | Photo Credit: https://www.instagram.com/gamerantofficial/

ಅಧಿಕೃತ ವೈದ್ಯಕೀಯ ವರದಿಗಳ ಪ್ರಕಾರ, ಕೇವಲ 35ನೇ ವಯಸ್ಸಿಗೆ ಆಸ್ಪತ್ರೆಯಲ್ಲಿ ನಿಧನರಾದ ಡೇವೀಗ್ ಚೇಸ್ ಅವರ ಸಾವಿಗೆ 'ಏಡ್ಸ್' (AIDS) ರೋಗವೇ ಪ್ರಮುಖ ಕಾರಣ ಎಂದು ಲಾಸ್ ಏಂಜಲೀಸ್ ಕೌಂಟಿ ವೈದ್ಯಕೀಯ ಪರೀಕ್ಷಕರು (Medical Examiner) ದೃಢಪಡಿಸಿದ್ದಾರೆ. ಜೂನ್ 16 ರಂದು ಲಾಸ್ ಏಂಜಲೀಸ್‌ನ ಆಸ್ಪತ್ರೆಯೊಂದರಲ್ಲಿ ಈ ದುರಂತ ಸಂಭವಿಸಿದೆ.

ವೈದ್ಯಕೀಯ ವರದಿ ಮತ್ತು ಅಸಲಿ ಕಾರಣ

ಡೇವೀಗ್ ಚೇಸ್ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿರುವ ಲಾಸ್ ಏಂಜಲೀಸ್ ಕೌಂಟಿ ವೈದ್ಯಕೀಯ ಇಲಾಖೆ, ಅವರ ಸಾವಿನ ಪ್ರಾಥಮಿಕ ಕಾರಣ ಏಡ್ಸ್ ಎಂದು ಪಟ್ಟಿ ಮಾಡಿದೆ. ಇದರೊಂದಿಗೆ, ಅವರ ಸಾವಿಗೆ ಪೂರಕವಾದ "ಇತರ ಮಹತ್ವದ ಪರಿಸ್ಥಿತಿಗಳು" (Other significant conditions) ಎಂಬ ವಿಭಾಗದ ಅಡಿಯಲ್ಲಿ "ಕ್ರಾನಿಕ್ ಪಾಲಿಸಬ್‌ಸ್ಟೆನ್ಸ್ ಯೂಸ್" (Chronic polysubstance use) ಅಂದರೆ ದೀರ್ಘಕಾಲದವರೆಗೆ ಏಕಕಾಲದಲ್ಲಿ ಹಲವಾರು ಮಾದಕ ದ್ರವ್ಯಗಳನ್ನು ಅತಿಯಾಗಿ ಸೇವಿಸಿರುವುದನ್ನು ನಮೂದಿಸಲಾಗಿದೆ. ಆದಾಗ್ಯೂ, ವೈದ್ಯಕೀಯ ಮಂಡಳಿಯು ಇದನ್ನು "ನೈಸರ್ಗಿಕ ಸಾವು" (Natural Death) ಎಂದು ತೀರ್ಪು ನೀಡಿದೆ.

ಆದರೆ, ಚೇಸ್ ನಿಧನರಾದ ತಕ್ಷಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರ ಮ್ಯಾನೇಜರ್ ಜಾನ್ ರಯಾನ್ ಜೂನಿಯರ್, "ಡೇವೀಗ್ ಚೇಸ್ ಅವರು ಲಾಸ್ ಏಂಜಲೀಸ್ ಆಸ್ಪತ್ರೆಯಲ್ಲಿ ಮೆನಿಂಜೈಟಿಸ್ (ಮಿದುಳು ಜ್ವರ) ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಕೊನೆಯದಾಗಿ ಸೆಪ್ಸಿಸ್ (ರಕ್ತದ ಸೋಂಕು) ಕಾರಣದಿಂದಾಗಿ ಮೃತಪಟ್ಟಿದ್ದಾರೆ" ಎಂದು ಬಿಬಿಸಿಗೆ ತಿಳಿಸಿದ್ದರು. ಆದರೆ ಈಗ ಅಧಿಕೃತ ಸರ್ಕಾರಿ ವರದಿಯು ಆಕೆ ಏಡ್ಸ್‌ನಿಂದಲೇ ಮೃತಪಟ್ಟಿರುವುದನ್ನು ಸ್ಪಷ್ಟಪಡಿಸಿದೆ.

ಅನಾಥವಾಗಿ ಸತ್ತ ಹಾಲಿವುಡ್ ತಾರೆ

ಡೇವೀಗ್ ಚೇಸ್ ಅವರ ತಂದೆ ಜಾನ್ ಡೇವಿಡ್ ಶ್ವಾಲಿಯರ್ ಅವರು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗೆ ಅತ್ಯಂತ ಆಘಾತಕಾರಿ ಮತ್ತು ಬೇಸರದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಹಾಲಿವುಡ್‌ನಲ್ಲಿ ಸ್ಟಾರ್ ಆಗಿ ಮಿಂಚಿದ್ದ ಡೇವೀಗ್ ಚೇಸ್, ಕೊನೆಯ ದಿನಗಳಲ್ಲಿ ತೀವ್ರ ಬಡತನ ಮತ್ತು ದುಸ್ಥಿತಿಗೆ ತಲುಪಿದ್ದರು. ಸಾವಿಗೂ ಮುನ್ನ ಆಕೆಗೆ ಸ್ವಂತ ಮನೆ ಇರಲಿಲ್ಲ, ಆಕೆ ಲಾಸ್ ಏಂಜಲೀಸ್‌ನಲ್ಲಿ ಬೀದಿಬದಿಯ ನಿರಾಶ್ರಿತಳಾಗಿ (Homeless) ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿದ್ದಳು ಎಂದು ಹೆತ್ತ ತಂದೆ ಕಣ್ಣೀರಿಟ್ಟಿದ್ದಾರೆ.

ಬಾಲನಟಿಯಾಗಿ ಹಾಲಿವುಡ್ ಪ್ರವೇಶ

ಡೇವೀಗ್ ಶ್ವಾಲಿಯರ್ ಎಂಬ ಮೂಲ ಹೆಸರಿನ ಈ ನಟಿ, ಕೇವಲ ನಾಲ್ಕು ವರ್ಷ ವಯಸ್ಸಿನವಳಿದ್ದಾಗಲೇ ನಟನೆಯತ್ತ ಆಕರ್ಷಿತರಾಗಿದ್ದರು. ತಮ್ಮ 7ನೇ ವಯಸ್ಸಿನಲ್ಲಿ ಹಾಲಿವುಡ್‌ನಲ್ಲಿ ಮೊದಲ ಬಾರಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಪ್ರಸಿದ್ಧ ಸಿಟ್‌ಕಾಮ್ ಸರಣಿ 'ಸಬ್ರಿನಾ ದಿ ಟೀನೇಜ್ ವಿಚ್' (Sabrina the Teenage Witch) ನಲ್ಲಿ ಒಂದು ಸಣ್ಣ ಪಾತ್ರದ ಮೂಲಕ ಇವರ ಟಿವಿ ವೃತ್ತಿಜೀವನ ಆರಂಭವಾಯಿತು.

2001ರಲ್ಲಿ ತೆರೆಕಂಡ 'ಡೋನಿ ಡಾರ್ಕೊ' (Donnie Darko) ಚಿತ್ರದಲ್ಲಿ ಸಮಂತಾ ಡಾರ್ಕೊ ಪಾತ್ರವನ್ನು ನಿರ್ವಹಿಸುವ ಮೂಲಕ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ನಂತರ 2009ರಲ್ಲಿ ಬಿಡುಗಡೆಯಾದ ಇದರ ಮುಂದುವರಿದ ಭಾಗ 'ಎಸ್‌ ಡಾರ್ಕೊ' (S Darko) ಚಿತ್ರದಲ್ಲಿ ಇವರೇ ಮುಖ್ಯ ಪಾತ್ರದ ನಾಯಕಿಯ ಸಹೋದರಿಯಾಗಿ ನಟಿಸಿದ್ದರು.

ಜಗತ್ತನ್ನೇ ಬೆಚ್ಚಿಬೀಳಿಸಿದ್ದ 'ದಿ ರಿಂಗ್' ಮತ್ತು 'ಲಿಲೋ' ಪಾತ್ರಗಳು

2002ರ ವರ್ಷ ಡೇವೀಗ್ ಚೇಸ್ ಅವರ ವೃತ್ತಿಜೀವನದ ಸುವರ್ಣ ವರ್ಷವಾಗಿತ್ತು. ಆ ವರ್ಷ ಬಿಡುಗಡೆಯಾದ ಜಪಾನಿ ಕ್ಲಾಸಿಕ್ ಹಾರರ್ ಚಿತ್ರದ ಅಮೆರಿಕನ್ ರಿಮೇಕ್ 'ದಿ ರಿಂಗ್' ಸಿನಿಮಾದಲ್ಲಿ ಆಕೆ 'ಸಮರಾ ಮೋರ್ಗನ್' ಎಂಬ ಭಯಾನಕ ಪ್ರೇತಾತ್ಮದ ಪಾತ್ರವನ್ನು ಮಾಡಿದ್ದರು. ವಿಡಿಯೋ ಟೇಪ್ ನೋಡಿದವರನ್ನು ಕೊಲ್ಲುವ, ಉದ್ದನೆಯ ಕೂದಲು ಬಿಟ್ಟುಕೊಂಡು ಟಿವಿ ಪರದೆಯಿಂದ ತೆವಳುತ್ತಾ ಹೊರಬರುವ ಆಕೆಯ ಆ ನಟನೆ ಇಂದಿಗೂ ಜಗತ್ತಿನ ಅತ್ಯಂತ ಭಯಾನಕ ಹಾರರ್ ದೃಶ್ಯಗಳಲ್ಲಿ ಒಂದಾಗಿದೆ. ಈ ಅದ್ಭುತ ನಟನೆಗಾಗಿ 2003ರ ಎಂಟಿವಿ ಮೂವಿ ಅವಾರ್ಡ್ಸ್‌ನಲ್ಲಿ (MTV Movie Awards) ಆಕೆಗೆ 'ಅತ್ಯುತ್ತಮ ವಿಲನ್' (Best Villain) ಪ್ರಶಸ್ತಿ ಲಭಿಸಿತ್ತು.

ಅನಿಮೇಷನ್ ಲೋಕದಲ್ಲಿ ಸೂಪರ್ ಸ್ಟಾರ್

ಅದೇ 2002 ರಲ್ಲಿ ಡಿಸ್ನಿ ಸಂಸ್ಥೆಯ ಸೂಪರ್ ಹಿಟ್ ಅನಿಮೇಟೆಡ್ ಸಿನಿಮಾ 'ಲಿಲೋ ಅಂಡ್ ಸ್ಟಿಚ್' ನಲ್ಲಿ ಎಲ್ವಿಸ್ ಪ್ರೀಸ್ಲಿಯನ್ನು ಆರಾಧಿಸುವ ಹವಾಯಿ ದ್ವೀಪದ ಮುದ್ದಾದ ಹುಡುಗಿ 'ಲಿಲೋ' ಪಾತ್ರಕ್ಕೆ ಡೇವೀಗ್ ಧ್ವನಿ ನೀಡಿದ್ದರು. ಈ ಧ್ವನಿಗಾಗಿ ಆಕೆಗೆ ಅನಿಮೇಷನ್ ಜಗತ್ತಿನ ಅತ್ಯುನ್ನತ 'ಆನಿ ಪ್ರಶಸ್ತಿ' (Annie Award) ಒಲಿದುಬಂದಿತ್ತು. ಇದರ ಜೊತೆಗೆ ಜಪಾನಿನ ವಿಶ್ವಪ್ರಸಿದ್ಧ ಅನಿಮೆ ಸಿನಿಮಾ 'ಸ್ಪಿರಿಟೆಡ್ ಅವೇ' (Spirited Away) ನ ಇಂಗ್ಲಿಷ್ ಆವೃತ್ತಿಯಲ್ಲಿ ಮುಖ್ಯ ಪಾತ್ರ 'ಚಿಹಿರೋ'ಗೆ ಧ್ವನಿ ನೀಡಿದ್ದು ಇದೇ ಡೇವೀಗ್ ಚೇಸ್.

ಡ್ರ*ಗ್ಸ್ ದಾಸಿಯಾಗಿ ಕಳೆದುಹೋದ ಜೀವನ

ಹಾಲಿವುಡ್‌ನ ಉತ್ತುಂಗದಲ್ಲಿದ್ದಾಗಲೇ, ಅಂದರೆ 2015 ರಲ್ಲಿ ಡೇವೀಗ್ ಚೇಸ್ ಅವರು ಪೂರ್ಣ ಪ್ರಮಾಣದ ನಟನೆಯಿಂದ ನಿವೃತ್ತಿ ಹೊಂದಿದರು ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಹಾಲಿವುಡ್ ವರದಿಗಳ ಪ್ರಕಾರ, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಡೇವೀಗ್ ತಪ್ಪು ಹಾದಿ ಹಿಡಿದಿದ್ದರು. ಇವರ ಕೊನೆಯ ದಿನಗಳು ಅತ್ಯಂತ ಕರಾಳವಾಗಿದ್ದವು.

ಮಾದಕ ದ್ರವ್ಯಗಳ ಅತಿಯಾದ ಚಟಕ್ಕೆ ಬಿದ್ದಿದ್ದ ಆಕೆ, ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಮತ್ತು ಕದ್ದ ಕಾರಿನಲ್ಲಿ ಮೋಜಿನ ಸವಾರಿ (Joyriding) ಮಾಡಿದ ಆರೋಪದ ಮೇಲೆ ಹಲವು ಬಾರಿ ಪೊಲೀಸರಿಂದ ಬಂಧಿಸಲ್ಪಟ್ಟು ಕಾನೂನು ಸಂಕಷ್ಟಗಳನ್ನು ಎದುರಿಸಿದ್ದರು. ಕೊನೆಗೆ ಇದೇ ಡ್ರಗ್ಸ್ ಚಟ ಮತ್ತು ಏಡ್ಸ್ ರೋಗಕ್ಕೆ ತುತ್ತಾಗಿ, ಜಗತ್ತಿಗೆ ಅದ್ಭುತ ಪಾತ್ರಗಳನ್ನು ನೀಡಿದ ಈ ಪ್ರತಿಭಾನ್ವಿತ ನಟಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಅನಾಥವಾಗಿ ಕಣ್ಣು ಮುಚ್ಚಿರುವುದು ಇಡೀ ಸಿನೆಮಾ ಲೋಕಕ್ಕೆ ವಿಷಾದ ಮೂಡಿಸಿದೆ.

Latest News