ಸರ್ಕಾರಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಲಕ್ಷಾಂತರ ಯುವಪ್ರತಿಭೆಗಳಿಗೆ ಆಘಾತ ನೀಡಿರುವ ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆಯಲ್ಲಿ ಹೊಸ ಸಂಗತಿಯೊಂದು ಹೋರಬಂದಿದೆ. ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಹಲವು ಮಹತ್ವದ ಅಂಶಗಳು ಉಲ್ಲೇಖವಾಗಿವೆ.ಅದರಲ್ಲೂ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳೇ ಇರಲಿಲ್ಲ ಎಂಬ ವಿಚಾರ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಕೆಪಿಎಸ್ಸಿ ಮಾಜಿ ಸದಸ್ಯ ಗ್ಯಾನೇಂದ್ರ ಕುಮಾರ್ ನೀಡಿರುವ ಹೇಳಿಕೆಯೂ ತನಿಖಾ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ಸಿಸಿಟಿವಿ ಇಲ್ಲದ ಸ್ಥಳದಲ್ಲಿ ಅಭ್ಯರ್ಥಿಗಳ ಸಂದರ್ಶನ!
ಪಶುವೈದ್ಯಾಧಿಕಾರಿ, ಕಿರಿಯ ಎಂಜಿನಿಯರ್ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬರುತ್ತಿತ್ತು. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಅನ್ಯಾಯ ಮಾಡಲಾಗಿದೆ ಎಂಬ ದೂರುಗಳೂ ಇದ್ದವು.
ಇದೀಗ ಸಂದರ್ಶನ ಪ್ರಕ್ರಿಯೆಯಲ್ಲೇ ಹಲವು ಅನುಮಾನಾಸ್ಪದ ಸಂಗತಿಗಳು ನಡೆದಿರುವುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಅಭ್ಯರ್ಥಿಗಳ ಖುದ್ದು ಸಂದರ್ಶನ ನಡೆಸುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಇರಲಿಲ್ಲ ಎಂಬ ಅಂಶ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ನೇಮಕಾತಿಯಂತಹ ಮಹತ್ವದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಅಗತ್ಯವಾಗಿದ್ದರೂ, ಸಿಸಿಟಿವಿ ಇಲ್ಲದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕುರಿತು ಇಡಿ ಅಧಿಕಾರಿಗಳು ಗ್ಯಾನೇಂದ್ರ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಸಿಸಿಟಿವಿ ವ್ಯವಸ್ಥೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕೆಪಿಎಸ್ಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನು ವಿಚಾರಿಸುವಂತೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಸಂದರ್ಶನದ ವೇಳೆ ಕ್ಯಾಮೆರಾಗಳನ್ನು ಅಳವಡಿಸದಿರುವುದಕ್ಕೆ ನಿಖರ ಕಾರಣವೇನು ಎಂಬುದು ಇದೀಗ ತನಿಖೆಯ ಪ್ರಮುಖ ವಿಚಾರವಾಗಿದೆ.
15 ಕೋಟಿ ರೂಪಾಯಿ ಹಣದ ಬಗ್ಗೆ ಗಂಭೀರ ಆರೋಪ
ಈ ಪ್ರಕರಣದಲ್ಲಿ ಕೇಳಿಬಂದಿರುವ ಮತ್ತೊಂದು ಪ್ರಮುಖ ಸಂಗತಿಯೆಂದರೆ ಸುಮಾರು 15 ಕೋಟಿ ರೂಪಾಯಿ ಹಣದ ವ್ಯವಹಾರ. ಪ್ರಕರಣದ ಮತ್ತೊಬ್ಬ ಆರೋಪಿ ಬಸವರಾಜ್ ಕನ್ನಾಳೆ, ಅಭ್ಯರ್ಥಿಗಳಿಂದ ಸಂಗ್ರಹಿಸಿದ ಸುಮಾರು 15 ಕೋಟಿ ರೂಪಾಯಿ ಹಣವನ್ನು ಜಯಮಹಲ್ನಲ್ಲಿರುವ ಗ್ಯಾನೇಂದ್ರ ಕುಮಾರ್ ಅವರ ನಿವಾಸಕ್ಕೆ ತಲುಪಿಸಿರುವುದಾಗಿ ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ಬಸವರಾಜ್ ಕನ್ನಾಳೆ ಮಾಡಿರುವ ಆರೋಪವನ್ನು ಗ್ಯಾನೇಂದ್ರ ಕುಮಾರ್ ನಿರಾಕರಿಸಿದ್ದಾರೆ. ತಾನು ಅವರಿಂದ ಯಾವುದೇ ಹಣವನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಕುಟುಂಬಸ್ಥರ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿ ನಗದು
ಗ್ಯಾನೇಂದ್ರ ಕುಮಾರ್ ಹಣ ಪಡೆದಿಲ್ಲ ಎಂಬ ವಾದದ ನಡುವೆಯೇ, ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತದ ನಗದು ಠೇವಣಿಯಾಗಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ಒಂದು ಖಾತೆಯಲ್ಲಿ 15,39,500 ರೂಪಾಯಿ ಹಾಗೂ ಮತ್ತೊಂದು ಖಾತೆಯಲ್ಲಿ 10,94,000 ರೂಪಾಯಿ ನಗದು ಜಮೆಯಾಗಿರುವುದು ತನಿಖಾ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ಈ ಹಣ ಎಲ್ಲಿಂದ ಬಂತು? ಯಾವ ಕಾರಣಕ್ಕಾಗಿ ನಗದು ರೂಪದಲ್ಲಿ ಠೇವಣಿ ಮಾಡಲಾಗಿದೆ? ಎಂಬ ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಮುಂದಿಟ್ಟಿದ್ದಾರೆ. ಆದರೆ, ಹಣದ ಮೂಲದ ಕುರಿತು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಗ್ಯಾನೇಂದ್ರ ಕುಮಾರ್ ಉತ್ತರ ನೀಡಲು ನಿರಾಕರಿಸಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಈ ಹಣದ ವ್ಯವಹಾರಗಳಿಗೂ ಕೆಪಿಎಸ್ಸಿ ನೇಮಕಾತಿ ಅಕ್ರಮಕ್ಕೂ ಸಂಬಂಧವಿದೆಯೇ ಎಂಬುದನ್ನು ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.
ಅರ್ಹ ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೇ?
ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣವು ರಾಜ್ಯದ ಉದ್ಯೋಗಾಕಾಂಕ್ಷಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಗಲು-ರಾತ್ರಿ ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಸಿಗಬೇಕು ಎಂಬುದು ಎಲ್ಲರ ನಿರೀಕ್ಷೆ. ಆದರೆ, ಹಣದ ಆಮಿಷಕ್ಕೆ ಅರ್ಹತೆಯನ್ನು ಬದಿಗೊತ್ತಿ ಹುದ್ದೆಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ.
ಪಶುವೈದ್ಯಾಧಿಕಾರಿ, ಕಿರಿಯ ಎಂಜಿನಿಯರ್ ಸೇರಿದಂತೆ ವಿವಿಧ ಗೆಜೆಟೆಡ್ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿತ್ತು. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಶಂಕೆ ವ್ಯಕ್ತವಾದ ಬಳಿಕ ಜಾರಿ ನಿರ್ದೇಶನಾಲಯವೂ ತನಿಖೆ ಕೈಗೆತ್ತಿಕೊಂಡಿದೆ.
ಸದ್ಯ ಬಸವರಾಜ್ ಕನ್ನಾಳೆ ಅವರ ಹೇಳಿಕೆ, ಗ್ಯಾನೇಂದ್ರ ಕುಮಾರ್ ಅವರ ಪ್ರತಿಕ್ರಿಯೆ, ಕುಟುಂಬಸ್ಥರ ಖಾತೆಗಳಲ್ಲಿನ ನಗದು ಠೇವಣಿ ಹಾಗೂ ಸಿಸಿಟಿವಿ ಇಲ್ಲದ ಸಂದರ್ಶನದ ವಿಚಾರಗಳು ತನಿಖೆಯಲ್ಲಿ ಮಹತ್ವ ಪಡೆದುಕೊಂಡಿವೆ. ಈ ಎಲ್ಲಾ ಆರೋಪಗಳಿಗೆ ಮುಂದಿನ ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಸ್ಪಷ್ಟ ಉತ್ತರ ಸಿಗಬೇಕಿದೆ. ಹಗರಣದ ಸಂಪೂರ್ಣ ಸತ್ಯ ಹೊರಬಂದು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರೆಯುತ್ತದೆಯೇ ಎಂಬುದನ್ನು ರಾಜ್ಯದ ಉದ್ಯೋಗಾಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ.
Comments