ಐಪಿಎಲ್ 2026ರ ಭರ್ಜರಿ ಕ್ರಿಕೆಟ್ ಹಬ್ಬ ಮುಗಿಯುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಬಿಗ್ ಎಂಟರ್‌ಟೈನ್‌ಮೆಂಟ್ ಸಿಗಲು ರೆಡಿಯಾಗಿದೆ. ಜೂನ್ ತಿಂಗಳಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಅಫ್ಘಾನಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 1 ಟೆಸ್ಟ್ ಹಾಗೂ 3 ಪಂದ್ಯಗಳ ಒನ್ ಡೇ (ODI) ಸರಣಿಯನ್ನು ಆಡಲಿದೆ.
ಈ ಮಹತ್ವದ ತವರು ಸರಣಿಗಾಗಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡವನ್ನು ನಾಳೆ ಅಧಿಕೃತವಾಗಿ ಪ್ರಕಟಿಸಲಾಗುವುದು. ಯುವ ಆಟಗಾರರ ದಂಡಿನೊಂದಿಗೆ ಕೆಲವು ಹೊಸ ಮುಖಗಳಿಗೆ ಈ ಬಾರಿ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ. ಹಾಗಾದ್ರೆ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ? ಕಂಪ್ಲೀಟ್ ಪ್ರೆಡಿಕ್ಟಡ್ ಲಿಸ್ಟ್ ಇಲ್ಲಿದೆ ನೋಡಿ.
ಸರಣಿಯ ಸಂಪೂರ್ಣ ವೇಳಾಪಟ್ಟಿ (Schedule):
ಏಕೈಕ ಟೆಸ್ಟ್ ಪಂದ್ಯ: ಜೂನ್ 6 ರಿಂದ ಜೂನ್ 10 ರವರೆಗೆ, ನ್ಯೂ ಚಂಡೀಗಢದ ಮುಲ್ಲಾಂಪುರ್ ಸ್ಟೇಡಿಯಂನಲ್ಲಿ ನಡೆಯಲಿದೆ.
1ನೇ ಏಕದಿನ ಪಂದ್ಯ: ಜೂನ್ 14 ರಂದು ಧರ್ಮಶಾಲಾದಲ್ಲಿ ಜಿದ್ದಾಜಿದ್ದಿ ಶುರು.
2ನೇ ಏಕದಿನ ಪಂದ್ಯ: ಜೂನ್ 17 ರಂದು ಲಕ್ನೋ ಮೈದಾನದಲ್ಲಿ ಫೈಟ್.
3ನೇ ಏಕದಿನ ಪಂದ್ಯ: ಜೂನ್ 20 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಹೈ-ವೋಲ್ಟೇಜ್ ಮ್ಯಾಚ್.
ಟೆಸ್ಟ್ ತಂಡದ ಸಾರಥಿ ಶುಭಮನ್ ಗಿಲ್: ಯಾರಿಗೆಲ್ಲಾ ಸಿಗಲಿದೆ ಚಾನ್ಸ್?
ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಯುವ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಕಣಕ್ಕಿಳಿಯುವುದು ಫಿಕ್ಸ್ ಆಗಿದೆ.
ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್, ಕ್ಯಾಪ್ಟನ್ ಗಿಲ್ ಹಾಗೂ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಆಲ್‌ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಸ್ಪಿನ್ ಮ್ಯಾಜಿಕ್ ಮಾಡಿದರೆ, ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅನ್ಶುಲ್ ಕಂಬೋಜ್ ಕಮಾಲ್ ಮಾಡಲಿದ್ದಾರೆ. ಧ್ರುವ್ ಜುರೆಲ್ ಮತ್ತು ಸಾಯಿ ಸುದರ್ಶನ್ ಬ್ಯಾಕಪ್ ಆಟಗಾರರಾಗಿರಲಿದ್ದಾರೆ.
ಬುಮ್ರಾಗೆ ರೆಸ್ಟ್? ಜಮ್ಮು-ಕಾಶ್ಮೀರದ ಆಕಿಬ್ ನಬಿಗೆ ಲಕ್!
ಟೀಮ್ ಇಂಡಿಯಾದ ನಂಬರ್ 1 ವೇಗಿ ಜಸ್ಪ್ರಿತ್ ಬುಮ್ರಾ ಅವರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಕಾರಣದಿಂದಾಗಿ ಈ ಟೆಸ್ಟ್ ಪಂದ್ಯದಿಂದ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಬುಮ್ರಾ ಅವರ ಗೈರುಹಾಜರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿ ದಾರ್ ಅವರಿಗೆ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಬುಲಾವ್ ಸಿಗಬಹುದು. ಈ ವರ್ಷ ಜಮ್ಮು-ಕಾಶ್ಮೀರ ತಂಡಕ್ಕೆ ಚೊಚ್ಚಲ ರಣಜಿ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಆಕಿಬ್ ಅತಿ ಹೆಚ್ಚು ವಿಕೆಟ್ ಪಡೆದು ಅಬ್ಬರಿಸಿದ್ದರು.
ಏಕದಿನ ತಂಡಕ್ಕೆ ರೋಹಿತ್-ವಿರಾಟ್ ಎಂಟ್ರಿ: ಲಕ್ನೋ ಎಕ್ಸ್‌ಪ್ರೆಸ್ ಪ್ರಿನ್ಸ್ ಯಾದವ್ ಸೇರ್ಪಡೆ?
ಟೆಸ್ಟ್‌ಗೆ ರೆಸ್ಟ್ ತಗೊಂಡರೂ ಒನ್ ಡೇ ಸರಣಿಗೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಕಮ್‌ಬ್ಯಾಕ್ ಮಾಡಲಿದ್ದಾರೆ. ಶುಭಮನ್ ಗಿಲ್ ಅವರೇ ಒನ್ ಡೇ ತಂಡಕ್ಕೂ ನಾಯಕರಾಗಿ ಮುಂದುವರಿಯಲಿದ್ದು, ರೋಹಿತ್ ಜೊತೆ ಓಪನಿಂಗ್ ಮಾಡಲಿದ್ದಾರೆ. 3ನೇ ನಂಬರ್‌ನಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿ ಹೊರಲಿದ್ದಾರೆ. ಮಿಡಲ್ ಆರ್ಡರ್‌ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್‌ಗೆ ಆಸರೆಯಾಗಲಿದ್ದಾರೆ.
ಆಲ್‌ರೌಂಡರ್ಸ್ ಆಗಿ ಹಾರ್ದಿಕ್ ಪಾಂಡ್ಯ, ಜಡೇಜಾ, ಅಕ್ಷರ್ ಮತ್ತು ನಿತೀಶ್ ರೆಡ್ಡಿ ಫಾಸ್ಟ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಜವಾಬ್ದಾರಿ ಹೊರಲಿದ್ದಾರೆ. ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅರ್ಶ್‌ದೀಪ್ ಸಿಂಗ್ ಪೇಸ್ ಅಟ್ಯಾಕ್ ಮುನ್ನಡೆಸಲಿದ್ದಾರೆ.
ಇನ್ನು ಹರ್ಷಿತ್ ರಾಣಾ ಇಂಜುರಿ ಆಗಿರುವುದರಿಂದ ಹಾಗೂ ಮೊಹಮ್ಮದ್ ಶಮಿ ಆಯ್ಕೆಗೆ ಲಭ್ಯವಿಲ್ಲದ ಕಾರಣ, ಪ್ರಸಕ್ತ ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಸಖತ್ ಆಗಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿರುವ ಯುವ ವೇಗಿ ಪ್ರಿನ್ಸ್ ಯಾದವ್ ಅವರಿಗೆ ಮೊದಲ ಬಾರಿಗೆ ಇಂಡಿಯನ್ ಒನ್ ಡೇ ಟೀಮ್‌ನಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಶೇ.90 ರಷ್ಟಿದೆ. ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಕಪ್ ಪ್ಲೇಯರ್ಸ್ ಆಗಿ ತಂಡದಲ್ಲಿ ಇರಲಿದ್ದಾರೆ. ನಾಳೆ ಹೊರಬೀಳಲಿರುವ ಅಧಿಕೃತ ಲಿಸ್ಟ್‌ನಲ್ಲಿ ಯಾರಿಗೆಲ್ಲಾ ಅದೃಷ್ಟ ಒಲಿಯುತ್ತೆ ಅಂತ ಕಾದುನೋಡಬೇಕಿದೆ.