ಕೊಲಂಬೋದಲ್ಲಿ ನಡೆದ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯವು ಕೇವಲ ಕ್ರೀಡಾ ಸ್ಪರ್ಧೆಯಷ್ಟೇ ಅಲ್ಲ, ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳಿಗೂ ವೇದಿಕೆಯಾಗಿತ್ತು. ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ 61 ರನ್‌ಗಳ ಜಯ ಸಾಧಿಸಿದರೂ, ಪಂದ್ಯ ಮುಗಿದ ನಂತರದ ಒಂದು ದೃಶ್ಯ ಎಲ್ಲರ ಗಮನ ಸೆಳೆಯಿತು. ಅದುವೇ ರೋಹಿತ್ ಶರ್ಮಾ ಮತ್ತು ವಾಸೀಂ ಅಕ್ರಂ ಅವರ ಅಪ್ಪುಗೆ.
ಪಂದ್ಯ ಮುಗಿದ ನಂತರ ಬೌಂಡರಿ ಬಳಿ ಇಬ್ಬರು ದಿಗ್ಗಜರು ಇದ್ದರು. ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ವೇಗಿ ವಾಸೀಂ ಅಕ್ರಂ ಪರಸ್ಪರ ಮಾತುಕತೆ ನಡೆಸಿ, ಹಸ್ತಲಾಘವ ಮತ್ತು ಅಪ್ಪುಗೆ ನೀಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಕೆಲವರು ಸೌಹಾರ್ದತೆಯ ಸಂಕೇತವೆಂದು ಮೆಚ್ಚಿಕೊಂಡರೆ, ಮತ್ತೆ ಇನ್ನೂ ಕೆಲವರು ಟೀಕಿಸುತ್ತಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ಟಾಸ್ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ನಾಯಕ ಸಲ್ಮಾನ್ ಆಲಿ ಆಘಾ ಅವರಿಗೆ ಹಸ್ತಲಾಘವ ಮಾಡಿರಲಿಲ್ಲ. ಪಂದ್ಯ ಮುಗಿದ ನಂತರವೂ ಉಭಯ ತಂಡಗಳ ಆಟಗಾರರು ಪರಸ್ಪರ ಹ್ಯಾಂಡ್ ಶೇಕ್ ಮಾಡದೆ ಮೈದಾನದಿಂದ ಹೊರಟರು. ಈ ಹಿನ್ನೆಲೆಯಲ್ಲಿ ರೋಹಿತ್-ಅಕ್ರಂ ಅಪ್ಪುಗೆ ವಿಶೇಷವಾಗಿ ಗಮನ ಸೆಳೆಯಿತು.
ಪಾಕಿಸ್ತಾನದ ಟಿವಿ ಚರ್ಚೆಗಳಲ್ಲಿ ಈ ಅಪ್ಪುಗೆ ಬಗ್ಗೆ ಟೀಕೆಗಳು ಕೇಳಿಬಂದರೂ, ಮಾಜಿ ಆಟಗಾರ ಅಹ್ಮದ್ ಶೆಹಜಾದ್ ಮತ್ತು ಮೊಹಮ್ಮದ್ ಅಮೀರ್ ಅವರು ವಾಸೀಂ ಅಕ್ರಂ ಅವರ ಕ್ರೀಡಾಸ್ಫೂರ್ತಿಯನ್ನು ಸಮರ್ಥಿಸಿದ್ದಾರೆ. “ಅಕ್ರಂ ಯಾವಾಗಲೂ ಶಿಷ್ಟಾಚಾರವನ್ನು ಎತ್ತಿಹಿಡಿದವರು. ಈ ಅಪ್ಪುಗೆಗೆ ಟೀಕೆ ಮಾಡುವ ಅಗತ್ಯವಿಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಈ ಟೂರ್ನಿಯ ಐಸಿಸಿ ಬ್ರಾಂಡ್ ಅಂಬಾಸಡರ್ ಆಗಿ ಕೊಲಂಬೋದಲ್ಲಿ ಉಪಸ್ಥಿತರಿದ್ದರು. ಪಂದ್ಯಕ್ಕೂ ಮುನ್ನ ಅವರು ವಾಸೀಂ ಅಕ್ರಂ ಮತ್ತು ಐಸಿಸಿ ಸಿಇಒ ಸಂಜೋಗ್ ಗುಪ್ತಾ ಜೊತೆ ಟ್ರೋಫಿಯನ್ನು ಮೈದಾನಕ್ಕೆ ತಂದರು. ಈ ಜೋಡಿ ವೈಯಕ್ತಿಕ ಗೌರವ ಮತ್ತು ಸೌಹಾರ್ದತೆಯ ಸಂಕೇತವಾಗಿ ಕಾಣಿಸಿಕೊಂಡಿದ್ದು, ಕ್ರಿಕೆಟ್‌ನ ಮೌಲ್ಯಗಳನ್ನು ಎತ್ತಿಹಿಡಿದಿದೆ.
Wasim Akram and Rohit Sharma can be seen hugging each other before the Ind v Pak match. 🔥
— Rayham (@RayhamUnplugged) February 16, 2026
- Is the boycott of India only for the players who are playing on the field? Is the dirty politics only limited to them?pic.twitter.com/JJ4B0J7jP6
ಒಟ್ಟಿನಲ್ಲಿ ಹೇಳಬೇಕು ಅಂದರೆ, ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಆಟಕ್ಕಿಂತ ಹೆಚ್ಚು ಚರ್ಚೆಗೆ ಕಾರಣವಾದದ್ದು ಆಟಗಾರರ ನಡೆ. ರೋಹಿತ್-ಅಕ್ರಂ ಅಪ್ಪುಗೆ ಕ್ರಿಕೆಟ್‌ನ ಸೌಹಾರ್ದತೆಯ ಪರಿಪಾಟಿಯನ್ನು ನೆನಪಿಸಿತು. ಈ ದೃಶ್ಯವು ಕ್ರಿಕೆಟ್ ಕೇವಲ ಸ್ಪರ್ಧೆಯಲ್ಲ, ಸಂಬಂಧಗಳ ಸೇತುವೆಯೂ ಆಗಬಹುದು ಎಂಬ ಸಂದೇಶವನ್ನು ನೀಡಿದೆ.