Apr 20, 2026 Languages : ಕನ್ನಡ | English

ಕನ್ನಡದ ಕಲಿ, ಕ್ರಿಕೆಟ್‌ನ ಕ್ಲಾಸಿಕ್ ಕಿಂಗ್ ಕೆ.ಎಲ್. ರಾಹುಲ್‌ಗೆ ಜನ್ಮದಿನದ ಸಂಭ್ರಮ!!

ಇಂದು ನಮ್ಮ ಕನ್ನಡದ ಹುಡುಗ ಕೆ. ಎಲ್ ರಾಹುಲ್ ಹುಟ್ಟು ಹಬ್ಬ. ಭಾರತೀಯ ಕ್ರಿಕೆಟ್‌ನಲ್ಲಿ ಎಷ್ಟೇ ಜನ ಪವರ್ ಹಿಟ್ಟರ್‌ಗಳು ಇರಬಹುದು, ಆದರೆ ಬ್ಯಾಟಿಂಗ್‌ನಲ್ಲಿ ಒಂದು 'ಅಂದ' ಬೇಕು ಅಂದ್ರೆ ಅದು ಕೆ.ಎಲ್. ರಾಹುಲ್ ಅವರಿಂದಲೇ ಸಾಧ್ಯ. ಕಣ್ಣು ಮಿಟುಕಿಸುವುದರೊಳಗೆ ಚೆಂಡನ್ನು ಬೌಂಡರಿ ದಾಟಿಸುವ ಇವರ ಕೌಶಲಕ್ಕೆ ಯಾರಾದರೂ ಫಿದಾ ಆಗಲೇಬೇಕು. ಇಂದು ಈ ಕನ್ನಡಿಗನ ಜನ್ಮದಿನದ ಸಂಭ್ರಮ, ಈ ಸಂದರ್ಭದಲ್ಲಿ ಅವರ ಕ್ರಿಕೆಟ್ ಬದುಕಿನ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

ಹುಟ್ಟುಹಬ್ಬಕ್ಕೆ ಸ್ಪೆಷಲ್ ಸ್ಟೋರಿ | Photo Credit: https://x.com/klrahul
ಹುಟ್ಟುಹಬ್ಬಕ್ಕೆ ಸ್ಪೆಷಲ್ ಸ್ಟೋರಿ | Photo Credit: https://x.com/klrahul

ಮಂಗಳೂರಿನಿಂದ ಶುರುವಾದ ಕನಸು

ರಾಹುಲ್ ಹುಟ್ಟಿ ಬೆಳೆದಿದ್ದೆಲ್ಲಾ ನಮ್ಮ ಕರಾವಳಿಯ ಮಂಗಳೂರಿನಲ್ಲಿ. ಶಾಲಾ ಮಟ್ಟದಲ್ಲೇ ಕ್ರಿಕೆಟ್ ಬದುಕಿನ ಅಡಿಪಾಯ ಹಾಕಿಕೊಂಡ ಇವರು, ನಂತರ ಬೆಂಗಳೂರಿನ ಕಡೆ ಮುಖ ಮಾಡಿದರು. ಹಗಲು ರಾತ್ರಿ ಎನ್ನದೆ ಮೈದಾನದಲ್ಲಿ ಬೆವರಿಳಿಸಿದ ಈ ಯುವಕನಿಗೆ ಕರ್ನಾಟಕ ರಣಜಿ ತಂಡದಲ್ಲಿ ಆಡೋ ಅವಕಾಶ ಸಿಕ್ಕಿದ್ದೇ ಒಂದು ದೊಡ್ಡ ಟರ್ನಿಂಗ್ ಪಾಯಿಂಟ್. ಅಲ್ಲಿಂದ ಮುಂದೆ ಇವರು ತಿರುಗಿ ನೋಡಿದ್ದೇ ಇಲ್ಲ.

ಟೀಮ್ ಇಂಡಿಯಾದ 'ಮಲ್ಟಿ-ಟಾಸ್ಕರ್'

ರಾಹುಲ್ ಅವರನ್ನು ಯಾಕೆ ಎಲ್ಲರಿಗೂ ಇಷ್ಟ ಅಂದ್ರೆ, ಅವರು ತಂಡಕ್ಕಾಗಿ ಯಾವ ಜವಾಬ್ದಾರಿಯನ್ನಾದರೂ ಹೊತ್ತುಕೊಳ್ತಾರೆ.

ಸ್ಥಿರತೆ - ಓಪನಿಂಗ್ ಇರಲಿ ಅಥವಾ ಫಿನಿಶರ್ ರೋಲ್ ಇರಲಿ, ರಾಹುಲ್ ಪಕ್ಕಾ ಲಯದಲ್ಲಿ ಇರ್ತಾರೆ.

ಕೀಪಿಂಗ್ ಮ್ಯಾಜಿಕ್ - ಒಬ್ಬ ಬ್ಯಾಟರ್ ಆಗಿ ಬಂದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸೋದು ಸುಲಭದ ಮಾತಲ್ಲ.

ಕೂಲ್ ಕ್ಯಾಪ್ಟನ್ - ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕನಾಗಿ ಇವರು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ರೀತಿ ಅದ್ಭುತ.

ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ

ಯಾವುದೇ ಆಟಗಾರನಿಗೆ ಕೆಟ್ಟ ಫಾರ್ಮ್ ಅನ್ನೋದು ಇದ್ದೇ ಇರುತ್ತೆ. ರಾಹುಲ್ ಕೂಡ ಗಾಯ ಮತ್ತು ಟೀಕೆಗಳಿಂದ ಕುಗ್ಗಿದ್ದ ದಿನಗಳಿವೆ. ಆದರೆ, ಫೀನಿಕ್ಸ್ ಹಕ್ಕಿಯಂತೆ ಎದ್ದು ಬರೋದು ರಾಹುಲ್ ಅವರ ಸ್ಪೆಷಾಲಿಟಿ. ಪ್ರತಿ ಬಾರಿ ಕಮ್‌ಬ್ಯಾಕ್ ಮಾಡಿದಾಗಲೂ ಅವರ ಬ್ಯಾಟ್ ಇನ್ನೂ ಜೋರಾಗಿ ಸದ್ದು ಮಾಡಿದೆ. ಸೌತ್ ಆಫ್ರಿಕಾ ಅಥವಾ ಇಂಗ್ಲೆಂಡ್ ಇರಲಿ, ವಿದೇಶಿ ನೆಲದಲ್ಲಿ ಇವರು ಸೆಂಚುರಿ ಬಾರಿಸಿದಾಗ ಅಭಿಮಾನಿಗಳ ಹೆಮ್ಮೆ ಮುಗಿಲು ಮುಟ್ಟುತ್ತೆ.

ಸಿಂಪಲ್ ಲೈಫ್, ಸೈಲೆಂಟ್ ಸಾಧನೆ

ಮೈದಾನದ ಹೊರಗೆ ರಾಹುಲ್ ತುಂಬಾನೇ ಸೈಲೆಂಟ್. ಅಥಿಯಾ ಶೆಟ್ಟಿ ಜೊತೆಗಿನ ಮದುವೆಯ ನಂತರ ಅವರ ವೈಯಕ್ತಿಕ ಜೀವನವೂ ಕೂಡ ಸುಖಕರವಾಗಿದೆ. ಅಷ್ಟೊಂದು ಪ್ರಖ್ಯಾತಿ ಇದ್ದರೂ ತಲೆಯನ್ನು ನೆಲದ ಮೇಲೆ ಇಟ್ಟುಕೊಂಡು, ತಮ್ಮ ಕೆಲಸವೇನು ಎಂಬುದನ್ನು ಸರಿಯಾಗಿ ತಿಳಿದಿರುವ ಆಟಗಾರ ಇವರು.

34ನೇ ವಯಸ್ಸಿಗೆ ಕಾಲಿಡುತ್ತಿರುವ ಈ ಸ್ಪುರದ್ರೂಪಿ ಆಟಗಾರನಿಗೆ ಅನುಭವ ಈಗ ಬೆಟ್ಟದಷ್ಟಿದೆ. ಮುಂದಿನ ವಿಶ್ವಕಪ್‌ಗಳಲ್ಲಿ ಭಾರತದ ಪರವಾಗಿ ರಾಹುಲ್ ಅವರು ಹೀಗೆಯೇ ರನ್ ಮಳೆ ಹರಿಸಲಿ, ಕರ್ನಾಟಕದ ಹೆಮ್ಮೆಯನ್ನು ಜಗತ್ತಿನಾದ್ಯಂತ ಪಸರಿಸಲಿ ಅನ್ನೋದು ನಮ್ಮೆಲ್ಲರ ಹಾರೈಕೆ.