ಐಪಿಎಲ್ 2026ರ ಮಹಾಸಮರ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇವತ್ತು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಟೇಬಲ್ ಟಾಪರ್ಸ್ ಆಗಿರುವ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಜಿಂಕೆ ಮರಿಗಳು ಮುಖಾಮುಖಿಯಾಗುತ್ತಿವೆ. ಇವತ್ತಿನ ಮ್ಯಾಚ್‌ನಲ್ಲಿ ಗೆದ್ದವರು ನೇರವಾಗಿ ಫೈನಲ್‌ಗೆ ಎಂಟ್ರಿ ಕೊಡ್ತಾರೆ. ಸೋತವರಿಗೆ ಕ್ವಾಲಿಫೈಯರ್-2 ನಲ್ಲಿ ಆಡೋಕೆ ಮತ್ತೊಂದು ಚಾನ್ಸ್ ಸಿಗುತ್ತೆ.
ಪಂದ್ಯ ಸಂಜೆ 7.30ಕ್ಕೆ ಶುರುವಾಗಲಿದ್ದು, ಇಡೀ ದೇಶದ ಕಣ್ಣು ಇದರ ಮೇಲಿದೆ. ಆದರೆ ಇದೇ ಹೊತ್ತಿನಲ್ಲಿ ಕ್ರಿಕೆಟ್ ಫ್ಯಾನ್ಸ್‌ಗೆ ಒಂದು ಭೀತಿ ಶುರುವಾಗಿದೆ. ಅದೇನೆಂದರೆ, ಧರ್ಮಶಾಲಾದಲ್ಲಿ ಸದ್ಯ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಮುನ್ಸೂಚನೆ ಇದೆ. ಒಂದು ವೇಳೆ ಈ ಹೈ-ವೋಲ್ಟೇಜ್ ಪಂದ್ಯ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋದರೆ ಏನಾಗುತ್ತೆ? ಫೈನಲ್ ಟಿಕೆಟ್ ಯಾರಿಗೆ ಸಿಗುತ್ತೆ? ಕಂಪ್ಲೀಟ್ ಮ್ಯಾಚ್ ರೂಲ್ಸ್ ಇಲ್ಲಿದೆ ನೋಡಿ.
ಪಾಯಿಂಟ್ಸ್ ಟೇಬಲ್ ಕಿಂಗ್ ಆರ್‌ಸಿಬಿಗೆ ಸಿಗುತ್ತಾ 'ಬಂಪರ್ ಲಕ್ಕಿ' ಚಾನ್ಸ್?
ಈ ಬಾರಿಯ ಲೀಗ್ ಹಂತದಲ್ಲಿ ಆರ್‌ಸಿಬಿ, ಗುಜರಾತ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮೂರೂ ತಂಡಗಳು ತಲಾ 14 ಪಂದ್ಯಗಳನ್ನಾಡಿ 9 ಗೆಲುವಿನೊಂದಿಗೆ 18 ಪಾಯಿಂಟ್ಸ್ ಪಡೆದು ಸಮಬಲ ಸಾಧಿಸಿದ್ದವು. ಆದರೆ, ನಮ್ಮ ಆರ್‌ಸಿಬಿ ತಂಡವು ಭರ್ಜರಿ ನೆಟ್ ರನ್ ರೇಟ್ (+0.783) ಹೊಂದಿದ್ದರಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ ರಾಜನಂತೆ ನಂಬರ್ ಒನ್ ಸ್ಥಾನ ಪಡೆದುಕೊಂಡಿತ್ತು. ಗುಜರಾತ್ ದ್ವಿತೀಯ ಸ್ಥಾನದಲ್ಲಿದ್ದರೆ, ಎಸ್‌ಆರ್‌ಹೆಚ್ ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ನಾಲ್ಕನೇ ತಂಡವಾಗಿ ಪ್ಲೇಆಫ್ ತಲುಪಿದೆ.
ಐಪಿಎಲ್ ರೂಲ್ಸ್ ಪ್ರಕಾರ, ಪ್ಲೇಆಫ್‌ನ ಕ್ವಾಲಿಫೈಯರ್-1 ಪಂದ್ಯಕ್ಕೆ ಯಾವುದೇ 'ರಿಸರ್ವ್ ಡೇ' (Reserve Day) ಇರುವುದಿಲ್ಲ. ಒಂದು ವೇಳೆ ಧರ್ಮಶಾಲಾದಲ್ಲಿ ವರುಣನ ಆರ್ಭಟ ಜೋರಾಗಿ, ಪಂದ್ಯ ಸಂಪೂರ್ಣವಾಗಿ ರದ್ದಾದರೆ, ಲೀಗ್ ಹಂತದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ! ಇತ್ತ ಗುಜರಾತ್ ಟೈಟಾನ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜೊತೆ ಕ್ವಾಲಿಫೈಯರ್-2 ಆಡಬೇಕಾಗುತ್ತದೆ.
ಕನಿಷ್ಠ 5 ಓವರ್ ಮ್ಯಾಚ್‌ಗಂತೂ ನಡೆಯುತ್ತೆ ಸರ್ಕಸ್!
ಒಂದೊಮ್ಮೆ ಮಳೆ ಬಂದು ಪಂದ್ಯಕ್ಕೆ ಅಡ್ಡಿಯಾದರೆ ಅಂಪೈರ್‌ಗಳು ತಕ್ಷಣವೇ ಮ್ಯಾಚ್ ರದ್ದು ಮಾಡಲ್ಲ. ಮೊದಲು ಪಂದ್ಯದ ಓವರ್‌ಗಳನ್ನು ಕಡಿತಗೊಳಿಸಿ, ಕನಿಷ್ಠ 5 ಓವರ್‌ಗಳ ಪಂದ್ಯವನ್ನಾದರೂ ನಡೆಸಲು ಕೊನೆಯವರೆಗೂ ಪ್ರಯತ್ನಿಸುತ್ತಾರೆ. ಇಷ್ಟೂ ಸಾಧ್ಯವಾಗದಿದ್ದರೆ, ಡಕ್ವರ್ತ್-ಲೂಯಿಸ್-ಸ್ಟರ್ನ್ (DLS) ನಿಯಮದ ಮೂಲಕ ಫಲಿತಾಂಶ ತರಲು ನೋಡುತ್ತಾರೆ. ಅದೂ ಕೈಕೊಟ್ಟರೆ ಮಾತ್ರ ಆರ್‌ಸಿಬಿ ನೇರವಾಗಿ ಫೈನಲ್ ಹತ್ತಲಿದೆ.
ಲೀಗ್ ಹಂತದಲ್ಲೂ ಆಗಿತ್ತು ಮಳೆ ರಾದ್ಧಾಂತ: ಲೀಗ್ ಹಂತದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿ, ಇಬ್ಬರಿಗೂ ಒಂದೊಂದು ಪಾಯಿಂಟ್ ಹಂಚಲಾಗಿತ್ತು. ಈ ಮಳೆ ಪಂಜಾಬ್ ತಂಡದ ಪ್ಲೇಆಫ್ ಕನಸನ್ನೇ ಹೊಸಕಿ ಹಾಕಿತ್ತು.
ಫಿಲ್ ಸಾಲ್ಟ್ ಕಂಬ್ಯಾಕ್; ಆರ್‌ಸಿಬಿ ಬ್ಯಾಟಿಂಗ್ ಇನ್ಮುಂದೆ ಮತ್ತಷ್ಟು ಸ್ಟ್ರಾಂಗ್!
ಪಂದ್ಯದ ವಿಷಯಕ್ಕೆ ಬಂದರೆ, ಆರ್‌ಸಿಬಿ ಕ್ಯಾಂಪ್‌ನಿಂದ ಒಂದು ಬಿಗ್ ಗುಡ್ ನ್ಯೂಸ್ ಬಂದಿದೆ. ಸ್ಟಾರ್ ಓಪನರ್ ಫಿಲ್ ಸಾಲ್ಟ್ ಸಂಪೂರ್ಣ ಫಿಟ್ ಆಗಿದ್ದು, ಇಂದಿನ ಪಂದ್ಯಕ್ಕೆ ಲಭ್ಯವಿರಲಿದ್ದಾರೆ. ಇದರಿಂದ ಬೆಂಗಳೂರು ಬ್ಯಾಟಿಂಗ್ ಲೈನ್-ಅಪ್‌ಗೆ ಆನೆ ಬಲ ಬಂದಂತಾಗಿದೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಎದುರಾಳಿಗಳಿಗೆ ನಡುಕ ಹುಟ್ಟಿಸಲಿದ್ದಾರೆ.
ಇನ್ನೊಂದೆಡೆ ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಬ್ಯಾಟಿಂಗ್ ಮೇಲೆ ಅತಿಯಾಗಿ ಡಿಪೆಂಡ್ ಆಗಿದೆ. ಇವರ ಬೌಲಿಂಗ್ ಕೂಡ ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ಜೇಸನ್ ಹೋಲ್ಡರ್ ಇರುವುದರಿಂದ ಸಖತ್ ಸ್ಟ್ರಾಂಗ್ ಆಗಿದೆ.
ಕೊನೆಯ ಮಾತು - ಮಳೆಯ ಮುನ್ಸೂಚನೆ ಇರೋದರಿಂದ ಟಾಸ್ ಗೆಲ್ಲುವ ಕ್ಯಾಪ್ಟನ್ ಮೊದಲು ಬೌಲಿಂಗ್ ಆಯ್ದುಕೊಳ್ಳುವುದು ಗ್ಯಾರಂಟಿ. ಯಾಕಂದ್ರೆ ಧರ್ಮಶಾಲಾ ಪಿಚ್‌ನಲ್ಲಿ ಚೇಸಿಂಗ್ ಮಾಡುವುದು ಸುಲಭ. ಏನೇ ಆಗಲಿ, ಮಳೆ ಬಂದು ಪಂದ್ಯ ರದ್ದಾಗುವ ಬದಲು, ಪೂರ್ತಿ ಪಂದ್ಯ ನಡೆದು ನಮ್ಮ ಆರ್‌ಸಿಬಿ ಹುಡುಗರು ಮೈದಾನದಲ್ಲೇ ಧೂಳೆಬ್ಬಿಸಿ ಫೈನಲ್‌ಗೆ ಹೋಗಲಿ ಅನ್ನೋದೇ ಅಭಿಮಾನಿಗಳ ಆಶಯ!