ಭಾರತದ ಪ್ರೀಮಿಯಂ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಯಮಹಾ ಮೋಟಾರ್ ಇಂಡಿಯಾ ಹೊಸ YZF-R2 ಸ್ಪೋರ್ಟ್ಸ್ ಬೈಕ್ ಅನ್ನು ಶುಕ್ರವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಯಮಹಾ ತನ್ನ ಈ ಹೊಸ ಮೋಟಾರ್‌ಸೈಕಲ್ ಅನ್ನು ಭಾರತದಲ್ಲೇ ಮೊದಲ ಬಾರಿಗೆ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ ₹2,30,500ರಿಂದ ಆರಂಭವಾಗಲಿದೆ. ಹೊಸ ಬೈಕ್ ಭಾರತೀಯ ಸವಾರರ ಬದಲಾಗುತ್ತಿರುವ ಆದ್ಯತೆ, ಪ್ರೀಮಿಯಂ ಬೈಕ್‌ಗಳ ಮೇಲಿನ ಆಸಕ್ತಿ ಮತ್ತು ಸ್ಪೋರ್ಟ್ಸ್ ಬೈಕ್‌ಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.
ಹೊಸ YZF-R2 ಅನ್ನು ಸೂಪರ್‌ಸ್ಪೋರ್ಟ್ ಕಾರ್ಯಕ್ಷಮತೆ, ಆಧುನಿಕ ತಂತ್ರಜ್ಞಾನ ಹಾಗೂ ದೈನಂದಿನ ಬಳಕೆಯ ಅನುಕೂಲತೆಯ ಸಮತೋಲನದೊಂದಿಗೆ ರೂಪಿಸಲಾಗಿದೆ. ಸಂಪೂರ್ಣ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿರುವ ಈ ಬೈಕ್‌ಗಾಗಿ ಹೊಸ ಎಂಜಿನ್‌ನ್ನೂ ಅಭಿವೃದ್ಧಿಪಡಿಸಲಾಗಿದೆ. ಜಪಾನ್‌ನಲ್ಲಿ ಎಂಜಿನಿಯರಿಂಗ್ ಮಾಡಲಾಗಿದ್ದು, ಭಾರತೀಯ ಸಹಭಾಗಿಗಳ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಯಮಹಾದ ಸಾಂಪ್ರದಾಯಿಕ ರೇಸ್ ಪ್ರೇರಿತ ಎಂಜಿನಿಯರಿಂಗ್ ಅನ್ನು ಹೊಸ ಬೈಕ್‌ನಲ್ಲಿ ಕಾಣಬಹುದಾಗಿದೆ.
204 ಸಿಸಿ ಎಂಜಿನ್, 26.5 ಪಿಎಸ್ ಪವರ್
YZF-R2ಗೆ ಹೊಸದಾಗಿ ಅಭಿವೃದ್ಧಿಪಡಿಸಲಾದ 204 ಸಿಸಿ, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, DOHC, ಸಿಂಗಲ್-ಸಿಲಿಂಡರ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ನೀಡಲಾಗಿದೆ. ಈ ಎಂಜಿನ್ ಗರಿಷ್ಠ 26.5 ಪಿಎಸ್ ಪವರ್ ಮತ್ತು 19.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ವೇಗದ ಆಕ್ಸಿಲರೇಷನ್, ಸ್ಮೂತ್ ಪವರ್ ಡೆಲಿವರಿ ಮತ್ತು ಉತ್ತಮ ರೈಡಿಂಗ್ ಅನುಭವ ನೀಡುವ ಸಾಮರ್ಥ್ಯ ಹೊಂದಿದೆ.
ಎಂಜಿನ್‌ನ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ ಡೈಮಂಡ್ ಲೈಕ್ ಕಾರ್ಬನ್ (DLC) ಕೋಟಿಂಗ್ ಹೊಂದಿರುವ ಫಿಂಗರ್ ಫಾಲೋವರ್ ರಾಕರ್ ಆರ್ಮ್ ವಾಲ್ವ್ ಟ್ರೇನ್. ಈ ತಂತ್ರಜ್ಞಾನವು ಯಮಹಾದ R1 ಮಾದರಿಯಿಂದ ಪ್ರೇರಣೆ ಪಡೆದಿದೆ. ಘರ್ಷಣೆ ಮತ್ತು ಚಲಿಸುವ ತೂಕವನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕಾರ್ಯಕ್ಷಮತೆ, ದಕ್ಷತೆ ಹಾಗೂ ಬಾಳಿಕೆಗೆ ಇದು ನೆರವಾಗುತ್ತದೆ.
ಕೇವಲ 149 ಕೆಜಿ ತೂಕ
ಹೊಸ YZF-R2ನ ಪ್ರಮುಖ ಆಕರ್ಷಣೆ ಅದರ ಹಗುರವಾದ ಚಾಸಿಸ್. ಬೈಕ್‌ನ ಕರ್ಬ್ ತೂಕ ಕೇವಲ 149 ಕೆಜಿ ಆಗಿದ್ದು, ಈ ವಿಭಾಗದಲ್ಲಿ ಹಗುರವಾದ ಬೈಕ್‌ಗಳಲ್ಲಿ ಒಂದಾಗಿದೆ. 14 ಕೆಜಿ ತೂಕದ ಹೈ-ಟೆನ್ಸೈಲ್ ಸ್ಟೀಲ್ ಟ್ಯೂಬ್ ಡೈಮಂಡ್ ಫ್ರೇಮ್ ಅನ್ನು ಬಳಸಲಾಗಿದೆ. ಹಗುರವಾದ ನಿರ್ಮಾಣದಿಂದಾಗಿ ಬೈಕ್ ಅನ್ನು ನಗರ ಸಂಚಾರದಲ್ಲೂ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.
ಬೈಕ್‌ನಲ್ಲಿ 37 ಎಂಎಂ ಅಪ್‌ಸೈಡ್-ಡೌನ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮಾನೋಶಾಕ್ ಸಸ್ಪೆನ್ಷನ್ ನೀಡಲಾಗಿದೆ. ನಗರ ರಸ್ತೆಗಳು, ಹೆದ್ದಾರಿ ಹಾಗೂ ವಾರಾಂತ್ಯದ ರೈಡಿಂಗ್‌ಗಳಲ್ಲಿ ಸ್ಥಿರತೆ ಮತ್ತು ನಿಯಂತ್ರಣವನ್ನು ಒದಗಿಸುವಂತೆ ಸಸ್ಪೆನ್ಷನ್ ಅನ್ನು ಟ್ಯೂನ್ ಮಾಡಲಾಗಿದೆ.
ಮೂರು ವೇರಿಯಂಟ್, ಐದು ಬಣ್ಣಗಳ ಆಯ್ಕೆ
ಯಮಹಾ YZF-R2 ಅನ್ನು ಮೂರು ವೇರಿಯಂಟ್‌ಗಳಲ್ಲಿ ಪರಿಚಯಿಸಿದೆ. ಬೇಸ್ ವೇರಿಯಂಟ್ ಮೆಟಾಲಿಕ್ ಬ್ಲ್ಯಾಕ್ ಮತ್ತು ಡಾರ್ಕ್ ಬ್ಲೂಯಿಷ್ ಗ್ರೇ ಬಣ್ಣಗಳಲ್ಲಿ ಲಭ್ಯವಿರಲಿದೆ. ಎರಡನೇ ವೇರಿಯಂಟ್ ಮ್ಯಾಟ್ ವೈಟ್ ಪರ್ಲ್ ಮತ್ತು ರೇಸಿಂಗ್ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. ಈ ವೇರಿಯಂಟ್‌ನಲ್ಲಿ ಮೂರನೇ ತಲೆಮಾರಿನ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ನೀಡಲಾಗಿದೆ.
ಟಾಪ್-ಎಂಡ್ YZF-R2M ಆವೃತ್ತಿಯನ್ನು ಮೆಟಾಲಿಕ್ ಗ್ರೇ ಬಣ್ಣದಲ್ಲಿ ನೀಡಲಾಗಿದೆ. ಇದರಲ್ಲಿ ಕ್ವಿಕ್ ಶಿಫ್ಟರ್ ಜೊತೆಗೆ 3D ಎಂಬಾಸ್ಡ್ ಲಾಂಛನ, ಫಾಕ್ಸ್ ಸ್ವೆಡ್ ಫಿನಿಶ್ ಸೀಟ್, ಸಿಲ್ವರ್-ಫಿನಿಶ್ ಸ್ವಿಂಗಾರ್ಮ್ ಮತ್ತು ಪ್ರೀಮಿಯಂ ಮಫ್ಲರ್ ಎಂಡ್ ಕ್ಯಾಪ್ ನೀಡಲಾಗಿದೆ. ಮುಂಭಾಗದ ಫೋರ್ಕ್, ಹಿಂಭಾಗದ ಶಾಕ್ ಅಬ್ಸಾರ್ಬರ್, ಕ್ಲಚ್ ಲಿವರ್ ಮತ್ತು ಬ್ರೇಕ್ ಲಿವರ್‌ಗಳನ್ನು ಅಡ್ಜಸ್ಟ್ ಮಾಡಬಹುದಾಗಿದೆ.
ಸುರಕ್ಷತೆಗೂ ಹೆಚ್ಚಿನ ಆದ್ಯತೆ
YZF-R2ನ ಎಲ್ಲಾ ವೇರಿಯಂಟ್‌ಗಳಲ್ಲೂ ಹಲವು ಸುರಕ್ಷತಾ ಹಾಗೂ ರೈಡಿಂಗ್ ಫೀಚರ್‌ಗಳನ್ನು ನೀಡಲಾಗಿದೆ. ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್, ಡ್ಯುಯಲ್-ಚಾನೆಲ್ ABS ಸೇರಿದಂತೆ ಹಲವು ತಂತ್ರಜ್ಞಾನಗಳು ಇದರಲ್ಲಿವೆ.
ಇದರ ಜೊತೆಗೆ ಯಮಹಾ ರೈಡ್ ಕಂಟ್ರೋಲ್ (YRC) ಮೂಲಕ ಸ್ಟ್ರೀಟ್, ಸ್ಪೋರ್ಟ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ರೈಡರ್ ಬೈಕ್‌ನ ಕಾರ್ಯಕ್ಷಮತೆಯನ್ನು ಹೊಂದಿಸಿಕೊಳ್ಳಲು ಇದು ನೆರವಾಗಲಿದೆ.
ರೇಸ್ ಪ್ರೇರಿತ ಲುಕ್
ವಿನ್ಯಾಸದ ವಿಚಾರದಲ್ಲೂ YZF-R2 ಗಮನ ಸೆಳೆಯುತ್ತದೆ. ಯಮಹಾದ ಜಾಗತಿಕ R-ಸರಣಿಯಿಂದ ಪ್ರೇರಣೆ ಪಡೆದಿರುವ ಬೈಕ್ ಶಾರ್ಪ್ ಮತ್ತು ಏರೋಡೈನಾಮಿಕ್ ಬಾಡಿ ಹೊಂದಿದೆ. ಮುಂಭಾಗದಲ್ಲಿ ಬೈ-ಫಂಕ್ಷನಲ್ LED ಹೆಡ್‌ಲೈಟ್ ಮತ್ತು ಡ್ಯುಯಲ್ LED ಪೊಸಿಷನ್ ಲೈಟ್‌ಗಳನ್ನು ಅಳವಡಿಸಲಾಗಿದೆ.
R9ನಿಂದ ಪ್ರೇರಿತವಾದ ಫ್ರಂಟ್ ಫೇರಿಂಗ್ ಹಾಗೂ ಬಾಡಿ ವಿನ್ಯಾಸವು ಹೆಚ್ಚಿನ ವೇಗದಲ್ಲಿ ಗಾಳಿಯ ಹರಿವನ್ನು ನಿಯಂತ್ರಿಸಲು ನೆರವಾಗಲಿದೆ. ಹಿಂಭಾಗದಲ್ಲಿ R1ನಿಂದ ಪ್ರೇರಣೆ ಪಡೆದ ಬ್ಲಾಕ್-ಸ್ಟೈಲ್ LED ಟೈಲ್‌ಲೈಟ್ ನೀಡಲಾಗಿದೆ. MotoGP ಪ್ರೇರಿತ ಸ್ವಿಂಗಾರ್ಮ್ ಕೂಡ ಬೈಕ್‌ನ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.
5 ಇಂಚಿನ TFT ಡಿಸ್ಪ್ಲೇ
ತಂತ್ರಜ್ಞಾನದ ವಿಚಾರದಲ್ಲೂ ಹೊಸ ಬೈಕ್ ಹಿಂದೆ ಬಿದ್ದಿಲ್ಲ. 5 ಇಂಚಿನ ಫುಲ್-ಕಲರ್ TFT ಡಿಸ್ಪ್ಲೇ ಮೂಲಕ ರೈಡಿಂಗ್ ಮತ್ತು ನ್ಯಾವಿಗೇಷನ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೋಡಬಹುದಾಗಿದೆ. M ವೇರಿಯಂಟ್‌ನಲ್ಲಿ ಸ್ಮಾರ್ಟ್ ಕೀ ವ್ಯವಸ್ಥೆಯನ್ನೂ ನೀಡಲಾಗಿದೆ.
ಯಮಹಾ ಮೋಟಾರ್ ಇಂಡಿಯಾ ಅಧ್ಯಕ್ಷ ಹಜಿಮೆ ಅಹೊಟಾ ಅವರ ಪ್ರಕಾರ, YZF-R2 ಬಿಡುಗಡೆಯು ಕಂಪನಿಯ ದೀರ್ಘಾವಧಿಯ ಬೆಳವಣಿಗೆ ಕಾರ್ಯತಂತ್ರದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಹಗುರವಾದ ಕಾರ್ಯಕ್ಷಮತೆ, ಉತ್ತಮ ಇಂಧನ ದಕ್ಷತೆ ಮತ್ತು R-ಸೀರೀಸ್‌ನ ರೇಸ್ DNA ಅನ್ನು ಒಟ್ಟುಗೂಡಿಸುವ ಮೂಲಕ ಹೊಸ ಪೀಳಿಗೆಯ ಸವಾರರಿಗೆ ಸೂಪರ್‌ಸ್ಪೋರ್ಟ್ ವಿಭಾಗಕ್ಕೆ ಸುಲಭ ಪ್ರವೇಶ ಕಲ್ಪಿಸುವ ಉದ್ದೇಶವನ್ನು ಈ ಬೈಕ್ ಹೊಂದಿದೆ.
ಭಾರತದಲ್ಲಿ ಈಗಾಗಲೇ ಒಂದು ಮಿಲಿಯನ್‌ಗೂ ಹೆಚ್ಚು R-ಸೀರೀಸ್ ಮೋಟಾರ್‌ಸೈಕಲ್‌ಗಳು ರಸ್ತೆಯಲ್ಲಿರುವುದಾಗಿ ಕಂಪನಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ YZF-R2 ಮೂಲಕ ಭಾರತದಲ್ಲಿ ತನ್ನ ಪ್ರೀಮಿಯಂ ಮೋಟಾರ್‌ಸೈಕಲ್ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯನ್ನು ಯಮಹಾ ಹೊಂದಿದೆ.