ಬೆಂಗಳೂರಿನ ಹೆಮ್ಮೆಯ ವಾಚ್ ಬ್ರ್ಯಾಂಡ್ ಎಚ್‌ಎಂಟಿ (HMT) ಮತ್ತೆ ಸುದ್ದಿಯಲ್ಲಿದೆ. ತನ್ನ ವಾಚ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜಾಲಹಳ್ಳಿಯಲ್ಲಿ ಮತ್ತೊಂದು ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿ ಯೋಜನೆ ಮಾಡಿದೆ . ಮುಂದಿನ ಮಾರ್ಚ್ ದ ವೇಳೆಗೆ ತಿಂಗಳಿಗೆ 25 ಸಾವಿರ ವಾಚ್‌ಗಳನ್ನು ಉತ್ಪಾದಿಸುವ ಗುರಿಯನ್ನೂ ಹೊಂದಿದು ಇದೇ ವೇಳೆ, ಹಳೆಯ ಕಾಲದ ಜನಪ್ರಿಯ ಮೆಕ್ಯಾನಿಕಲ್ ವಾಚ್‌ಗಳನ್ನು ಮತ್ತೆ ತಯಾರಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಜಾಲಹಳ್ಳಿಯಲ್ಲಿ ಮತ್ತೊಂದು ಘಟಕ ಸ್ಥಾಪನೆಗೆ ಸಿದ್ಧತೆ
ಎಚ್‌ಎಂಟಿ ವಾಚ್‌ಗಳಿಗೆ ಇತ್ತೀಚಿನ ತಿಂಗಳುಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಸೀಮಿತ ಆವೃತ್ತಿಯ ವಾಚ್‌ಗಳು ಬಿಡುಗಡೆಯಾದಾಗ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೇಡಿಕೆಯನ್ನು ಪೂರೈಸಲು ಈಗಿರುವ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಜಾಲಹಳ್ಳಿಯಲ್ಲಿ ಮತ್ತೊಂದು ಘಟಕ ಸ್ಥಾಪಿಸಲು ಕಂಪನಿ ಮುಂದಾಗಿದೆ.
ವರದಿಗಳ ಪ್ರಕಾರ, ಹೊಸ ಘಟಕಕ್ಕೆ ಅಗತ್ಯವಿರುವ ಕಟ್ಟಡ ಸಿದ್ಧವಾಗಿದ್ದು, ಕಾರ್ಯಾರಂಭಕ್ಕೆ ಬೇಕಾದ ಅನುಮತಿಗಳಿಗಾಗಿ ಕಂಪನಿ ಕಾಯುತ್ತಿದೆ. ಅನುಮತಿ ದೊರೆತ ಬಳಿಕ ಘಟಕದ ಕಾರ್ಯಚಟುವಟಿಕೆ ಆರಂಭಿಸುವ ಯೋಜನೆಯಿದೆ ಎಂದು ಎಚ್‌ಎಂಟಿ ವ್ಯವಸ್ಥಾಪಕ ನಿರ್ದೇಶಕ ಎನ್. ರಮೇಶ್ ಕುಮಾರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಿಂಗಳಿಗೆ 25 ಸಾವಿರ ವಾಚ್‌ಗಳ ಉತ್ಪಾದನೆ ಗುರಿ
ಪ್ರಸ್ತುತ ಎಚ್‌ಎಂಟಿಯ ವಾಚ್‌ಗಳ ಬೇಡಿಕೆ ಮತ್ತು ಉತ್ಪಾದನಾ ಸಾಮರ್ಥ್ಯದ ನಡುವೆ ಅಂತರವಿದೆ. ದಿ ಹಿಂದೂ ವರದಿಯ ಪ್ರಕಾರ, ಕಂಪನಿಯ ಆಂತರಿಕ ಸಮೀಕ್ಷೆಯಲ್ಲಿ ತಿಂಗಳಿಗೆ ಸುಮಾರು ಒಂದು ಲಕ್ಷ ವಾಚ್‌ಗಳಿಗೆ ಬೇಡಿಕೆ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಆಗಿನ ಸ್ಥಾಪಿತ ಜೋಡಣೆ ಸಾಮರ್ಥ್ಯ ತಿಂಗಳಿಗೆ ಸುಮಾರು 10 ಸಾವಿರ ವಾಚ್‌ಗಳಷ್ಟಿತ್ತು. ಈ ಹಿನ್ನೆಲೆಯಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹಂತ ಹಂತವಾಗಿ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ.
ಇದೀಗ ಮಾರ್ಚ್ ವೇಳೆಗೆ ತಿಂಗಳಿಗೆ 25 ಸಾವಿರ ವಾಚ್‌ಗಳನ್ನು ಉತ್ಪಾದಿಸುವ ಗುರಿಯನ್ನು ಎಚ್‌ಎಂಟಿ ಹೊಂದಿದೆ ಎಂದು ನವೆಂಬರ್ 24ರ ವರದಿ ತಿಳಿಸಿದೆ. ಹೊಸ ಘಟಕ ಆರಂಭವಾದರೆ ಉತ್ಪಾದನೆ ಹೆಚ್ಚಿಸಲು ಸಹಾಯವಾಗಬಹುದು. ಆದರೆ ಈ ಗುರಿ ಸಾಧನೆಯಾಗಲು ಘಟಕದ ಕಾರ್ಯಾರಂಭ, ಅನುಮತಿಗಳು ಮತ್ತು ಉತ್ಪಾದನಾ ವ್ಯವಸ್ಥೆಯ ವಿಸ್ತರಣೆ ಮುಖ್ಯವಾಗಿವೆ.
ಕನ್ನಡಿಗ ವಾಚ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ
ಇತ್ತೀಚೆಗೆ ಬಿಡುಗಡೆಯಾದ ‘ಎಚ್‌ಎಂಟಿ ಕನ್ನಡಿಗ’ ವಾಚ್ ಸರಣಿಯೂ ಗ್ರಾಹಕರ ಗಮನ ಸೆಳೆದಿದೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕರ್ನಾಟಕದ ಗುರುತನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ಸರಣಿಯನ್ನು ನವೆಂಬರ್ 1ರಂದು ಜಾಲಹಳ್ಳಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ವರದಿಯ ಪ್ರಕಾರ, ಮರುದಿನವೇ ಸುಮಾರು 3,000 ವಾಚ್‌ಗಳು ಮಾರಾಟವಾಗಿದ್ದವು. ಈ ಹಿಂದೆ ಆಗಸ್ಟ್ 15ರಂದು ಬಿಡುಗಡೆಯಾದ ಗಂಡಭೇರುಂಡ ವಿನ್ಯಾಸದ ವಿಶೇಷ ವಾಚ್ ಖರೀದಿಸಲು ಜಾಲಹಳ್ಳಿಯ ಎಚ್‌ಎಂಟಿ ಮಳಿಗೆಯ ಮುಂದೆ ಸುಮಾರು ಎರಡು ಕಿಲೋಮೀಟರ್ ಉದ್ದದ ಸರತಿ ಸಾಲು ಕಂಡುಬಂದಿತ್ತು.
ಹಳೆಯ ಮೆಕ್ಯಾನಿಕಲ್ ವಾಚ್‌ಗಳು ಮತ್ತೆ ಬರಲಿವೆಯೇ?
ಎಚ್‌ಎಂಟಿ ಅಭಿಮಾನಿಗಳು ಮತ್ತು ವಾಚ್ ಸಂಗ್ರಹಕಾರರಲ್ಲಿ ಈಗ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಹಳೆಯ ಮೆಕ್ಯಾನಿಕಲ್ ವಾಚ್‌ಗಳ ಮರುಬಿಡುಗಡೆ. ಜನತಾ, ಪೈಲಟ್, ಕೋಹಿನೂರ್ ಸೇರಿದಂತೆ ಹಳೆಯ ಮಾದರಿಗಳಿಗೆ ಇಂದಿಗೂ ಅಭಿಮಾನಿಗಳಿದ್ದಾರೆ. ಆದರೆ ಈ ಮಾದರಿಗಳನ್ನೇ ಮತ್ತೆ ಬಿಡುಗಡೆ ಮಾಡಲಾಗುತ್ತದೆ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿಲ್ಲ.
ದಿ ಹಿಂದೂಗೆ ನೀಡಿದ ಸಂದರ್ಶನದಲ್ಲಿ ಎಚ್‌ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್. ರಮೇಶ್ ಕುಮಾರ್ ಅವರು ಮೆಕ್ಯಾನಿಕಲ್ ವಾಚ್‌ಗಳನ್ನು ಪರಿಚಯಿಸುವ ಪ್ರಸ್ತಾವನೆ ಚರ್ಚೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಮೆಕ್ಯಾನಿಕಲ್ ವಾಚ್‌ಗಳ ಮರುಬಿಡುಗಡೆ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಮಾದರಿ, ಬೆಲೆ ಅಥವಾ ಬಿಡುಗಡೆ ದಿನಾಂಕ ಇನ್ನೂ ಖಚಿತವಾಗಿಲ್ಲ.
ಎಚ್‌ಎಂಟಿಯ ಇತಿಹಾಸ ಮತ್ತೆ ಚರ್ಚೆಗೆ
1953ರಲ್ಲಿ ಸ್ಥಾಪನೆಯಾದ ಹಿಂದೂಸ್ತಾನ್ ಮೆಷಿನ್ ಟೂಲ್ಸ್ (HMT) ಭಾರತೀಯ ಕೈಗಾರಿಕಾ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. 1961ರಲ್ಲಿ ವಾಚ್ ವಿಭಾಗ ಆರಂಭವಾಯಿತು. ಜಪಾನ್‌ನ ಸಿಟಿಜನ್ ಸಂಸ್ಥೆಯ ಸಹಯೋಗದಲ್ಲಿ ಬಿಡುಗಡೆಯಾದ ‘ಜನತಾ’ ವಾಚ್ ಸೇರಿದಂತೆ ಹಲವು ಮಾದರಿಗಳು ಜನಪ್ರಿಯತೆ ಗಳಿಸಿದ್ದವು. 1970 ಮತ್ತು 1980ರ ದಶಕಗಳಲ್ಲಿ ಎಚ್‌ಎಂಟಿ ವಾಚ್‌ಗಳು ಮದುವೆ, ಉಡುಗೊರೆ ಮತ್ತು ವೈಯಕ್ತಿಕ ನೆನಪುಗಳೊಂದಿಗೆ ಬೆಸೆದುಕೊಂಡಿದ್ದವು.
ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ 2016ರಲ್ಲಿ ಎಚ್‌ಎಂಟಿ ವಾಚಸ್ ಲಿಮಿಟೆಡ್‌ನ ಕಾರ್ಯಾಚರಣೆ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೂ ಎಚ್‌ಎಂಟಿ ಲಿಮಿಟೆಡ್ ಸೀಮಿತ ಪ್ರಮಾಣದಲ್ಲಿ ವಾಚ್‌ಗಳ ಜೋಡಣೆ ಮತ್ತು ಮಾರಾಟವನ್ನು ಮುಂದುವರಿಸಿದೆ. 2024ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವೂ ಕಂಪನಿ ಸಂಪೂರ್ಣವಾಗಿ ಮುಚ್ಚಿಲ್ಲ; ಸೀಮಿತ ಜೋಡಣೆ ಮತ್ತು ಮಾರಾಟ ನಡೆಯುತ್ತಿದೆ ಎಂದು ಸಂಸತ್ತಿನಲ್ಲಿ ತಿಳಿಸಿತ್ತು.
ಒಟ್ಟಿನಲ್ಲಿ, ಎಚ್‌ಎಂಟಿ ವಾಚ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಕಂಪನಿಯ ಉತ್ಪಾದನಾ ವಿಸ್ತರಣೆಗೆ ಪ್ರೇರಣೆಯಾಗಿದೆ. ಜಾಲಹಳ್ಳಿಯಲ್ಲಿ ಮತ್ತೊಂದು ಘಟಕ ಸ್ಥಾಪಿಸುವ ಯೋಜನೆ ಮತ್ತು ತಿಂಗಳಿಗೆ 25 ಸಾವಿರ ವಾಚ್‌ಗಳ ಗುರಿ ಕಂಪನಿಯ ಮುಂದಿನ ಹೆಜ್ಜೆಗಳಾಗಿವೆ. ಆದರೆ ಹಳೆಯ ಮೆಕ್ಯಾನಿಕಲ್ ವಾಚ್‌ಗಳ ಮರುಬಿಡುಗಡೆ ಕುರಿತು ಅಧಿಕೃತ ಘೋಷಣೆ ಬರುವವರೆಗೆ ಅದನ್ನು ಖಚಿತ ಸುದ್ದಿಯಾಗಿ ಪರಿಗಣಿಸಬಾರದು
Comments