Mar 11, 2026 Languages : ಕನ್ನಡ | English

ಬ್ಯಾಟ್ ಬಿಟ್ಟು ಮೈಕ್ ಹಿಡಿದ ಸೌರವ್ ಗಂಗೂಲಿ - ಬಿಗ್ ಬಾಸ್ ಮನೆಯಲ್ಲಿ ಭರ್ಜರಿಯಾಗಿ ಶುರುವಾಗಲಿದೆ ದಾದಾಗಿರಿ!!

ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಈಗ ಬ್ಯಾಟ್ ಬಿಟ್ಟು ಮೈಕ್ ಹಿಡಿಯಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಅವರು ಕಾಮೆಂಟರಿ ಬಾಕ್ಸ್‌ನಲ್ಲಿ ಅಲ್ಲ, ಬದಲಿಗೆ ಜಗತ್ಪ್ರಸಿದ್ಧ ರಿಯಾಲಿಟಿ ಶೋ 'ಬಿಗ್ ಬಾಸ್' ವೇದಿಕೆಯ ಮೇಲೆ ನಿರೂಪಕರಾಗಿ ಮಿಂಚಲಿದ್ದಾರೆ. ಬಂಗಾಳಿ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮದ ಹೊಸ ಸೀಸನ್ ಅನ್ನು ಗಂಗೂಲಿ ಅವರು ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಈಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕ್ರಿಕೆಟ್ ದಾದಾ ಈಗ ಬಿಗ್ ಬಾಸ್ ದಾದಾ!!
ಕ್ರಿಕೆಟ್ ದಾದಾ ಈಗ ಬಿಗ್ ಬಾಸ್ ದಾದಾ!!

ಭಾರತದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬೆಟ್ಟದಷ್ಟು ಬೇಡಿಕೆ ಇದೆ. ಈವರೆಗೆ ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ ಅವರಂತಹ ಸೂಪರ್ ಸ್ಟಾರ್ ನಟರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಈವರೆಗೆ ಸಿನಿಮಾ ರಂಗದವರೇ ಹೆಚ್ಚಾಗಿ ಈ ಶೋನ ನಿರೂಪಣೆ ಮಾಡುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಕ್ರಿಕೆಟ್ ಹಿನ್ನೆಲೆಯ ಪ್ರಸಿದ್ಧ ವ್ಯಕ್ತಿಯೊಬ್ಬರು ಬಿಗ್ ಬಾಸ್ ಮನೆಗೆ ಬಾಸ್ ಆಗಿ ಬರುತ್ತಿರುವುದು ಒಂದು ವಿಶೇಷ ಮೈಲಿಗಲ್ಲು.

ಬಂಗಾಳಿ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಷ್ಟೊಂದು ಸುಲಲಿತ ಇತಿಹಾಸವಿಲ್ಲ. 2013ರಲ್ಲಿ ಮೊದಲ ಸೀಸನ್ ಆರಂಭವಾದಾಗ ಖ್ಯಾತ ನಟ ಮಿಥುನ್ ಚಕ್ರವರ್ತಿ ನಿರೂಪಣೆ ಮಾಡಿದ್ದರು. 2016ರಲ್ಲಿ ನಟ ಜೀತ್ ಅವರು ಎರಡನೇ ಸೀಸನ್ ನಡೆಸಿಕೊಟ್ಟರು. ಆದರೆ ಈ ಎರಡೂ ಸೀಸನ್‌ಗಳು ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಈ ಕಾರಣದಿಂದಾಗಿ ಕಳೆದ ಹತ್ತು ವರ್ಷಗಳಿಂದ ಅಲ್ಲಿ ಬಿಗ್ ಬಾಸ್ ನಿಂತುಹೋಗಿತ್ತು. ಈಗ ಸೌರವ್ ಗಂಗೂಲಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಬಿಗ್ ಬಾಸ್ ಅನ್ನು ಮತ್ತೆ ಬಂಗಾಳದ ಮನೆಮನೆಗೆ ತಲುಪಿಸಲು ನಿರ್ಧರಿಸಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ವಿವಿಧ ಸ್ವಭಾವದ ವ್ಯಕ್ತಿಗಳು ಇರುತ್ತಾರೆ. ಜಗಳ, ವಿವಾದ ಮತ್ತು ಭಾವನೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಒಬ್ಬ ಕಟ್ಟುನಿಟ್ಟಾದ ನಿರೂಪಕನ ಅಗತ್ಯವಿರುತ್ತದೆ. ಸೌರವ್ ಗಂಗೂಲಿ ಅವರು ಮೈದಾನದ ಹೊರಗೆ ಸಮಾಧಾನವಾಗಿ ಕಂಡರೂ, ಮೈದಾನದೊಳಗೆ ಅವರು ತೋರುತ್ತಿದ್ದ ಆಕ್ರಮಣಕಾರಿ ನಾಯಕತ್ವ ಇಂದಿಗೂ ಪ್ರಸಿದ್ಧವಾಗಿದೆ. ಲಾರ್ಡ್ಸ್ ಅಂಗಳದಲ್ಲಿ ಟೀ ಶರ್ಟ್ ಬಿಚ್ಚಿ ಸಂಭ್ರಮಿಸಿದ ಗಂಗೂಲಿ ಅವರ ಆ ಜಿದ್ದಿನ ಸ್ವಭಾವ ಬಿಗ್ ಬಾಸ್‌ನಂತಹ ಶೋ ನಡೆಸಲು ಅತ್ಯಂತ ಸೂಕ್ತವಾಗಿದೆ ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ.

ಸೌರವ್ ಗಂಗೂಲಿ ಈ ಹಿಂದೆ 'ದಾದಾಗಿರಿ' ಎಂಬ ಬಂಗಾಳಿ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅನುಭವ ಹೊಂದಿದ್ದಾರೆ. ಈಗ ಬಿಗ್ ಬಾಸ್ ಮೂಲಕ ಅವರು ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸಿನಿಮಾ ತಾರೆಯರ ಗ್ಲಾಮರ್ ನಡುವೆ ಗಂಗೂಲಿ ಅವರ ಕ್ರಿಕೆಟ್ ಪ್ರಭಾವವು ಈ ಕಾರ್ಯಕ್ರಮಕ್ಕೆ ಹೊಸ ಕಳೆಯನ್ನು ನೀಡಲಿದೆ. ಬಂಗಾಳಿ ವೀಕ್ಷಕರು ಮಾತ್ರವಲ್ಲದೆ, ಇಡೀ ಭಾರತದ ಕ್ರಿಕೆಟ್ ಅಭಿಮಾನಿಗಳು ಗಂಗೂಲಿ ಅವರ ನಿರೂಪಣಾ ಶೈಲಿಯನ್ನು ನೋಡಲು ಕಾಯುತ್ತಿದ್ದಾರೆ. 

ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಬೆಂಗಾಲಿ 'ಬಿಗ್ ಬಾಸ್' ಕಾರ್ಯಕ್ರಮದ ಲೋಗೋವನ್ನು ಅತ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಇದೇ ವೇದಿಕೆಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕಾರ್ಯಕ್ರಮದ ಅಧಿಕೃತ ನಿರೂಪಕರು ಎಂಬ ವಿಷಯವನ್ನು ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಂಗೂಲಿ ಅವರು, "'ಬಿಗ್ ಬಾಸ್' ಎಂಬುದು ಕೇವಲ ಆಟವಲ್ಲ, ಇದು ವಿವಿಧ ವ್ಯಕ್ತಿಗಳು ಮತ್ತು ಅವರ ವ್ಯಕ್ತಿತ್ವಗಳ ನಡುವೆ ನಡೆಯುವ ಕುತೂಹಲಕಾರಿ ಸಂಘರ್ಷ. ಈ ಕಾರ್ಯಕ್ರಮವು ಬಂಗಾಳದ ಮನೆಮನೆಗಳಲ್ಲಿ ಭದ್ರವಾಗಿ ಬೇರೂರಲಿದೆ ಎಂಬ ಪೂರ್ಣ ನಂಬಿಕೆ ನನಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರೀಕ್ಷೆಯಂತೆ, ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಾಲಿ 'ಬಿಗ್ ಬಾಸ್' ಪ್ರಸಾರ ಆರಂಭವಾಗಲಿದ್ದು, ಸತತ ಮೂರು ತಿಂಗಳುಗಳ ಕಾಲ ಸೌರವ್ ಗಂಗೂಲಿ ಅವರು ತಮ್ಮ ವಿಶಿಷ್ಟ ಶೈಲಿಯ ನಿರೂಪಣೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದ್ದಾರೆ.