ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ವೇಗವಾಗಿ ನಗರೀಕರಣಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸುವ ಯೋಜನೆ ಚರ್ಚೆಯಲ್ಲಿದು ಈ ಪ್ರಸ್ತಾವನೆ ಜಾರಿಯಾದರೆ, ಜಿಲ್ಲೆಯ ಹೊರವಲಯದ ಹಲವು ಗ್ರಾಮೀಣ ಪ್ರದೇಶಗಳ ಆಡಳಿತ ವ್ಯವಸ್ಥೆ ಬದಲಾಗಲಿದ್ದು, ಗ್ರಾಮ ಪಂಚಾಯಿತಿ ವ್ಯವಸ್ಥೆಯ ಬದಲಿಗೆ ಮಹಾನಗರ ಪಾಲಿಕೆ ಆಡಳಿತ ಬರಬಹುದುಗಿದೆ
ಬೆಂಗಳೂರು ನಗರ ಜಿಲ್ಲೆ ಸುಮಾರು 2,196 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ನಗರದ ಹೊರವಲಯದಲ್ಲಿ ಐಟಿ ಕಂಪನಿಗಳು, ಕೈಗಾರಿಕಾ ಪ್ರದೇಶಗಳು, ಅಪಾರ್ಟ್ಮೆಂಟ್ಗಳು, ವಸತಿ ಬಡಾವಣೆಗಳು ಹಾಗೂ ವಾಣಿಜ್ಯ ಕೇಂದ್ರಗಳು ವೇಗವಾಗಿ ವಿಸ್ತರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆಯ ಬದಲಾಗಿ ನಗರ ಆಡಳಿತ ವ್ಯವಸ್ಥೆ ತರಬೇಕೆಂಬ ಚಿಂತನೆ ಸರ್ಕಾರದ ಮುಂದಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಎಷ್ಟು ಗ್ರಾಮ ಪಂಚಾಯಿತಿಗಳಿವೆ?
ಸುದ್ದಿ ವರದಿಯ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಸ್ತುತ 86 ಗ್ರಾಮ ಪಂಚಾಯಿತಿಗಳು ಹಾಗೂ 11 ನಗರ ಸ್ಥಳೀಯ ಸಂಸ್ಥೆಗಳಿವೆ. ಯಲಹಂಕ ಭಾಗದಿಂದ ಸರ್ಜಾಪುರದವರೆಗೆ ಹಲವು ಪ್ರದೇಶಗಳು ನಗರ ಸ್ವರೂಪ ಪಡೆದುಕೊಂಡಿವೆ. ಹೆಬ್ಬಗೋಡಿ, ಮಾದನಾಯಕನಹಳ್ಳಿ, ಆನೇಕಲ್, ಬೊಮ್ಮಸಂದ್ರ, ಚಂದಾಪುರ ಮತ್ತು ಜಿಗಣಿ ಸೇರಿದಂತೆ ಹಲವು ಪ್ರದೇಶಗಳು ನಗರ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಬರುತ್ತವೆ.
ನಗರಾಭಿವೃದ್ಧಿ ಇಲಾಖೆಯ ಚಿಂತನೆಯ ಪ್ರಕಾರ, ಇನ್ನು ಮುಂದೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗಳ ಬದಲಿಗೆ ನಗರ ಆಡಳಿತ ವ್ಯವಸ್ಥೆ ಇರಬೇಕು. ಆದರೆ ಯಾವ ಪ್ರದೇಶವನ್ನು ಯಾವ ಮಹಾನಗರ ಪಾಲಿಕೆಗೆ ಸೇರಿಸಬೇಕು, ಎಷ್ಟು ಹೊಸ ಪಾಲಿಕೆಗಳನ್ನು ರಚಿಸಬೇಕು ಮತ್ತು ಅವುಗಳ ಗಡಿಗಳು ಎಲ್ಲಿ ಇರಬೇಕು ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ. ಜನಸಂಖ್ಯೆ, ಆರ್ಥಿಕ ಸಾಮರ್ಥ್ಯ ಮತ್ತು ಪ್ರದೇಶದ ನಗರೀಕರಣದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
2027ರ ಜನಗಣತಿ ಬಳಿಕ ಪ್ರಕ್ರಿಯೆ ಆರಂಭ?
ಈ ಪುನರ್ರಚನೆಗೆ ಸರ್ಕಾರ 2027ರ ಜನಗಣತಿ ಮಾಹಿತಿಯನ್ನು ಪ್ರಮುಖ ಆಧಾರವಾಗಿ ಪರಿಗಣಿಸಲು ಉದ್ದೇಶಿಸಿದೆ ಎಂದು ವರದಿಯಾಗಿದೆ. ಜನಸಂಖ್ಯೆ, ವಸತಿ ಪ್ರದೇಶಗಳ ವಿಸ್ತರಣೆ, ಆರ್ಥಿಕ ಚಟುವಟಿಕೆ ಹಾಗೂ ಮೂಲಸೌಕರ್ಯದ ಅಗತ್ಯಗಳನ್ನು ಪರಿಶೀಲಿಸಿ ಹೊಸ ನಗರ ಸ್ಥಳೀಯ ಸಂಸ್ಥೆಗಳ ಗಡಿಗಳನ್ನು ನಿರ್ಧರಿಸುವ ಸಾಧ್ಯತೆಯಿದೆ.
ಪ್ರಸ್ತಾವಿತ ಹೊಸ ಮಹಾನಗರ ಪಾಲಿಕೆಗಳು ಪ್ರಸ್ತುತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಇರುವ ಐದು ನಗರ ಪಾಲಿಕೆಗಳ ಭಾಗವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. GBA ವ್ಯಾಪ್ತಿಯಲ್ಲಿರುವ ಐದು ಪಾಲಿಕೆಗಳ ವ್ಯವಸ್ಥೆ ಪ್ರತ್ಯೇಕವಾಗಿ ಮುಂದುವರಿಯುವ ಉದ್ದೇಶವಿದೆ.
ಆಸ್ತಿ ತೆರಿಗೆ ಹೆಚ್ಚಳವಾಗುತ್ತಾ?
ಈ ಪ್ರಸ್ತಾವನೆ ಜಾರಿಯಾದರೆ ಹೊರವಲಯದ ನಿವಾಸಿಗಳಿಗೆ ಕೆಲವು ಬದಲಾವಣೆಗಳು ಎದುರಾಗಬಹುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬಂದಾಗ ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ತೆರಿಗೆ ಮೊತ್ತ ಹೆಚ್ಚಾಗಬಹುದು ಎಂಬ ಆತಂಕವಿದೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆಯ ಸ್ಥಾನಮಾನದಿಂದ ಭೂಮಿ ಮತ್ತು ಮನೆಗಳ ಮಾರುಕಟ್ಟೆ ಮೌಲ್ಯದ ಮೇಲೂ ಪರಿಣಾಮ ಉಂಟಾಗಬಹುದು.
ಆದರೆ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಮಾತ್ರಕ್ಕೆ ಆಸ್ತಿ ಬೆಲೆ ಅಥವಾ ತೆರಿಗೆ ಎಲ್ಲ ಕಡೆ ಒಂದೇ ರೀತಿಯಲ್ಲಿ ಏರಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಿಮ ತೆರಿಗೆ ನಿಯಮಗಳು, ಆಸ್ತಿ ವರ್ಗ, ಸರ್ಕಾರದ ಅಧಿಸೂಚನೆ ಹಾಗೂ ಸ್ಥಳೀಯ ಆಡಳಿತದ ನಿರ್ಧಾರಗಳ ಮೇಲೆ ಇದು ಅವಲಂಬಿತವಾಗಿರುತ್ತದೆ.
ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂಬ ಒತ್ತಾಯ
ನಗರೀಕರಣಗೊಳ್ಳುತ್ತಿರುವ ಹೊರವಲಯದಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ, ಕಸ ವಿಲೇವಾರಿ, ಬೀದಿ ದೀಪ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಕೊರತೆ ಹಲವು ಕಡೆ ಇದೆ. ಕೇವಲ ಆಡಳಿತ ವ್ಯವಸ್ಥೆ ಬದಲಾಯಿಸುವುದರಿಂದ ಈ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಹೊಸ ಪಾಲಿಕೆಗಳ ರಚನೆಯ ಜೊತೆಗೆ ಕಾಲಮಿತಿಯ ಅಭಿವೃದ್ಧಿ ಯೋಜನೆ, ಹಣಕಾಸಿನ ಹಂಚಿಕೆ ಮತ್ತು ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
2007ರಲ್ಲಿ ಬೆಂಗಳೂರು ನಗರ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ವಿಳಂಬವಾದ ಅನುಭವವನ್ನು ಉಲ್ಲೇಖಿಸಿ, ಈ ಬಾರಿ ಆಡಳಿತ ಬದಲಾವಣೆಯೊಂದಿಗೆ ಅಭಿವೃದ್ಧಿ ಕಾರ್ಯಗಳಿಗೂ ಸ್ಪಷ್ಟ ವೇಳಾಪಟ್ಟಿ ಇರಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.
ಸದ್ಯಕ್ಕೆ ಬೆಂಗಳೂರು ನಗರ ಜಿಲ್ಲೆಯ ಗ್ರಾಮ ಪಂಚಾಯಿತಿಗಳನ್ನು ಮಹಾನಗರ ಪಾಲಿಕೆಗಳಾಗಿ ಪರಿವರ್ತಿಸುವ ಯೋಜನೆ ಪ್ರಸ್ತಾವನೆಯ ಹಂತದಲ್ಲಿದೆ. ಅಂತಿಮ ಗಡಿ ನಿರ್ಧಾರ, ಪಾಲಿಕೆಗಳ ಸಂಖ್ಯೆ, ತೆರಿಗೆ ವ್ಯವಸ್ಥೆ ಮತ್ತು ಯಾವ ಪ್ರದೇಶಗಳು ಸೇರ್ಪಡೆಯಾಗಲಿವೆ ಎಂಬುದರ ಕುರಿತು ಸರ್ಕಾರದ ಮುಂದಿನ ಅಧಿಕೃತ ಪ್ರಕಟಣೆ ಕುತೂಹಲ ಮೂಡಿಸಿದೆ.
Comments