ಟ್ರಾವೆಲ್ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಕಿಟಕಿ ಪಕ್ಕ ಕೂತು, ಚಹಾ ಕುಡಿತಾ, ಪ್ರಕೃತಿಯ ಸೌಂದರ್ಯ ಸವಿಯುತ್ತಾ ಮಾಡೋ ರೈಲು ಪ್ರಯಾಣದ ಮಜಾವೇ ಬೇರೆ. ಕೆಲವರಿಗೆ ತಲುಪಬೇಕಾದ ಜಾಗಕ್ಕಿಂತ ಆ ಜರ್ನಿಯೇ ಒಂದು ಅದ್ಭುತ ನೆನಪು. ಭಾರತೀಯ ರೈಲ್ವೆ ಜಾಲ ಎಷ್ಟು ದೊಡ್ಡದಾಗಿದೆ ಅಂದ್ರೆ, ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಲು ದಿನಗಟ್ಟಲೆ ಬೇಕಾಗುತ್ತೆ!
ಕಾಡು, ಬೆಟ್ಟ, ನದಿ, ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ ಮತ್ತು ವೈವಿಧ್ಯಮಯ ಊಟ ಸವಿಯುತ್ತಾ 3 ದಿನಕ್ಕೂ ಹೆಚ್ಚು ಕಾಲ ರೈಲಿನಲ್ಲೇ ಕಳೆಯುವ ರೋಮಾಂಚಕ ಅನುಭವ ನಿಮಗೂ ಬೇಕಾ? ಹಾಗಾದ್ರೆ ಭಾರತದ ಟಾಪ್ 5 ಅತಿ ಉದ್ದದ ರೈಲು ಮಾರ್ಗಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಡಿಬ್ರುಗಢ್ ಟು ಕನ್ಯಾಕುಮಾರಿ (ವಿವೇಕ್ ಎಕ್ಸ್‌ಪ್ರೆಸ್)
ಇದು ನಮ್ಮ ದೇಶದ ನಂಬರ್ ಒನ್ ಅತಿ ಉದ್ದದ ರೈಲು ಮಾರ್ಗ! ಅಸ್ಸಾಂನ ಡಿಬ್ರುಗಢ್‌ನಿಂದ ಹೊರಟರೆ ದಕ್ಷಿಣದ ಕೊನೆಯ ತುದಿಯಾದ ತಮಿಳುನಾಡಿನ ಕನ್ಯಾಕುಮಾರಿ ತಲುಪುತ್ತೆ.
ದೂರ ಮತ್ತು ಸಮಯ - ಬರೋಬ್ಬರಿ 4,273 ಕಿಲೋಮೀಟರ್ ಜರ್ನಿ ಇದು. ಇದಕ್ಕೆ ಬೇಕಾಗೋದು ಬರೋಬ್ಬರಿ 75 ಗಂಟೆಗಳು (ಅಂದ್ರೆ 3 ದಿನಕ್ಕಿಂತ ಜಾಸ್ತಿ!).
ವಿಶೇಷತೆ - ಈಶಾನ್ಯ ಭಾರತದ ಹಸಿರು ಚಹಾದ ತೋಟಗಳಿಂದ ಹಿಡಿದು ದಕ್ಷಿಣದ ಸಮುದ್ರ ತೀರದವರೆಗೆ ಒಟ್ಟು 30 ಪ್ರಮುಖ ನಿಲ್ದಾಣಗಳಲ್ಲಿ ಇದು ನಿಲ್ಲುತ್ತೆ.
ರೈಲು ನಂಬರ್ - 22504. ಇದು ವಾರದ ಎಲ್ಲಾ 7 ದಿನಗಳೂ ಲಭ್ಯವಿದ್ದು, ಸಂಜೆ 19:00 ಗಂಟೆಗೆ ಹೊರಡುತ್ತೆ.
ತಿರುವನಂತಪುರಂ ಟು ಸಿಲ್ಚರ್ (ಅರೋಣೈ ಎಕ್ಸ್‌ಪ್ರೆಸ್)
ಕೇರಳದ ರಾಜಧಾನಿ ತಿರುವನಂತಪುರಂನಿಂದ ಅಸ್ಸಾಂನ ಸಿಲ್ಚರ್‌ವರೆಗೆ ಸಾಗುವ ಈ ಮಾರ್ಗ ದೇಶದ ಎರಡನೇ ಅತಿ ಉದ್ದದ ರೈಲು ಪ್ರಯಾಣವಾಗಿದೆ. ದಕ್ಷಿಣದ ಮಸಾಲೆ ನಾಡಿನಿಂದ ಈಶಾನ್ಯದ ಬೆಟ್ಟಗಳ ನಡುವಿನ ಜರ್ನಿ ಇದಾಗಿದೆ.
ದೂರ ಮತ್ತು ಸಮಯ - ಸುಮಾರು 3,932 ಕಿಲೋಮೀಟರ್ ದೂರವನ್ನು ಈ ರೈಲು ಕ್ರಮಿಸುತ್ತದೆ. ಪ್ರಯಾಣಿಕರು 74 ಗಂಟೆ 35 ನಿಮಿಷಗಳ ಕಾಲ ರೈಲಿನಲ್ಲೇ ಇರಬೇಕಾಗುತ್ತದೆ.
ವಿಶೇಷತೆ - ಈ ಮಾರ್ಗದಲ್ಲಿ ಅತಿ ಹೆಚ್ಚು ಅಂದರೆ 54 ನಿಲ್ದಾಣಗಳಿವೆ. ಪ್ರತಿ ಸ್ಟೇಷನ್‌ನಲ್ಲೂ ಹೊಸ ಹೊಸ ಭಾಷೆ, ಉಡುಪು, ಆಹಾರವನ್ನು ನೋಡಬಹುದು.
ರೈಲು ನಂಬರ್ - 15607. ಇದು ಪ್ರತಿ ಮಂಗಳವಾರ ಸಂಜೆ 04:55 ಕ್ಕೆ ಹೊರಡುತ್ತದೆ.
ಕನ್ಯಾಕುಮಾರಿ ಟು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಹಿಮಸಾಗರ್ ಎಕ್ಸ್‌ಪ್ರೆಸ್)
ಭಾರತದ ದಕ್ಷಿಣ ತುದಿಯಿಂದ ಹಿಮಾಲಯದ ತಪ್ಪಲಿನಲ್ಲಿರುವ ಜಮ್ಮು-ಕಾಶ್ಮೀರದವರೆಗೆ ಸಾಗುವ ಅದ್ಭುತ ರೂಟ್ ಇದು. ಹೆಸರೇ ಹೇಳುವಂತೆ ಸಾಗರದಿಂದ ಹಿಮದ ಕಡೆಗೆ ಈ ಪ್ರಯಾಣ ಸಾಗುತ್ತದೆ.
ದೂರ ಮತ್ತು ಸಮಯ - ಒಟ್ಟು 3,790 ಕಿಲೋಮೀಟರ್ ದೂರವಿರುವ ಈ ಜರ್ನಿಗೆ 73 ಗಂಟೆಗಳು ಬೇಕು.
ವಿಶೇಷತೆ - ಭಾರತದ ಒಟ್ಟು 12 ರಾಜ್ಯಗಳನ್ನು ದಾಟುವ ಈ ರೈಲು, ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಯನ್ನು ಒಂದೇ ಜರ್ನಿಯಲ್ಲಿ ಪರಿಚಯಿಸುತ್ತದೆ.
ರೈಲು ನಂಬರ್ - 16317. ಪ್ರತಿ ಶುಕ್ರವಾರ ಮಧ್ಯಾಹ್ನ 02:15ಕ್ಕೆ ಈ ರೈಲು ಹೊರಡುತ್ತದೆ.
ಅಮೃತಸರ ಟು ಕೊಚ್ಚುವೇಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಪಂಜಾಬ್‌ನ ಪವಿತ್ರ ನಗರಿ ಅಮೃತಸರದಿಂದ ಕೇರಳದ ಕೊಚ್ಚುವೇಳಿವರೆಗೆ ಸಾಗುವ ಈ ಮಾರ್ಗವು ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಜೋಡಿಸುವ ಪ್ರಮುಖ ಕೊಂಡಿಯಾಗಿದೆ.
ದೂರ ಮತ್ತು ಸಮಯ - 3,597 ಕಿಲೋಮೀಟರ್ ದೂರದ ಹಳಿಗಳ ಮೇಲೆ ಸಾಗುವ ಈ ರೈಲಿಗೆ 54 ಗಂಟೆಗಳ ಸಮಯ ಬೇಕು.
ವಿಶೇಷತೆ - ಒಟ್ಟು 7 ರಾಜ್ಯಗಳನ್ನು ದಾಟುವ ಈ ರೈಲು, ಪಂಜಾಬ್‌ನ ಗೋಧಿ ಗದ್ದೆಗಳಿಂದ ಹಿಡಿದು ಕೇರಳದ ತೆಂಗಿನ ತೋಟಗಳವರೆಗಿನ ವಿಭಿನ್ನ ಪ್ರಕೃತಿಯನ್ನು ಕಣ್ಣಿಗೆ ಕಟ್ಟಿದಂತೆ ತೋರಿಸುತ್ತದೆ.
ರೈಲು ನಂಬರ್ - 12484. ಅಮೃತಸರದಿಂದ ಪ್ರತಿ ಭಾನುವಾರ ಬೆಳಿಗ್ಗೆ 05:55 ಕ್ಕೆ ಮತ್ತು ಕೊಚ್ಚುವೇಲಿಯಿಂದ ಪ್ರತಿ ಬುಧವಾರ ಬೆಳಿಗ್ಗೆ 09:10 ಕ್ಕೆ ಹೊರಡುತ್ತದೆ.
ಅಗರ್ತಲಾ ಟು ಬೆಂಗಳೂರು ಕ್ಯಾಂಟೋನ್ಮೆಂಟ್ (ಹಮ್‌ಸಫರ್ ಎಕ್ಸ್‌ಪ್ರೆಸ್)
ನಮ್ಮ ಬೆಂಗಳೂರಿಗರಿಗೆ ಈ ರೂಟ್ ತುಂಬಾ ಪರಿಚಿತ. ಐಟಿ ಸಿಟಿ ಬೆಂಗಳೂರಿನಿಂದ ತ್ರಿಪುರಾದ ಅಗರ್ತಲಾವರೆಗೆ ಸಾಗುವ ಈ ರೈಲು ಭಾರತದ ದೀರ್ಘ ಪ್ರಯಾಣಗಳಲ್ಲಿ ಒಂದಾಗಿದೆ.
ದೂರ ಮತ್ತು ಸಮಯ - ಸುಮಾರು 3,570 ಕಿಲೋಮೀಟರ್ ದೂರವಿರುವ ಈ ಮಾರ್ಗ ಕ್ರಮಿಸಲು 64 ರಿಂದ 65 ಗಂಟೆಗಳು ಬೇಕು. ಇದು 28 ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ರೈಲು ನಂಬರ್ - ಅಗರ್ತಲಾದಿಂದ ಬೆಂಗಳೂರಿಗೆ 12504 (ಮಂಗಳವಾರ, ಶನಿವಾರ ಬೆಳಿಗ್ಗೆ 05:30) ಮತ್ತು ಬೆಂಗಳೂರಿನಿಂದ ಅಗರ್ತಲಾಕ್ಕೆ 12503 (ಮಂಗಳವಾರ, ಶುಕ್ರವಾರ ಬೆಳಿಗ್ಗೆ 10:15).
ಇಂತಹ ದೀರ್ಘ ರೈಲು ಪ್ರಯಾಣಗಳು ಕೇವಲ ಒಂದು ಊರಿಂದ ಇನ್ನೊಂದು ಊರಿಗೆ ಹೋಗುವ ದಾರಿಯಲ್ಲ. ಇದು ನಮ್ಮ ಭಾರತದ ವೈವಿಧ್ಯಮಯ ಜೀವನಶೈಲಿಯನ್ನು ಹತ್ತಿರದಿಂದ ನೋಡುವ ಅದ್ಭುತ ಅವಕಾಶ. ಲೈಫ್‌ನಲ್ಲಿ ಒಮ್ಮೆಯಾದರೂ ಇಂತಹ ಲಾಂಗ್ ರೈಲು ಜರ್ನಿ ಮಾಡಿ ಲೈಫ್‌ಟೈಮ್ ನೆನಪು ಮಾಡಿಕೊಳ್ಳಿ!