ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭೀಕರ ಹಾಗೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನವೊಂದು ನಡೆದಿದೆ. ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ (Fatima Sana) ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಕ್ಷರಶಃ ರೌದ್ರಾವತಾರ ತಳೆದಿದ್ದಾರೆ. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಮಳೆ ಹರಿಸಿದ ಫಾತಿಮಾ, ವುಮೆನ್ಸ್ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿ ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇವರ ಈ ಬಿರುಗಾಳಿಯ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ತನ್ನ ಎರಡನೇ ಅತ್ಯಧಿಕ ಸ್ಕೋರ್ ದಾಖಲಿಸಿ ಸಖತ್ ಸೌಂಡ್ ಮಾಡ್ತಿದೆ.
ಕರಾಚಿ ಮೈದಾನದಲ್ಲಿ ಪಾಕ್ ಹುಡುಗಿಯರ ರನ್ ಬೇಟೆ!
ಪಾಕಿಸ್ತಾನದ ಕರಾಚಿ ಇಂಟರ್ನ್ಯಾಷನಲ್ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳಾ ತಂಡದ ಆರಂಭವೇ ಭರ್ಜರಿಯಾಗಿತ್ತು. ಪಾಕ್ ಹುಡುಗಿಯರು ಮೊದಲ ಓವರ್‌ನಿಂದಲೇ ಸಖತ್ ಅಗ್ರೇಸ್ಸಿವ್ ಆಗಿ ಬ್ಯಾಟ್ ಬೀಸಲು ಶುರು ಮಾಡಿದರು. ಆದರೆ ಪಂದ್ಯದ ಅಸಲಿ ರೋಚಕತೆ ಶುರುವಾಗಿದ್ದು 17ನೇ ಓವರ್‌ನ ನಂತರ!
ಪಂದ್ಯದ 17 ಓವರ್‌ಗಳು ಮುಗಿಯುವ ಹೊತ್ತಿಗೆ ಪಾಕಿಸ್ತಾನ ತಂಡ 4 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಒಂದು ಸಾಧಾರಣ ಮೊತ್ತದ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಕ್ರೀಸ್‌ಗೆ ಎಂಟ್ರಿ ಕೊಟ್ಟ ಕ್ಯಾಪ್ಟನ್ ಫಾತಿಮಾ ಸನಾ, ಜಿಂಬಾಬ್ವೆ ಬೌಲರ್‌ಗಳಿಗೆ ಚಳಿ ಜ್ವರ ಬರಿಸಿದರು. ಬಂದ ಮೊದಲ ಬಾಲ್‌ನಿಂದಲೇ ಅಟ್ಯಾಕಿಂಗ್ ಗೇಮ್ ಶುರು ಮಾಡಿದ ಫಾತಿಮಾ, ಕೇವಲ 15 ಎಸೆತಗಳಲ್ಲೇ ಹಾಫ್ ಸೆಂಚುರಿ (50 ರನ್) ಚಚ್ಚಿ ಇಡೀ ಕ್ರಿಕೆಟ್ ಲೋಕವೇ ಹುಬ್ಬೇರಿಸುವಂತೆ ಮಾಡಿದರು.
ರಿಚಾ ಘೋಷ್, ಸೋಫಿಯಾ ರೆಕಾರ್ಡ್ ಧೂಳೀಪಟ!
ಪಂದ್ಯದಲ್ಲಿ ಕೇವಲ 19 ಎಸೆತಗಳನ್ನು ಎದುರಿಸಿದ ಫಾತಿಮಾ ಸನಾ ಬರೋಬ್ಬರಿ 62 ರನ್ ಕಲೆಹಾಕಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಒಟ್ಟು 10 ಫೋರ್‌ಗಳು ಹಾಗೂ 2 ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು. ಅಂದರೆ ಅವರು ಬೌಂಡರಿ-ಸಿಕ್ಸರ್‌ಗಳಿಂದಲೇ ಬರೋಬ್ಬರಿ 52 ರನ್ ಲೂಟಿ ಮಾಡಿದ್ದರು!
ಇದಕ್ಕಿಂತ ಮುಂಚೆ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆ ನ್ಯೂಜಿಲೆಂಡ್‌ನ ಸೋಫಿಯಾ ಡಿವೈನ್, ಆಸ್ಟ್ರೇಲಿಯಾದ ಫೋಬೆ ಲಿಚ್‌ಫೀಲ್ಡ್ ಮತ್ತು ಭಾರತದ ಸ್ಟಾರ್ ಪ್ಲೇಯರ್ ರಿಚಾ ಘೋಷ್ ಹೆಸರಿನಲ್ಲಿತ್ತು. ಇವರೆಲ್ಲರೂ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ ಈಗ ಫಾತಿಮಾ ಸನಾ ಕೇವಲ 15 ಬಾಲ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಇವರೆಲ್ಲರ ರೆಕಾರ್ಡ್ ಅನ್ನು ಧೂಳೀಪಟ ಮಾಡಿದ್ದಾರೆ. ಇದರೊಂದಿಗೆ ಈ ಹಿಂದೆ 20 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ್ದ ಪಾಕಿಸ್ತಾನದದೇ ಆಟಗಾರ್ತಿಯ ಹಳೇ ರೆಕಾರ್ಡ್ ಕೂಡ ಬ್ರೇಕ್ ಆಗಿದೆ.
133 ರನ್‌ಗಳ ಬೃಹತ್ ಜಯ; ಕಂಗಾಲಾದ ಜಿಂಬಾಬ್ವೆ!
ಡೆತ್ ಓವರ್‌ಗಳಲ್ಲಿ ಫಾತಿಮಾ ಸನಾ ಸಿಡಿಸಿದ ಸಿಡಿಲಬ್ಬರದ ರನ್‌ಗಳ ಸಹಾಯದಿಂದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 223 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಬಳಿಕ 224 ರನ್‌ಗಳ ಹಿಮಾಲಯದಂತಹ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಜಿಂಬಾಬ್ವೆ ಆಟಗಾರ್ತಿಯರು ಕೇವಲ 17.1 ಓವರ್‌ಗಳಲ್ಲಿ ಬರೀ 90 ರನ್‌ಗೆ ಆಲೌಟ್ ಆಗುವ ಮೂಲಕ ಭೀಕರ ಸೋಲೊಪ್ಪಿಕೊಂಡರು. ಇದರಿಂದ ಪಾಕಿಸ್ತಾನ ತಂಡ 133 ರನ್‌ಗಳ ಐತಿಹಾಸಿಕ ಜಯ ಸಾಧಿಸಿತು.
ಕ್ಯಾಪ್ಟನ್ ಫಾತಿಮಾ ಸನಾ ಈ ವರ್ಷದ ಆರಂಭದಿಂದಲೂ ಭೀಕರ ಫಾರ್ಮ್‌ನಲ್ಲಿದ್ದಾರೆ. ಕೇವಲ 5 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 229 ರನ್ ಚಚ್ಚಿರುವ ಇವರ ಸ್ಟ್ರೈಕ್ ರೇಟ್ 200 ಕ್ಕಿಂತಲೂ ಹೆಚ್ಚಿದೆ! ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲೂ ಕೇವಲ 41 ಬಾಲ್‌ಗಳಲ್ಲಿ 90 ರನ್ ಸಿಡಿಸಿ ಕೇವಲ 10 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡಿದ್ದರು. ಸದ್ಯ ಫಾತಿಮಾ ಅವರ ಈ ಲೇಟೆಸ್ಟ್ ವರ್ಲ್ಡ್ ರೆಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಕ್ರಿಕೆಟ್ ಲೋಕದ ಇಂತಹದೇ ಕ್ರೇಜಿ ಅಪ್ಡೇಟ್ಸ್, ಸಿನಿಮಾ ಸುದ್ದಿಗಳು, ರಾಜಕೀಯ ಹಾಗೂ ಸ್ಥಳೀಯ ಬ್ರೇಕಿಂಗ್ ನ್ಯೂಸ್‌ಗಳನ್ನು ಅತ್ಯಂತ ವೇಗವಾಗಿ ಕನ್ನಡದಲ್ಲೇ ಪಡೆಯಲು ಇಂದೇ ನಮ್ಮ SAPTHASHWA TV ಚಾನೆಲ್ ಅನ್ನು ಫಾಲೋ ಮಾಡಿ ಮತ್ತು ನೋಡ್ತಾ ಇರಿ!